ಅವಳನ್ನು ಎತ್ತಿಕೊಂಡಾಗ ಪ್ರಪಂಚದ ಉಳಿದೆಲ್ಲವೂ ನಗಣ್ಯ ಎನ್ನಿಸುತ್ತೆ, ಮೊಮ್ಮಗಳ ಬಗ್ಗೆ ನಟ ಸುನಿಲ್ ಶೆಟ್ಟಿ ಭಾವುಕ ಬರಹ
Suniel Shetty About Grand Daughter: ಬಾಲಿವುಡ್ ನಟ ಸುನಿಲ್ ಶೆಟ್ಟಿ ಇತ್ತೀಚೆಗಷ್ಟೇ ಅಜ್ಜನಾಗಿದ್ದಾರೆ. ಹೌದು ಇವರ ಮಗಳು ಆಥಿಯಾ ಶೆಟ್ಟಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸುನಿಲ್ ಶೆಟ್ಟಿ ತಮ್ಮ ಮೊಮ್ಮಗಳ ಬಗ್ಗೆ ಲಿಂಕ್ಡ್ ಇನ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

ಬಾಲಿವುಡ್ ನಟ, ಉದ್ಯಮಿ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಇತ್ತೀಚೆಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆ ಮೂಲಕ ಸುನಿಲ್ ಅಜ್ಜನ ಪಟ್ಟಕ್ಕೇರಿದ್ದಾರೆ. ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಆಥಿಯಾ ಮಾರ್ಚ್ 24 ರಂದು ಹೆಣ್ಣುಮಗುವನ್ನು ಬರ ಮಾಡಿಕೊಂಡಿದ್ದರು. ಮನೆಯಲ್ಲಿ ಮಗು ಬಂದಾಗ ಅದರ ಸಂಭ್ರಮ, ಖುಷಿ ಮನೆಯವರಷ್ಟೇ ಅನುಭವಿಸಲು ಸಾಧ್ಯ, ಇದು ಸೆಲೆಬ್ರಿಟಿಗಳಿಗೂ ಹೊರತಾಗಿಲ್ಲ.
ಇದೀಗ ಸುನಿಲ್ ಶೆಟ್ಟಿ ಕೂಡ ಮೊಮ್ಮಗಳು ಮನೆಗೆ ಬಂದ ನಂತರ ತಾವು ಅನುಭವಿಸುತ್ತಿರುವ ಖುಷಿಯ ಕ್ಷಣಗಳ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ಜೀವನದ ಸರಳ ಕ್ಷಣಗಳು ಸಂತೋಷದ ನಿಜವಾದ ಅರ್ಥವನ್ನು ಹೇಗೆ ಬಹಿರಂಗಪಡಿಸುತ್ತವೆ ಎಂಬುದನ್ನು ಅವರು ತಮ್ಮ ಬರಹದಲ್ಲಿ ಹೇಳಿಕೊಂಡಿದ್ದಾರೆ.
ಲಿಂಕ್ಡ್ ಇನ್‌ನಲ್ಲಿ ಸುನಿಲ್ ಶೆಟ್ಟಿ ಈ ರೀತಿ ಬರೆದುಕೊಂಡಿದ್ದಾರೆ. ‘ಜೀವನ ನಿಜವಾಗ್ಲೂ ತಮಾಷೆ ಅನ್ನಿಸುತ್ತೆ. ನಮಗೆ ಸಂತೋಷ ನೀಡುತ್ತೆ ಅಂತ ನಾವು ಅಂದುಕೊಳ್ಳುವ ವಿಷಯಗಳ ಬೆನ್ನಟ್ಟಿ ಹೋಗುತ್ತಾ ನಾವು ಹಲವು ವರ್ಷಗಳನ್ನು ಕಳೆದಿರುತ್ತೇವೆ. ನಮ್ಮ ಬದುಕಿನಲ್ಲಿ ಬರುವ ಪಾತ್ರಗಳು, ನಮ್ಮ ವ್ಯವಹಾರ, ದೊಡ್ಡ ಕಚೇರಿ, ಸಾಕಷ್ಟು ಹಣ, ಹೆಸರು, ಮನ್ನಣೆ ಹೀಗೆ ಇನ್ನೂ ಹಲವು.
ಆದರೆ ನನಗೆ ಇತ್ತೀಚೆಗೆ ಅರ್ಥವಾಗಿದ್ದು ಏನು ಗೊತ್ತಾ, ಬದುಕಿನ ನಿಜವಾದ ಸಂತೋಷ ಅಡಗಿರುವುದೇ ಸರಳವಾದ ವಿಷಯಗಳಲ್ಲಿ. ನಾನು ಇತ್ತೀಚೆಗಷ್ಟೇ ಅಜ್ಜನಾಗಿದ್ದೇನೆ. ಅದು ನನಗೆ ವಿವರಿಸಲು ಸಾಧ್ಯವಾಗದ ಭಾವನೆ. ಇದು ಪ್ರಪಂಚದಲ್ಲಿ ಯಾರೂ ಕೊಡಲು ಸಾಧ್ಯವಾಗದ ಮತ್ತು ಯಾರೂ ಕಿತ್ತುಕೊಳ್ಳಲು ಸಾಧ್ಯವಾಗದ ಅತ್ಯಂತ ಪರಿಶುದ್ಧವಾದ ಸಂತೋಷ.
