ಡಿವೋರ್ಸ್ ಲಾಯರ್ ‘ವಧು’ ಮದುವೆ ಕಥೆಗೆ ಇವರೇ ವರ; ವಧು ಹೊಸ ಧಾರಾವಾಹಿಯ ನಾಯಕ ಯಾರು? ಪಾತ್ರವರ್ಗದ ಪ್ರೋಮೋ ರಿವೀಲ್
Vadhu Serial Cast and Crew: ಕಲರ್ಸ್ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಪ್ರಸಾರ ಆರಂಭಿಸಲಿರುವ ವಧು ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಸೀರಿಯಲ್ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ. ಬಿಗ್ ಬಾಸ್ ಮುಗೀತಿದ್ದಂತೆ ಈ ಸೀರಿಯಲ್ ಪ್ರಸಾರವಾಗುವ ಸಾಧ್ಯತೆ ಇದೆ.
Colors Kannada Vadhu Serial: ಕಲರ್ಸ್ ಕನ್ನಡದಲ್ಲಿ ಇನ್ನೇನು ಮುಂದಿನ ಮೂರು ವಾರಗಳಲ್ಲಿ ಬಿಗ್ ಬಾಸ್ ಮುಕ್ತಾಯವಾಗಲಿದೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿಯುತ್ತಿದ್ದಂತೆ, ಹೊಸ ಸೀರಿಯಲ್ ವಧು ಪ್ರಸಾರ ಆರಂಭಿಸುವ ಸಾಧ್ಯತೆ ಇದೆ. ಈಗಾಗಲೇ ಮೊದಲ ಪ್ರೋಮೋ ಮೂಲಕ ನಾಯಕಿಯನ್ನು ಪರಿಚಯಿಸಿದ್ದ ಕಲರ್ಸ್ ಕನ್ನಡ, ಕಥೆ ಏನು, ನಾಯಕಿ ಯಾರು ಎಂಬಿತ್ಯಾದಿ ವಿವರ ನೀಡಿತ್ತು. ಇದೀಗ ಇಂದು (ಜ. 7) ಹೊಸ ಪ್ರೋಮೋ ಮೂಲಕ ಆಗಮಿಸಿ, ವಧು ಸೀರಿಯಲ್‌ನಲ್ಲಿ ಬೇರೆ ಯಾರೆಲ್ಲ ಇರಲಿದ್ದಾರೆ ಎಂಬುದು ರಿವೀಲ್ ಮಾಡಿದೆ.
ಏನಿದೆ ಹೊಸ ಪ್ರೋಮೋದಲ್ಲಿ?
ತುಂಬು ಕುಟುಂಬದಿಂದ ಬಂದ ವಧುಗೆ, ಮನೆಯಲ್ಲಿ ಮದುವೆ ಮಾಡುವ ಮಾತುಕತೆ ನಡೆಯುತ್ತಿದೆ. ವಧು ಹುಡುಗ ಹೇಗಿರಬೇಕು? ಸ್ಮಾರ್ಟ್ ಆಗಿರಬೇಕು, ಒಳ್ಳೆಯ ಕೆಲಸದಲ್ಲಿ ಇರಬೇಕು, ಬಿಜಿನೆಸ್‌ಮನ್ ಆಗಿದ್ದರೂ ಒಳ್ಳೆಯದು ಎಂಬುದು ಮನೆಯವರ ಅಭಿಪ್ರಾಯ. ಆವ್ರು ಹೇಗಾದ್ರೂ ಇರಲಿ, ಮೀಸೆ ಮಾತ್ರ ನಮ್ಮಪ್ಪನ ಥರ ಇರಲಿ ಅನ್ನೋದು ಕಿರಿ ಮಗಳ ಆಸೆ. ಮೀಸೆ ಇಲ್ಲದಿದ್ದರೂ ಪರ್ವಾಗಿಲ್ಲ, ಅಮ್ಮ ಅಂದರೆ ತುಂಬ ಇಷ್ಟ, ಅಂಥ ಹುಡುಗ ಸಿಕ್ಕರೆ, ಹೆಂಡತಿಯನ್ನೂ ತಾಯಿ ಥರ ನೋಡ್ಕೋತಾನೆ ಎಂಬುದು ಅಮ್ಮನ ಪಾತ್ರಧಾರಿ ಸುಧಾ ಬೆಳವಾಡಿ ಮಾತು.
ಅಲ್ಲಿಗೆ ಕಥಾನಾಯಕನ ಜತೆಗೆ ಅದೇ ಹೀರೋನ ಅಮ್ಮನ ಪಾತ್ರವೂ ರಿವೀಲ್ ಆಗುತ್ತೆ. ಅಮ್ಮನ ಚೆನ್ನಾಗಿ ನೋಡಿಕೊಳ್ಳುವ ಹುಡುಗ ಹೆಂಡ್ತಿಯನ್ನೂ ಚೆನ್ನಾಗಿ ನೋಡ್ಕೋತಾನೆ ಅನ್ನೋದು ವಧು ತಾಯಿಯ ನಂಬಿಕೆ. ಅಷ್ಟೊತ್ತಿಗೆ ಈ ಸುಂದರ ಕಥೆಗೆ ವಿಲನ್ ಸಹ ಬೇಕಲ್ಲವೇ. ಹೀರೋನ ಹೆಂಡತಿಯೇ ವಧು ಸೀರಿಯಲ್‌ಗೆ ವಿಲನ್. ಇವರಿಬ್ಬರ ಡಿವೋರ್ಸ್ ಕೇಸ್ ವಧು ಮನೆ ಬಾಗಿಲಿಗೆ ಬರುತ್ತದೆ. ಹೀಗೆ ಒಂದು ಸಣ್ಣ ಟ್ವಿಸ್ಟ್ ಮೂಲಕವೇ ಪ್ರೋಮೋ ಕಾಣಿಸಿದೆ. ಹಾಗಾದರೆ, ಈ ಪ್ರೋಮೋದಲ್ಲಿ ಯಾರೆಲ್ಲ ನಟಿಸಿದ್ದಾರೆ. ಇವರ ಈ ಹಿಂದಿನ ಸೀರಿಯಲ್, ಸಿನಿಮಾಗಳ ವಿವರ ಇಲ್ಲಿದೆ.
