ಆ ದೃಶ್ಯ ನನ್ನನ್ನು ನಡುಗಿಸಿತ್ತು, ಶೂಟ್ ಮುಗಿದ ನಂತರ ನಾನು ವಾಂತಿ ಮಾಡಿದ್ದೆ; ರೇಪ್ ಸೀನ್ ನಟನೆ ಅನುಭವ ಹಂಚಿಕೊಂಡ ದಿಯಾ ಮಿರ್ಜಾ
ಬಾಲಿವುಡ್ ನಟಿ ದಿಯಾ ಮಿರ್ಜಾ ‘ಕಾಫಿರ್‘ ಚಿತ್ರೀಕರಣದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಈ ಚಿತ್ರದ ರೇಪ್ ಸೀನ್ ನಟನೆ ಬಗ್ಗೆ ಮಾತನಾಡಿರುವ ಅವರು ಶೂಟ್ ಮುಗಿದ ಕೂಡಲೇ ನಾನು ವಾಂತಿ ಮಾಡಿದ್ದೆ, ಇದು ದೈಹಿಕವಾಗಿ ನನ್ನನ್ನು ನಲುಗಿಸಿತ್ತು ಎಂದು ಹೇಳಿಕೊಂಡಿದ್ದಾರೆ.

ಮೋಹಿತ್ ರೈನಾ ಹಾಗೂ ದಿಯಾ ಮಿರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 2019ರಲ್ಲಿ ಬಿಡುಗಡೆಯಾದ ವೆಬ್‌ಸರಣಿ ಕಾಫಿರ್ ಈಗ ಸಿನಿಮಾವಾಗಿದೆ. ಇದರಲ್ಲಿ ಅರಿಯದೇ ಎಲ್‌ಒಸಿ (ಗಡಿ ನಿಯಂತ್ರಣ ರೇಖೆ) ದಾಟಿ ಭಾರತಕ್ಕೆ ಬರುವ ಮುಗ್ಧ ಪಾಕಿಸ್ತಾನಿ ಮಹಿಳೆಯರ ಪಾತ್ರವನ್ನು ನಿರ್ವಹಿಸಿದ್ದಾರೆ ದಿಯಾ. ಇತ್ತೀಚಿನ ಸಂದರ್ಶನವೊಂದರಲ್ಲಿ ದಿಯಾ ಕಾಫಿರ್ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಅತ್ಯಾಚಾರ ದೃಶ್ಯದ (ರೇಪ್ ಸೀನ್) ಚಿತ್ರೀಕರಣದ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು ಇದು ನನಗೆ ಅತ್ಯಂತ ಕಷ್ಟಕರವಾಗಿತ್ತು ಎಂದಿದ್ದಾರೆ.
ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಈ ವೆಬ್‌ಸರಣಿಗಾಗಿ ಚಿತ್ರೀಕರಿಸಲಾದ ಅತ್ಯಾಚಾರ ದೃಶ್ಯವು ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಅವರಿಗೆ ಎಷ್ಟು ಕಠಿಣವಾಗಿತ್ತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.
ಅತ್ಯಾಚಾರ ದೃಶ್ಯದ ಚಿತ್ರೀಕರಣದ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು ‘ಅದು ನನಗೆ ತುಂಬಾ ಕಷ್ಟಕರವಾಗಿತ್ತು. ಆ ದೃಶ್ಯದ ಚಿತ್ರೀಕರಣ ಮುಗಿದ ನಂತರ ನಾನು ದೈಹಿಕವಾಗಿ ನಡುಗುತ್ತಿದ್ದೆ, ಶೂಟ್ ಸಂದರ್ಭ ನನಗೆ ವಾಂತಿ ಬರುವಂತಾಗಿತ್ತು. ಸಂಪೂರ್ಣ ದೃಶ್ಯದ ಚಿತ್ರೀಕರಣ ಮುಗಿದಾಗ ನಾನು ವಾಂತಿ ಮಾಡಿಕೊಂಡಿದ್ದೆ. ಆ ಸನ್ನಿವೇಶಗಳು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಎಷ್ಟು ಕಷ್ಟಕರವಾಗಿದ್ದವು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಿಮ್ಮ ಇಡೀ ದೇಹವನ್ನು ನೀವು ಆ ಕ್ಷಣದ ಸತ್ಯಕ್ಕೆ ತೆರೆದುಕೊಂಡಾಗ ನಿಮಗೂ ಅದರ ಅನುಭವವಾಗಬಹುದು‘ ಎಂದು ದಿಯಾ ಹೇಳಿದ್ದಾರೆ.
43 ವರ್ಷದ ದಿಯಾ, ಒಬ್ಬ ಕಲಾವಿದೆಯಾಗಿ ಪಾತ್ರದ ಬಗ್ಗೆ ಸಹಾನುಭೂತಿ ಹೊಂದುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು. ಏಕೆಂದರೆ ಇದು ಅಭಿನಯದಲ್ಲಿ ದೃಢತೆ ಮತ್ತು ದೃಢವಿಶ್ವಾಸವನ್ನು ತರಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಒಬ್ಬ ಕಲಾವಿದೆಯಾಗಿ ನಾನು ನಿರ್ವಹಿಸುತ್ತಿರುವ ಮತ್ತು ಸಕಾರಾಗೊಳಿಸುತ್ತಿರುವ ಪಾತ್ರದ ಬಗ್ಗೆ ಸಹಾನುಭೂತಿ ಹೊಂದಿರುವುದು ನನ್ನ ಮೊದಲ ಹಾಗೂ ಪ್ರಮುಖ ಆದ್ಯತೆಯಾಗಿರಬೇಕು. ಆಗ ಮಾತ್ರ ಪಾತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವುದು. ಕೈನಾಜ್ ಪಾತ್ರವು ನಾನು ತಾಯಿಯಾಗುವ ಮೊದಲು ನನ್ನನ್ನು ತಾಯಿಯನ್ನಾಗಿ ಮಾಡಿತ್ತು‘ ಎಂದು ಹೇಳಿಕೊಂಡಿದ್ದಾರೆ.
ಕಾಫಿರ್ ಚಿತ್ರದ ಕಥೆ ಇದು
ಕಾಫಿರ್ ನೈಜ ಘಟನೆಯನ್ನು ಆಧರಿಸಿದ ಚಿತ್ರ. ಶೆಹ್ನಾಜ್ ಪರ್ವೀನ್ ಎನ್ನುವ ಪಾಕಿಸ್ತಾನಿ ಮಹಿಳೆಯ ನಿಜ ಜೀವನದ ಕಥೆ ಇದು. ಅರಿಯದೇ ಭಾರತದ ಗಡಿ ರಕ್ಷಣಾ ರೇಖೆ ದಾಟುವ ಆಕೆ 8 ವರ್ಷಗಳ ಕಾಲ ಭಾರತದಲ್ಲಿ ಬಂಧನಕ್ಕೆ ಒಳಗಾಗುತ್ತಾಳೆ. ಇದರಲ್ಲಿ ದಿಯಾ ಶೆಹ್ನಾಜ್ ಪರ್ವೀನ್ ಪಾತ್ರವಾದ ಕೈನಾಜ್ ಆಖ್ತರ್ ಆಗಿ ನಟಿಸಿದ್ದರು. ಮೋಹಿತ್ ರೈನಾ ಆಕೆಗೆ ನ್ಯಾಯ ಕೊಡಿಸಲು ಹೋರಾಡುವ ಪತ್ರಕರ್ತನ ಪಾತ್ರಕ್ಕೆ ಜೀವ ತುಂಬಿದ್ದರು.