ಅನಿಮಲ್ ಪಾರ್ಕ್ ಚಿತ್ರಕ್ಕೆ ಹೀರೊನೂ ಇವರೇ, ವಿಲನ್ನೂ ಇವರೇ; 2027ಕ್ಕೆ ಸೆಟ್ಟೇರಲಿದೆ ರಣಬೀರ್ ಕಪೂರ್ ಸಿನಿಮಾ
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರವು ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ ದೊಡ್ಡ ಗಳಿಕೆ ಕಂಡಿತ್ತು. ಚಿತ್ರದ ಕೊನೆಯಲ್ಲೇ ಮುಂದುವರೆದ ಭಾಗ ಬರುತ್ತದೆ ಎಂದು ಘೋಷಿಸಲಾಗಿತ್ತು. ಇದೀಗ ಅನಿಮಲ್ ಪಾರ್ಕ್ ಸಿನಿಮಾದ ಬಗ್ಗೆ ಮಾತನಾಡಿರುವ ನಟ ರಣಬೀರ್ ಕಪೂರ್ ಹೀರೊನೂ ನಾನೇ, ವಿಲನ್ ಕೂಡ ನಾನೇ ಎಂದಿದ್ದಾರೆ.
ಕಳೆದ ವರ್ಷದ ಸೂಪರ್ ಹಿಟ್ ಮತ್ತು ದೊಡ್ಡ ಗಳಿಕೆ ಮಾಡಿದ ಚಿತ್ರಗಳ ಪೈಕಿ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಸಹ ಒಂದು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರವು ಸಾಕಷ್ಟು ಚರ್ಚೆಗಳಿಗೂ ದಾರಿ ಮಾಡಿಕೊಟ್ಟಿತ್ತು. ಚಿತ್ರದಲ್ಲಿ ಹಿಂಸೆಯನ್ನು ಅತಿಯಾಗಿ ವೈಭವೀಕರಿಸಲಾಗಿದೆ ಎಂಬ ದೂರುಗಳ ಮಧ್ಯೆಯೇ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಜಾಗತಿಕವಾಗಿ 900 ಕೋಟಿ ರೂ. ಗಳಿಕೆ ಮಾಡಿತ್ತು.
‘ಅನಿಮಲ್’ ಚಿತ್ರದ ಕೊನೆಯಲ್ಲೇ ಚಿತ್ರದ ಮುಂದುವರೆದ ಭಾಗ ಬರುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾದರೂ ಚಿತ್ರದ ಸುದ್ದಿಯೇ ಇಲ್ಲ. ಈ ಕುರಿತು ನಟ ರಣಬೀರ್ ಕಪೂರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 2027ರಲ್ಲಿ ‘ಅನಿಮಲ್ ಪಾರ್ಕ್’ ಶುರುವಾಗಲಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಣಬೀರ್, ‘ಅದಕ್ಕಿನ್ನೂ ಸ್ವಲ್ಪ ಸಮಯವಿದೆ. ಸಂದೀಪ್ ರೆಡ್ಡಿ ಕೆಲಸ ಶುರು ಮಾಡಿದ್ದಾರೆ. ಚಿತ್ರವನ್ನು ಅವರು ಮೂರು ಭಾಗಗಳಲ್ಲಿ ಹೇಳಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಮೊದಲ ಭಾಗ ಮುಗಿದಿದೆ. ಎರಡನೇ ಭಾಗವು 2027ರಲ್ಲಿ ಶುರುವಾಗಲಿದೆ. ಈ ಚಿತ್ರದಲ್ಲಿ ಹೀರೋನೂ ನಾನೇ, ವಿಲನ್ನೂ ನಾನೇ. ಎರಡೂ ಪಾತ್ರಗಳನ್ನು ನಿರ್ವಹಿಸುವುದು ನಿಜಕ್ಕೂ ಕಷ್ಟದ ವಿಷಯ. ಆದರೆ, ಇಂಥದ್ದೊಂದು ಸವಾಲು ಸ್ವೀಕರಿಸುವುದಕ್ಕೆ ಖುಷಿಯಾಗುತ್ತದೆ’ ಎಂದು ಹೇಳಿದ್ದಾರೆ.
