ಅಹಂಕಾರ ಎಂದಿಗೂ ಒಳ್ಳೆಯದಲ್ಲ, ಸದ್ಗುಣ ಬೆಳೆಸಿಕೊಂಡ್ರೆ ಒಳ್ಳೆಯದೇ ಆಗತ್ತೆ: ರಾಮಾಚಾರಿ ಧಾರಾವಾಹಿ ನಟಿ ಶಾರದಾ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ಅಹಂಕಾರ ಎಂದಿಗೂ ಒಳ್ಳೆಯದಲ್ಲ, ಸದ್ಗುಣ ಬೆಳೆಸಿಕೊಂಡ್ರೆ ಒಳ್ಳೆಯದೇ ಆಗತ್ತೆ: ರಾಮಾಚಾರಿ ಧಾರಾವಾಹಿ ನಟಿ ಶಾರದಾ ಸಂದರ್ಶನ

ಅಹಂಕಾರ ಎಂದಿಗೂ ಒಳ್ಳೆಯದಲ್ಲ, ಸದ್ಗುಣ ಬೆಳೆಸಿಕೊಂಡ್ರೆ ಒಳ್ಳೆಯದೇ ಆಗತ್ತೆ: ರಾಮಾಚಾರಿ ಧಾರಾವಾಹಿ ನಟಿ ಶಾರದಾ ಸಂದರ್ಶನ

ಸಂದರ್ಶನ ಪದ್ಮಶ್ರೀ ಭಟ್: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಗೌರಿಶಂಕರ, ರಾಮಾಚಾರಿ ಧಾರಾವಾಹಿಗಳಲ್ಲಿ ಅಜ್ಜಿ ಪಾತ್ರ ಮಾಡ್ತಿರುವ ನಟಿ ಶಾರದಾ ಇದೀಗ ಮಾತಿಗೆ ಸಿಕ್ಕಿದ್ದಾರೆ. ಬರೀ ನಟನೆ ಮಾತ್ರವಲ್ಲದೆ, ಸೀರಿಯಲ್‌ಗಳ ಕಥೆಗಳು ಮತ್ತು ಪ್ರಸ್ತುತ ಧಾರಾವಾಹಿಗಳ ಬಗ್ಗೆ ಮಾತನಾಡಿದ್ದಾರೆ.

ರಾಮಾಚಾರಿ ಧಾರಾವಾಹಿ ನಟಿ ಶಾರದಾ ಸಂದರ್ಶನ
ರಾಮಾಚಾರಿ ಧಾರಾವಾಹಿ ನಟಿ ಶಾರದಾ ಸಂದರ್ಶನ

Actress Sharada Interview: ಧಾರಾವಾಹಿ ಇರಲೀ, ಸಿನಿಮಾವೇ ಇರಲಿ ಎಲ್ಲ ಪಾತ್ರಗಳು ಮುಖ್ಯವೇ. ಎಲ್ಲ‌ ಪಾತ್ರಗಳಿಂದ ಒಂದು ಕಥೆ ಪೂರ್ಣವಾಗುತ್ತದೆ. ಸದ್ಯ ಕನ್ನಡದ ಧಾರಾವಾಹಿಗಳಲ್ಲಿ ಅಜ್ಜಿ ಪಾತ್ರ ಮಾಡ್ತಿರುವ ನಟಿ ಶಾರದಾ ಸದ್ಯ ರಾಮಾಚಾರಿ, ಗೌರಿಶಂಕರ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಶಾರದಾ ಅವರು ಈಗಾಗಲೇ ಎಪ್ಪತ್ತಕ್ಕೂ ಹೆಚ್ಚು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ತಲೆಮಾರಿನಿಂದ ಕಲಾಸೇವೆಯನ್ನು ಮಾಡಿಕೊಂಡು ಬರುತ್ತಿರುವ ಶಾರದಾ ಅವರ ಕುಟುಂಬ ನಟನೆಯನ್ನು ನೆಚ್ಚಿಕೊಂಡಿದೆ. ಈಗ ಶಾರದಾ ಅವರು ಸದ್ಯದ ಧಾರಾವಾಹಿಗಳ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ.

