ನಟಿ ಶ್ರೀಲೀಲಾರನ್ನು ಬಲವಂತವಾಗಿ ಎಳೆದಾಡಿದ ಜನ, ಅಘಾತಕಾರಿ ವಿಡಿಯೊ ವೈರಲ್; ಹೆಣ್ಣುಮಕ್ಕಳ ಸುರಕ್ಷತೆ ಪ್ರಶ್ನಿಸಿದ ನೆಟ್ಟಿಗರು
Sreeleela: ಬಾಲಿವುಡ್ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ, ಸಹ ನಟ ಕಾರ್ತಿಕ್ ಆರ್ಯನ್ ಜೊತೆ ನಡೆದು ಬರುವಾಗ ಜನರು ಆಕೆಯನ್ನು ಎಳೆದಾಡಿರುವ ದೃಶ್ಯದ ವಿಡಿಯೊ ಒಂದು ಈಗ ವೈರಲ್ ಆಗಿದೆ.

Sreeleela Viral Video: ಕಿಸ್ ಸಿನಿಮಾ ನಟಿ ಶ್ರೀಲೀಲಾ ಟಾಲಿವುಡ್ ಬಳಿಕ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ಜನರು ಹಿಂದಿ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ತೆರೆ ಹಂಚಿಕೊಳ್ಳಲಿರುವ ಶ್ರೀಲೀಲಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಶ್ರೀಲೀಲಾಗೆ ಸಂಬಂಧಿಸಿದ ಶಾಕಿಂಗ್ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊ ನೋಡಿದ ಜನರು ಇಂತಹ ದೌರ್ಜನ್ಯಗಳು ನಿಲ್ಲಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾದರೆ ವಿಡಿಯೊದಲ್ಲಿ ಅಂಥದ್ದೇನಿದೆ ನೋಡಿ.
ವಿಡಿಯೊದಲ್ಲಿ ಏನಿದೆ?
ಶೂಟಿಂಗ್ ಮುಗಿಸಿ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಜನಜಂಗುಳಿ ಇರುವ ಜಾಗದಲ್ಲಿ ನಡೆದು ಬರುತ್ತಿರುತ್ತಾರೆ. ಆ ಸಂದರ್ಭ ಕೆಲವರು ಅವರನ್ನು ಬಲವಂತವಾಗಿ ಎಳೆದಾಡಿದ್ದಾರೆ. ಬಾಡಿಗಾರ್ಡ್, ಕಾರ್ತಿಕ್ ಆರ್ಯನ್ ಜೊತೆ ಇರುವಾಗಲೇ ಶ್ರೀಲೀಲಾಗೆ ಈ ರೀತಿ ಅನುಭವವಾಗಿದೆ. ಪಾಪರಾಜಿಗಳು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ. ಮಾತ್ರವಲ್ಲ ಇಂತಹ ದೌರ್ಜನ್ಯಗಳು ನಿಲ್ಲಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ವಿವರ
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಜನರ ಗುಂಪಿನಲ್ಲಿ ನಡೆದು ಬರುತ್ತಿರುತ್ತಾರೆ. ಆಕೆಗಿಂತ ಕಾರ್ತಿಕ್ ಸ್ವಲ್ಪ ಮುಂದಿರುತ್ತಾರೆ. ಇಬ್ಬರು ಸಾಕಷ್ಟು ಪ್ರಸಿದ್ಧಿ ಪಡೆದಿರುವ ಕಾರಣ ಅವರನ್ನು ನೋಡಲು ಸಾಕಷ್ಟು ಜನ ಸೇರಿದ್ದರು. ಆ ಸಂದರ್ಭ ಹಿಂದೆ ಬರುತ್ತಿದ್ದ ಶ್ರೀಲೀಲಾರನ್ನು ಕೈಯನ್ನು ಹಿಡಿದು ಎಳೆದಿರುವ ಪುಂಡರು ಜನರ ಗುಂಪಿನೊಳಗೆ ಅವರನ್ನು ಎಳೆದುಕೊಂಡಿದ್ದಾರೆ. ಆದರೆ ಮುಂದೆ ಹೋಗುತ್ತಿದ್ದ ಕಾರ್ತಿಕ್‌ಗೆ ಇದ್ಯಾವುದೂ ಅವರಿಗೆ ಬರುವುದಿಲ್ಲ. ಆದರೆ ತಕ್ಷಣಕ್ಕೆ ಅಲ್ಲೇ ಇದ್ದ ಬಾಡಿಗಾರ್ಡ್ ಆಕೆಯ ರಕ್ಷಣೆಗೆ ಬರುತ್ತಾರೆ. ಈ ಘಟನೆಯಿಂದ ಕ್ಷಣಕಾಲ ಗಾಬರಿಗೊಂಡ ಶ್ರೀಲೀಲಾ ನಂತರ ಸಾವರಿಸಿಕೊಂಡು ಮುಂದೆ ಸಾಗುತ್ತಾರೆ. ಈ ಘಟನೆ ನಡೆದ ಸ್ಥಳ ಯಾವುದು ಎಂಬುದು ತಿಳಿದುಬಂದಿಲ್ಲ.
