ಬಾಲಿವುಡ್ ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ನಿಧನ; ಕಂಬನಿ ಮಿಡಿದ ಮೊಮ್ಮಕ್ಕಳಾದ ಜಾಹ್ನವಿ, ಖುಷಿ, ಅರ್ಜುನ್ ಕಪೂರ್
ಬಾಲಿವುಡ್‌ನ ಪ್ರಸಿದ್ಧ ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ನಿಧನರಾಗಿದ್ದಾರೆ. ಇವರಿಗೆ 90 ವರ್ಷ ವಯಸ್ಸಾಗಿತ್ತು. ಅಜ್ಜಿಯ ಸಾವಿಗೆ ಮೊಮ್ಮಕ್ಕಳಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಹಾಗೂ ಅರ್ಜುನ್ ಕಪೂರ್ ಸೇರಿ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

ಬಾಲಿವುಡ್‌ನ ಪ್ರಸಿದ್ಧ ಕಪೂರ್ ಕುಟುಂಬ ಸದಸ್ಯೆ ನಿರ್ಮಲ್ ಕಪೂರ್ ಇಹಲೋಕ ತ್ಯಜಿಸಿದ್ದಾರೆ, ಇವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ವಾರ ಅನಾರೋಗ್ಯ ಕಾರಣದಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ (ಮೇ 2) ಮರಣ ಹೊಂದಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್, ಬೋನಿ ಕಪೂರ್ ಹಾಗೂ ಸಂಜಯ್ ಕಪೂರ್ ತಾಯಿ ನಿರ್ಮಲ್ ಸಾವು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಅಜ್ಜಿಯ ಸಾವಿಗೆ ಮೊಮ್ಮಕ್ಕಳಾದ ಖುಷಿ ಕಪೂರ್, ಜಾಹ್ನವಿ ಕಪೂರ್, ಅರ್ಜುನ್ ಕಪೂರ್ ಸೇರಿ ಕುಟುಂಬಸ್ಥರು ಹಾಗೂ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.
ನಿನ್ನೆ ಸಂಜೆ ಸುಮಾರು 5.25ರ ಹೊತ್ತಿಗೆ ನಿರ್ಮಲ್ ಕೊನೆಯುಸಿರು ಎಳೆದಿದ್ದು, ಅವರ ಪಾರ್ಥಿವ ಶರೀರವನ್ನು ನಿವಾಸಕ್ಕೆ ತರಲಾಗಿದೆ. ತಾಯಿ ಹಾಗೂ ಅಜ್ಜಿಯ ನಿಧನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಮಕ್ಕಳು ಹಾಗೂ ಮೊಮ್ಮಕ್ಕಳು ನಿರ್ಮಲ್ ಅವರ ನಿವಾಸದ ಬಳಿ ಸೇರಿದ್ದಾರೆ. ಅಜ್ಜಿಯ ಸಾವಿನ ಸುದ್ದಿ ಕೇಳಿದ ಜಾಹ್ನವಿ ಗೆಳೆಯ ಶಿಖರ್ ಪಹಾರಿಯಾ ಜೊತೆ ಬಂದಿರುವ ವಿಡಿಯೊಗಳು ವೈರಲ್ ಆಗುತ್ತಿವೆ.
ಯಾರಿದು ನಿರ್ಮಲ್ ಕಪೂರ್
ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಸುರಿಂಧರ್ ಕಪೂರ್ ಪತ್ನಿ ನಿರ್ಮಲಾ ಕಪೂರ್. ನಟರಾದ ಅನಿಲ್ ಕಪೂರ್, ಸಂಜಯ್ ಕಪೂರ್ ಹಾಗೂ ನಿರ್ಮಾಪಕ ಬೋನಿ ಕಪೂರ್ ಇವರ ಮಕ್ಕಳು. ದಿವಂಗತ ನಟಿ ಶ್ರೀದೇವಿ ಇವರ ಸೊಸೆ. ನಟಿಯರಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಸೇರಿದಂತೆ ಸೋನಂ ಕಪೂರ್, ಅರ್ಜುನ್ ಕಪೂರ್, ರಿಯಾ ಕಪೂರ್, ಹರ್ಷ್‌ವರ್ದನ್ ಕಪೂರ್, ಅಂಶುಲ್ ಕಪೂರ್, ಮೋಹಿತ್ ಮಾರ್ವಾ ಇವರ ಮೊಮ್ಮಕ್ಕಳಾಗಿದ್ದಾರೆ. ನಿರ್ಮಲ್ ಕಪೂರ್ ನಿಧನಕ್ಕೆ ಬಾಲಿವುಡ್ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ನಿರ್ಮಲ್ ಕಪೂರ್ ಅವರ 90ನೇ ಹುಟ್ಟುಹಬ್ಬ ಆಚರಿಸಲಾಗಿತ್ತು. ಆ ಸಂದರ್ಭ ಅನಿಲ್ ಕಪೂರ್ ತಾಯಿಯೊಂದಿಗಿನ ಅಪರೂಪದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ತಾಯಿಯ ಬಗ್ಗೆ ವಿಶೇಷವಾಗಿ ಬರೆದುಕೊಂಡಿದ್ದರು.
ಬಾಲಿವುಡ್ ಪ್ರಸಿದ್ಧ ನಟ, ನಟಿಯರು ನಿರ್ಮಲ್ ನಿವಾಸದ ಬಳಿ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಈಗಾಗಲೇ ರವೀನಾ ಟಂಡನ್, ಜಾಕಿ ಶ್ರಾಫ್ ಮೊದಲಾದವರು ತಡರಾತ್ರಿಯೇ ನಿರ್ಮಲ್ ಕಪೂರ್ ಅವರ ನಿವಾಸದ ಬಳಿ ಬಂದಿದ್ದರು.