ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರನ್ನು ಹೆದರಿಸಿದ್ದ ಕನ್ನಡದ ಹಿಟ್ ಚಿತ್ರವೀಗ 76 ದಿನಗಳ ಬಳಿಕ ಒಟಿಟಿಗೆ ಎಂಟ್ರಿ!
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಜನ ಮೆಚ್ಚುಗೆ ಜತೆಗೆ ವಿಮರ್ಶೆ ದೃಷ್ಟಿಯಿಂದಲೂ ಸೈ ಎನಿಸಿಕೊಂಡಿದ್ದ ಕನ್ನಡದ ಹಾರರ್ ಕಾಮಿಡಿ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಯಾವುದಾ ಸಿನಿಮಾ, ಯಾವ ಒಟಿಟಿಯಲ್ಲಿ ವೀಕ್ಷಣೆ? ಹೀಗಿದೆ ಮಾಹಿತಿ.

OTT Kannada Movies: ಒಟಿಟಿಯಲ್ಲಿ ಪರಭಾಷೆಯ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಸಿನಿಮಾಗಳ ಆಗಮನ ತೀರಾ ಕಡಿಮೆ. ಒಂದು ವೇಳೆ ಕನ್ನಡದ ಸಿನಿಮಾಗಳು ಒಟಿಟಿಗೆ ಬರ್ತಿವೆ ಎಂದರೆ, ನಿಗದಿತ 40 ದಿನಗಳ ಒಳಗೆ ಆ ಸಿನಿಮಾಗಳು ಒಟಿಟಿ ಪ್ರವೇಶಿಸುವುದಿಲ್ಲ. ಮೂರ್ನಾಲ್ಕು ತಿಂಗಳಾದ ಮೇಲೆಯೇ ಒಟಿಟಿಯಲ್ಲಿ ದರ್ಶನ. ಇದೀಗ ಇದೇ ವರ್ಷದ ಜನವರಿ 10ರ ಸಂಕ್ರಾಂತಿ ಹಬ್ಬದಂದು ಬಿಡುಗಡೆ, ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಸಿನಿಮಾವೊಂದು ಸದ್ದಿಲ್ಲದೇ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದಾ ಸಿನಿಮಾ? ಯಾವ ಒಟಿಟಿಯಲ್ಲಿ ಆ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ.
ತರುಣ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್ ನಿರ್ಮಿಸಿರುವ ಸಿನಿಮಾ ʻಛೂ ಮಂತರ್ʼ. ನಟ ಶರಣ್ ನಾಯಕನಾಗಿ ನಟಿಸಿದ ಈ ಸಿನಿಮಾ, ಜನವರಿ 10ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು. ವಿಮರ್ಶೆ ದೃಷ್ಟಿಯಿಂದಲೂ ಮೆಚ್ಚುಗೆ ಪಡೆದು, ಪ್ರೇಕ್ಷಕ ವಲಯದಿಂದಲೂ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರಮಂದಿರಗಳಲ್ಲಿ 50 ದಿನಗಳನ್ನೂ ಪೂರೈಸಿತ್ತು. ಆದರೆ, ನಿಗದಿತ ಸಮಯಕ್ಕೆ ಒಟಿಟಿ ಕಡೆ ಮುಖ ಮಾಡಿರಲಿಲ್ಲ ʻಛೂ ಮಂತರ್ʼ. ಈಗ ಸದ್ದಿಲ್ಲದೆ ಆ ಕಾಯುವಿಗೆ ಬ್ರೇಕ್ ಹಾಕಿದೆ. ಅಂದರೆ ʻಛೂ ಮಂತರ್ʼ ಚಿತ್ರ ಒಟಿಟಿಗೆ ಆಗಮಿಸಿದೆ.
ಛೂ ಮಂತರ್ ಸಿನಿಮಾ ಬಗ್ಗೆ..
