IPO Alert: ಟಾಟಾ ಟೆಕ್ನಾಲಜೀಸ್‌ ಐಪಿಒಗೆ ಬಿಡ್‌ ಮಾಡಲು ರೆಡಿಯಾಗಿ, ಜಿಎಂಪಿ ದರದಲ್ಲಿ ನೆಗೆತ, ಎರಡು ದಶಕದ ಬಳಿಕ ಟಾಟಾ ಗ್ರೂಪ್‌ ಐಪಿಒ ಆಗಮನ
ಕನ್ನಡ ಸುದ್ದಿ  /  ಮನರಂಜನೆ  /  Ipo Alert: ಟಾಟಾ ಟೆಕ್ನಾಲಜೀಸ್‌ ಐಪಿಒಗೆ ಬಿಡ್‌ ಮಾಡಲು ರೆಡಿಯಾಗಿ, ಜಿಎಂಪಿ ದರದಲ್ಲಿ ನೆಗೆತ, ಎರಡು ದಶಕದ ಬಳಿಕ ಟಾಟಾ ಗ್ರೂಪ್‌ ಐಪಿಒ ಆಗಮನ

IPO Alert: ಟಾಟಾ ಟೆಕ್ನಾಲಜೀಸ್‌ ಐಪಿಒಗೆ ಬಿಡ್‌ ಮಾಡಲು ರೆಡಿಯಾಗಿ, ಜಿಎಂಪಿ ದರದಲ್ಲಿ ನೆಗೆತ, ಎರಡು ದಶಕದ ಬಳಿಕ ಟಾಟಾ ಗ್ರೂಪ್‌ ಐಪಿಒ ಆಗಮನ

Tata Technologies IPO GMP: ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ನ ಆರಂಭಿಕ ಷೇರು ವಿತರಣೆ (ಐಪಿಒ) ಭಾರತದ ಷೇರುಪೇಟೆಗೆ ಇದೇ ನವೆಂಬರ್‌ 22ರಂದು ಆಗಮಿಸಲಿದೆ. ನವೆಂಬರ್‌ 24ರವರೆಗೆ ಐಪಿಒಗೆ ಬಿಡ್‌ ಮಾಡಲು ಅವಕಾಶವಿರಲಿದೆ. ಜಿಎಂಪಿ ಮಾರುಕಟ್ಟೆಯಲ್ಲಿ ಈಗಾಗಲೇ ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ ಐಪಿಒ ದರಗಳಲ್ಲಿ ಭಾರೀ ನೆಗೆತ ಕಂಡುಬಂದಿದೆ.

ಟಾಟಾ ಟೆಕ್ನಾಲಜೀಸ್‌ ಐಪಿಒ
ಟಾಟಾ ಟೆಕ್ನಾಲಜೀಸ್‌ ಐಪಿಒ (Photo: Courtesy company website)

Tata Technologies IPO Updates: ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ನ ಬಹುನಿರೀಕ್ಷಿತ ಐಪಿಒ ಇದೇ ನವೆಂಬರ್‌ 22, 2023ರಿಂದ ನವೆಂಬರ್‌ 24, 2023ರವರೆಗೆ ಬಿಡ್ಡಿಂಗ್‌ಗೆ ತೆರೆದಿರುತ್ತದೆ. ಟಾಟಾ ಗ್ರೂಪ್ ಕಂಪನಿಯು ಈಗಾಗಲೇ ಟಾಟಾ ಟೆಕ್ನಾಲಜೀಸ್ ಐಪಿಒ ದರ ಮಾಹಿತಿ ನೀಡಿದೆ. ಪ್ರತಿಷೇರಿಗೆ 475 ರೂ.ನಿಂದ 500 ರೂ.ವರೆಗೆ ದರ ನಿಗದಿಪಡಿಸಿದೆ. ಟಾಟಾ ಟೆಕ್ನಾಲಜೀಸ್‌ ಐಪಿಒ ದಿನಾಂಕ ಘೋಷಣೆ ಮಾಡಿದ ಬಳಿಕ ಗ್ರೇ ಮಾರ್ಕೆಟ್‌ನಲ್ಲಿ ದರ ಹೆಚ್ಚಳವಾಗಿದೆ. ಇಂದು ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ನ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ 340 ರೂ.ಗೆ ಲಭ್ಯವಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಮಾಹಿತಿ ನೀಡಿದ್ದಾರೆ.

ಟಾಟಾ ಟೆಕ್ನಾಲಜೀಸ್‌ ಐಪಿಒ ಜಿಎಂಪಿ ದರ ಇಂದು ಎಷ್ಟಿದೆ?