ಪ್ರ: ರಾಮಾಚಾರಿ ಸೀರಿಯಲ್‌ ಬಗ್ಗೆ ಏನೆಲ್ಲ ಹೇಳಬಹುದು?

ಉ: ರಾಮಾಚಾರಿ ಧಾರಾವಾಹಿ ಶುರು ಆಗಿ ಎರಡು ವರ್ಷ ಆಗ್ತ ಬಂತು. ನಾನು ಚಾರು ಅಜ್ಜಿ ಪಾತ್ರ ಮಾಡ್ತಿದ್ದೀನಿ. ಗುರುದತ್‌ ಅವರು ನನ್ನ ಪುತ್ರ ಆಗಿ, ಝಾನ್ಸಿ ಸುಬ್ಬಯ್ಯ ಅವರು ಸೊಸೆ ಮಾನ್ಯತಾ ಆಗಿ, ಮೊಮ್ಮಗಳು ಚಾರುಲತಾ ಆಗಿ ಮೌನ ಗುಡ್ಡೇಮನೆ ಅವರು ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ನಟಿಸುತ್ತಲಿರೋದು ಖುಷಿ ಕೊಟ್ಟಿದೆ.

ಪ್ರ: ಗೌರಿಶಂಕರ ಧಾರಾವಾಹಿ ಬಗ್ಗೆ ಹೇಳಿ..

ಉ: ಗೌರಿಶಂಕರ ಧಾರಾವಾಹಿಯಲ್ಲಿಯೂ ನಾನು ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಆ ಧಾರಾವಾಹಿಯಲ್ಲಿ ದಿವ್ಯಾ, ಯಶವಂತ್‌, ಭಾನುಪ್ರಕಾಶ್‌, ಸ್ಪಂದನಾ ಪ್ರಸಾದ್‌, ಮೋಹನ್‌ ಮುಂತಾದವರು ನಟಿಸುತ್ತಿದ್ದಾರೆ. ಅಲ್ಲಿ ರಂಗಭೂಮಿಯವರೇ ತುಂಬಿದ್ದಾರೆ. ರಂಗಭೂಮಿ ಅಂದ್ರೆ ಅಲ್ಲಿ ನಟನೆಯ ಗಟ್ಟಿತನ ಇರುತ್ತದೆ. ಅದಂತೂ ತುಂಬ ಖುಷಿ ಕೊಡುತ್ತದೆ. ಒಟ್ಟಿನಲ್ಲಿ ಬೇರೆ ಬೇರೆ ರೀತಿಯ ಕಥೆಗಳಲ್ಲಿ ಕಾಣಿಸಿಕೊಳ್ತಿರೋದು ಖುಷಿ ಕೊಟ್ಟಿದೆ. 

ಪ್ರ: ರಾಮಾಚಾರಿ ಕಥೆ ಬಗ್ಗೆ ಏನು ಹೇಳ್ತೀರಾ?

ಉ: ದುಡ್ಡೇ ಮುಖ್ಯ, ದುಡ್ಡಿಲ್ಲ ಅಂದ್ರೆ ಏನೂ ಇಲ್ಲ ಅಂತ ಮಾನ್ಯತಾ ತನ್ನ ಮಗಳು ಚಾರುಲತಾಳನ್ನು ಬೆಳೆಸಿರುತ್ತಾನೆ. ತಾಯಿ ಹೇಳಿದಂತೆ ಮಗಳು ಕೇಳಿಕೊಂಡು ಬಂದಿರುತ್ತಾಳೆ. ಆನಂತರ ಚಾರು ಲೈಫ್‌ಗೆ ರಾಮಾಚಾರಿ ಎಂಟ್ರಿ ಆಗತ್ತೆ. ರಾಮಾಚಾರಿ ತುಂಬ ಸಂಸ್ಕಾರವಂತ ಹುಡುಗ, ಅವನ ಮನೆಯಲ್ಲಿ ಸಂಸ್ಕೃತಿ-ಸಂಪ್ರದಾಯ ಎಲ್ಲವೂ ಇದೆ. ರಾಮಾಚಾರಿಯನ್ನು ಮದುವೆಯಾದ ಬಳಿಕ ಚಾರು ತನ್ನ ತಪ್ಪು ತಿದ್ದುಕೊಂಡು ಬದಲಾಗುತ್ತಾಳೆ. ಈಗ ಅವಳು ಬದಲಾಗಿದ್ದು, ಸಂಸ್ಕೃತಿ, ಸಂಪ್ರದಾಯವನ್ನು ಕೂಡ ರೂಢಿಸಿಕೊಂಡಿದ್ದಾಳೆ. ಈ ರೀತಿ ಕಥೆಗಳು ಧಾರಾವಾಹಿಯಲ್ಲಿ ಬರ್ತಿರೋದು ಖುಷಿ ಕೊಟ್ಟಿದೆ.

