Chetan Ahimsa: ಸಿನಿಮಾ ನಟರ ಸ್ಮಾರಕಕ್ಕೆ ಸರ್ಕಾರ ಹಣ ನೀಡಬಾರದು...ನಟ ಚೇತನ್‌ ಅಹಿಂಸಾ
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಸಿನಿಮಾ ನಟರ ಸ್ಮಾರಕಕ್ಕೆ ಸರ್ಕಾರ ಹಣ ನೀಡಬಾರದು...ನಟ ಚೇತನ್‌ ಅಹಿಂಸಾ

Chetan Ahimsa: ಸಿನಿಮಾ ನಟರ ಸ್ಮಾರಕಕ್ಕೆ ಸರ್ಕಾರ ಹಣ ನೀಡಬಾರದು...ನಟ ಚೇತನ್‌ ಅಹಿಂಸಾ

ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ ಎಂದು ಬರೆದುಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್‌ ಸ್ಮಾರಕದ ಬಗ್ಗೆ ಚಕಾರ ಎತ್ತಿದ ನಟ ಚೇತನ್‌
ಡಾ. ವಿಷ್ಣುವರ್ಧನ್‌ ಸ್ಮಾರಕದ ಬಗ್ಗೆ ಚಕಾರ ಎತ್ತಿದ ನಟ ಚೇತನ್‌

ಒಂದಲ್ಲಾ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿ ಕೆಲವರ ಆಕ್ರೋಶಕ್ಕೆ ತುತ್ತಾಗಿರುವ ನಟ ಚೇತನ್‌, ಇತ್ತೀಚೆಗೆ 'ಕಾಂತಾರ' ಚಿತ್ರದ ಕಥೆ ಬಗ್ಗೆ ಕಮೆಂಟ್‌ ಮಾಡಿದ್ದರು. ಇದೀಗ ಅವರು ಡಾ. ವಿಷ್ಣುವರ್ಧನ್‌ ಸ್ಮಾರಕದ ವಿಚಾರವಾಗಿ ಮಾತನಾಡಿದ್ದಾರೆ. ನಟರ ಸ್ಮಾರಕಗಳಿಗೆ ಸರ್ಕಾರ ಹಣ ಖರ್ಚು ಮಾಡಬಾರದು ಎಂದಿದ್ದಾರೆ.

ಸತತ 13 ವರ್ಷಗಳ ಕಾಯುವಿಕೆ ನಂತರ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣವಾಗಿದೆ. ಭಾನುವಾರ ಮೈಸೂರಿನ ಹೆಚ್.ಡಿ. ಕೋಟೆಯ ಹಾಲಾಳು ಗ್ರಾಮದ ಉದ್ಬೂರು ಕ್ರಾಸ್ ಬಳಿ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಭಾರತಿ ವಿಷ್ಣುವರ್ಧನ್‌, ಸಂಸದ ಪ್ರತಾಪ್‌ ಸಿಂಹ, ಡಾ. ವಿಷ್ಣುವರ್ಧನ್‌ ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್‌ ಹಾಗೂ ಇನ್ನಿತರರು ಭಾಗವಹಿಸಿದ್ದರು. ಅಭಿಮಾನಿಗಳು ಕೂಡಾ ವಿವಿಧ ಊರುಗಳಿಂದ ಸ್ಮಾರಕ ನೋಡಲು ಆಗಮಿಸಿದ್ದರು. ಸುಮಾರು 5 ಎಕರೆ ಭೂಮಿಯಲ್ಲಿ 11 ಕೋಟಿ ರೂಪಾಯಿ ವೆಚ್ಚ ಮಾಡಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಅಭಿಮಾನಿಗಳು, ಚಿತ್ರರಂಗದ ಸೆಲೆಬ್ರಿಟಿಗಳು ಸ್ಮಾರಕ ನಿರ್ಮಾಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರೆ ನಟ ಚೇತನ್‌ ಅಹಿಂಸಾ ಮಾತ್ರ ಬೇರೆ ರೀತಿಯಲ್ಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಮಾರಕ ನಿರ್ಮಾಣದ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್‌ ಅಹಿಂಸಾ ''ಸಿನಿಮಾ ಸ್ಟಾರ್‌ಗಳ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು. ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್‌ಗಳು, ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ'' ಎಂದು ಬರೆದುಕೊಂಡಿದ್ದಾರೆ. ಚೇತನ್‌ ನೇರವಾಗಿ ಡಾ. ವಿಷ್ಣುವರ್ಧನ್‌ ಸ್ಮಾರಕದ ಹೆಸರು ಹೇಳದಿದ್ದರೂ, ಅವರು ಕಮೆಂಟ್‌ ಮಾಡಿರುವುದು ನಿನ್ನೆ ಉದ್ಘಾಟನೆಯಾದ ವಿಷ್ಣು ಸ್ಮಾರಕದ ಬಗ್ಗೆ ಅನ್ನೋದು ತಿಳಿಯುತ್ತಿದೆ. ಚೇತನ್‌ ಪೋಸ್ಟ್‌ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಚೇತನ್‌ ಅಹಿಂಸಾ ಫೇಸ್‌ಬುಕ್‌ ಪೋಸ್ಟ್‌
ಚೇತನ್‌ ಅಹಿಂಸಾ ಫೇಸ್‌ಬುಕ್‌ ಪೋಸ್ಟ್‌

