ಸಿನಿ ಸ್ಮೃತಿ ಅಂಕಣ: ಕಿರುತೆರೆಯಿಂದ ಹಿರಿತೆರೆಗೆ ʻಸುನಾಮಿʼ ಎಬ್ಬಿಸಲು ಬಂದವರು, ಗೆಲುವಿಗಿಂತ ಹೆಚ್ಚಾಗಿ ಸೋಲನ್ನೇ ಉಂಡವರು
ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆದು ನಂತರ ಚಿತ್ರರಂಗದಲ್ಲಿ ಹೀರೋ ಆದ ಹಲವು ಪ್ರತಿಭಾವಂತರು ಸಿಗುತ್ತಾರೆ. ಕಿರುತೆರೆಯಲ್ಲಿ ಸಿಕ್ಕ ಜನಪ್ರಿಯತೆಯೇ ಹಿರಿತೆರೆಯಲ್ಲೂ ಅವರಿಗೆ ಸಿಕ್ಕಿದೆ ಎಂದು ಹೇಳುವುದು ಕಷ್ಟ. ಆದರೆ, ರಿಯಾಲಿಟಿ ಶೋಗಳಲ್ಲಿನ ಅವರ ಜನಪ್ರಿಯತೆಯೇ, ಹಿರಿತೆರೆಗೆ ಬರುವುದಕ್ಕೆ ವೇದಿಕೆಯಾಗಿದೆ ಎಂದರೆ ತಪ್ಪಿಲ್ಲ. (ಚೇತನ್ ನಾಡಿಗೇರ್ ಸಿನಿಸ್ಮೃತಿ ಅಂಕಣ)

ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಚಿತ್ರವು ಏಪ್ರಿಲ್ 18ರಂದು ಬಿಡುಗಡೆಯಾಗಿದೆ. ‘ದಿ ಡ್ಯಾನ್ಸಿಂಗ್ ಸ್ಟಾರ್’, ‘ತಕಧಿಮಿತ’, ‘ಇಂಡಿಯನ್’, ‘ಬಿಗ್ ಬಾಸ್’ ಮುಂತಾದ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಕಿಟ್ಟಿ, ಹೀರೋ ಆಗಬೇಕು ಎಂದು 10 ವರ್ಷಗಳ ಹಿಂದೆಯೇ ಕನಸು ಕಂಡಿದ್ದವರು. ಸುಮಾರು ಒಂದು ದಶಕದ ಹಿಂದೆಯೇ ಕಿಟ್ಟಿಯನ್ನು ಹೀರೋ ಮಾಡುವ ಪ್ರಯತ್ನ ಕನ್ನಡದಲ್ಲಾಗಿತ್ತು. ಆದರೆ, ಕಾರಣಾಂತರಗಳಿಂದು ಅದು ಸಾಧ್ಯವಾಗಿರಲಿಲ್ಲ. ಈಗ ‘ಕೋರ’ ಚಿತ್ರದ ಮೂಲಕ ಕಿಟ್ಟಿ ಕನಸು ಕೊನೆಗೂ ನನಸಾಗುತ್ತಿದೆ.
ಬರೀ ಕಿಟ್ಟಿ ಅಷ್ಟೇ ಅಲ್ಲ, ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆದು ನಂತರ ಚಿತ್ರರಂಗದಲ್ಲಿ ಹೀರೋ ಆದ ಹಲವು ಪ್ರತಿಭಾವಂತರು ಸಿಗುತ್ತಾರೆ. ಕಿರುತೆರೆಯಲ್ಲಿ ಸಿಕ್ಕ ಜನಪ್ರಿಯತೆಯೇ ಹಿರಿತೆರೆಯಲ್ಲೂ ಅವರಿಗೆ ಸಿಕ್ಕಿದೆ ಎಂದು ಹೇಳುವುದು ಕಷ್ಟ. ಆದರೆ, ರಿಯಾಲಿಟಿ ಶೋಗಳಲ್ಲಿನ ಅವರ ಜನಪ್ರಿಯತೆಯೇ, ಹಿರಿತೆರೆಗೆ ಬರುವುದಕ್ಕೆ ವೇದಿಕೆಯಾಗಿದೆ ಎಂದರೆ ತಪ್ಪಿಲ್ಲ. ಹೀಗೆ ಹಿರಿತೆರೆಗೆ ರಿಯಾಲಿಟಿ ಶೋಗಳಲ್ಲಿ ಬಂದವರ ಪಟ್ಟಿ ಇಲ್ಲಿದೆ.
