ಚಿಕ್ಕಮಗಳೂರು ಬಾಳೂರು ತೊಟ್ಟಿಮನೆ; ಸಿನಿಮಾ-ಧಾರಾವಾಹಿ ಶೂಟಿಂಗ್‌, ಪ್ರಕೃತಿ ಮಧ್ಯೆ ಮದುವೆ ಆಗಲು ಬಯಸುವವರಿಗೆ ಹೇಳಿ ಮಾಡಿಸಿದಂತ ಸ್ಪಾಟ್‌
ಕನ್ನಡ ಸುದ್ದಿ  /  ಮನರಂಜನೆ  /  ಚಿಕ್ಕಮಗಳೂರು ಬಾಳೂರು ತೊಟ್ಟಿಮನೆ; ಸಿನಿಮಾ-ಧಾರಾವಾಹಿ ಶೂಟಿಂಗ್‌, ಪ್ರಕೃತಿ ಮಧ್ಯೆ ಮದುವೆ ಆಗಲು ಬಯಸುವವರಿಗೆ ಹೇಳಿ ಮಾಡಿಸಿದಂತ ಸ್ಪಾಟ್‌

ಚಿಕ್ಕಮಗಳೂರು ಬಾಳೂರು ತೊಟ್ಟಿಮನೆ; ಸಿನಿಮಾ-ಧಾರಾವಾಹಿ ಶೂಟಿಂಗ್‌, ಪ್ರಕೃತಿ ಮಧ್ಯೆ ಮದುವೆ ಆಗಲು ಬಯಸುವವರಿಗೆ ಹೇಳಿ ಮಾಡಿಸಿದಂತ ಸ್ಪಾಟ್‌

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಾಳೂರು ಗ್ರಾಮದಲ್ಲಿರುವ ತೊಟ್ಟಿಮನೆಯಲ್ಲಿ 1998ರಿಂದ ಅನೇಕ ಸಿನಿಮಾ, ಧಾರಾವಾಹಿಗಳು ಚಿತ್ರೀಕರಣವಾಗಿವೆ. ಈ ಮನೆ ಓನರ್‌ ಹೆಸರು ಮನು. ಈ ಹೋಮ್‌ ಸ್ಟೇಯಲ್ಲಿ ಇತ್ತೀಚೆಗೆ ಒಂದು ಮದುವೆ ನೆರವೇರಿದ್ದು, ಪ್ರಕೃತಿ ಮಧ್ಯೆ ಸರಳವಾಗಿ ಮದುವೆ ಆಗಲು ಇಚ್ಛಿಸುವವರು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಸುಂದರ ಪ್ರಕೃತಿ ನಡುವೆ ಇರುವ ತೊಟ್ಟಿಮನೆ ಹೋಮ್‌ ಸ್ಟೇ
ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಸುಂದರ ಪ್ರಕೃತಿ ನಡುವೆ ಇರುವ ತೊಟ್ಟಿಮನೆ ಹೋಮ್‌ ಸ್ಟೇ (PC: Manu, Sheela Shetty)

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ, ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ, ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ....ಇದು ರಾಷ್ಟ್ರಕವಿ ಕುವೆಂಪು ರಚಿಸಿದ ಹಾಡು. ಮೊದಲ ಸಾಲಿನಲ್ಲೇ ತಿಳಿಸಿರುವಂತೆ ಹಸಿರು ಘಟ್ಟಗಳನ್ನು ಹೊತ್ತಿರುವ ಮಲೆನಾಡನ್ನು ವರ್ಣಿಸುವ ಗೀತೆ ಇದು. ಸುಂದರ ಪ್ರಕೃತಿಯನ್ನು ಕುರಿತು ಬರೆದಿರುವ ಹಾಡು. ಮಲೆನಾಡಿನ ಸೌಂದರ್ಯ, ಮಹತ್ವವನ್ನು ಸಾರಿ ಹೇಳುತ್ತದೆ.

ಮೂಡಿಗೆರೆ ತಾಲೂಕಿನ ಬಾಳೂರು ತೊಟ್ಟಿಮನೆ (ಹೋಮ್‌ ಸ್ಟೇ)

