Chhaava Collection Day 3: ಮೂರೇ ದಿನಕ್ಕೆ ಶತಕೋಟಿ ಕ್ಲಬ್‌ ಸೇರಿದ ಛಾವಾ ಸಿನಿಮಾ; ಗೆಲುವಿನ ನಗೆಬೀರಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ
ಕನ್ನಡ ಸುದ್ದಿ  /  ಮನರಂಜನೆ  /  Chhaava Collection Day 3: ಮೂರೇ ದಿನಕ್ಕೆ ಶತಕೋಟಿ ಕ್ಲಬ್‌ ಸೇರಿದ ಛಾವಾ ಸಿನಿಮಾ; ಗೆಲುವಿನ ನಗೆಬೀರಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ

Chhaava Collection Day 3: ಮೂರೇ ದಿನಕ್ಕೆ ಶತಕೋಟಿ ಕ್ಲಬ್‌ ಸೇರಿದ ಛಾವಾ ಸಿನಿಮಾ; ಗೆಲುವಿನ ನಗೆಬೀರಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ

ಕೇವಲ ಮೂರೇ ದಿನಗಳಲ್ಲಿ 100 ಕೋಟಿಯ ಗಡಿ ದಾಟಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಪಡೆದಿದೆ ಛಾವಾ. ವರದಿಯ ಪ್ರಕಾರ, ಛಾವಾ ಚಿತ್ರವು ತನ್ನ ಮೊದಲ ಭಾನುವಾರ 48.5 ಕೋಟಿ ಗಳಿಕೆ ಕಾಣುವ ಮೂಲಕ, ಮೂರು ದಿನಗಳ ಅವಧಿಯಲ್ಲಿ ಒಟ್ಟು 116.5 ಕೋಟಿ ಕಲೆಕ್ಷನ್‌ ಮಾಡಿದೆ.

ಛಾವಾ ಚಿತ್ರದ ಮೂಲಕ ಗೆಲುವಿನ ನಗೆಬೀರಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ
ಛಾವಾ ಚಿತ್ರದ ಮೂಲಕ ಗೆಲುವಿನ ನಗೆಬೀರಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ

Chhaava Collection Day 2: ಕಳೆದ ಶುಕ್ರವಾರ (ಫೆ. 14) ಬಿಡುಗಡೆ ಆದ ಮರಾಠಾ ದೊರೆ ಸಂಭಾಜಿ ಮಹಾರಾಜ್‌ ಕುರಿತ ಛಾವಾ ಸಿನಿಮಾ ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡಿದ ಈ ಸಿನಿಮಾ, ಇದೀಗ ವಾರಾಂತ್ಯ ಕಳೆಯುವುದರೊಳಗೆ ಶತಕೋಟಿ ಕ್ಲಬ್‌ ಸೇರಿ ಇತಿಹಾಸ ನಿರ್ಮಿಸಿದೆ. 2025ರ ಆರಂಭದಿಂದಲೂ ಬಾಲಿವುಡ್‌ನ ಯಾವೊಂದು ಸಿನಿಮಾ ಇಷ್ಟೊಂದು ವೇಗವಾಗಿ 100 ಕೋಟಿ ರೂ. ಗಳಿಕೆ ಮಾಡಿರಲಿಲ್ಲ. ಇದೀಗ ಆ ದಾಖಲೆ ಛಾವಾ ಸಿನಿಮಾ ಪಾಲಾಗಿದೆ.

ಫೆಬ್ರವರಿ 14ರ ಪ್ರೇಮಿಗಳ ದಿನದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆಯಾದ ಐತಿಹಾಸಿಕ ಹಿನ್ನೆಲೆಯ ಛಾವಾ ಸಿನಿಮಾ, ಮೊದಲ ದಿನ 31 ಪ್ಲಸ್‌ ಕೋಟಿ ಗಳಿಕೆ ಮಾಡಿತ್ತು. ಎರಡನೇ ದಿನ ಭಾರತದಲ್ಲಿ 36.50 ಕೋಟಿ ರೂ. ಕಲೆಕ್ಷನ್‌ ಮಾಡಿ, ಕೇವಲ ಎರಡೇ ದಿನಗಳಲ್ಲಿ 67.50 ಕೋಟಿ ಬಾಚಿಕೊಂಡಿತ್ತು. ಇದೀಗ ಇದೇ ಸಿನಿಮಾ ಮೂರನೇ ದಿನ ಅಂದರೆ ಭಾನುವಾರದಂದು ದಾಖಲೆಯ ಕಲೆಕ್ಷನ್‌ ಮಾಡಿದೆ. ಬರೋಬ್ಬರಿ 48.5 ಕೋಟಿ ಬಾಚಿಕೊಂಡಿದೆ.