ಕರ್ವ ಸಿನಿಮಾ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ʻಛೂ ಮಂತರ್ʼ ಚಿತ್ರದಲ್ಲಿ ಶರಣ್ ಜತೆಗೆ ಅದಿತಿ ಪ್ರಭುದೇವ, ಚಿಕ್ಕಣ್ಣ, ಪ್ರಭು ಮುಂಡ್ಕೂರ್, ಮೇಘನಾ ಗಾಂವ್ಕರ್, ರಜನಿ ಭಾರದ್ವಾಜ್, ಗುರುಕಿರಣ್ ನಟಿಸಿದರೆ, ಇನ್ನುಳಿದಂತೆ, ಓಂ ಪ್ರಕಾಶ್ ರಾವ್, ವಿಜಯ್ ಚೆಂಡೂರ್, ಧರ್ಮ, ಶಂಕರ್ ಅಶ್ವಥ್, ಕಿರಣ್ ಸೇರಿ ಇನ್ನೂ ಹಲವು ಕಲಾವಿದರು ಛೂ ಮಂತರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶರಣ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಎರಡು ಕಾಲಘಟ್ಟಗಳಲ್ಲಿ ಬರುವ ಇಬ್ಬರು ಅತೀಂದ್ರಿಯ ಶಕ್ತಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ತಜ್ಞನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅದರಲ್ಲಿ ಡೈನಮೋ ಎಂಬುದೂ ಒಂದು ಪಾತ್ರ. ಇದೊಂದು ಭೂತ ವೈದ್ಯನ ಪಾತ್ರ. ಮೋರ್ಗನ್ ಹೌಸ್ ಎಂಬ ಮನೆಯಲ್ಲಿ ನಡೆಯುತ್ತಿರುವ ಅತೀಂದ್ರಿಯ ಚಟುವಟಿಕೆಗಳನ್ನು ತಡೆಯಲು ಈ ಡೈನಮೋ ಪಾತ್ರ ಪ್ರಯತ್ನಿಸುತ್ತದೆ. ಈ ಪ್ರಯತ್ನದಲ್ಲಿ ಅವನು ವಿಫಲನಾಗುತ್ತಾನೆ. ಅವನ ಮಗ ಗೌತಮ್ (ಶರಣ್) ಕೂಡ ಅದೇ ಕೆಲಸದಲ್ಲಿ ತೊಡಗುತ್ತಾನೆ. ಆ ಮನೆಯಲ್ಲಿ ಗುಪ್ತ ನಿಧಿಗಳಿವೆ ಎಂದು ಅವನು ನಂಬುತ್ತಾನೆ. ನಂತರ ಏನಾಯಿತು ಎಂಬುದೇ ಈ ಸಿನಿಮಾದ ಕಥೆ.
ಛೂ ಮಂತರ್ ಒಟಿಟಿ ಬಿಡುಗಡೆ
ಈ ಹಾರರ್ ಕಾಮಿಡಿ 'ಛೂ ಮಂತರ್' ಸಿನಿಮಾ ಸುದೀರ್ಘ 76 ದಿನಗಳ ಬಳಿಕ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಇಂದಿನಿಂದ (ಮಾರ್ಚ್ 28) ಈ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಮೊದಲು 'ಕರ್ವ' ಎಂಬ ಹಾರರ್ ಡ್ರಾಮಾ ನಿರ್ದೇಶಿಸಿದ ನಿರ್ದೇಶಕ ನವನೀತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತರುಣ್ ಶಿವಪ್ಪ ನಿರ್ಮಿಸಿರುವ ಈ ಚಿತ್ರ ಕಳೆದ ವರ್ಷವೇ ಥಿಯೇಟರ್‌ಗಳಿಗೆ ಬರಬೇಕಿತ್ತು. ಆದರೆ ಸ್ವಲ್ಪ ತಡವಾಗಿ ಈ ವರ್ಷದ ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಯಿತು.
ಅನಪ್ ಕುಟ್ಟುಕರನ್ ಛಾಯಾಗ್ರಹಣ, ಅವಿನಾಶ್ ಬಸುಟ್ಕರ್ ಸಂಗೀತ ಈ ಚಿತ್ರಕ್ಕಿದೆ. ತರುಣ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವಿಭಾಗ