Chhaava Collection: ಬಾಕ್ಸ್ ಆಫೀಸ್ ಗಳಿಕೆ ದಾಖಲೆ ಬರೆಯುತ್ತಿದೆ ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣರ ಛಾವಾ, 5ನೇ ದಿನದ ಗಳಿಕೆ ಲೆಕ್ಕ
Chhaava Box Office Collection Day 5: ಐತಿಹಾಸಿಕ ಕಥಾ ಹಂದರದ ಛಾವಾ ಸಿನಿಮಾ ದಿನೇ ದಿನೆ ಗಳಿಕೆ ದಾಖಲೆ ಬರೆಯುತ್ತಿದೆ. ಬಾಕ್ಸ್ ಆಫೀಸ್ ಗಳಿಕೆ ದಾಖಲೆ ಬರೆಯುತ್ತಿದ್ದರೂ, ಐದನೇ ದಿನದ ಆದಾಯ ಕುಸಿದಿರುವಂತೆ ಕಾಣುತ್ತಿದೆ. ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣರ ಛಾವಾ, 5ನೇ ದಿನದ ಗಳಿಕೆಯ ಅಂದಾಜು ಲೆಕ್ಕ ಹೀಗಿದೆ.

Chhaava Box Office Collection Day 5: ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆಯುತ್ತ ಮುನ್ನುಗ್ಗುತ್ತಿದೆ. ಮೊದಲ ಮೂರು ದಿನಗಳಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದ ಸಿನಿಮಾ ಐದನೇ ದಿನವಾದ ಇಂದು (ಫೆ 18) 150 ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆಗಳು ಗೋಚರಿಸಿವೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್ ವರದಿ ಪ್ರಕಾರ, ಇಂದು ಬೆಳಗ್ಗೆ ಪ್ರದರ್ಶನದಲ್ಲಿ 11.09 ಕೋಟಿ ರೂಪಾಯಿ ಗಳಿಸಿತ್ತು.
ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣರ ಛಾವಾ, 5ನೇ ದಿನದ ಗಳಿಕೆ ಲೆಕ್ಕ
ಮರಾಠ ರಾಜ ಸಂಭಾಜಿ ಮಹಾರಾಜ್ ಕಥೆಯನ್ನು ಆಧರಿಸಿದ ಛಾವಾ ಸಿನಿಮಾ ಮೊದಲ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 140.5 ಕೋಟಿ ರೂಪಾಯಿ ಆದಾಯ ಗಳಿಸಿದೆ. ಐದನೇ ದಿನ ಎಲ್ಲ ಭಾಷೆಗಳ ಪ್ರದರ್ಶನ ಸೇರಿ ಬೆಳಗ್ಗೆ 11.09 ಕೋಟಿ ರೂಪಾಯಿ ಗಳಿಸಿದೆ ಎಂದು ಸಿನಿಮಾ ಪ್ರದರ್ಶನದ ಟ್ರಾಕಿಂಗ್ ಮಾಡುವ ಸ್ಯಾಕ್ನಿಲ್ಕ್ ಹೇಳಿದೆ. ಹಿಂದಿ ಭಾಷೆಯ ಈ ಸಿನಿಮಾ ಇಂದು (ಫೆ 18) ಬೆಳಗ್ಗೆ ಪ್ರದರ್ಶನಕ್ಕೆ ಶೇಕಡ 22.31 ಸೀಟು ಭರ್ತಿಯಾಗಿತ್ತು.
ಛಾವಾ ಸಿನಿಮಾ ಫೆ 14 ರಂದು ಪ್ರೇಮಿಗಳ ದಿನವೇ ವಿಶ್ವಾದ್ಯಂತ ಬಿಡುಗಡೆಯಾಗಿfತು. ಐತಿಹಾಸಿಕ ಕಥಾ ಹಂದರ ಇರುವಂತಹ ಛಾವಾ ಸಿನಿಮಾ ಮೊದಲ ದಿನವೇ 36 ಕೋಟಿ ಬಾಕ್ಸ್ ಆಫೀಸ್ ಗಳಿಕೆಯೊಂದಿಗೆ ದಾಖಲೆ ಬರೆದಿತ್ತು. ಬಾಲಿವುಡ್‌ನಲ್ಲಿ 2025ರ ಐತಿಹಾಸಿಕ ಕಥಾ ಹಂದರದ ಮೊದಲ ಸಿನಿಮಾ ಇದಾಗಿದ್ದು, ಎರಡನೇ ದಿನ 36.50 ಕೋಟಿ ರೂಪಾಯಿ, ಮೂರನೇ ದಿನ 48.5 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಗಳಿಕೆಯೊಂದಿಗೆ 100 ಕೋಟಿ ಕ್ಲಬ್ ಸೇರಿದೆ. ಈ ಸಿನಿಮಾ ಮೂರು ದಿನಗಳಲ್ಲಿ ಒಟ್ಟು 121 ಕೋಟಿ ಕಲೆಕ್ಷನ್ ಮಾಡಿದೆ. ನಾಲ್ಕು ದಿನಗಳ ಒಟ್ಟು ಗಳಿಕೆ 140.5 ಕೋಟಿ ರೂಪಾಯಿ ದಾಟಿದೆ.
