ಕಳ್ ನನ್ಮಕ್ಕಳ ಬಗ್ಗೆ ಮಾತನಾಡಲು ನಾನು ಬಂದಿಲ್ಲ; ದರ್ಶನ್‌ಗೆ ಜಾಮೀನು ಸಿಗ್ತಿದ್ದಂತೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ
Prakash Raj On Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಸೇರಿ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಬೆನ್ನಲ್ಲೇ ದರ್ಶನ್‌ಗೆ ಬೇಲ್ ಸಿಗ್ತಿದ್ದಂತೆ, ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
Prakash Raj On Darshan: ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ನಟ ದರ್ಶನ್, ಬೆನ್ನು ಹುರಿ ಚಿಕಿತ್ಸೆ ಸಲುವಾಗಿ ಆರು ವಾರಗಳ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮಧ್ಯಂತರ ಜಾಮೀನಿನ ನಡುವೆಯೇ ನಿಟ್ಟುಸಿರು ಬಿಡುವಂಥ ಸುದ್ದಿ ಅವರಿಗೆ ಸಿಕ್ಕಿದೆ. ಅಂದರೆ, ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿಯೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದರ ಜತೆಗೆ ಸಿನಿಮಾರಂಗದ ಆಪ್ತರು ಸಹ ಶುಭ ಹಾರೈಸುತ್ತಿದ್ದಾರೆ. ಈ ನಡುವೆ ಬಹುಭಾಷಾ ನಟ ಪ್ರಕಾಶ್ ರಾಜ್ ದರ್ಶನ್ ಜಾಮೀನು ವಿಚಾರವನ್ನು ವ್ಯಂಗ್ಯವಾಡಿದ್ದಾರೆ.
ನಟ ಪ್ರಕಾಶ್ ರಾಜ್ ಸಿನಿಮಾ ನಟನಾದರೂ, ರಾಜಕೀಯ ಸೇರಿ ಪ್ರಸಕ್ತ ಆಗುಹೋಗುಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಜತೆಗೆ ಪರ ವಿರೋಧ ಚರ್ಚೆಗೂ ಒಗ್ಗರಣೆ ಹಾಕುತ್ತಿರುತ್ತಾರೆ. ಇದೀಗ ಮೈಸೂರಿನಲ್ಲಿನ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಕಾಶ್ ರಾಜ್ ಭಾಗವಹಿಸಿದ್ದ ವೇಳೆಯೇ ದರ್ಶನ್ ಅವರಿಗೆ ಬೇಲ್ ಮಂಜೂರಾಗಿದೆ. ಆ ಕ್ಷಣಕ್ಕೆ, ಅದೇ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಹೇಳಿದ್ದಾರೆ. ಆ ಪ್ರಶ್ನೆಗೆ ಅಷ್ಟೇ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಕಳ್ ನನ್ಮಕ್ಕಳ ಬಗ್ಗೆ ಮಾತನಾಡಲ್ಲ
ಶ್ರೀರಂಗಪಟ್ಟಣದ ಬಳಿಯಲ್ಲಿ ನಿರ್ದಿಗಂತ ಹೆಸರಿನಲ್ಲಿ ರಂಗಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಅಲ್ಲಿ ರಂಗ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಬಗ್ಗೆ, ಒಟ್ಟಾರೆ ನಿರ್ದಿಗಂತದ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುವಾಗಲೇ, ದರ್ಶನ್ ಅವರಿಗೆ ಜಾಮೀನು ಮಂಜೂರಾಗಿದೆ. ನಾನು ಇಲ್ಲಿ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ, ಕಳ್ ನನ್ಮಕ್ಕಳ ಬಗ್ಗೆ ಅಲ್ಲ. ಬರೀ ಮಕ್ಕಳ ಬಗ್ಗೆ ಮಾತ್ರ ಮಾತನಾಡಿ ಎಂದು ನೇರವಾಗಿಯೇ ದರ್ಶನ್ ಬಗ್ಗೆ ಮಾತನಾಡಿದ್ದಾರೆ ಪ್ರಕಾಶ್ ರಾಜ್.
ಕಳೆದ ಡಿಸೆಂಬರ್ 9 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ತೀರ್ಪನ್ನು ಕಾಯ್ದಿರಿಸಿದ್ದರು. 33 ವರ್ಷದ ರೇಣುಕಸ್ವಾಮಿ ಅವರ ಶವ ಜೂನ್ 9 ರಂದು ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ದರ್ಶನ್ ಅವರ ಸೂಚನೆ ಮೇರೆಗೆ ನಡೆದ ಹಲ್ಲೆಯಿಂದ ಆದ ಗಾಯಗಳಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಹೇಳಿದ್ದರು.̇
ಸೋಮವಾರ ಪವಿತ್ರಾ ಗೌಡ ರಿಲೀಸ್
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪವಿತ್ರಾಗೌಡ ಪರ ವಕೀಲೆ ಶಿಲ್ಪಾ, ಜಾಮೀನು ಸಿಕ್ಕಿರುವುದು ಖುಷಿಯ ವಿಚಾರ. ಈ ಪ್ರಕರಣದಲ್ಲಿ ಪವಿತ್ರಾಗೌಡ ಪಾತ್ರವನ್ನು ಪರಾಮರ್ಶಿಸಿ ನ್ಯಾಯಮೂರ್ತಿಗಳು ಜಾಮೀನು ಕೊಟ್ಟಿದ್ದಾರೆ. ಷರತ್ತುಗಳ ಬಗ್ಗೆ ಆದೇಶದ ಪ್ರತಿ ಸಿಕ್ಕ ಮೇಲೆ ತಿಳಿಯುತ್ತದೆ. ಸೋಮವಾರ ಪವಿತ್ರಾ ಗೌಡ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು.
ನ್ಯಾಯಾಲಯ ದರ್ಶನ್‌ಗೆ ವಿಧಿಸಿದ ಷರತ್ತುಗಳೇನು
ದರ್ಶನ್ ಅವರಿಗೆ ಹೈಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿ, ಅದರ ಅನ್ವಯವೇ ಜಾಮೀನು ಕೊಟ್ಟಿದೆ. ಅದರಲ್ಲಿ ಮೂರು ಮುಖ್ಯ ಅಂಶಗಳಿವೆ.
- ಸಾಕ್ಷಿಗಳನ್ನು ನಾಶಪಡಿಸಬಾರದು
- ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು
- ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗಬಾರದು.
ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ಕೆಡಿ- ದಿ ಡೆವಿಲ್ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಶೀಘ್ರ