Sikandar Teaser: ಸಿಕಂದರ್ ಚಿತ್ರದ ಟೀಸರ್ ಮೂಲಕವೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಟಕ್ಕರ್ ಕೊಟ್ರಾ ಸಲ್ಮಾನ್ ಖಾನ್?
Sikandar Teaser: ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಎ.ಆರ್ ಮುರುಗದಾಸ್ ನಿರ್ದೇಶನದ ಈ ಸಿನಿಮಾ 2025ರ ಈದ್ ಹಬ್ಬದಂದು ರಿಲೀಸ್ ಆಗಲಿದೆ. ಟೀಸರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಲ್ಮಾನ್ ಖಾನ್ ನೇರವಾಗಿ ಕೌಂಟರ್ ಕೊಟ್ಟಿದ್ದಾರಾ ಎಂದು ಹೇಳಲಾಗುತ್ತಿದೆ.
Sikandar Teaser: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸಿಕಂದರ್ ಸಿನಿಮಾದ ಟೀಸರ್ ಕೊನೆಗೂ ಬಿಡುಗಡೆ ಆಗಿದೆ. 2023ರಲ್ಲಿ ಟೈಗರ್ 3 ಸಿನಿಮಾ ಮೂಲಕ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಸಲ್ಮಾನ್ ಖಾನ್, ಈ ವರ್ಷ ಚಿತ್ರಮಂದಿರಗಳಲ್ಲಿ ದರ್ಶನ ತೋರಿಸಲಿಲ್ಲ. ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಪೂರ್ಣ ಪ್ರಮಾಣದ ನಾಯಕನಾಗಿ ಎದುರಾಗಿಲ್ಲ. ಇದೀಗ ಸಿಕಂದರ್ ಮೂಲಕ ಅವರ ಆಗಮನವಾಗಿದೆ. ಚಿತ್ರದ ಸಣ್ಣ ಝಲಕ್ ಎಂಬಂತೆ ಟೀಸರ್ ಹೊರಬಂದಿದೆ.
ತಮಿಳಿನ ಖ್ಯಾತ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿಕಂದರ್ ಸಿನಿಮಾವನ್ನು ಸಾಜಿದ್ ನಾಡಿಯಾಡ್‌ವಾಲಾ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಈಗ ಅದೇ ಸಿಕಂದರ್ ಚಿತ್ರದ ಝಲಕ್ ಟೀಸರ್ ರೂಪದಲ್ಲಿ ಹೊರಬಂದಿದೆ. ಅಚ್ಚರಿಯ ವಿಚಾರ ಏನೆಂದರೆ, ಈ ಟೀಸರ್ ಮೂಲಕ ತಮ್ಮ ಹತ್ಯೆಗೆ ಸಂಚು ರೂಪಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ನೇರವಾಗಿಯೇ ಕೌಂಟರ್ ಕೊಟ್ರಾ ಸಲ್ಮಾನ್ ಎಂದೂ ಅನಿಸುವುದುಂಟು.
ಏನಿದೆ ಟೀಸರ್‌ನಲ್ಲಿ?
