ಬೆಂಗಳೂರು ಮೂಲದ ಮಹಿಳೆಯ ಪ್ರೀತಿಯಲ್ಲಿ ಬಿದ್ದ ಆಮೀರ್ ಖಾನ್! 60ನೇ ಬರ್ತ್‌ಡೇಗೆ ಹೊಸ ಗರ್ಲ್‌ಫ್ರೆಂಡ್ ಪರಿಚಯಿಸಿದ ಮಿ. ಪರ್ಫೆಕ್ಷನಿಸ್ಟ್
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ 60ನೇ ವಯಸ್ಸಿನಲ್ಲಿ, ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ. ಮುಂಬೈನಲ್ಲಿ ನಡೆದ ಮೀಟ್ ಅಂಡ್ ಗ್ರೀಟ್ ಪಾರ್ಟಿಯಲ್ಲಿ 18 ತಿಂಗಳುಗಳಿಂದ ಡೇಟಿಂಗ್ ಮಾಡುತ್ತಿದ್ದ ಗೌರಿ (Gauri Spratt) ಎಂಬ ಮಹಿಳೆ ಬಗ್ಗೆ ಮಾತನಾಡಿದ್ದಾರೆ.

Aamir Khan Girl friend Gauri Spratt: ಬಾಲಿವುಡ್ ಮಿಸ್ಟರ್ ಫರ್ಪೆಕ್ಷನಿಸ್ಟ್ ಆಮಿರ್ ಖಾನ್ ಇಂದು (ಮಾ.14) ತಮ್ಮ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದ ಪ್ರಯುಕ್ತ ಮುಂಬೈನಲ್ಲಿ ತಮ್ಮ ಆಪ್ತರ ಜತೆಗೆ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಚ್ಚರಿಯ ರೀತಿಯಲ್ಲಿ ಹೊಸ ಗರ್ಲ್‌ಫ್ರೆಂಡ್ ಗೌರಿ (Gauri Spratt) ಅವರನ್ನೂ ಪರಿಚಯಿಸಿದ್ದಾರೆ! ಈ ಮೂಲಕ ಎರಡು ಮದುವೆ ಮತ್ತು ಎರಡು ಡಿವೋರ್ಸ್ ಬಳಿಕ, ಮೂರನೇ ಮದುವೆಗೆ ಆಮೀರ್ ಖಾನ್ ರೆಡಿಯಾದ್ರಾ ಎಂಬ ಮಾತುಗಳು ಇದೀಗ ಮತ್ತೆ ಮುನ್ನೆಲೆಗೆ ಬರಲಾರಂಭಿಸಿವೆ.
25 ವರ್ಷದ ಸ್ನೇಹಕ್ಕೆ ಪ್ರೀತಿ ಮುದ್ರೆ
ಕಳೆದ ಒಂದು ವರ್ಷದಿಂದ ಬೆಂಗಳೂರು ಮೂಲದ ಗೌರಿ ಎಂಬುವವರ ಜತೆಗೆ ಆಮೀರ್ ಖಾನ್ ಡೇಟ್ ಮಾಡುತ್ತಿದ್ದಾರೆ. ಅಂದಹಾಗೆ, ಗೌರಿಗೂ ಆಮೀರ್ ಖಾನ್‌ಗೂ ಈಗಿನ ಪರಿಚಯವೂ ಅಲ್ಲ. ಕಳೆದ 25 ವರ್ಷಗಳಿಂದ ಗೌರಿಯನ್ನು ಹತ್ತಿರದಿಂದ ಬಲ್ಲರು ಆಮೀರ್ ಖಾನ್. ಇದೀಗ ಬರ್ತ್‌ಡೇ ಸಂಭ್ರಮದಲ್ಲಿರುವ ಆಮೀರ್ ಖಾನ್, ಹರಿದಾಡಿದ್ದ ವದಂತಿಗಳಿಗೆ ಗೌರಿಯನ್ನು ಪರಿಚಯಿಸುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ. ಎರಡನೇ ಪತ್ನಿ ಗೌರಿ ಖಾನ್‌ಗೆ ಡಿವೋರ್ಸ್ ನೀಡಿದ ಬಳಿಕ, ಆಮೀರ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಇದೀಗ ಗೌರಿ ಹೆಸರಿನ ಮಹಿಳೆಯನ್ನೇ "ಗರ್ಲ್‌ಫ್ರೆಂಡ್" ಎಂದು ಪರಿಚಯಿಸಿದ್ದಾರೆ. ಮುಂಬೈನಲ್ಲಿ ಗುರುವಾರ (ಮಾ. 13) ಮಾಧ್ಯಮಗಳ ಜತೆಗೆ ಮಾತನಾಡುತ್ತ, ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರು ಮೂಲದ ಗೌರಿ
