ಅಭಿಮಾನಿಗಳ ತಲೆ ಬಿಸಿ ಮಾಡಿದ ಸೋನು ಕಕ್ಕರ್ ಪೋಸ್ಟ್; ತಂಗಿ ನೇಹಾ-ತಮ್ಮ ಟೋನಿ ಜೊತೆ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ ಎಂದ ಖ್ಯಾತ ಗಾಯಕಿ
Sonu Kakkar: ಖ್ಯಾತ ಗಾಯಕಿ ಸೋನು ಕಕ್ಕರ್ ತನ್ನ ತಂಗಿ ನೇಹಾ ಕಕ್ಕರ್ ಹಾಗೂ ತಮ್ಮ ಟೋನಿ ಕಕ್ಕರ್ ಜೊತೆ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದು, ನಂತರ ಡಿಲಿಟ್ ಮಾಡಿದ್ದಾರೆ. ಈ ವಿಚಾರ ಈಗ ಅಭಿಮಾನಿ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಗಾಯಕಿ ಸೋನು ಕಕ್ಕರ್ ತಮ್ಮ ಟೋನಿ ಕಕ್ಕರ್ ಹಾಗೂ ತಂಗಿ ನೇಹಾ ಕಕ್ಕರ್ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಶನಿವಾರ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಆದರೆ ಕೆಲ ಹೊತ್ತಿಗೆ ಆ ಪೋಸ್ಟ್ ಅನ್ನು ಡಿಲಿಟ್ ಕೂಡ ಮಾಡಿದ್ದಾರೆ. ಆದರೆ ಅವರ ಪೋಸ್ಟ್‌ನ ಸ್ಕ್ರೀನ್ ಶಾಟ್ ಈಗ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಕಕ್ಕರ್ ಕುಟುಂಬದಲ್ಲಿ ಏನಾಗ್ತಿದೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಸುಳ್ಳೋ, ಸತ್ಯವೋ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಸೋನು ಪೋಸ್ಟ್‌ನಲ್ಲಿ ಏನಿತ್ತು?
ಎಕ್ಸ್‌ನಲ್ಲಿ ಸೋನು ಕಕ್ಕರ್ ಪೋಸ್ಟ್ ಹಾಕಿದ್ದು, ಈ ರೀತಿ ಬರೆದುಕೊಂಡಿದ್ದರು. ಖ್ಯಾತ ಗಾಯಕರು ಹಾಗೂ ಸೂಪರ್‌ಸ್ಟಾರ್‌ಗಳಾದ ಟೋನಿ ಕಕ್ಕರ್ ಹಾಗೂ ನೇಹಾ ಕಕ್ಕರ್ ನನಗೆ ಇನ್ನು ಮುಂದೆ ಸಹೋದರಿ, ಸಹೋದರಿಯರಲ್ಲ ಎಂದು ತಿಳಿಸಲು ನನಗೆ ಬಹಳ ನೋವಾಗುತ್ತಿದೆ. ನಾನು ಅವರೊಂದಿಗಿನ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ. ಈ ನಿರ್ಧಾರವನ್ನು ನಾನು ಬಹಳ ನೋವಿನಿಂದ ತೆಗೆದುಕೊಂಡಿದ್ದೇನೆ. ನನಗೆ ಇಂದು ನಿಜವಾಗಿಯೂ ನಿರಾಶೆ ಕಾಡುತ್ತಿದೆ‘. ಆದರೆ ಕ್ಷಣ ಮಾತ್ರದಲ್ಲಿ ಈ ಪೋಸ್ಟ್ ಡಿಲಿಟ್ ಆಗಿದೆ. ಆದರೆ ರೆಡ್ಡಿಟ್ ಸಾಮಾಜಿಕ ಜಲಾತಾಣದಲ್ಲಿ ಇವರ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹಲವರ ಫೇವರಿಟ್ ಸಿಂಗರ್‌ಗಳಾಗಿರುವ ಈ ಸಹೋದರ, ಸಹೋದರಿಯರ ಕುಟುಂಬದಲ್ಲಿ ಏನಾಗುತ್ತಿದೆ ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗಿದ್ದಾರೆ.
ಸೋನು ಪೋಸ್ಟ್‌ಗೆ ನೆಟ್ಟಿಗರ ಕಾಮೆಂಟ್
ಇವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದ್ಯಾವುದೋ ಪ್ರಚಾರದ ಗಿಮಿಕ್ ಇರಬಹುದು, ಯಾಕೆಂದರೆ ಅವರು ತಮ್ಮ ಸಹೋದರಿ–ಸಹೋದರನನ್ನು ಪ್ರತಿಭಾನ್ವಿತ ಸೂಪರ್‌ಸ್ಟಾರ್‌ಗಳು ಎಂದು ಕರೆದಿದ್ದಾರೆ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವು ರೆಡ್ಡಿಟ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
‘ಟೋನಿಯನ್ನು ಸೂಪರ್‌ಸ್ಟಾರ್ ಎಂದು ಕರೆಯಲು ಸಹೋದರಿ ಹೊರತುಪಡಿಸಿ ಇನ್ಯಾರಿಂದ ಸಾಧ್ಯ. ಈ ಕುಟುಂಬದಲ್ಲಿ ಏನಾಗುತ್ತದೆ ಎನ್ನುವುದನ್ನು ಊಹಿಸುವುದು ಅಸಾಧ್ಯ. ಇದು ಅವರ ಮುಂದಿನ ಸಂಗೀತ ಆಲ್ಬಮ್‌ಗಾಗಿ ಪಿಆರ್ ಸ್ಟಂಟ್ ಆಗಿರಬಹುದು" ಎಂದು ರೆಡ್ಡಿಟ್ ಬಳಕೆದಾರರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ‘ಪ್ರತಿಭಾನ್ವಿತರೇ? ಸೂಪರ್‌ಸ್ಟಾರ್‌ಗಳು? ಏನೇ ಆದರೂ ಇದು ಪ್ರಚಾರದ ಸ್ಟಂಟ್‌ನಂತೆ ತೋರುತ್ತದೆ‘ ಎಂದು ಇನ್ನೊಬ್ಬರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ಮೆಲ್ಬೋರ್ನ್‌ನಲ್ಲಿ ನಡೆದ ಸಂಗೀತ ಕಚೇರಿಗೆ ನೇಹಾ ಕಕ್ಕರ್ ಮೂರು ಗಂಟೆ ತಡವಾಗಿ ಬಂದಿದ್ದಕ್ಕಾಗಿ ಜನಸಮೂಹದ ಆಕ್ರೋಶವನ್ನು ಎದುರಿಸಿದ್ದಲ್ಲದೇ ತೊಂದರೆಗೆ ಒಳಗಾಗಿದ್ದರು. ಆಗ ನೇಹಾದ ಹಣದ ಜೊತೆ ಓಡಿ ಹೋಗಿದ್ದರು, ನಂತರ ಅವರನ್ನು ಹುಡುಕಿ ಬರುವುದು ಕಷ್ಟವಾಯ್ತು ಎಂದು ಆಯೋಜಕರು ಆರೋಪಿಸಿದ್ದರು. ಆಯೋಜಕರ ಆರೋಪಗಳು ಸುಳ್ಳು ಎಂದು ನೇಹಾ ದೂರಿದ್ದರು.
ಈಗ ಸೋನು ಕಕ್ಕರ್ ಈ ರೀತಿ ಪೋಸ್ಟ್ ಹಾಕಿದ್ದು ಇದಕ್ಕೆ ಕಾರಣವೇನು ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