2025ರ ಮೊದಲ ಚಿತ್ರ

ಕೇವಲ ಮೂರೇ ದಿನಗಳಲ್ಲಿ 100 ಕೋಟಿ ಗಡಿ ದಾಟಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಪಡೆದಿದೆ ಛಾವಾ. ವರದಿಯ ಪ್ರಕಾರ, ಛಾವಾ ಚಿತ್ರವು ತನ್ನ ಮೊದಲ ಭಾನುವಾರ 48.5 ಕೋಟಿ ಗಳಿಕೆ ಕಂಡರೆ, ಮೂರು ದಿನಗಳ ಅವಧಿಯಲ್ಲಿ ಒಟ್ಟು 116.5 ಕೋಟಿ ಕಲೆಕ್ಷನ್‌ ಮಾಡಿದೆ. ಈ ಹಿಂದೆ ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆ ಆಗಿದ್ದ ಗಲ್ಲಿ ಬಾಯ್‌ ಸಿನಿಮಾ 19.40 ಕೋಟಿ ಗಳಿಸಿದ್ದೇ ದಾಖಲೆಯಾಗಿತ್ತು. ಆ ದಾಖಲೆಯನ್ನು ಈಗಾಗಲೇ ಛಾವಾ ಸಿನಿಮಾ ಮುರಿದು ಮುನ್ನುಗ್ಗುತ್ತಿದೆ.

ಅಕ್ಷಯ್‌ ಕುಮಾರ್‌ ನಟನೆಯ ಸ್ಕೈಫೋರ್ಸ್‌ ಸಿನಿಮಾ ಇದೇ ವರ್ಷದ ಜನವರಿಯಲ್ಲಿ ತೆರೆಕಂಡಿತ್ತು. ಆ ಚಿತ್ರ ಬಿಡುಗಡೆ ಆಗಿ ಮೂರು ವಾರಗಳೇ ಕಳೆದರೂ, ಅದರ ಈ ವರೆಗಿನ ಕಲೆಕ್ಷನ್‌ 114 ಕೋಟಿ. ಅದೇ ರೀತಿ ದೇವಾ, ಎಮೆರ್ಜೆನ್ಸಿ ಸಿನಿಮಾ ಕಲೆಕ್ಷನ್‌ ಲೆಕ್ಕ ನೋಡಿದರೆ, ಆ ಚಿತ್ರಗಳು ತೀರಾ ಹಿಂದುಳಿದಿವೆ. ಆದರೆ, ಛಾವಾ ವಿಚಾರದಲ್ಲಿ ಮಾತ್ರ ಹೊಸ ದಾಖಲೆ ಸೃಷ್ಟಿಯಾಗಿದೆ. ಗಳಿಕೆಯ ನಾಗಾಲೋಟ ಮುಂದುವರಿದಿದೆ.

130 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಈಗಾಗಲೇ ಹಾಕಿದ ಬಂಡವಾಳವನ್ನು ವಾಪಾಸ್‌ ಪಡೆದು, ಲಾಭದತ್ತ ಮುಖ ಮಾಡಿದೆ. ವಿದೇಶಿ ಗಳಿಕೆಯನ್ನೂ ಇದರಲ್ಲಿ ಸೇರಿಸಿದ್ದೇ ಆದರೆ, 150 ಕೋಟಿಗೂ ಅಧಿಕ ಕಲೆಕ್ಷನ್‌ ಛಾವಾ ಬೊಕ್ಕಸಕ್ಕೆ ಹರಿದುಬಂದಿದೆ. ಇನ್ನು ಕೆಲ ಮೂಲಗಳ ಪ್ರಕಾರ ಛಾವಾ ಚಿತ್ರದ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳೂ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ.

ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್‌

ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಮಗ ಸಂಭಾಜಿ ಮಹಾರಾಜ್ ಸಾಹಸದ ಜೀವನ ಆಧರಿಸಿದ ಕಥೆಯಾಗಿದೆ. ಶಿವಾಜಿ ಸಾವಂತ್‌ ಬರೆದ ಛಾವಾ (ಸಿಂಹದ ಮರಿ) ಹೆಸರಿನ ಪುಸ್ತಕ ಆಧರಿಸಿ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದರೆ, ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ಎದುರಾಗಿದ್ದಾರೆ.

ಅಕ್ಷಯ್ ಖನ್ನಾ, ದಿವ್ಯಾ ದತ್ತ, ಅಶುತೋಷ್ ರಾಣಾ, ವಿನೀತ್ ಕುಮಾರ್ ಸಿಂಗ್, ಸಂತೋಷ್ ಜುವೇಕರ್, ಅಲೋಕ್‌ನಾಥ್ ಮತ್ತು ಕಿರಣ್ ಕಮರ್ಕರ್ ಪಾತ್ರವರ್ಗದಲ್ಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಸೌರಭ್ ಗೋಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner