Vadhu Serial: 'ವಧು' ಧಾರಾವಾಹಿ ನಾಯಕ ನಟ ಅಭಿಷೇಕ್ ಶ್ರೀಕಾಂತ್ ಸಂದರ್ಶನ; ಇದು ಗಂಡಸರಿಗೂ ಇಷ್ಟವಾಗುವ ಧಾರಾವಾಹಿ ಎಂದ ಸಾರ್ಥಕ್
Vadhu Serial: ‘ವಧು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ, ನಾಯಕ ನಟನಾಗಿ ಅಭಿನಯಿಸುತ್ತಿರುವ ನಟ ಅಭಿಷೇಕ್ ಶ್ರೀಕಾಂತ್ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಸುದ್ದಿ ತಾಣದ ಜತೆಗೆ ಮಾತನಾಡಿದ್ದು, ಧಾರಾವಾಹಿ ಮತ್ತು ಅವರ ವೈಯಕ್ತಿಕ ಬದುಕಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹಳೇ ಬೇರು ಹೊಸ ಚಿಗುರು ಎನ್ನುವ ಮಾತಿನಂತೆ ಕಿರುತೆರೆಯ ಹಿರಿಯರು ಮತ್ತು ಹೊಸ ಪ್ರತಿಭೆಗಳ ಅಭಿನಯದೊಂದಿಗೆ ‘ವಧು’ ಧಾರಾವಾಹಿ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಆರಂಭವಾದ ‘ವಧು’ ಧಾರಾವಾಹಿಯ ನಾಯಕ ನಟ ಅಭಿಷೇಕ್ ಶ್ರೀಕಾಂತ್ (ಸಾರ್ಥಕ್) ಈ ಹಿಂದೆ ಲಕ್ಷಣ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ವಧು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ, ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾಗಳಲ್ಲೂ ಅಭಿನಯಿಸಿದ ಅನುಭವ ಇರುವ ನಟ ಅಭಿಷೇಕ್ ಶ್ರೀಕಾಂತ್ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಸುದ್ದಿ ತಾಣದ ಜತೆಗೆ ಮಾತನಾಡಿದ್ದು, ಧಾರಾವಾಹಿ ಮತ್ತು ಅವರ ವೈಯಕ್ತಿಕ ಬದುಕಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ
ಪ್ರಶ್ನೆ: ವಿಲನ್ ಆಗಿ ಅಭಿನಯಿಸಿದ ನೀವು ಈಗ ನಾಯಕ ನಟನ ಪಾತ್ರದಲ್ಲಿ ಅಭಿನಯಿಸುತ್ತಿದ್ದೀರಾ.. ಈ ಬದಲಾವಣೆ ನಿಮಗೆ ಹೇಗನಿಸುತ್ತಿದೆ?
ಉತ್ತರ: ಹೌದು, ಈ ಹಿಂದೆ ನಾನು ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾಗಳಲ್ಲೂ ನಾನು ವಿಲನ್ ಪಾತ್ರದಲ್ಲೇ ಅಭಿನಯಿಸಿದ್ದೆ. ಆದರೆ, ಈಗ ನಾನು ನಾಯಕ ನಟನಾಗಿ ಅಭಿನಯಿಸುತ್ತಿರುವುದು ನನಗೆ ಸವಾಲು ಎಂದೆನಿಸುತ್ತಿದೆ. ಯಾಕೆಂದರೆ ಇದರಲ್ಲಿ ತುಂಬಾ 'ಅಂಡರ್ ಪ್ಲೇ' ಮಾಡಬೇಕಾಗುತ್ತದೆ. ಎಲ್ಲ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಕ್ಯಾರೆಕ್ಟರ್ ಸಾರ್ಥಕ್‌ನದ್ದು. ಏನೇ ಆದರೂ ಸಮಾಧಾನ, ತಾಳ್ಮೆ, ಶಾಂತಿಯಿಂದ ವರ್ತಿಸುವ ಪಾತ್ರ ಇದು. ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆಸಿಕೊಂಡು ಹೋಗಬೇಕಾದ ಪಾತ್ರ.
ಪ್ರಶ್ನೆ: ನೆಗೆಟಿವ್ ಅಥವಾ ಪಾಸಿಟಿವ್ ಯಾವ ತರದ ಪಾತ್ರಗಳು ನಿಮಗೆ ಇಷ್ಟವಾಗುತ್ತೆ?
ಉತ್ತರ: ನಾನು ಎರಡೂ ರೀತಿಯ ಪಾತ್ರವನ್ನು ತುಂಬಾ ಖುಷಿಯಿಂದ ಮಾಡುತ್ತೇನೆ. ಆದರೆ ನೆಗಟಿವ್ ಪಾತ್ರದಲ್ಲಿ ಅಭಿನಯಿಸುವುದಕ್ಕಿಂತ ಪಾಸಿಟಿವ್ ಪಾತ್ರಗಳು ಹೆಚ್ಚು ಸವಾಲಿನದಾಗಿರುತ್ತದೆ.
ಪ್ರಶ್ನೆ: ವಧು ಧಾರಾವಾಹಿ ಸಂಬಂಧಗಳ ಬಗ್ಗೆ ಇರುವ ಧಾರಾವಾಹಿ. ನಿಮಗೆ ಈ ಮದುವೆ ಮತ್ತು ಡಿವೋರ್ಸ್ ಬಗ್ಗೆ ಯಾವ ರೀತಿ ಅಭಿಪ್ರಾಯ ಇದೆ?
ಉತ್ತರ: ನನಗೆ ಮದುವೆ ಮತ್ತು ಡಿವೋರ್ಸ್ ಎರಡರ ಬಗ್ಗೂ ಗೌರವ ಇದೆ. ಎರಡೂ ಉತ್ತಮ ನಿರ್ಧಾರಗಳೇ. ಎಷ್ಟೋ ಜನ ಇಷ್ಟವಿಲ್ಲದವರ ಜತೆ ಬಾಳುವ ಬದಲು ತಮ್ಮ ಇಷ್ಟದ ಜೀವನಕ್ಕಾಗಿ ಬೇಡಿಕೆ ಇಟ್ಟು ಸ್ವತಂತ್ಯ್ರರಾಗುವುದು ಕೂಡ ಉತ್ತಮ ನಿರ್ಧಾರವೇ ಆಗಿರುತ್ತದೆ. ಇನ್ನು ಮದುವೆ ಜೀವನದಲ್ಲಿ ಖುಷಿತಂದರೆ ಜತೆಯಾಗಿ ಬಾಳುವುದು ಕೂಡ ಉತ್ತಮ ನಿರ್ಧಾರವೇ. ಯಾವುದೂ ತಪ್ಪಲ್ಲ ಎನ್ನುವುದೇ ನನ್ನ ಅಭಿಪ್ರಾಯ
ಪ್ರಶ್ನೆ: ಸ್ಯಾಂಡಲ್‌ವುಡ್‌ನ ಯಾವ ಹೀರೋ ನಿಮಗಿಷ್ಟ?
ಉತ್ತರ: ನನಗೆ ಡಾಲಿ ಧನಂಜಯ್ ಅವರು ಇಷ್ಟ ಆಗ್ತಾರೆ. ಅವರ ನ್ಯಾಚುರಲ್ ಅಭಿನಯ ನನಗೆ ಹಿಡಿಸುತ್ತದೆ.
ಪ್ರಶ್ನೆ: ವಧು ಧಾರಾವಾಹಿಯಲ್ಲಿ ನೀವು ಕನ್ನಡ ಕಿರುತೆರೆಯ ದಿಗ್ಗಜರಾದ ಟಿಎನ್‌ಸೀತಾರಾಮ್ ಹಾಗೂ ಇನ್ನಷ್ಟು ಹಿರಿಯ ಕಲಾವಿದರ ಜತೆಗೆ ಅಭಿನಯಿಸುತ್ತಿದ್ದೀರಿ ಈ ಅನುಭವ ಹೇಗಿದೆ?
ಉತ್ತರ: “ಐಮ್ ಬ್ಲೆಸ್ಡ್” ಅಂತ ನನಗೆ ಅನಿಸುತ್ತದೆ. ನಿಜಕ್ಕೂ ಇದೊಂದು ಒಳ್ಳೆಯ ಅವಕಾಶ. ಎಲ್ಲರ ಸಹಕಾರ ಹಾಗೂ ಅವರ ಮಾರ್ಗದರ್ಶನದಲ್ಲಿ ಕಲಿಯುವ ಅವಕಾಶ ಸಿಕ್ಕಿದೆ. ಎಲ್ಲರೂ ತುಂಬಾ ಕಾಳಜಿ ಮಾಡುತ್ತಾರೆ. ನಾವೆಲ್ಲ ಒಂದೇ ಕುಟುಂಬ ಎಂದೆನಿಸುವಮಟ್ಟಿಗೆ ಎಲ್ಲರೂ ಹೊಂದಿಕೊಂಡಿದ್ದೇವೆ. ಸುಧಾ ಬೆಳವಾಡಿ ಅವರಂತೂ ನನ್ನದೇ ಅಮ್ಮ ಎಂದೆನಿಸುವಷ್ಟು ಕ್ಲೋಸ್ ಆಗಿದ್ದಾರೆ. ಎಲ್ಲರೂ ತುಂಬಾ ಪ್ರೀತಿ ತೋರಿಸುತ್ತಾರೆ. ದಿಲೀಪ್ ರಾಜ್, ವಿದ್ಯಾ, ಸುಭಾಷ್, ಪರಮೇಶ್ವರ್ ಗುಂಡ್ಕಲ್, ಟಿಎನ್ ಸೀತಾರಾಮ್, ವಿನಯ ಪ್ರಸಾದ್ ಹೀಗೆ ಸಾಕಷ್ಟು ಜನ ಇದರಲ್ಲೇ ಪಳಗಿದವರಿದ್ದಾರೆ. ಅವೆಲ್ಲರ ಜತೆ ಕೆಲಸ ಮಾಡಲು ಸಿಕ್ಕ ಅವಕಾಶದ ಬಗ್ಗೆ ಹೆಮ್ಮೆ ಇದೆ.
ಪ್ರಶ್ನೆ: ನಿಮ್ಮ ನೆಚ್ಚಿನ ಹವ್ಯಾಸ ಏನು?
ಉತ್ತರ: ನನಗೆ ವೈಲ್ಡ್‌ಲೈಫ್ ಬಗ್ಗೆ ತುಂಬಾ ಆಸಕ್ತಿದೆ. ಸಮಯ ಸಿಕ್ಕಾಗೆಲ್ಲ ನಾನು ಬಂಡಿಪುರಕ್ಕೆ ಹೋಗುತ್ತಾ ಇರುತ್ತೇನೆ. ಪ್ರಾಣಿ, ಕಾಡು ಇವೆಲ್ಲ ಇಷ್ಟ ಆಗುತ್ತವೆ. ಪೇಟಿಂಗ್ ಕೂಡ ನನ್ನಿಷ್ಟದ ಹವ್ಯಾಸ. ನಾನು ಸಮಯ ಸಿಕ್ಕಾಗ ಪೇಟಿಂಗ್ ಮಾಡುತ್ತೇನೆ. ವ್ಯಕ್ತಿ ಚಿತ್ರಗಳನ್ನೂ ನಾನು ಬಿಡಿಸುತ್ತೇನೆ.
ಪ್ರಶ್ನೆ: ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ, ಎರಡರಲ್ಲೂ ಅಭಿನಯಿಸಿದ ಅನುಭವ ನಿಮಗಿದೆ. ನಿಮ್ಮ ಪ್ರಕಾರ ಯಾವುದು ಕಷ್ಟ?
ಉತ್ತರ: ಕಷ್ಟ ಎಂದು ಯಾವುದೂ ಅನಿಸೋದಿಲ್ಲ. ಆದರೆ ಧಾರಾವಾಹಿಯಲ್ಲಿ ಸವಾಲುಗಳು ಹೆಚ್ಚಿರುತ್ತದೆ. ಸಿನಿಮಾದಲ್ಲಿ ನಮಗೆ ಅಭಿನಯಿಸಲು ಅಥವಾ ಸಂಭಾಷಣೆಯನ್ನು ಅರ್ಥ ಮಾಡಿಕೊಂಡು ಓದಲು ತುಂಬಾ ಸಮಯ ಇರುತ್ತದೆ. ಆದರೆ ಧಾರಾವಾಹಿಯಲ್ಲಿ ಹಾಗಾಗೋದಿಲ್ಲ. ಅವರು ಸೀನ್ ಪೇಪರ್ ಕೊಟ್ಟ ತಕ್ಷಣ ನಾವು ಎಲ್ಲವನ್ನೂ ಓದಿಕೊಂದು ಅಭಿನಯಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಸಿದ್ಧತೆಗೆ ಸಮಯಾವಕಾಶ ಧಾರಾವಾಹಿಯಲ್ಲಿ ಕಡಿಮೆ ಇರುತ್ತದೆ. ಧಾರಾವಾಹಿ ಒಮ್ಮೆ ಮಾಡಿ, ಇನ್ನೊಮ್ಮೆ ಮುಗಿದು ಹೋಗುವಂತದ್ದಲ್ಲ ನಿರಂತರತೆ ಬೇಕು. ಹಾಗೆ ತುಲನೆ ಮಾಡಿ ನೋಡಲೇಬೇಕೆಂದರೆ ಧಾರಾವಾಹಿ ಸ್ವಲ್ಪ ಕಷ್ಟ.
ಪ್ರಶ್ನೆ: ಈ ಧಾರಾವಾಹಿ ಕುರಿತು ವೀಕ್ಷಕರ ಬಳಿ ಹಂಚಿಕೊಳ್ಳಬೇಕುಎಂದೆನಿಸುವ ವಿಚಾರ ಇದ್ದಲ್ಲಿ ತಿಳಿಸಿ
ಉತ್ತರ: ಖಂಡಿತ ಸಾಕಷ್ಟು ವಿಚಾರ ಇದೆ. ವಿಕ್ಷಕರು ನಮ್ಮ ಧಾರಾವಾಹಿಯನ್ನು ಹಲವು ಕಾರಣಕ್ಕೆ ನೋಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ಯಾಕೆಂದರೆ ಇದು ಹೆಂಗಸರಿಗೆ ಮಾತ್ರ ಕನೆಕ್ಟ್ ಆಗುವ ಧಾರಾವಾಹಿಯಲ್ಲ. ಇದರಲ್ಲಿ ಗಂಡಸರ ಕಷ್ಟ ಇದೆ, ನೋವಿದೆ, ಗಂಡಸರಿಗೆ ಆಗುವ ಸಾಂಸಾರಿಕ ಕಷ್ಟ ಏನು ಎಂಬುದನ್ನು ಅರ್ಥ ಮಾಡಿಸುವ ಪ್ರಯತ್ನವಿದೆ. ಅದರ ನಡುವೆಯೇ ಕೆಲವು ಸಾಂಧರ್ಭಿಕ ಕಾಮಿಡಿಗಳು ನಿಮ್ಮನ್ನು ರಂಜಿಸಲಿದೆ. ಹಾಗಾಗಿ ಹೆಂಗಸರು ಮಾತ್ರವಲ್ಲ, ಗಂಡಸರೂ ಇಷ್ಟಪಡುವ ಧಾರಾವಾಹಿ ಇದಾಗಲಿದೆ. ಎಲ್ಲರೂ ನೋಡಿ ಹರಸಿ.
ಸಂದರ್ಶನ: ಸುಮಾ ಕಂಚೀಪಾಲ್