ಯಾರು ಈ ದುರ್ಗಾಶ್ರೀ?
ವಧು ಸೀರಿಯಲ್‌ನಲ್ಲಿ ಶೀರ್ಷಿಕೆ ಪಾತ್ರ ನಿಭಾಯಿಸುತ್ತಿರುವುದು ದುರ್ಗಾಶ್ರೀ ಎಸ್. ಮೂಲತಃ ಬೆಂಗಳೂರಿನ ಜಕ್ಕೂರಿನವರಾದ ದುರ್ಗಾಶ್ರೀ, ಕನ್ನಡದ ಜತೆಗೆ ಬೇರೆ ಬೇರೆ ಭಾಷೆಯ ಸೀರಿಯಲ್‌ಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೆ ತವರಿನತ್ತ ಮುಖ ಮಾಡಿದ್ದಾರೆ. ಈ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ "ನೇತ್ರಾವತಿ" ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಜೀ ತೆಲುಗಿನಲ್ಲಿ "ವೈಷ್ಣವಿ" ಧಾರಾವಾಹಿಯಲ್ಲಿಯೂ ನಟಿಸಿ, ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ "ಮಧುರಣಗರಿಲೋ" ಸೀರಿಯಲ್‌ನಲ್ಲಿಯೂ ಬಣ್ಣ ಹಚ್ಚಿದ್ದಾರೆ. ಜೆಮಿನಿ ಟಿವಿಯಲ್ಲಿ ಪ್ರಸಾರವಾದ ಅರ್ಧಾಂಗಿ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡ ದುರ್ಗಾಶ್ರೀ, ಈಗ ಕನ್ನಡ ಕಿರುತೆರೆಗೆ ಮರಳಿದ್ದಾರೆ.
ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?
ನಾಯಕನಾಗಿ ಅಭಿಷೇಕ್ ಶ್ರೀಕಾಂತ್ ನಟಿಸುತ್ತಿದ್ದಾರೆ. ಈ ಹಿಂದೆ ಕಿರುತೆರೆ ಜತೆಗೆ ಸಿನಿಮಾಗಳಲ್ಲಿಯೂ ನಟಿಸಿದ ಅನುಭವ ಇವರಿಗಿದೆ. ಲಕ್ಷಣ ಸೀರಿಯಲ್‌ನಲ್ಲಿಯೂ ನಟಿಸಿ ಮನೆ ಮಾತಾಗಿದ್ದರು ಅಭಿಷೇಕ್. ಇದರ ಜತೆಗೆ ಸತ್ಯ ಹರಿಶ್ಚಂದ್ರ, ಪೂರ್ವಾಪರ, ಡಾಲಿ ಧನಂಜಯ್ ಜತೆಗಿನ ಕೋಟಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅದೇ ರೀತಿ ವಧು ಸೀರಿಯಲ್‌ನಲ್ಲಿ ನಾಯಕನ ಹೆಂಡತಿಯಾಗಿ ಸೋನಿ ಮುಲೆವಾ ನಟಿಸಿದ್ದಾರೆ. ಈ ಹಿಂದೆ ಗಟ್ಟಿಮೇಳ , ಮುದ್ದುಮಣಿಗಳು ಧಾರಾವಾಹಿಯಲ್ಲಿಯೂ ಸೋನಿ ನಟಿಸಿದ್ದರು. ಅದೇ ರೀತಿ ಕಥಾನಾಯಕ ತಾಯಿ ಪಾತ್ರದಲ್ಲಿ ವಿನಯಾ ಪ್ರಸಾದ್ ನಟಿಸುತ್ತಿದ್ದಾರೆ. ಟಿ.ಎನ್ ಸೀತಾರಾಮ್ ಮತ್ತೆ ಕೋರ್ಟ್ ಅಂಗಳಕ್ಕೆ ಆಗಮಿಸುತ್ತಿದ್ದಾರೆ. ಅವರಿಗಿಲ್ಲಿ ನ್ಯಾಯವಾದಿಯ ಪಾತ್ರ.
ಪರಮೇಶ್ವರ್ ಗುಂಡ್ಕಲ್ ನಿರ್ದೇಶನ
ಅಂದಹಾಗೆ ವಧು ಸೀರಿಯಲ್ ಅನ್ನು ಈ ಹಿಂದಿನ ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡುತ್ತಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ದಂಪತಿ ವಧು ಸೀರಿಯಲ್‌ಗೆ ಬಂಡವಾಳ ಹೂಡುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್ ಪ್ರಸಾರ ಶುರುವಾಗಲಿದೆ.