ಇನ್ನು, ‘ಅನಿಮಲ್’ಗೂ ಮೊದಲು ರಣಬೀರ್, ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರವೂ ಮೂರು ಭಾಗಗಳಲ್ಲಿ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತು. ಈ ಪೈಕಿ ಮೊದಲ ಭಾಗ 2022ರಲ್ಲಿ ಬಿಡುಗಡೆಯಾಗಿ, ಯಶಸ್ವಿಯಾಗುವುದರ ಜೊತೆಗೆ ಜಾಗತಿಕವಾಗಿ 430 ಕೋಟಿ ರೂ.ಗಳಷ್ಟು ಗಳಿಕೆ ಮಾಡಿತ್ತು. ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾದರೂ, ಇನ್ನ ಈ ಚಿತ್ರದ ಮುಂದುವರೆದ ಭಾಗದ ಸುದ್ದಿ ಇಲ್ಲ. ಅದರ ಕಥೆ ಏನಾಯ್ತು ಎಂಬ ಪ್ರಶ್ನೆಯನ್ನೂ ಅವರ ಮುಂದಿಟ್ಟರೆ, ಬರವಣಿಗೆ ಹಂತದಲ್ಲಿದೆ ಎನ್ನುತ್ತಾರೆ.
‘ಭಾರತೀಯ ಚಿತ್ರರಂಗದಲ್ಲೇ ಪ್ರಕೃತಿ ಕುರಿತು ಸಿನಿಮಾಗಳು ಬಂದಿದ್ದು ಕಡಿಮೆ. ‘ಬ್ರಹ್ಮಾಸ್ತ್ರ’ ಅಂತಹ ಚಿತ್ರಗಳ ಪೈಕಿ ಒಂದು. ಹಲವು ಭಾಗಗಳಲ್ಲಿ ಚಿತ್ರ ತಯಾರಾಗಲಿದೆ. ಈಗಾಗಲೇ ‘ಬ್ರಹ್ಮಾಸ್ತ್ರ – ಪಾರ್ಟ್ ಒನ್: ಶಿವ’ ಬಂದಾಗಿದೆ. ’ಬ್ರಹ್ಮಾಸ್ತ್ರ 2’ ಚಿತ್ರವು ಇನ್ನೂ ಬರವಣಿಗೆಯ ಹಂತದಲ್ಲಿದೆ. ಮೊದಲ ಭಾಗದ ಹೆಸರು ‘ಶಿವ’ ಆದರೆ, ಎರಡನೆಯ ಭಾಗದ ಹೆಸರು ‘ದೇವ್’. ಚಿತ್ರದಲ್ಲಿ ಯಾರ್ಯಾರು ನಟಿಸುತ್ತಾರೆ ಎಂಬುದನ್ನು ಇನ್ನೂ ಘೋಷಿಸಿಲ್ಲ. ಆ ಚಿತ್ರದಲ್ಲೊಂದು ಒಳ್ಳೆಯ ತಾರಾಗಣ ಇರುತ್ತದೆ’ ಎಂದು ಹೇಳಿಕೊಂಡಿದ್ದಾರೆ.
ರಣಬೀರ್ ಅಭಿನಯದ ಯಾವೊಂದು ಚಿತ್ರ ಸಹ ಈ ವರ್ಷ ಬಿಡುಗಡೆಯಾಗಿಲ್ಲ. ಈ ವರ್ಷ ಅವರು ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಮುಂದಿನ ವರ್ಷ ರಣಬೀರ್ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲೂ ಅವರಿಗೆ ನಾಯಕಿಯಾಗಿ ಪತ್ನಿ ಆಲಿಯಾ ಭಟ್ ನಟಿಸುತ್ತಿದ್ದು, ವಿಕ್ಕಿ ಕೌಶಲ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಂತರ ರಣಬೀರ್ ಕಪೂರ್, ‘ಅನಿಮಲ್ ಪಾರ್ಕ್’ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.
ಬರಹ: ಚೇತನ್ ನಾಡಿಗೇರ್