‘ಕನ್ನಡ ಚಲನಚಿತ್ರ ಅಕಾಡೆಮಿ ನಮ್ಮನ್ನು ಭಿಕ್ಷುಕರಂತೆ ಕಾಣುತ್ತಿದೆ!’ ಅಕಾಡೆಮಿ ವಿರುದ್ಧ ನಿರ್ದೇಶಕರ ಸಂಘದ ಒಕ್ಕೊರಲ ಅಭಿಪ್ರಾಯ
ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ನಿರ್ದೇಶಕರ ಸಂಘದ ನಡುವಿನ ಮುಸುಕಿನ ಗುದ್ಧಾಟ ಮುಂದುವರಿದಿದೆ. ನಿರ್ದೇಶಕರ ಸಂಘವನ್ನು ಯಾವುದಕ್ಕೂ ಪರಿಗಣಿಸದ ಅಕಾಡೆಮಿ ನಡೆಯನ್ನು ಡೈರೆಕ್ಟರ್ಸ್ ಅಸೋಸಿಯೇಷನ್ ತೀವ್ರ ಖಂಡಿಸಿದ್ದು, ಇದು ಹೀಗೆಯೇ ಮುಂದುವರಿದರೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿದೆ.

ಬೆಂಗಳೂರು: 1984ರಲ್ಲಿ ಭಾರತೀಯ ಸಿನಿಮಾ ರಂಗದ ದಿಗ್ಗಜರಾದ ಪುಟ್ಟಣ್ಣ ಕಣಗಾಲರು ಮತ್ತು ಹಿರಿಯ ನಿರ್ದೇಶಕರುಗಳಾದ ಲಕ್ಷ್ಮೀ ನಾರಾಯಣ್, ಸಿದ್ದಲಿಂಗಯ್ಯ ಮುಂತಾದ ಮಹನೀಯರು ಕಟ್ಟಿರುವ ಸಂಸ್ಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡ). ಇದು ಸುಮಾರು 42 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದೆ. ನಿರ್ದೇಶಕರಿಗಾಗಿ ರೂಪಿತಗೊಂಡ ಈ ಸಂಘದ ಇತ್ತೀಚಿನ ಆಡಳಿತ ಮಂಡಳಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ಸಂಘದ ಅಭಿವೃದ್ಧಿ, ಯೋಜನೆಗಳನ್ನು ತಿಳಿಸಲು ಸಂಘವು ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಸಂಘಕ್ಕೆ ಸಂಬಂಧಪಟ್ಟಂತೆ ಸಂಘದ ಪದಾಧಿಕಾರಿಗಳು ವಿಷಯ ತಿಳಿಸಿದ ನಂತರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಮಾತಾನಾಡಿದರು.
2009ರಲ್ಲಿ ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರ, ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪನೆ ಮಾಡಿದೆ. ಈ ಸಂಸ್ಥೆಯಲ್ಲಿ ನಾಮ ನಿರ್ದೇಶಿತ ಸದಸ್ಯರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ಚಲನಚಿತ್ರ, ಒಕ್ಕೂಟ, ಟಿವಿ ಅಸೋಸಿಯೇಷನ್ ಗಳು ಪದನಿಮಿತ್ತ ಸದಸ್ಯರಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಅಕಾಡೆಮಿಯ ನಿಯಮ. ಆದರೆ ಎರಡು ಮೂರು ವರ್ಷಗಳಿಂದ ನಿರ್ದೇಶಕರ ಸಂಘವನ್ನು ಕಡೆಗಣಿಸುತ್ತಲೇ ಬರುತ್ತಿದೆ.
ನಿರ್ದೇಶಕರ ಸಂಘವನ್ನು ಅವಮಾನಿಸಿದರೆ ಸೂಕ್ತ ಕ್ರಮ
ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಅಕಾಡೆಮಿಗೆ ಭೇಟಿ ಕೊಟ್ಟು ರಿಜಿಸ್ಟ್ರಾರ್‌ಗೆ ಮತ್ತು ವಾರ್ತಾ ಇಲಾಖೆ ಆಯುಕ್ತರಿಗೆ ಕಾರ್ಯದರ್ಶಿಗಳಿಗೆ ಅನೇಕ ಬಾರಿ ಮನವಿಕೊಟ್ಟು ಬಂದರೂ ಪ್ರಯೋಜನವಾಗಲಿಲ್ಲ. ಅದರಿಂದ ಬೇಸತ್ತ ನಾವು ನಮಗಾಗುತ್ತಿರುವ ಅನ್ಯಾಯದ ಬಗ್ಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇದು ನಮ್ಮ ಮೊದಲ ಹೆಜ್ಜೆ. ಯಾರೇ ಆದರೂ ನಿರ್ದೇಶಕರನ್ನು ನಿರ್ದೇಶಕರ ಸಂಘವನ್ನು ಅವಮಾನಿಸಿದರೆ ನಾವು ಸುಮ್ಮನಿರಲಾರೆವು. ಒಂದೇ ಸೂರಿನಡಿ ಚಿತ್ರರಂಗ ಬರಬೇಕೆಂಬ ಯೋಜನೆಯೊಂದಿಗೆ ಅಕಾಡೆಮಿ ಪ್ರಾರಂಭ ಆಗಿದೆ. ಆದರೆ ಅದು ಒಂದೆರಡು ತಂಡದ ಸೂರಾಗಿದೆ. ಅಕಾಡೆಮಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಲು ಅವಕಾಶ ಇದೆ. ಆದರೆ ಯಾವುದನ್ನು ಮಾಡಲ್ಲ. ಫೆಬ್ರವರಿ ತಿಂಗಳು ಬಂದಾಗ ಎಚ್ಚೆತ್ತುಕೊಳ್ಳುವ ಅಕಾಡೆಮಿ ಚಿತ್ರೋತ್ಸವದ ನೆಪದಲ್ಲಿ ಕೊಳ್ಳೆ ಹೊಡೆಯುವುದಕ್ಕೆ ಪ್ಲಾನ್ ಮಾಡುತ್ತಿದೆ.
