ಒಟಿಟಿಗೆ ಎಂಟ್ರಿ ಕೊಡ್ತಿದೆ ಫಹಾದ್ ಫಾಸಿಲ್ ನಟನೆಯ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಸಿನಿಮಾ ಬೊಗೆನ್‌ವಿಲ್ಲಾ; ವೀಕ್ಷಣೆ ಎಲ್ಲಿ?
Bougainvillea Movie OTT: ಫಹಾದ್ ಫಾಸಿಲ್, ಕುಂಚಿಕೊ ಬೋಬನ್ ನಟನೆಯ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಬೊಗೆನ್‌ವಿಲ್ಲಾ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಈ ಚಿತ್ರ ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು, ಇದೀಗ ಒಟಿಟಿಗೆ ಆಗಮಿಸುತ್ತಿದೆ.
Bougainvillea Movie OTT: ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಸದ್ಯ ಕೇವಲ ಒಂದೇ ಚಿತ್ರೋದ್ಯಮಕ್ಕೆ ಸೀಮಿತರಾಗಿಲ್ಲ. ಮಾಲಿವುಡ್ ಸಿನಿಮಾಗಳ ಜತೆಗೆ ತಮಿಳು ಮತ್ತು ತೆಲುಗಿನ ಬಿಗ್ ಬಜೆಟ್ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿ ಬಳಗವನ್ನೂ ವಿಸ್ತರಿಸಿಕೊಂಡಿದ್ದಾರೆ. ಇತ್ತ ಒಟಿಟಿಯಲ್ಲಿಯೂ ಅವರ ಮಲಯಾಳಿ ಸಿನಿಮಾಗಳಿಗೆ ಪರಭಾಷೆಯಲ್ಲೂ ವೀಕ್ಷಕರಿದ್ದಾರೆ. ಪುಷ್ಪ 2 ಸಿನಿಮಾ ಬಿಡುಗಡೆಯ ಗ್ಯಾಪ್‌ನಲ್ಲಿ ಅವರ ಹೊಸ ಸಿನಿಮಾವೊಂದು ಒಟಿಟಿ ಅಂಗಳಕ್ಕೆ ಆಗಮಿಸಲು ಸಜ್ಜಾಗಿದೆ. ಆ ಚಿತ್ರವೇ ಬೊಗೆನ್‌ವಿಲ್ಲಾ.
ಟಾಲಿವುಡ್ ಮಾತ್ರವಲ್ಲದೆ, ಇಡೀ ಭಾರತ ಇದೀಗ ಪುಷ್ಪ 2 ದಿ ರೂಲ್ ಸಿನಿಮಾ ಸಲುವಾಗಿ ಕಾದು ಕುಳಿತಿದೆ. ಈ ಚಿತ್ರದಲ್ಲಿ ಭನ್ವರ್‌ಲಾಲ್ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ತಮ್ಮ ಪಾತ್ರದ ಮೂಲಕವೇ ನೋಡುಗರಲ್ಲಿ ಕುತೂಹಲ ಮೂಡಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 5ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯಲ್ಲಿ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ರಜನಿಕಾಂತ್ ಜತೆಗಿನ ವೆಟ್ಟೈಯಾನ್ ಸಿನಿಮಾದಲ್ಲಿಯೂ ಫಹಾದ್ ಫಾಸಿಲ್ ನಟಿಸಿದ್ದರು. ಈಗ ಇದೇ ಫಹಾದ್ ಒಟಿಟಿಗೆ ಆಗಮಿಸುತ್ತಿದ್ದಾರೆ.
ಕಾದಂಬರಿ ಆಧರಿತ ಸಿನಿಮಾ
ಫಹಾದ್ ಫಾಸಿಲ್ ಅವರ ಮಲಯಾಳಂನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಬೊಗೆನ್‌ವಿಲ್ಲಾ ಒಟಿಟಿಗೆ ಬರಲು ಸಿದ್ಧವಾಗಿದೆ. ಅಕ್ಟೋಬರ್ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು 35ಕೋಟಿ ರೂ. ಗಳಿಸಿದೆ. 20 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ರುತಿಂಥೆ ಲೋಕಂ ಕಾದಂಬರಿ ಆಧರಿತ ಬೊಗೆನ್‌ವಿಲ್ಲಾ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಬೊಗೆನ್‌ವಿಲ್ಲಾ ಕಥೆ ಏನು?