ಪ್ರಥಮ್‍ರಿಂದ ಈ ಪಟ್ಟಿ ಶುರು
ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವವರು ಪ್ರಥಮ್. ಚಿತ್ರ ನಿರ್ದೇಶಿಸಬೇಕು, ನಟಿಸಬೇಕು ಎಂದು ಕೆಲವು ವರ್ಷಗಳಿಂದ ಪ್ರಥಮ್ ಓಡಾಡುತ್ತಿದ್ದರೂ, ಅದು ಸಾಧ್ಯವಾಗಿದ್ದು ಅವರು ‘ಬಿಗ್ ಬಾಸ್ - ಸೀಸನ್ 4’ರಲ್ಲಿ ವಿಜೇತರಾದ ಮೇಲೆ. ಈ ಸೀಸನ್‍ನಲ್ಲಿ ಮಾಳವಿಕಾ ಅವಿನಾಶ್, ಮೋಹನ್, ನಿರಂಜನ್ ದೇಶಪಾಂಡೆ ಮುಂತಾದವರನ್ನೆಲ್ಲಾ ಹಿಂದಿಕ್ಕಿದ ಪ್ರಥಮ್, ಕಾರ್ಯಕ್ರಮದಲ್ಲಿ ಗೆದ್ದರು. ಆ ನಂತರ ಅವರು ‘ಎಂ.ಎಲ್.ಎ’ ಚಿತ್ರದಲ್ಲಿ ನಾಯಕನಾದರು. ನಂತರದ ದಿನಗಳಲ್ಲಿ ‘ದೇವ್ರಂಥ ಮನುಷ್ಯ’, ‘ನಟ ಭಯಂಕರ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ‘ನಟ ಭಯಂಕರ’ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ.
‘ಲೈಫ್ ಸೂಪರ್ ಗುರು’ ಎಂದ ಕಿರಣ್ ರಾಜ್
ಕಿರಣ್ ರಾಜ್ ಧಾರಾವಾಹಿಗಳಿಂದ ಜನಪ್ರಿಯರಾದರೂ, ಅವರು ಮೊದಲು ಗುರುತಿಸಿಕೊಂಡಿದ್ದು ‘ಲೈಫ್ ಸೂಪರ್ ಗುರು’ ಎಂಬ ಕಾರ್ಯಕ್ರಮದಲ್ಲಿ. ‘ಡ್ಯಾನ್ಸ್ ಡ್ಯಾನ್ಸ್’ ಎಂಬ ಇನ್ನೊಂದು ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದ್ದರು. ಬರೀ ಕನ್ನಡವಷ್ಟೇ ಅಲ್ಲ, ಹಿಂದಿಯ ‘ಹೀರೋಸ್’ ಮುಂತಾದ ಕಿರುತೆರೆ ಕಾರ್ಯಕ್ರಮಗಳಲ್ಲೂ ಅವರು ನಟಿಸಿದ್ದಾರೆ. ಆ ನಂತರ ಹಿರಿತೆರೆಗೆ ಬಂದ ಕಿರಣ್, ‘ಮಾರ್ಚ್ 22’, ‘ಅಸತೋಮ ಸದ್ಗಮಯ’, ‘ಭರ್ಜರಿ ಗಂಡು’, ‘ಬಡ್ಡೀಸ್’, ‘ರಾನಿ’, ‘ಮೇಘ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ಕಿರಣ್ ರಾಜ್ ಅಭಿನಯದ ಯಾವೊಂದು ಚಿತ್ರವೂ ಗೆದ್ದಿಲ್ಲ ಎಂಬುದು ವಿಚಿತ್ರ.
‘ಕಾಮಿಡಿ ಕಿಲಾಡಿ’ ಶಿವರಾಜ್ ಕೆ.ಆರ್. ಪೇಟೆ
ಶಿವರಾಜ್ ಕೆ.ಆರ್. ಪೇಟೆ, ಜೀ ಕನ್ನಡದಲ್ಲಿ ಪ್ರಸಾರವಾದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಿಂದ ಗುರುತಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ತಮ್ಮ ಕಾಮಿಡಿ ಟೈಮಿಂಗ್‍ನಿಂದ ಗಮನಸೆಳೆದ ಅವರು, ಸದ್ಯಕ್ಕೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಭಗೀರಥ’, ‘ಗಣ’, ‘ರುದ್ರ ಗರುಡ ಪುರಾಣ’ವಲ್ಲದೆ ‘ರೈಡರ್’, ‘ಮದಗಜ’, ‘ಪುರುಸೊತ್ ರಾಮ’, ‘ಬ್ರಹ್ಮಚಾರಿ’ ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇದಲ್ಲದೆ ‘ನಾನು ಮತ್ತು ಗುಂಡ’ ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ.