ಬಿಡುವಿಲ್ಲದ ಜಂಜಾಟಗಳ ನಡುವೆ ಒಂದೆರಡು ದಿನ ಬಿಡುವು ಪಡೆದು ಇಂತ ಸುಂದರ ಮಲೆನಾಡಿನ ಪ್ರಕೃತಿ ಮಡಿಲಿಗೆ ಹೋದರೆ ಸಾಕು, ಸಿಟಿ ಜೀವನ ಬಿಟ್ಟು ಇಲ್ಲೇ ಇದ್ದು ಬಿಡೋಣ ಅಂತ ಅನಿಸದೆ ಇರದು. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ನಡುವೆ ಕಾಲ ಕಳೆಯಲು ಜನರು ಹೆಚ್ಚಾಗಿ ರೆಸಾರ್ಟ್‌, ಹೋಮ್‌ ಸ್ಟೇಗಗಳನ್ನು ಬುಕ್‌ ಮಾಡುತ್ತಿದ್ದಾರೆ. ಅಲ್ಲೋ ಇಲ್ಲೇ ಏಕೆ? ನಮ್ಮ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ , ಉಡುಪಿ, ಕೊಡಗಿನಲ್ಲಿ ಇಂತಹ ಸಾಕಷ್ಟು ರೆಸಾರ್ಟ್‌, ಹೋಮ್‌ ಸ್ಟೇಗಳನ್ನು ನೋಡಬಹುದು. ಅವುಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಾಳೂರು ತೊಟ್ಟಿ ಮನೆ ಸ್ವಲ್ಪ ವಿಶೇಷ ಅಂತಾನೇ ಹೇಳಬಹುದು.

ಈ ತೊಟ್ಟಿ ಮನೆಯಲ್ಲಿ 24 ರೂಮ್‌ಗಳಿದ್ದು 5 ರೂಮ್‌ಗಳಲ್ಲಿ ಅಟ್ಯಾಚ್‌ ಬಾತ್‌ರೂಮ್‌ ವ್ಯವಸ್ಥೆ ಇದೆ
ಈ ತೊಟ್ಟಿ ಮನೆಯಲ್ಲಿ 24 ರೂಮ್‌ಗಳಿದ್ದು 5 ರೂಮ್‌ಗಳಲ್ಲಿ ಅಟ್ಯಾಚ್‌ ಬಾತ್‌ರೂಮ್‌ ವ್ಯವಸ್ಥೆ ಇದೆ

ಈ ಮನೆ ಬಾಳೂರು ತೊಟ್ಟಿ ಮನೆ ಅಂತಾನೇ ಫೇಮಸ್.‌ ಈ ಮನೆಯಲ್ಲಿ ಬಹಳಷ್ಟು ಸಿನಿಮಾ, ಧಾರಾವಾಹಿಗಳು ಚಿತ್ರೀಕರಣವಾಗಿದೆ. ದೆಹಲಿ ಜಾಹೀರಾತು ಕಂಪನಿಯೊಂದು ದೂರದಿಂದ ಇಲ್ಲಿ ಬಂದು ಶೂಟಿಂಗ್‌ ಮಾಡಿದೆ. ಇತ್ತೀಚೆಗೆ ಇಲ್ಲಿ ಒಂದು ಮದುವೆ ಕೂಡಾ ನೆರವೇರಿದೆ. ಟ್ರೆಕ್ಕಿಂಗ್‌ಪ್ರಿಯರು ಈ ತೊಟ್ಟಿಮನೆ ಹೋಮ್‌ ಸ್ಟೇಗೆ ಬಂದು 3-4 ದಿನಗಳು ಉಳಿದುಕೊಂಡು ಪಕ್ಕದಲ್ಲೇ ಇರುವ ರಾಣಿಝರಿ ಅಂಚು, ದೇವರ ಮನೆ, ಬಂಡಾಜೆ ಫಾಲ್ಸ್‌ ಟೂರಿಸ್ಟ್‌ ಸ್ಪಾಟ್‌ಗೆ ಹೋಗಿ ಬರುತ್ತಾರೆ.

250 ವರ್ಷಗಳಷ್ಟು ಹಳೆಯ ತೊಟ್ಟಿ ಮನೆ

ಇದು ಸುಮಾರು 250 ವರ್ಷಗಳ ಹಿಂದಿನ ಮನೆ. ಈ ಮನೆ ಓನರ್‌ ಹೆಸರು ಮನು. ಇವರ ಮುತ್ತಾತ ಕಟ್ಟಿದ ಮನೆ ಇದು. ಮನು, ಅವರ ತಂದೆ, ತಾತ ಕೂಡಾ ಹುಟ್ಟಿ ಬೆಳೆದದ್ದು ಇದೇ ಮನೆಯಲ್ಲಿ. ಸಣ್ಣಪ್ಪ ಗೌಡ, ಈರಮ್ಮ ದಂಪತಿಯ ಆರು ಮಕ್ಕಳಲ್ಲಿ ಮನು 5 ನೆಯವರು. ತಂದೆ ಮಾಡಿದ ಆಸ್ತಿಯಲ್ಲಿ ಅವರಿಗೆ ಬಂದ ಪಾಲೇ ಈ ತೊಟ್ಟಿಮನೆ. ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಮನೆ ಕಟ್ಟಲಾಗಿದೆ. ಸುತ್ತಲೂ ಕಾಫಿ ತೋಟ, ಕಿರಿದಾದ ರಸ್ತೆಗಳು, ಎತ್ತರವಾದ ಹಸಿರು ಬೆಟ್ಟಗುಡ್ಡಗಳು ನಿಮಗೆ ಖುಷಿ ನೀಡುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಮನು ಕುಟುಂಬ ಬೆಂಗಳೂರಿಗೆ ಶಿಫ್ಟ್‌ ಆಗುವ ಸಂದರ್ಭ ಬಂದಾಗ ಬಾಳೂರಿನ ಈ ಮನೆ ಖಾಲಿ ಇತ್ತು. ಆಗ್ಗಾಗ್ಗೆ ಎಲ್ಲರೂ ಊರಿಗೆ ಬಂದು ಹೋಗುತ್ತಿದ್ದರು.

ಬಾಳೂರು ತೊಟ್ಟಿಮನೆ ಹೋಮ್‌ ಸ್ಟೇ ಬಳಿ ದೇವರ ಮನೆ, ರಾಣಿ ಝರಿ ಅಂಚು ಸೇರಿದಂತೆ ಅನೇಕ ಸುಂದರ ಸ್ಥಳಗಳಿವೆ
ಬಾಳೂರು ತೊಟ್ಟಿಮನೆ ಹೋಮ್‌ ಸ್ಟೇ ಬಳಿ ದೇವರ ಮನೆ, ರಾಣಿ ಝರಿ ಅಂಚು ಸೇರಿದಂತೆ ಅನೇಕ ಸುಂದರ ಸ್ಥಳಗಳಿವೆ

ಆದರೆ ಅಷ್ಟು ದೊಡ್ಡ ಮನೆಯನ್ನು ಖಾಲಿ ಬಿಡುವುದು ಸರಿ ಅಲ್ಲ ಎನಿಸಿದ ಮನುಗೆ, ಮನೆಯನ್ನು ಸಿನಿಮಾ, ಧಾರಾವಾಹಿಗಳ ಚಿತ್ರೀಕರಣಕ್ಕೆ ಬಾಡಿಗೆ ನೀಡುವಂತೆ ಸ್ನೇಹಿತರೊಬ್ಬರು ಸಲಹೆ ನೀಡಿದ್ದಾರೆ. ಮನು ಅವರಿಗೆ ಅದು ಸರಿ ಎನಿಸಿದೆ. 1998ರಲ್ಲಿ ಮೊದಲ ಬಾರಿಗೆ ಜಗ್ಗೇಶ್‌ ಅಭಿನಯದ ವಂಶಕೊಬ್ಬ ಎಂಬ ಸಿನಿಮಾ ಇಲ್ಲಿ ಚಿತ್ರೀಕರಣವಾಗಿದೆ. ಅಂದಿನಿಂದ ಅನೇಕ ಸಿನಿಮಾ, ಧಾರಾವಾಹಿಗಳು ಇಲ್ಲಿ ಚಿತ್ರೀಕರಣವಾಗಿವೆ. ಇತ್ತೀಚೆಗೆ ತೆರೆ ಕಂಡ ಕಸ್ತೂರಿ ಮಹಲ್‌, ರಾಘವೇಂದ್ರ ಸ್ಟೋರ್ಸ್‌, ರಾಜು ಕನ್ನಡ ಮೀಡಿಯಂ ಸಿನಿಮಾ, ಶಾಂಭವಿ, ಗೆಜ್ಜೆಪೂಜೆ, ಅಕ್ಕ, ಮಡದಿ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳ ಶೂಟಿಂಗ್‌ ನಡೆದಿರುವುದು ಇದೇ ಮನೆಯಲ್ಲಿ.