ಛಾವಾ ಸಿನಿಮಾ 130 ಕೋಟಿ ರೂಪಾಯಿ ಬಜೆಟ್‌ನ ಚಿತ್ರ. ಈಗಾಗಲೇ ಹಾಕಿದ ಬಂಡವಾಳ ವಾಪಸ್ ಪಡೆದುಕೊಂಡಿರುವ ಸಿನಿಮಾ ನಿರ್ಮಾಪಕರು ಲಾಭ ಗಳಿಸಲು ಶುರುಮಾಡಿದ್ದಾರೆ. ವಿದೇಶಿ ಗಳಿಕೆ ಹಾಗೂ, ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಲಾಗುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಷ್ಟೆ ಅಲ್ಲ, ಲಾಭದ ವಿಚಾರದಲ್ಲೂ ಛಾವಾ ಹೊಸ ದಾಖಲೆ ಬರೆಯುವ ಸಾಧ್ಯತೆ ಗೋಚರಿಸಿದೆ.
ಬಾಲಿವುಡ್ ಸಿನಿಮಾ, ಐತಿಹಾಸಿಕ ಸಿನಿಮಾ ಗಳಿಕೆ ಜತೆಗೆ ತುಲನೆ
ಜನವರಿಯಲ್ಲಿ ಬಿಡುಗಡೆಯಾಗಿರುವ ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್ ಸಿನಿಮಾದ ಈ ವರೆಗೆ ಬಾಕ್ಸ್ ಆಫೀಸ್ ಗಳಿಕೆ 114 ಕೋಟಿ ರೂಪಾಯಿ. ಅದೇ ರೀತಿ, ದೇವಾ, ಎಮೆರ್ಜೆನ್ಸಿ ಸಿನಿಮಾ ಗಳಿಕೆ ಕೂಡ ಸಪ್ಪೆಯಾಗಿದೆ.
ಐತಿಹಾಸಿಕ ಕಥಾ ಹಂದರ ಇರುವಂತಹ ಇತರೆ ಸಿನಿಮಾಗಳು ಎಂದರೆ ಅಜಯ್ ದೇವಗನ್ ಅಭಿನಯದ ತಾನ್ಹಾಜಿ ಸಿನಿಮಾ ತೆರೆ ಕಂಡ ಮೊದಲ ದಿನ 15 ಕೋಟಿ ರೂಪಾಯಿ, ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸಿನಿಮಾ 21.06 ಕೋಟಿ ರೂಪಾಯಿ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಮೊದಲ ದಿನ 36 ಕೋಟಿ ರೂಪಾಯಿ ಗಳಿಸಿದೆ.
ಮರಾಠಾ ಯೋಧ ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಸಾಹಸದ ಜೀವನ ಆಧರಿಸಿದ ಕಥೆಯಾಗಿದೆ. ಶಿವಾಜಿ ಸಾವಂತ್ ಬರೆದ ಛಾವಾ (ಸಿಂಹದ ಮರಿ) ಕಾದಂಬರಿಯ ಕಥೆಯನ್ನು ಆಧರಿಸಿ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ಸಿನಿಮಾ ಮಾಡಿದ್ದಾರೆ. ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದರೆ, ಸಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.
ಅಕ್ಷಯ್ ಖನ್ನಾ, ದಿವ್ಯಾ ದತ್ತ, ಅಶುತೋಷ್ ರಾಣಾ, ವಿನೀತ್ ಕುಮಾರ್ ಸಿಂಗ್, ಸಂತೋಷ್ ಜುವೇಕರ್, ಅಲೋಕ್‌ನಾಥ್ ಮತ್ತು ಕಿರಣ್ ಕಮರ್ಕರ್ ಪಾತ್ರವರ್ಗದಲ್ಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಸೌರಭ್ ಗೋಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿಭಾಗ