Yuddhakaanada: ʻಸಿನಿಮಾ ಅನ್ನೋದು ಸರಸ್ವತಿ ಇರುವ ಗ್ಯಾಂಬ್ಲಿಂಗ್, ಗೆದ್ದರೆ ಲಕ್ಷ್ಮೀ ತಾನಾಗಿಯೇ ಬರುತ್ತಾಳೆʼ; ಅಜೇಯ್ ರಾವ್
ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಮೂಡಿಸಿರುವ ಅಜೇಯ್ ರಾವ್ ನಟನೆಯ ಯುದ್ಧಕಾಂಡ ಸಿನಿಮಾ, ಇದೇ ಏಪ್ರಿಲ್ 18ಕ್ಕೆ ತೆರೆಗೆ ಬರಲಿದೆ. ಭರ್ಜರಿ ಪ್ರಚಾರದಲ್ಲೂ ತೊಡಗಿಸಿಕೊಂಡಿರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಜೇಯ್ ರಾವ್.

Yuddhakaanada Movie: ಅಜೇಯ್ ರಾವ್ ಅಭಿನಯದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್ 18ರಂದು ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಅಜೇಯ್ ಹಲವು ಸಂದರ್ಶನಗಳಲ್ಲಿ ತಾವು ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಚಿತ್ರಕ್ಕಿಂತ, ಚಿತ್ರದಲ್ಲಿನ ಕಳಕಳಿ ಮತ್ತು ಆಶಯಕ್ಕಿಂತ, ಅದೇ ಹೆಚ್ಚು ಸುದ್ದಿಯಾಗುತ್ತಿದೆ. ಪ್ರಚಾರಕ್ಕಾಗಿ ಅಜೇಯ್ ಸಾಲದ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ, ತನಗೆ ಭಯವಿಲ್ಲ, ಗಳಿಸುವ ತಾಕತ್ತಿದೆ ಎಂದು ಅಜೇಯ್ ಹೇಳಿಕೊಂಡಿದ್ದಾರೆ.
ಈ ಕುರಿತು ‘ಯುದ್ಧಕಾಂಡ’ ಪತ್ರಿಕಾಗೋಷ್ಠಿಯ ನಂತರ ಮಾತನಾಡಿರುವ ಅವರು, ‘ನಾನಾಗಿಯೇ ಸಾಲದ ವಿಷಯದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಸಂದರ್ಶನವೊಂದರಲ್ಲಿ ಸಾಲದ ವಿಚಾರ ಬಂತು. ಅದು ಹೆಚ್ಚು ಪ್ರಚಾರವಾಯಿತು. ಆ ನಂತರ ನನ್ನ ಕಾರ್ ಮಾರಾಟದ ವಿಷಯ ದೊಡ್ಡ ಸುದ್ದಿಯಾಯ್ತು. ಇದ್ಯಾವುದೂ ನಾನು ಮಾಡಿಲ್ಲ. ವೈಯಕ್ತಿವಾಗಿ ನನಗೆ ಇವೆಲ್ಲಾ ಇಷ್ಟವಿಲ್ಲ. ಪ್ರಶ್ನೆಗೆ ಉತ್ತರ ಕೊಟ್ಟೆ. ಈ ಮಟ್ಟಕ್ಕೆ ಹೋಗುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ಇಷ್ಟು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಗಳಿಸಿದ್ದೇನೆ. ನನಗೆ ಯಾವುದೇ ಭಯವಿಲ್ಲ. ಹಣ ಸಣ್ಣ ವಿಷಯ. ನಾನು ಗತಿ ಇಲ್ಲದೇ ಬದುಕುತ್ತಿಲ್ಲ. ನಾನೊಬ್ಬ ಪ್ಯಾಶನೇಟ್ ನಟ ಮತ್ತು ನಿರ್ಮಾಪಕ. ನನಗೆ ಗಳಿಸುವ ತಾಕತ್ತಿದೆ. ಕುಟುಂಬಕ್ಕೆ ರಿಸ್ಕ್ ತಂದೊಡ್ಡಿ ಚಿತ್ರ ಮಾಡುತ್ತಿಲ್ಲ’ ಎಂದಿದ್ದಾರೆ.