ಈಗಾಗಲೇ ಹೇಳಿದಂತೆ ಟಾಟಾ ಟೆಕ್ನಾಲಜೀಸ್‌ನ ಐಪಿಒಗೆ ಗ್ರೇ ಮಾರ್ಕೆಟ್‌ ಪ್ರೀಮಿಯಂ ದರ ಇಂದು 340 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 90 ರೂಪಾಯಿ ಹೆಚ್ಚಾಗಿದೆ. ಸುಮಾರು ಎರಡು ದಶಕದ ಬಳಿಕ ಟಾಟಾ ಗ್ರೂಪ್‌ ಐಪಿಒ ಬಿಡುಗಡೆ ಮಾಡುತ್ತಿದೆ. ಟಾಟಾ ಸಮೂಹದ ಈ ಐಪಿಒ ಬಿಡುಗಡೆಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಟಾಟಾ ಕಂಪನಿಯು ಐಪಿಒ ಬಿಡ್‌ ದಿನಾಂಕ ಪ್ರಕಟಿಸಿರುವುದರಿಂದ ಗ್ರೇ ಮಾರುಕಟ್ಟೆಯಲ್ಲಿ ಚಟುವಟಿಕೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಈ ಜಿಎಂಪಿ ಏನು ಸೂಚಿಸುತ್ತದೆ?

ಟಾಟಾ ಟೆಕ್ನಾಲಜೀಸ್‌ನ ಐಪಿಒ ಜಿಎಂಪಿಯು 340 ರೂಪಾಯಿಗೆ ಇಂದು ತಲುಪಿದೆ. ಈ ದರವೂ ಐಪಿಒ ಲಿಸ್ಟ್‌ ಆದ ದಿನದಂದು ಪ್ರತಿ ಷೇರಿಗೆ 840 ರೂಪಾಯಿಗೆ ತಲುಪುವ ಸೂಚನೆಯನ್ನು ಗ್ರೇ ಮಾರುಕಟ್ಟೆ ನೀಡಿದೆ. ಟಾಟಾ ಟೆಕ್ನಾಲಜೀಸ್‌ನ ಐಪಿಒ ದರ 475ಕ್ಕೆ ಹೋಲಿಸಿದರೆ ಇದು ಶೇಕಡ 68ರಷ್ಟು ಹೆಚ್ಚಳವಾಗಿರುತ್ತದೆ. ಐಪಿಒ ಬಿಡ್‌ ಮಾಡಿರುವವರಿಗೆ ಸಾಕಷ್ಟು ಲಾಭ ತರುವ ಸೂಚನೆಯನ್ನು ಇದು ನೀಡಿದೆ. ಆದರೆ, ಷೇರುಪೇಟೆಯ ತಜ್ಞರು ಗ್ರೇ ಮಾರುಕಟ್ಟೆಯ ಭಾವನೆಯು ಲಿಸ್ಟಿಂಗ್‌ ಪ್ರೀಮಿಯಂ ಸೂಚಕವಲ್ಲ ಎಂದು ಹೇಳುತ್ತ ಬಂದಿದ್ದಾರೆ. ಕಂಪನಿಯ ಬ್ಯಾಲೆನ್ಸ್‌ ಶೀಟ್‌ ಸ್ಕ್ಯಾನ್‌ ಮಾಡಬೇಕು. ಅದಕ್ಕೆ ತಕ್ಕಂತೆ ಲಿಸ್ಟಿಂಗ್‌ ದರ ಇರುತ್ತದೆ. ಆದರೆ, ಬಹುತೇಕ ಸಂದರ್ಭದಲ್ಲಿ ಗ್ರೇ ಮಾರುಕಟ್ಟೆಯ ಭಾವನೆಯು ಐಪಿಒ ಲಿಸ್ಟಿಂಗ್‌ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದು ಪರಿಣಾಮ ಬೀರದೆಯೂ ಇರಬಹುದು.

ಟಾಟಾ ಟೆಕ್ನಾಲಜೀಸ್‌ ಐಪಿಒ ವಿವರ

ಬಹುತೇಕರು ಈಗ ಟಾಟಾ ಟೆಕ್ನಾಲಜೀಸ್‌ನ ಐಪಿಒಗೆ ಬಿಡ್‌ ಮಾಡಲು ಕಾಯುತ್ತಿರಬಹುದು. ನವೆಂಬರ್‌ 22ರಿಂದ ಆರಂಭವಾಗಿ ನವೆಂಬರ್‌ 24ರವರೆಗೆ ಈ ಐಪಿಒ ಬಿಡ್ಡಿಂಗ್‌ಗೆ ತೆರೆದಿರುತ್ತದೆ. ಖರೀದಿದಾರರು ಒಂದು ಲಾಟ್‌ನಲ್ಲಿ 30 ಷೇರುಗಳಿಗೆ ಬಿಡ್‌ ಮಾಡಬಹುದು. ಈ ಸಾರ್ವಜನಿಕ ಷೇರು ವಿತರಣೆಯ ಮೂಲಕ 3,042.51 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದು ಶೇಕಡ 100 ಒಎಫ್‌ಎಸ್‌ಒ ಸ್ವರೂಪದ ವಿತರಣೆಯಾಗಿದೆ.

Disclaimer: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

Whats_app_banner