ಗೌರಿ ಅವರು ಮೂಲತಃ ಬೆಂಗಳೂರು ನಿವಾಸಿ. ಸದ್ಯ ಆಮೀರ್ ಖಾನ್ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗೌರಿಗೆ ಆರು ವರ್ಷದ ಮಗನಿದ್ದಾನೆ. ಇದೇ ಗೌರಿ ಜತೆಗೆ ಕಳೆದ 18 ತಿಂಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಆಮೀರ್ ಖಾನ್, ತಮ್ಮ ಮನೆ ಮಂದಿಗೂ ಇವರನ್ನು ಪರಿಚಯಿಸಿಕೊಟ್ಟಿದ್ದಾರೆ. ಮನೆಮಂದಿಯೂ ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನಾನು ಇಷ್ಟು ವರ್ಷಗಳ ಕಾಲ ನಿಮ್ಮಿಂದ ಏನಾದರೂ ಮರೆಮಾಚುವುದನ್ನು ನೀವು ನೋಡಿದ್ದೀರಾ?" ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮಾಷೆಯಾಗಿ ಮಾತನಾಡಿದ ಅಮೀರ್, "ನಾನು ಗೌರಿಯನ್ನು ಜಗತ್ತಿಗೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೆ. ಅವಳ ಖಾಸಗಿ ಭದ್ರತೆಗೆ ವ್ಯವಸ್ಥೆ ಮಾಡಿದ್ದೆ ಎಂದು ಹೇಳಿದ್ದಾರೆ. ಇದೆಲ್ಲದರ ಜತೆಗೆ ಗೌರಿಯ ಫೋಟೋಗಳನ್ನು ಎಲ್ಲಿಯೂ ಆಮೀರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಲ್ಲ.
2021 ರಲ್ಲಿ ಕಿರಣ್ ನಿಂದ ವಿಚ್ಛೇದನ ಪಡೆದರು
ಆಮೀರ್ ಈ ಹಿಂದೆ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ರೀನಾಗೆ ಜುನೈದ್ ಖಾನ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ 2005ರಲ್ಲಿ ಕಿರಣ್ ರಾವ್ ಅವರನ್ನು ವರಿಸಿದರು. ಈ ಜೋಡಿಗೆ ಆಜಾದ್ ಎಂಬ ಮಗನಿದ್ದಾನೆ. 2021ರಲ್ಲಿ ಈ ಜೋಡಿಯೂ ಬೇರ್ಪಟ್ಟಿತು. ಆದರೆ, ಪರಸ್ಪರ ಸ್ನೇಹ ಇಂದಿಗೂ ಮುಂದುವರಿದಿದ್ದು, ಒಟ್ಟಿಗೆ ಸೇರಿ ಕಳೆದ ವರ್ಷ ಲಾಪತಾ ಲೇಡೀಸ್ ಸಿನಿಮಾ ನಿರ್ಮಾಣ ಮಾಡಿದ್ದರು. ಇದೀಗ ಗೌರಿ ಅವರನ್ನು ಪರಿಚಯಿಸಿದ್ದಾರೆ. ಗೌರಿ ಅರ್ಧ ತಮಿಳು ಮತ್ತು ಅರ್ಧ ಐರಿಶ್. ಸ್ವಾತಂತ್ರ್ಯ ಹೋರಾಟಗಾರ ಕುಟುಂಬದ ಹಿನ್ನೆಲೆಯಿಂದ ಬಂದವರು. ಬೆಂಗಳೂರು ನಿವಾಸಿ.
ಒಟ್ಟಿನಲ್ಲಿ ಸದ್ಯದ ಪ್ರಶ್ನೆ ಏನೆಂದರೆ, ಮಿಸ್ಟರಿ ಗರ್ಲ್ ಗೌರಿ ಅವರ ಜತೆಗೆ ಆಮೀರ್ ಖಾನ್ ಮದುವೆ ಆಗ್ತಾರಾ ಅಥವಾ, ಡೇಟಿಂಗ್, ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿಯೇ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕು.