ಚಿತ್ರದ ಬಜೆಟ್ ಕುರಿತು ಮಾತನಾಡಿರುವ ಅವರು, ‘ನಾನು ಈ ಚಿತ್ರಕ್ಕೆ ಯಾವುದೇ ಲೆಕ್ಕ ಹಾಕಿಲ್ಲ. ಲೆಕ್ಕ ಹಾಕಿ ಸಿನಿಮಾ ಮಾಡೋದು ಕಷ್ಟ. ‘ಕೃಷ್ಣ ಲೀಲಾ’ ಚಿತ್ರಕ್ಕೂ ನಾನು ನಿರ್ಧಿಷ್ಟವಾಗಿ ಬಜೆಟ್ ಇಟ್ಟುಕೊಂಡಿರಲಿಲ್ಲ. ಆ ಚಿತ್ರಕ್ಕೆ ಒಂಬತ್ತು ವರ್ಷಗಳ ಹಿಂದೆ ನಾಲ್ಕು ಮುಕ್ಕಾಲು ಕೋಟಿ ಆಗಿತ್ತು. ಚಿತ್ರ ನೋಡಿದರೆ ಒಂದು ಕೋಟಿ ಆಗಿರಬಹುದು ಅನ್ನಿಸಬಹುದು. ಆದರೆ, ಒಂದು ಚಿತ್ರ ಮಾಡುವ ಪ್ರಕ್ರಿಯೆ ಹೀಗೆಯೇ ಇರುತ್ತದೆ ಎಂದು ಹೇಳುವುದು ಕಷ್ಟ. ಒಂದು ಚಿತ್ರ ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಎಷ್ಟು ಜನ ಕೆಲಸ ಮಾಡಿದ್ದಾರೆ ಎನ್ನುವುದು ಮುಖ್ಯ ಆಗುತ್ತದೆ.
ʻಸಿನಿಮಾ ಅನ್ನೋದು ಸರಸ್ವತಿ ಇರುವ ಗ್ಯಾಂಬ್ಲಿಂಗ್ʼ
"ನಾವು ಕೃಷ್ಣ ಲೀಲಾ ಚಿತ್ರಕ್ಕೆ ಸುಮಾರು 63 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೆವು. ‘ಯುದ್ಧಕಾಂಡ’ ಚಿತ್ರಕ್ಕೆ 90 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಅದು ಸ್ಕ್ರೀನ್ ಮೇಲೆ ಕಾಣಿಸದಿರಬಹುದು. ಆದರೆ, ನಾವು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ನಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಿದ್ದೇವೆ. ಸಿನಿಮಾ ಎನ್ನುವುದು ಸರಸ್ವತಿ ಇರುವ ಗ್ಯಾಂಬ್ಲಿಂಗ್. ಸರಸ್ವತಿ ಗೆದ್ದರೆ ಲಕ್ಷ್ಮೀ ತಾನಾಗಿಯೇ ಬರುತ್ತಾಳೆ. ಇನ್ನು, ಈ ಚಿತ್ರದ ರಿಟರ್ನ್ಸ್ ಬಗ್ಗೆ ನನಗೆ ಯಾವುದೇ ಭಯವಿಲ್ಲ. ನಾನೇನು ನರ್ವಸ್ ಆಗಿಲ್ಲ. ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ’ ಎನ್ನುತ್ತಾರೆ.