‘ಕುರಿ ಫಾರಂ’ನಿಂದ ಮನು ಪಯಣ ಆರಂಭ
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಜನಪ್ರಿಯತೆ ಪಡೆದ ಮತ್ತೊಬ್ಬ ನಟರೆಂದರೆ ಅದು ಮಡೆನೂರು ಮನು. ಈಗಾಗಲೇ ‘ಕೇದಾರನಾಥ್ ಕುರಿ ಫಾರಂ’ ಚಿತ್ರದ ಮೂಲಕ ಹೀರೋ ಆಗಿದ್ದಾಗಿದೆ. ಇದಲ್ಲದೆ ಅವರು ‘ಹುಟ್ಟುಹಬ್ಬದ ಶುಭಾಶಯಗಳು’ ಮತ್ತು ‘ಹಳ್ಳಿ ಹೈಕ್ಳು ಪ್ಯಾಟೆ ಲೈಫು’ ಮುಂತಾದ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಎರಡನೆಯ ಚಿತ್ರ ‘ಕುಲದಲ್ಲಿ ಕೀಳ್ಯಾವುದೋ’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರ ಯೋಗರಾಜ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ.
ದುರಂತ ಅಂತ್ಯ ಕಂಡ ‘ಜಂಗಲ್ ಜಾಕಿ’ ರಾಜೇಶ್
‘ಹಳ್ಳಿ ಹುಡುಗ ಪ್ಯಾಟೇಗ್ ಬಂದ’ ಕಾರ್ಯಕ್ರಮದ ಮೂಲಕ ದೊಡ್ಡ ಹೆಸರು ಮಾಡಿದವರು ಹಳ್ಳಿ ಹುಡುಗ ರಾಜೇಶ್. ಆದಿವಾಸಿ ಜನಾಂಗದ ರಾಜೇಶ್, ‘ಹಳ್ಳಿ ಹುಡುಗ ಪ್ಯಾಟೇಗ್ ಬಂದ’ ಕಾರ್ಯಕ್ರಮದಲ್ಲಿ ‘ಜಂಗಲ್ ಜಾಕಿ’ ಎಂದೇ ಜನಪ್ರಿಯವಾದರು. ಆ ನಂತರ ಅದೇ ಹೆಸರಿನಲ್ಲಿ ಚಿತ್ರವೂ ನಿರ್ಮಾಣವಾಯಿತು. ಮಾನಸಿಕ ಸಮಸ್ಯೆಗಳಿಂದ ತೊಳಲಾಡುತ್ತಿದ್ದ ರಾಜೇಶ್, ‘ಲವ್ ಈಸ್ ಪಾಯ್ಸನ್’ ಎಂಬ ಚಿತ್ರದಲ್ಲೂ ನಟಿಸಿದರು. ಆ ಚಿತ್ರ ಬಿಡುಗಡೆ ಆಗುವುದಕ್ಕೆ ಮೊದಲೇ ಮನೆಯ ಎರಡನೆಯ ಮಹಡಿಯಿಂದ ಕೆಳಕ್ಕೆ ಬಿದ್ದು, ನಿಧನರಾದರು. ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬಲ್ಲೆ ಹಾಡಿಯವರಾದ ರಾಜೇಶ್, ಬಹಳ ಬೇಗ ಮಿಂಚಿ ಚಿಕ್ಕ ವಯಸ್ಸಿನಲ್ಲೇ ಕಣ್ಮರೆಯಾದರು.
ಇದಲ್ಲದೆ ‘ಬಿಗ್ ಬಾಸ್’ನಲ್ಲಿ ಗೆದ್ದ ಶಶಿಕುಮಾರ್ ಸೇರಿದಂತೆ ಹಲವರು ಚಿತ್ರಗಳಲ್ಲಿ ಹೀರೋ ಆಗಿದ್ದಾರೆ. ಇನ್ನು, ಸಂಗೀತ ಕಾರ್ಯಕ್ರಮಗಳಲ್ಲಿ ಗಮನಸೆಳೆದ ಸಂಚಿತ್ ಹೆಗ್ಡೆ, ಜಸ್ಕರಣ್ ಸಿಂಗ್ ಮುಂತಾದವರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಗಾಯಕರೆನಿಸಿಕೊಂಡ ಹಲವರಿದ್ದಾರೆ. ಚಂದನ್ ಶೆಟ್ಟಿ ಸಹ ರಿಯಾಲಿಟಿ ಶೋಗಳಲ್ಲಿ ಮಿಂಚಿ ಇದೀಗ ನಟನಾಗಿ ಸಕ್ರಿಯರಾಗಿದ್ದಾರೆ.
ಸಿನಿಸ್ಮೃತಿ ಅಂಕಣ ಬರಹ: ಚೇತನ್ ನಾಡಿಗೇರ್
ವಿಭಾಗ