ಪ್ರ: ರಾಮಾಚಾರಿ ಧಾರಾವಾಹಿಯ ಚಾರು-ರಾಮಾಚಾರಿ ಕ್ಯಾರೆಕ್ಟರ್‌ ಸಮಾಜದಲ್ಲಿವೆ.

ಉ: ಹೌದು, ಒಂದೇ ಕೈಯಲ್ಲಿರುವ ಎಲ್ಲ ಬೆರಳುಗಳು ಒಂದೇ ಆಗಿರಲ್ಲ, ಬೇರೆ ಬೇರೆ ಆಗಿರುತ್ತವೆ. ಹಾಗೆಯೇ ಇದು ಕೂಡ. ಇಂದು ಸೀರಿಯಲ್‌ನಲ್ಲಿ ಚಾರುಲತಾ ಬದಲಾಗಿರೋದು ಖುಷಿ ಕೊಟ್ಟಿದೆ. ಅಹಂಕಾರ ಒಳ್ಳೆಯದಲ್ಲ, ನಿಮ್ಮನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡು, ಸದ್ಗುಣ ಇಟ್ಟುಕೊಂಡು ಬೆಳೆಯಬೇಕು, ಆಗ ಮುಂದೆ ಒಳ್ಳೆಯದಾಗುತ್ತದೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. ಅದನ್ನೇ ನಂಬಿಕೊಂಡು ಸಾಗಬೇಕು.

ಪ್ರ: ನಿಮ್ಮ ಹಿನ್ನಲೆ ಏನು?

ಉ: ನಾನು ಬಳ್ಳಾರಿ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದೆ. ಸುಖೀ ಕುಟುಂಬದಲ್ಲಿ ಬೆಳೆದ ನಾನು ಕ್ರೀಡೆಯಲ್ಲಿ ಮುಂದಿದ್ದೆ. ಕ್ರೀಡೆ ಅಂದ್ರೆ ನನಗೆ ತುಂಬ ಇಷ್ಟ. ಆ ಕಾಲದಲ್ಲಿಯೇ ರಾಜ್ಯಮಟ್ಟದ ಕ್ರೀಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದೆ. ಕಾರಣಾಂತರಗಳಿಂದ ಪಿಯುಸಿಯನ್ನು ಅರ್ಧಕ್ಕೆ ಬಿಟ್ಟೆ. ಆ ನಂತರ ಮಹಿಳಾ ಸಂಘಗಳನ್ನು ಕಟ್ಟಿಕೊಂಡು ಒಂದಷ್ಟು ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದೆ. ನನ್ನ ತಾಯಿ ನಾಟಕಗಳಲ್ಲಿ ನಟಿಸುತ್ತಿದ್ದರು. ಇನ್ನು ಜಗದೀಶ್‌ ಎನ್ನುವವರನ್ನು ಮದುವೆಯಾದ ಮೇಲೆ ನಾನು ಅನಿರೀಕ್ಷಿತವಾಗಿ ನಟಿಸುವ ಹಾಗೆ ಆಯ್ತು. ನಮ್ಮದೇ ನಾಟಕ ಕಂಪೆನಿ ಕೂಡ ಇತ್ತು, ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಕಲಾವಿದರ ಕುಟುಂಬ ಅಂತ ಹೇಳಲು ತುಂಬ ಖುಷಿ ಆಗ್ತಿದೆ.

(ಸಂದರ್ಶನ: ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌)

Whats_app_banner