ಶಾರುಖ್ ಖಾನ್ ನಟಿಸಿದ್ದ ಫೌಜಿ ಧಾರಾವಾಹಿ 36 ವರ್ಷಗಳ ನಂತರ ಮರು ಪ್ರಸಾರ: ಯಾವ ಚಾನೆಲ್ನಲ್ಲಿ ನೋಡಬಹುದು?
Shah Rukh Khan: ಬಾಲಿವುಡ್ ಕಿಂಗ್ಖಾನ್ ಶಾರುಖ್ ಖಾನ್ ಫೌಜಿ ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದರು. ಈ ಧಾರಾವಾಹಿ 1989ರಲ್ಲಿ ಪ್ರಸಾರವಾಗಿತ್ತು. ಇದೀಗ 36 ವರ್ಷಗಳ ನಂತರ ಈ ಧಾರಾವಾಹಿ ದೂರದರ್ಶನದಲ್ಲಿ ಮತ್ತೆ ಪ್ರಸಾರವಾಗುತ್ತಿದೆ.

Shah Rukh Khan: ಚಿತ್ರಂಗದಲ್ಲಿ ಈಗ ಸ್ಟಾರ್ಗಳಾಗಿ ಹೆಸರು ಮಾಡಿರುವ ಅನೇಕ ಕಲಾವಿದರು ಹಿಂದೆ ಸಣ್ಣ ಪುಟ್ಟ ಪಾತ್ರದ ಮೂಲಕ ಕರಿಯರ್ ಆರಂಭಿಸಿದವರು. ಇನ್ನೂ ಕೆಲವರು ಕಿರುತೆರೆ ಮೂಲಕ ಬಣ್ಣದ ಬದುಕು ಶುರು ಮಾಡಿದವರು. ನಮ್ಮ ಕನ್ನಡದಲ್ಲಿ ಗಣೇಶ್, ಯಶ್, ದರ್ಶನ್, ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಅನೇಕ ಕಲಾವಿದರನ್ನು ಉದಾಹರಣೆಯಾಗಿ ನೀಡಬಹುದು. ಕನ್ನಡದಲ್ಲಿ ಮಾತ್ರವಲ್ಲ ಬಾಲಿವುಡ್ನಲ್ಲಿ ಕೂಡಾ ಈ ರೀತಿಯ ಅನೇಕ ಉದಾಹರಣೆಗಳಿವೆ. ಅದರಲ್ಲಿ ಶಾರುಖ್ ಖಾನ್ ಕೂಡಾ ಒಬ್ಬರು.
1989ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ
ಶಾರುಖ್ ಖಾನ್ ಫೌಜಿ ಎಂಬ ಟಿವಿ ಸೀರಿಯಲ್ ಮೂಲಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದರು. ಈ ಧಾರಾವಾಹಿ 1989ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ಶಾರುಖ್ ಖಾನ್ ಲೆಫ್ಟಿನಂಟ್ ಅಭಿಮನ್ಯರಾಯ್ ಎಂಬ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಿದ್ದರು. ಆದರೆ ಇದು ಎರಡನೇ ನಾಯಕನ ಪಾತ್ರ. ಆದರೆ ಈ ಧಾರಾವಾಹಿ ಪ್ರಸಾರವಾಗಿದ್ದು 13 ಎಪಿಸೋಡ್ಗಳು ಮಾತ್ರ. ಆ ಕಾಲದಲ್ಲಿ ಈಗಿನಂತೆ ಕೇಬಲ್, ಒಟಿಟಿ ಇಲ್ಲವಾದರೂ ಈ ಧಾರಾವಾಹಿ ಆಂದೇ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಸುಮಾರು 36 ವರ್ಷಗಳ ನಂತರ ಈ ಧಾರಾವಾಹಿಯನ್ನು ರಿಪೀಟ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಬಹಳ ವರ್ಷಗಳ ನಂತರ ಈ ಧಾರಾವಾಹಿ ಮತ್ತೆ ವೀಕ್ಷಕರ ಮುಂದೆ ಬರುತ್ತಿದೆ. ಆದರೆ ಮತ್ತೆ ಇದು ಪ್ರಸಾರವಾಗುತ್ತಿರುವುದು ದೂರದರ್ಶನದಲ್ಲೇ.