ಸಿಂಪಲ್‌ ಆಗಿ, ಪ್ರಕೃತಿ ನಡುವೆ ಮದುವೆ ಆಗಲು ಇಷ್ಟ ಪಡೋರಿಗೆ ಹೇಳಿ ಮಾಡಿಸಿದಂಥ ಸ್ಥಳ

ಅಂದಿನ ಕಾಲದಲ್ಲೇ ಈ ಮನೆಯನ್ನು ವಾಸ್ತು ಪ್ರಕಾರ ಕಟ್ಟಲಾಗಿದೆ. ಹೆಂಚುಗಳ ಮೇಲೆ 1865 ಇಸವಿಯನ್ನು ಮುದ್ರಿಸಲಾಗಿದೆ. ನಾವು ಇತ್ತೀಚೆಗೆ ಮನೆಯನ್ನು ರಿನೋವೇಟ್‌ ಮಾಡಿಸಿದ್ದೇವೆ. 5 ರೂಮ್‌ಗಳಲ್ಲಿ ಅಟ್ಯಾಚ್‌ ಬಾತ್‌ರೂಮ್‌ ಇದೆ. ಹೋಮ್‌ ಸ್ಟೇಗೆ ಬರುವವರಿಗೆ ಅವರು ಕೊಡುವ ಹಣದಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ, ಸ್ನಾಕ್ಸ್‌, ಕಾಫಿ ಅರೇಂಜ್‌ ಮಾಡಲಾಗುವುದು ಅಂತ ಮನು, ಈ ಹೋಮ್‌ ಸ್ಟೇ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಾಳೂರು ತೊಟ್ಟಿಮನೆ ಹೋಮ್‌ ಸ್ಟೇ ಮಾಲೀಕ ಮನು ಹಾಗೂ ಕುಟುಂಬ
ಬಾಳೂರು ತೊಟ್ಟಿಮನೆ ಹೋಮ್‌ ಸ್ಟೇ ಮಾಲೀಕ ಮನು ಹಾಗೂ ಕುಟುಂಬ

ಮನು-ವೀಣಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ವರುಣ್‌, ಮಗಳು ವರ್ಷಿತಾ. ಈಗ ಎಲ್ಲರೂ ಇದೇ ತೊಟ್ಟಿ ಮನೆಯಲ್ಲಿ ನೆಲೆಸಿದ್ದಾರೆ. ಈಗಲೂ ಇಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ಮನೆಯಲ್ಲಿ ಒಂದು ಮದುವೆ ಕೂಡಾ ನೆರವೇರಿದೆ. ಇದು ಈ ಮನೆಯಲ್ಲಿ ನಡೆದ ಮೊದಲ ಮದುವೆ. ಆದರೆ ಹೊರಗೆ ಛತ್ರದಲ್ಲಿ ಸೇರುವಷ್ಟು ಜನರು ಇಲ್ಲಿಗೆ ಬರಲಾಗುವುದಿಲ್ಲ.ಈ ತೊಟ್ಟಿಮನೆ  ಹೋಮ್‌ ಸ್ಟೇನಲ್ಲಿ ಉಳಿದುಕೊಂಡು ಟ್ರೆಕ್ಕಿಂಗ್‌ ಮಾಡಲು ಬಯಸುವವರು ಮೊದಲೇ ಬುಕ್‌ ಮಾಡಿರಬೇಕು.

ಕೊಟ್ಟಿಗೆ ಹಾರದಿಂದ ಈ ಹೋಮ್‌ ಸ್ಠೇಗೆ ಹೋಗಲು ಸ್ವಂತ ವಾಹನವಿದ್ದರೆ ಅನುಕೂಲ. ಇಲ್ಲಿ ಕಿರಿದಾದ ರಸ್ತೆಗಳಿರುವುದರಿಂದ ಕಾರು, ಬೈಕ್‌ ಬಿಟ್ಟು ಭಾರೀ ವಾಹನಗಳ ಸಂಚಾರ ಸ್ವಲ್ಪ ಕಷ್ಟ. ಪ್ರಕೃತಿ ಮಧ್ಯೆ ಮದುವೆ ಆಗಲು ಬಯಸುವವರು, ಚಾರಣಪ್ರಿಯರು, ಚಿತ್ರೀಕರಣ ಮಾಡಲು ಸ್ಥಳ ಹುಡುಕುತ್ತಿರುವವರು ತೊಟ್ಟಿ ಮನೆ ಓನರ್‌ ಮನು ಅವರನ್ನು ಸಂಪರ್ಕಿಸಬಹುದು. 

ಮೊಬೈಲ್‌ ಸಂಖ್ಯೆ: 9448014531

ಹಸಿರು ಪ್ರಕೃತಿ ಮಧ್ಯೆ ಸಿಂಪಲ್‌ ಅಗಿ ಮದುವೆ ಆಗುವವರಿಗೆ, ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದಂತ ಸ್ಥಳ
ಹಸಿರು ಪ್ರಕೃತಿ ಮಧ್ಯೆ ಸಿಂಪಲ್‌ ಅಗಿ ಮದುವೆ ಆಗುವವರಿಗೆ, ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದಂತ ಸ್ಥಳ
Whats_app_banner