ನಿರ್ದೇಶಕ ಎ ಆರ್ ಮುರುಗದಾಸ್ ಪಕ್ಕಾ ಆಕ್ಷನ್ ಮತ್ತು ಮಾಸ್ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು. ಗಜಿನಿ, ಕತ್ತಿ, ಸ್ಟಾಲಿನ್, ತುಪಾಕಿ ಸೇರಿ ಹಲವು ಸಿನಿಮಾಗಳಲ್ಲಿ ಆಕ್ಷನ್ ಅಬ್ಬರವನ್ನು ತೆರೆದಿಟ್ಟಿದ್ದರು. ಇದೀಗ ಸಲ್ಮಾನ್ ಖಾನ್ ಮೂಲಕ ಆಕ್ಷನ್ ಪ್ರಿಯರಿಗೆ ಮಗದೊಂದು ಸರ್ಪ್ರೈಸ್ ನೀಡಲಿದ್ದಾರೆ. ಸದ್ಯ ಬಿಡುಗಡೆಯಾದ ಟೀಸರ್‌ನಲ್ಲಿ ಯಂತ್ರದಂತೆ ಕಾಣಿಸೋ ದುಷ್ಟರ ಗ್ಯಾಂಗ್‌ಅನ್ನು ಗನ್‌ಗಳಿಂದ ತಮ್ಮದೇ ಸ್ಟೈಲ್‌ನಲ್ಲಿ ಸೆದೆಬಡಿದಿದ್ದಾರೆ. ಇದೇ ವೇಳೆ 'ಅನೇಕ ಜನರು ನನ್ನ ಹಿಂದೆ ಬಿದ್ದಿದ್ದಾರೆ, ಆದರೆ, ನಾನು ಅತ್ತ ಕಡೆ ತಿರುಗಲು ತಡವಾಗಿದೆ' ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಟಾಂಗ್
ಟೀಸರ್‌ನಲ್ಲಿ ಸಲ್ಮಾನ್ ಖಾನ್, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಡೈರೆಕ್ಟ್ ವಾರ್ನಿಂಗ್ ಕೊಡುತ್ತಿರುವಂತೆ ಕಾಣುತ್ತಿದೆ. ವಾಸ್ತವವಾಗಿ, ಕೃಷ್ಣಮೃಗ ಪ್ರಕರಣದಲ್ಲಿ, ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಪದೇ ಪದೆ ಬೆದರಿಕೆ ಹಾಕಿದ್ದಾರೆ. ಸಲ್ಲುಮಿಯಾನ ಹತ್ಯೆಗೂ ಸಂಚು ರೂಪಿಸಿದ ಆರೋಪ ಕೇಳಿಬಂದಿತ್ತು. ಆದರೆ ಈ ವರೆಗೂ ಈ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಈ ಸಿನಿಮಾದ ಟೀಸರ್ ಮೂಲಕ ಪ್ರತಿಕ್ರಿಯೆಕೊಟ್ಟಿದ್ದಾರೆ ಎಂದೇ ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ.
ಡೈಲಾಗ್ ಮಾತ್ರವಲ್ಲದೆ, ಇದೇ ಟೀಸರ್‌ನ ಹಿನ್ನೆಲೆಯಲ್ಲಿ ಕೇಳಿಬರುವ ಹಾಡು ಲಾರೆನ್ಸ್‌ಗೆ ಎಚ್ಚರಿಕೆ ನೀಡುವಂತಿದೆ. 'ಹರ್ ದಿಲ್ ಕಾ ವೋ ಏಕ್ ದಿಲಾವರ್, ಜಾನೇ ಜಿಗರ್ ವೋ ಹೈ ಸಿಕಂದರ್, ಅಲಗ್ ಅಂದಾಜ್ ಮೆ ಫಿರ್ತಾ ಹೈ ಬಂಜಾರ್ ಬಂಜಾರ್, ವೋ ಹೈ ದೋನ್ ಸಿಕಂದರ್' ಎಂಬ ಹಾಡು ಕಿವಿಗೆ ಬೀಳುತ್ತಿದೆ. ಅಂದಹಾಗೆ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಯೂಟ್ಯೂಬ್‌ನಲ್ಲಿ ಈ ಟೀಸರ್ ಬಿಡುಗಡೆ ಆಗಿದೆ.
ಈದ್ ಹಬ್ಬದ ಪ್ರಯುಕ್ತ ಸಿಕಂದರ್ ರಿಲೀಸ್
ಬಾಹುಬಲಿ ಸಿನಿಮಾ ಖ್ಯಾತಿನ ನಟ ಸತ್ಯರಾಜ್ ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ನಾಯಕಿಯರಾಗಿ ನಟಿಸಿದ್ದು, ಈ ಚಿತ್ರವು 2025ರ ಈದ್(ಮಾರ್ಚ್) ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.