ʻಭಿಕ್ಷೆ ಬೇಡುವುದಕ್ಕೆ ನಾನು ರೆಡಿ ಇಲ್ಲ..ʼ
ಇನ್ನು, ‘ಯುದ್ಧಕಾಂಡ’ ಚಿತ್ರದಿಂದ ಅಜೇಯ್ ಎಷ್ಟು ಸೇಫ್ ಆಗಿದ್ದಾರೆ ಎಂಬ ಪ್ರಶ್ನೆಗೆ, ‘ಮೊದಲೇ ಸ್ಯಾಟಿಲೈಟ್ ಮತ್ತು ಡಿಜಿಟಲ್ ಆಫರ್‌ಗಳು ಬಂದಿದ್ದವು. ಆದರೆ, ಅವೆಲ್ಲವೂ ನನ್ನ ಹಿಂದಿನ ಚಿತ್ರಗಳ ಲೆಕ್ಕಾಚಾರ ನೋಡಿಕೊಂಡು ಬಂದಂತಹ ಆಫರ್‌ಗಳು. ನನಗೆ ಈ ಚಿತ್ರ ಒಂದು ದಾಖಲೆ ಆಗಬೇಕು ಎಂಬ ಆಸೆ ಇದೆ. ಅವರು ಹೇಳಿದ ರೇಟಿಗೆ ನಾನು ಕೊಟ್ಟರೆ ಅದು ದಾಖಲೆಯಾಗುವುದಿಲ್ಲ. ಹಿಂದಿನ ದಾಖಲೆಗಳನ್ನು ಮುರಿಯಬೇಕು ಎಂದು ನಾನು ಯಾರಿಗೂ ಹಕ್ಕುಗಳನ್ನು ಮಾರಾಟ ಮಾಡಿಲ್ಲ. ಅದಾದ ಮೇಲೆ ಇತ್ತೀಚಿಗೆ ಯಾರು ಹಕ್ಕುಗಳನ್ನು ಕೊಳ್ಳುವ ಕುರಿತು ಮಾತಾಡಿಲ್ಲ. ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡುವುದಕ್ಕೆ ರೆಡಿ ಇಲ್ಲ. ಅವರೇ ಬಂದು ಒಳ್ಳೆಯ ಆಫರ್ ಕೊಟ್ಟರೆ ಆಗ ಖಂಡಿತ ಮಾಡೋಣ’ ಎನ್ನುತ್ತಾರೆ ಅಜೇಯ್.
ನನಗೂ ಒಬ್ಬ ಮಗಳಿದ್ದಾಳೆ..
ಈ ಚಿತ್ರವನ್ನು ನಿರ್ಮಿಸುವುದಕ್ಕೆ ಕಾರಣ ಮಗಳು ಎನ್ನುವ ಅವರು, ‘ನಮ್ಮನೆಯಲ್ಲಿ ಹೆಣ್ಮಕ್ಕಳು ಜಾಸ್ತಿ. ಅದರಲ್ಲೂ ನನಗೊಬ್ಬ ಮಗಳಿದ್ದಾರೆ. ಹೆಣ್ಮಕ್ಕಳಿಗೆ ಶೋಷಣೆ ಆದರೆ ಮುಂದೇನು? ಯಾವ ರೀತಿ ಹೋರಾಟ ಮಾಡಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ A crime is a crime. ಮೊದಲು ನಾವು ಕ್ರೈಮ್ ತಡೆಯಬೇಕು. ಬರೀ ನ್ಯಾಯವೊಂದೇ ಅಲ್ಲ. ಕ್ರೈಮ್ ಆಗುವುದಕ್ಕೆ ಈ ಸಮಾಜ ಯಾಕೆ ಬಿಡುತ್ತಿದೆ. ಭಯ ಕಡಿಮೆಯಾಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅನ್ಯಾಯವಾದವರಿಗೆ ರಕ್ಷಣೆ ಮತ್ತು ನ್ಯಾಯ ಸಿಗಬೇಕು. ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು, ಕ್ರೈಮ್ ಆಗದಿರುವ ರೀತಿ ಸಮಾಜದಲ್ಲಿ ನಿರ್ಮಾಣವಾಗಬೇಕು ಎಂಬುದು ಚಿತ್ರದ ಆಶಯ’ ಎನ್ನುತ್ತಾರೆ.
ಸರಿ, ಈ ಚಿತ್ರದ ನಂತರ ಮುಂದೇನು? ‘ಯುದ್ಧಕಾಂಡ’ ನಂತರ ಇನ್ನೂ ಎರಡು ಚಿತ್ರಗಳು ಬಿಡುಗಡೆ ಆಗುವುದಕ್ಕೆ ರೆಡಿ ಇದೆ. ಒಂದು ಚಿತ್ರದ ಮೊದಲ ಕಾಪಿ ಬಂದಾಗಿದೆ. ಇನ್ನೊಂದು ಶೇಕಡ 90ರಷ್ಟು ಶೂಟಿಂಗ್ ಮುಗಿದಿದೆ. ಇದಲ್ಲದೆ ಸದ್ಯದಲ್ಲಿ ಇನ್ನೊಂದು ಚಿತ್ರದ ಮಹೂರ್ತ ಆಗಲಿದೆ’ ಎನ್ನುತ್ತಾರೆ ಅಜೇಯ್.
ವರದಿ: ಚೇತನ್ ನಾಡಿಗೇರ್