ವೈರಲ್ ವಿಡಿಯೊಗೆ ನೆಟ್ಟಿಗರ ಕಾಮೆಂಟ್
ಪಾಪರಾಜಿಗಳು ಈ ವಿಡಿಯೊ ಪೋಸ್ಟ್ ಮಾಡಿದ ಕೆಲವೇ ಹೊತ್ತಲ್ಲಿ ಇದು ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಅಭಿಮಾನಿಗಳು ಕಾಮೆಂಟ್ ಮಾಡಲು ಆರಂಭಿಸಿದರು. ‘ಸಾರ್ವಜನಿಕ ಸ್ಥಳಗಳಲ್ಲಿ ನಟಿಯರ ಜೊತೆ ಅಸಭ್ಯವಾಗಿ ವರ್ತಿಸುವುದು ನಿಲ್ಲಬೇಕು‘ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದರೆ, ನಿಜಕ್ಕೂ ಭಯವಾಗುವಂತಿದೆ, ಈ ಸಮಾಜ ಯಾರಿಗೂ ಸುರಕ್ಷಿತವಲ್ಲ‘ ಎಂದಿದ್ದಾರೆ. ‘ಈ ವಿಡಿಯೊ ನಿಜಕ್ಕೂ ಭಯವಾಗುವಂತಿದೆ. ಶ್ರೀಲೀಲಾರನ್ನು ಯಾವ ರೀತಿ ಎಳೆದಾಡಿದ್ದಾರೆ. ಬೌನ್ಸರ್‌ಗಳು ಇನ್ನಷ್ಟು ಅಲರ್ಟ್ ಇರಬೇಕಿತ್ತು. ಶ್ರೀಲೀಲಾರಂತಹ ಪ್ರಸಿದ್ಧ ನಟಿಗೆ ಈ ರೀತಿ ಆದರೆ, ಇನ್ನು ಸಾಮಾನ್ಯ ಹುಡುಗಿಯ ಗತಿಯೇನು ಎಂದು ಕಾಮೆಂಟ್ ಮೂಲಕ ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಕಾರ್ತಿಕ್ ಆರ್ಯನ್ ಇದನ್ನು ಗಮನಿಸದೇ ಇರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು ‘ಸೂಪರ್‌ಸ್ಟಾರ್ ವ್ಯಕ್ತಿಯ ಜೊತೆ ನಡೆದು ಹೋಗುವಾಗಲೂ ಅವರು ಏನೂ ಮಾಡಿಲ್ಲ‘ ಎಂದು ಕಾಮೆಂಟ್ ಹಾಕಿದ್ದಾರೆ.
ಯಾವ ಸಿನಿಮಾದ ಶೂಟಿಂಗ್
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರು ಪಕ್ಕಾ ಆಗಿಲ್ಲ. ಕೆಲವರು ಈ ಸಿನಿಮಾಕ್ಕೆ ಆಶಿಕಿ 3 ಎಂದು ಕರೆದರೆ,ಇನ್ನೂ ಕೆಲವರು ‘ತು ಮೇರಿ ಜಿಂದಗಿ ಹೇ‘ ಎನ್ನುತ್ತಿದ್ದಾರೆ. ಆದರೆ ಈ ಸಿನಿಮಾದ ಹೆಸರು ಇನ್ನೂ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಅನುರಾಗ್ ಬಸು ಆ್ಯಕ್ಷನ್ ಕಟ್ ಹೇಳಿದ್ದಾರೆ. ಗ್ಯಾಂಗ್ಟಕ್ ಹಾಗೂ ಡಾರ್ಜಿಲಿಂಗ್‌ನಲ್ಲಿ ಈ ಚಿತ್ರ ಶೂಟಿಂಗ್ ನಡೆಯುತ್ತಿದೆ. 2025ರ ದೀಪಾವಳಿಗೆ ಚಿತ್ರ ತೆರೆ ಕಾಣಲಿದೆ.