“ಅಕಾಡೆಮಿ ನಮ್ಮನ್ನು ಭಿಕ್ಷುಕರಂತೆ ಕಾಣುತ್ತಿದೆ”
ನಾಗತಿಹಳ್ಳಿ ಚಂದ್ರಶೇಖರ್ ಅವರು ಅಕಾಡೆಮಿ ಅಧ್ಯಕ್ಷರು ಆಗಿದ್ದಾಗ 2 ಕೋಟಿ 70ಲಕ್ಷ ರೂಪಾಯಿಗೆ ಚಲನಚಿತ್ರೋವವನ್ನು ತುಂಬಾ ಅಚ್ಚುಕಟ್ಟಾಗಿ ಅದ್ದೂರಿಯಾಗಿ ಮಾಡಿದ್ದರು. ಈ ವರ್ಷ ಸರಕಾರ ಚಿತ್ರೋತ್ಸವಕ್ಕೆ 9 ಕೋಟಿ ಮೀಸಲಿಟ್ಟಿದೆ. ಇಷ್ಟು ಹಣ ಬೇಕಾ? ಇದು ಯಾವುದಕ್ಕೆ ಖರ್ಚು ಮಾಡುತ್ತಿದ್ದಾರೆ ಎನ್ನುವುದನ್ನು ಕೇಳಲು ನಮಗೆ ಅನುಮತಿ ಕೊಡುತ್ತಿಲ್ಲ. ಲೆಕ್ಕ ಪತ್ರ ಕೇಳುತ್ತೇವೆ ಅನ್ನುವ ಉದ್ದೇಶಕ್ಕೆ ನಮ್ಮನ್ನು ಹೊರಗಿಟ್ಟಿದ್ದಾರೆ. ಮೂರುವರೆಯಿಂದ ನಾಲ್ಕು ಕೋಟಿ ಸರಕಾರ ನಮಗೆ ಕೊಡಲಿ ಎಂತಹ ಅದ್ಬುತವಾದ ಚಲನಚಿತ್ರೋತ್ಸವವನ್ನು ಮಾಡಿಕೊಡುತ್ತೇವೆ. ಉಳಿದ ಹಣವನ್ನು ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳಿಗೂ ಹಂಚಬಹುದು. ಇದನ್ನು ಬಿಟ್ಟು ನ್ಯಾಯ ಕೇಳಲು ಹೋದಾಗ ನಮ್ಮನ್ನು ಭಿಕ್ಷುಕರಂತೆ ಕಾಣುವ ಅಕಾಡೆಮಿಯನ್ನು ಸುಮ್ಮನೆ ಬಿಡಲಾರೆವು. ನಮಗೆ ಅವಮಾನ ಮಾಡಲಿ. ಆದರೆ ಸಂಘಕ್ಕೆ ಅವಮಾನ ಮಾಡುವುದನ್ನ ಸಹಿಸಕ್ಕಾಗುವುದಿಲ್ಲ. ಅದು ಪುಟ್ಟಣ್ಣ ಕಣಗಾಲ್ ಅವರಿಗೆ ಅವಮಾನ ಮಾಡಿದ ಹಾಗೆ. ಇನ್ನು ನಾವು ಸುಮ್ಮನಿರುವುದಿಲ್ಲ.
ಅಕಾಡೆಮಿಯ ಪ್ರಧಾನ ಅಂಗವಾಗಿರುವ ನಿರ್ದೇಶಕರ ಸಂಘವನ್ನು ಹೊರಗಿಟ್ಟು ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಇದೇ ರೀತಿ ಮುಂದುವರಿದರೆ ಅಕಾಡೆಮಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ ಸೆಬೆಸ್ಟಿನ್ ಡೇವಿಡ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣ ವಿಚಾರಣ ಸಮಿತಿ ಸಂಚಾಲಕರಾದ ಜೆ ಜಿ ಕೃಷ್ಣ ಮತ್ತು ಸಂಯೋಜನ ಸಮಿತಿ ಸಂಚಾಲಕರಾದ ರಾಮನಾಥ್ ಋಗ್ವೇದಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉಪಸಮಿತಿಗಳ ಸದಸ್ಯರು ಹಾಜರಿದ್ದರು.
