Priyanka Chopra: ಹೃತಿಕ್ ರೋಷನ್ ಕ್ರಿಶ್ 4 ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ; ಮತ್ತೆ ಬಾಲಿವುಡ್ ಕಡೆಗೆ ಪಯಣ
Priyanka Chopra in Krrish 4: ಬಾಲಿವುಡ್ ನಟ ಹೃತಿಕ್ ರೋಷನ್ ‘ಕ್ರಿಶ್ 4‘ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. 2026ರಲ್ಲಿ ಶೂಟಿಂಗ್ ಆರಂಭಿಸಲಿರುವ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದು ನಿಜ ಆದ್ರೆ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲಿದೆ ಪ್ರಿಯಾಂಕಾ–ಹೃತಿಕ್ ಜೋಡಿ.

Priyanka Chopra in Krrish 4: ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಪ್ರಿಯಾಂಕ ಚೋಪ್ರಾ ಹೆಸರು ಬಹಳ ಸದ್ದು ಮಾಡುತ್ತಿದೆ. ಮದುವೆಯ ಬಳಿಕ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಇದೀಗ ಮತ್ತೆ ಮಾತೃಭೂಮಿಗೆ ಕಡೆಗೆ ಒಲವು ತೋರಿದಂತಿದೆ. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಪ್ರಿಯಾಂಕಾ ಬಾಲಿವುಡ್‌ಗೂ ಮರಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹೃತಿಕ್ ರೋಷನ್ ‘ಕ್ರಿಶ್ 4‘ ಚಿತ್ರ ನಿರ್ದೇಶನ ಮಾಡಲು ಮುಂದಡಿ ಇಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಎಂಬ ಮಾತು ಕೇಳಿ ಬರುತ್ತಿದೆ. ಕ್ರಿಶ್ ಹಾಗೂ ಕ್ರಿಶ್ 3ನಲ್ಲಿ ಒಟ್ಟಾಗಿ ನಟಿಸಿ ಜನಮೆಚ್ಚುಗೆ ಪಡೆದಿತ್ತು ಈ ಜೋಡಿ. ಇದೀಗ ಮತ್ತೆ ಇವರು ತೆರೆ ಮೇಲೆ ಒಂದಾಗುವ ಸುದ್ದಿ ಹೃತಿಕ್–ಪ್ರಿಯಾಂಕಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಇದು ಗಾಳಿಸುದ್ದಿಯಾಗದಿರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ ಬಾಲಿವುಡ್ ಹಾಗೂ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.
ಈ ವಿಚಾರವಾಗಿ ಸುದ್ದಿಗಳು ಹರಿದಾಡುತ್ತಿವೆ ನಿಜ. ಆದರೆ ಕ್ರಿಶ್ 4 ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ ಎಂಬುದನ್ನು ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಕ್ರಿಶ್ 4 ಮೂಲಕ ಮಗನಿಗೆ ನಿರ್ದೇಶನ ಕಿರೀಟ ಹಾಕುತ್ತಿದ್ದಾರೆ. ಕ್ರಿಶ್ 3 ಚಿತ್ರಕ್ಕೆ ರಾಕೇಶ್ ರೋಷನ್ ನಿರ್ದೇಶನವಿತ್ತು. ಇದೀಗ ಹೃತಿಕ್ ರೋಷನ್ ನಟನೆಯ ಜೊತೆ ನಿರ್ದೇಶನಕ್ಕೆ ಇಳಿದಿರುವುದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಈಗಾಗಲೇ ಕ್ರಿಶ್ 4 ಸಿನಿಮಾದ ಪ್ರಿ ಪ್ರೊಡಕ್ಷನ್‌ಗಳು ಜೋರಾಗಿ ನಡೆಯುತ್ತಿದೆ. ಈ ಚಿತ್ರವನ್ನು ಆದಿತ್ಯ ಚೋಪ್ರಾ ಹಾಗೂ ರಾಕೇಶ್ ರೋಷನ್ ಜೊತೆಯಾಗಿ ನಿರ್ಮಾಣ ಮಾಡಲಿದ್ದಾರೆ. ಹೃತಿಕ್ ಜೊತೆ ಆದಿತ್ಯ ಚೋಪ್ರಾ ಕೂಡ ಸ್ಕ್ರಿಪ್ ಸುಧಾರಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.
2026ರ ಮೊದಲ ತ್ರೈಮಾಸಿಕದಲ್ಲಿ ಕ್ರಿಶ್ 3 ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ನಟರ ಆಯ್ಕೆ ಪ್ರಕ್ರಿಯೆ ಸಾಗುತ್ತಿದೆ. ಕ್ರಿಶ್ 4 ಚಿತ್ರವು 23 ವರ್ಷಗಳ ಹಿಂದೆ ಪರದೆ ಮೇಲೆ ಜಾದೂ ಮಾಡಿದ್ದ ಕಿಶ್ ಲೋಕವನ್ನು ಮತ್ತೆ ಮರುಕಳಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇಡೀ ತಂಡವು ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ಹಿಂದೆಂದೂ ಕಾಣದ ಸಿನಿಮೀಯ ಅನುಭವವನ್ನು ನೀಡುವ ವಿಶ್ವಾಸ ಹೊಂದಿದೆ. ಕ್ರಿಶ್ 4 ಭಾರತೀಯ ಸಿನಿಮಾದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ ಮತ್ತು 14 ವರ್ಷಗಳ ನಂತರ ಹೃತಿಕ್ ರೋಷನ್ ಸೂಪರ್ ಹೀರೋ ಕ್ರಿಶ್ ಪಾತ್ರದಲ್ಲಿ ದೊಡ್ಡ ಪರದೆಯ ಮೇಲೆ ಮರಳಲಿದ್ದಾರೆ.
ಕ್ರಿಶ್ 4 ನೇ ಅವೃತ್ತಿಯಲ್ಲಿ ಹೃತಿಕ್‌ಗೆ ಪ್ರಿಯಾಂಕಾ ಜೋಡಿಯಾಗೋದು ಪಕ್ಕಾನಾ, ಈ ಚಿತ್ರದಲ್ಲಿ ಇನ್ನು ಯಾವ ಯಾವ ನಟರು ಬಣ್ಣ ಹಚ್ಚಲಿದ್ದಾರೆ ಎಂಬೆಲ್ಲಾ ವಿಚಾರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