'ಕಾಂತಾರ' ಕಥೆಯೇ ಸುಳ್ಳು ಎಂದಿದ್ದ ಚೇತನ್‌

ಚಿತ್ರಪ್ರೇಮಿಗಳು, ಸೆಲೆಬ್ರಿಟಿಗಳು ಬಹಳ ಮೆಚ್ಚಿ ನೋಡಿದ್ದ 'ಕಾಂತಾರ' ಚಿತ್ರದ ಬಗ್ಗೆ ಕೂಡಾ ನಟ ಚೇತನ್‌ ಕಮೆಂಟ್‌ ಮಾಡಿದ್ದರು. "ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ' ಚಿತ್ರ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ" ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಟೀಂ ಇಂಡಿಯಾ ಬಗ್ಗೆ ಕಮೆಂಟ್‌ ಮಾಡಿದ್ದ ನಟ

"ಸೌತ್‌ ಆಫ್ರಿಕಾ ತಂಡದಲ್ಲಿ ಆರು ಜನ ಕಪ್ಪು ವರ್ಣೀಯರಿಗೆ ಆಟವಾಡಲು ಕಡ್ಡಾಯವಾಗಿ ಅವಕಾಶ ನೀಡಲೇಬೇಕು ಎಂದು ಅಲ್ಲಿನ ಸರ್ಕಾರ ಕಾನೂನು ರೂಪಿಸಿದೆ. ಆದರೆ, ಭಾರತದ ಕ್ರಿಕೆಟ್‌ ತಂಡ ಹೇಗಿದೆ ಎಂದು ಎಲ್ಲರಿಗೂ ಗೊತ್ತು. ಅದು ಎಷ್ಟು ದುಡ್ಡು ಮಾಡುತ್ತಿದೆ, ಮೀಡಿಯಾ ಪ್ರಭಾವ ಎಷ್ಟಿದೆ ಎಂಬುದೂ ಗೊತ್ತಿರುವ ವಿಚಾರ. ಅದೇ ರೀತಿ ಕೆಲ ಮಾಹಿತಿಯ ಪ್ರಕಾರ ಟೀಮ್‌ ಇಂಡಿಯಾದಲ್ಲಿ ಶೇ. 70ರಷ್ಟು ಮಂದಿ ಆಟಗಾರರು ಮೇಲ್ಜಾತಿಯವರು. ನಿಜವಾಗಲೂ, ಇಂಡಿಯನ್‌ ಕ್ರಿಕೆಟ್‌ ಟೀಂ ಇನ್ನೂ ಉತ್ತಮವಾಗಬೇಕಿದ್ದರೆ, ಅಲ್ಲಿಯೂ ನಮಗೆ ಮೀಸಲಾತಿ ಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೂ ಮೀಸಲಾತಿ ನೀಡಿದರೆ ತಂಡ ಇನ್ನೂ ಉತ್ತಮವಾಗುತ್ತದೆ" ಎಂದು ಕಮೆಂಟ್‌ ಮಾಡಿದ್ದರು.

Whats_app_banner