ಸೋಮವಾರದಿಂದ ಶುಕ್ರವಾರದವರೆಗೂ ಈ ಧಾರಾವಾಹಿ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿದೆ. ಹಾಗೇ ರಾತ್ರಿ 11.30ಕ್ಕೆ ಮತ್ತೆ ಪ್ರಸಾರವಾಗಲಿದೆ. ಮಿಲಿಟರಿ ಟ್ರೈನಿಂಗ್ಗಾಗಿ ಹೊಸದಾಗಿ ಆರ್ಮಿಗೆ ಸೇರುವವರಿಗೆ ಯಾವ ರೀತಿ ತರಬೇತಿ ನೀಡುತ್ತಾರೆ. ಈ ತರಬೇತಿಯಲ್ಲಿ ಅವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬ ಅಂಶಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಫೌಜಿ ಧಾರಾವಾಹಿಯಲ್ಲಿ ಶಾರುಖ್ ಖಾನ್ ಪಾತ್ರ ಚಿಕ್ಕದಾದರೂ, ಅವರಿಗೆ ಒಳ್ಳೆ ಹೆಸರು ತಂದುಕೊಟ್ಟ ಧಾರಾವಾಹಿ ಇದು. ಫೌಜಿ ಧಾರಾವಾಹಿ ನಂತರ ಶಾರುಖ್ ದಿಲ್ ದರಿಯಾ, ಮಹಾನ್ ಕರ್ಜ್, ದೂಸ್ರಾ ಕೇವಲ್, ಈಡಿಯಟ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು.
ದಿವಾನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಶಾರುಖ್ ಖಾನ್
ಈ ಧಾರಾವಾಹಿಗಳಲ್ಲಿ ಶಾರುಖ್ ಹೆಸರು ಮಾಡಿದ್ದರಿಂದಲೇ ಮುಂದೆ ದೀವಾನಾ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು. ಈ ಸಿನಿಮಾದಲ್ಲಿ ಶಾರುಖ್ ಖಾನ್ ನೆಗೆಟಿವ್ ಶೇಡ್ನಲ್ಲಿ ನಟಿಸಿದರು. ಆದರೂ ನಾಯಕನಿಗಿಂತ ವಿಲನ್ ಪಾತ್ರದಲ್ಲಿ ನಟಿಸಿದ್ದ ಶಾರುಖ್ಗೆ ಒಳ್ಳೆ ಗುರುತು ಸಿಕ್ಕಿತು. ಕ್ರಮೇಣ ಬಾಲಿವುಡ್ನಲ್ಲಿ ಉತ್ತಮ ಅವಕಾಶಗಳು ಹುಡುಕಿ ಬಂದಿದ್ದರಿಂದ ಧಾರಾವಾಹಿಗಳಿಂದ ದೂರ ಉಳಿದರು. ಇಷ್ಟು ವರ್ಷಗಳ ನಂತರ ಫೌಜಿ ಧಾರಾವಾಹಿಯ ಸೀಕ್ವೆಲ್ ತಯಾರಾಗುತ್ತಿದೆ. ಈಗಾಗಲೇ ಶೂಟಿಂಗ್ ಕೂಡಾ ಆರಂಭವಾಗಿದೆ. ಇದರಲ್ಲಿ ವಿಕ್ಕಿ ಜೈನ್, ಗೌಹಾರ್ ಖಾನ್, ಉತ್ಕರ್ಷ್ ಕೊಹ್ಲಿ, ರುದ್ರಾ ಸೋನಿ ಹಾಗೂ ಇನ್ನಿತರ ನಟ/ನಟಿಯರು ನಟಿಸುತ್ತಿದ್ದಾರೆ. ಸಿನಿಮಾ ರೀತಿಯಲ್ಲಿ ದೊಡ್ಡ ಬಜೆಟ್ನಲ್ಲಿ ಈ ಧಾರಾವಾಹಿ ಸೆಟ್ಟೇರಿದೆ.
ಇದನ್ನೂ ಓದಿ: ಸೀರೆಯಲ್ಲಿ ಬಳುಕಿದ ಸೋನು ಶ್ರೀನಿವಾಸ್ ಗೌಡ
ಫೌಜಿ 2 ಧಾರಾವಾಹಿಗಾಗಿ ಸೋನು ನಿಗಮ್ ಟೈಟಲ್ ಹಾಡೊಂದನ್ನು ಹಾಡಿದ್ದಾರೆ. ಶರದ್ ಖೇಲ್ಕರ್ ವಾಯ್ಸ್ ಓವರ್ ನೀಡುತ್ತಿದ್ದಾರೆ. ಆದರೆ ಈ ಧಾರಾವಾಹಿ ದೂರದರ್ಶನದ ಬದಲಿಗೆ ಟಾಪ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಶಾರುಖ್ ಖಾನ್ ನಟನೆಯ ಫೌಜಿ ಧಾರಾವಾಹಿ ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಜಿಯೋ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.
ವಿಭಾಗ