ಕೇರಳದಲ್ಲಿ ಗಂಡ ಹೆಂಡತಿಯಾಗಿರುವ ರಾಯ್ಸ್ (ಕುಂಚಾ ಕೋ ಬೋಬನ್) ಮತ್ತು ರಿತು (ಜ್ಯೋತಿರ್ಮಯಿ) ತಮ್ಮ ಇಬ್ಬರು ಮಕ್ಕಳೊಂದಿಗೆ ಸಂತೋಷವಾಗಿದ್ದಾರೆ. ಆದರೆ ರಸ್ತೆ ಅಪಘಾತದಲ್ಲಿ ಅನಿರೀಕ್ಷಿತವಾಗಿ ಗಾಯಗೊಂಡ ರಿತು ಹಿಂದಿನದನ್ನು ಮರೆತುಬಿಡುತ್ತಾಳೆ. ಅದೇ ಸಮಯದಲ್ಲಿ, ಪ್ರವಾಸಿಗರು ಅಲ್ಲಿ ಕಣ್ಮರೆಯಾಗುತ್ತಾರೆ. ಪ್ರಕರಣದ ತನಿಖೆಯ ಭಾಗವಾಗಿ ಎಸಿಪಿಯಾಗಿ ಅಲ್ಲಿಗೆ ಬಂದ ಡೇವಿಡ್ ಕೋಶಿ (ಫಹಾದ್ ಫಾಸಿಲ್) ಕಾಣೆಯಾದ ಪ್ರಕರಣಗಳಿಗೆ ರಿತು ಕಾರಣ ಎಂಬುದಕ್ಕೆ ಪುರಾವೆಗಳನ್ನು ಕಂಡುಕೊಳ್ಳುತ್ತಾನೆ. ಹೀಗೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ನೋಡಿಸಿಕೊಂಡು ಹೋಗಲಿದೆ. ಈ ಚಿತ್ರವನ್ನು ಅಮಲ್ ನೀರದ್ ನಿರ್ದೇಶಿಸಿದ್ದಾರೆ.
ಬೊಗೆನ್‌ವಿಲ್ಲಾ ಒಟಿಟಿ ಯಾವಾಗ?
ಬೊಗೆನ್‌ವಿಲ್ಲಾ ಸಿನಿಮಾ ಡಿಸೆಂಬರ್ 13 ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಫಹಾದ್ ಫಾಸಿಲ್ ಮೇಲಿನ ಕ್ರೇಜ್ ಗಮನದಲ್ಲಿಟ್ಟುಕೊಂಡು, ಸೋನಿ ಲೈವ್ ಒಟಿಟಿ ಹಕ್ಕುಗಳನ್ನು ಒಳ್ಳೆಯ ಫ್ಯಾನ್ಸಿ ದರದಲ್ಲಿ ಖರೀದಿಸಿದೆ. ಡಿಸೆಂಬರ್ 13 ರಿಂದ ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಈ ಸಿನಿಮಾ ಪ್ರಸಾರ ಕಾಣಲಿದೆ. ಸೈಕಿಕ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರು ಈ ಚಿತ್ರವನ್ನು ಆನಂದಿಸಬಹುದು.
ರುತಿಂತೆ ಲೋಕಂ ಕಾದಂಬರಿ ಆಧರಿಸಿ ನಿರ್ದೇಶಕ ಅಮಲ್ ನೀರದ್ ಬೊಗೆನ್ವಿಲ್ಲಾ ಸಿನಿಮಾ ಮಾಡಿದ್ದಾರೆ. ಫಹಾದ್ ಫಾಸಿಲ್ ಜೊತೆಗೆ ಕುಂಚಕೋ ಬೋಬನ್, ಜ್ಯೋತಿರ್ಮಯಿ, ವೀಣಾ ನಂದಕುಮಾರ, ಶರಫ್ ಯು ಧೀನ್, ಶೋಭಿ ತಿಲಕನ್, ಜಿನೂ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಲ್ ನೀರದ್ ಪ್ರೊಡಕ್ಷನ್ಸ್, ಉದಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಜ್ಯೋತರ್ಮಯಿ ಮತ್ತು ಕುಂಚಕೋ ಬೋಬನ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಶಿನ್ ಶ್ಯಾಮ್ ಅವರು ಸಂಗೀತ ಈ ಚಿತ್ರಕ್ಕಿದೆ.
ವಿಭಾಗ