ಹಲವು ವರ್ಷಗಳಿಂದ ನಾನು ಸಿನಿಮಾಗಳನ್ನು ಮಾಡುತ್ತಿದ್ದೇನೆ, ವ್ಯವಹಾರಗಳನ್ನು ನಡೆಸುತ್ತಿದ್ದೇನೆ. ದಶಕಗಳಿಂದ ಯಾವ್ಯಾವುದೋ ಕೆಲಸಗಳನ್ನು ಮಾಡುವ ಮೂಲಕ ಅರ್ಥಪೂರ್ಣ ಬದುಕು ಸಾಗಿಸಲು ಪ್ರಯತ್ನ ಪಟ್ಟಿದ್ದೇನೆ. ಈ ಎಲ್ಲವುದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನನ್ನ ಮೊಮ್ಮಗಳನ್ನು ಕೈಯಲ್ಲಿ ಎತ್ತಿಕೊಂಡಾಗ ಇವೆಲ್ಲವೂ ನಗಣ್ಯ ಎನ್ನಿಸುತ್ತದೆ.
ಬದುಕಿನಲ್ಲಿ ನಮ್ಮ ನಿಜವಾದ ಖುಷಿ ಯಾವುದು ಎಂದು ಅರಿವಾದಾಗ ಇಷ್ಟು ದಿನ ನಾವು ಯಾವುದರ ಹಿಂದೆ ಓಡಿದ್ದೇವೆ ಅದು ನಿಜಕ್ಕೂ ನಮ್ಮ ಖುಷಿಯಲ್ಲ ಎಂಬುದು ಅರ್ಥವಾಗುತ್ತದೆ. ಮಾತ್ರವಲ್ಲ ಎಷ್ಟು ದಿನ ನಾವು ಓಡುತ್ತಿದ್ದ ಓಟದ ದಾರಿಯೂ ಮಸುಕಾಗುತ್ತದೆ. ನನ್ನ ಅಮ್ಮ ತನ್ನ ಮೊಮ್ಮಗಳನ್ನು ಕೈಯಲ್ಲಿ ಹಿಡಿದಿರುವುದು ನೋಡಿದ ನೆನಪು ಈಗಲೂ ಮನಸ್ಸಿನಾಳದಲ್ಲಿ ಹಾಗೆ ಇದೆ. ಆ ನೆನಪುಗಳಿಂದ ಹೊರ ಬರಲು ಸಾಧ್ಯವಿಲ್ಲ, ಈಗ ನಾನು ಅದೇ ಕ್ಷಣಗಳನ್ನು ಅನುಭವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಬಾಲ್ಯ, ಬರಿಗಾಲಿನ ಬೇಸಿಗೆಗಳು, ಬಯಲು ಪ್ರದೇಶಗಳು ಮತ್ತು ಪ್ರೀತಿಯಿಂದ ತಯಾರಿಸಿದ ಊಟ ಹೀಗೆ ಮಂಗಳೂರಿನಲ್ಲಿ ಕಳೆದ ದಿನಗಳನ್ನು ಕೂಡ ಅವರು ನೆನಪಿಸಿಕೊಂಡಿದ್ದಾರೆ. ಕುಟುಂಬ, ಪ್ರಕೃತಿ ಹಾಗೂ ನಗುವಿನಿಂದ ಬರುವ ಸಂತೋಷಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸುನಿಲ್ ಶೆಟ್ಟಿ ಮುಂದಿನ ಸಿನಿಮಾಗಳು
ಕರಣ್ ಜೋಹರ್ ನಿರ್ಮಾಣದ ಇಬ್ರಾಹಿಂ ಅಲಿ ಹಾಗೂ ಖುಷಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಾದಾನಿಯನ್ ಚಿತ್ರದಲ್ಲಿ ಖುಷಿ ಕಪೂರ್ ತಂದೆಯಾಗಿ ಸುನಿಲ್ ನಟಿಸಿದ್ದರು. ಅಹ್ಮದ್ ಖಾನ್ ನಿರ್ದೇಶನದ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಸುನಿಲ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್, ಸಂಜಯ್ ದತ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ. ಈ ಸಿನಿಮಾವು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಪ್ರಿಯದರ್ಶನ್ ಅವರ ಹೇರಾ ಫೆರಿ 3 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದರಲ್ಲೂ ಸುನಿಲ್ ಶೆಟ್ಟಿ ನಟಿಸುತ್ತಿದ್ದಾರೆ.
