Majaa Talkies: ಮತ್ತೆ ಬರ್ತಿದೆ 'ಮಜಾ ಟಾಕೀಸ್' ಸೃಜನ್ ಲೋಕೇಶ್ ಜತೆಯಾದ ಯೋಗರಾಜ್ ಭಟ್; ನಗೆಗಡಲಲ್ಲಿ ತೇಲಿಸಲಿದೆ ಕಲಾವಿದರ ದಂಡು
Majaa Talkies: ಕಲರ್‍ಸ್ ಕನ್ನಡ ವಾಹಿನಿಯಲ್ಲಿ ಮತ್ತೆ ‘ಮಜಾ ಟಾಕೀಸ್’ ಆರಂಭವಾಗಲಿದೆ. ಸೃಜನ್ ಲೋಕೇಶ್ ಹೊಸ ತಂಡದೊಂದಿದೆ ವೀಕ್ಷಕರ ಮುಂದೆ ಬರಲಿದ್ದಾರೆ. ಯೋಗರಾಜ್ ಭಟ್ ಕೂಡ ಈ ಬಾರಿ ಜತೆಯಾಗಲಿದ್ದಾರೆ.

ಕನ್ನಡಿಗರನ್ನು ನಕ್ಕು ನಗಿಸುವ ಶೋ ಮಜಾ ಟಾಕೀಸ್ ಮತ್ತೆ ಕಲರ್‍ಸ್ ಕನ್ನಡದಲ್ಲಿ ಆರಂಭವಾಗಲಿದೆ. ಈಗಾಗಲೇ ಕಲರ್‍ಸ್ ಕನ್ನಡ ವಾಹಿನಿ ಅಧಿಕೃತವಾಗಿ ಪ್ರೋಮೋ ಹಂಚಿಕೊಂಡು ಪ್ರಸಾರವಾಗಲಿರುವ ದಿನಾಂಕವನ್ನು ತಿಳಿಸಿದೆ. ಪ್ರೋಮೋ ಕೂಡ ಮಜವಾಗಿ ಮೂಡಿ ಬಂದಿದ್ದು ನಾವೂ ಕೂಡ ‘ಮಜಾ ಟಾಕೀಸ್’ ವೀಕ್ಷಿಸಲು ಕಾದಿದ್ದೇವೆ ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ಇನ್ನೊಂದಷ್ಟು ಕಲಾವಿದರ ದಂಡು ಈ ಬಾರಿ ಮಜಾ ಟಾಕೀಸ್‌ನಲ್ಲಿ ವೀಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.
ಸೃಜನ್ ಲೋಕೇಶ್ ಹಾಗೂ ಯೋಗರಾಜ್ ಭಟ್ ಜತೆಯಾದರೆ ಈ ಶೋ ಇನ್ನಷ್ಟು ಮಜ ನೀಡಲಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ. ಪ್ರೋಮೋದಲ್ಲಿ ಯೋಗರಾಜ್ ಭಟ್ ಕೂಡ ಕಾಣಿಸಿಕೊಂಡಿದ್ದು ಕುತೂಹಲ ಇನ್ನಷ್ಟು ಹೆಚ್ಚಿದೆ. ಫೆಬ್ರವರಿ 1ರಿಂದ ಈ ಶೋ ಆರಂಭವಾಗಲಿದೆ. ಇನ್ನು ಈ ಸಂದರ್ಭದಲ್ಲಿ ಸಾಕಷ್ಟು ಜನ ಅಪರ್ಣಾ ಅವರನ್ನು ನೆನಪಿಸಿಕೊಂಡಿದ್ದಾರೆ.
ಮಜಾ ಟಾಕೀಸ್ ಕಲಾವಿದರು
ತುಕಾಲಿ ಸಂತೋಷ್
ಪಿ.ಕೆ
ಶಿವು
ವಿನೋದ್ ಗೊಬ್ರಗಾಲ
ಪ್ರಿಯಾಂಕ
ವಿಶ್ವಾಸ್
ಕುರಿ ಪ್ರತಾಪ್
ಯೋಗರಾಜ್ ಭಟ್
ಸೃಜನ್ ಲೋಕೇಶ್
ಹಾಗೂ ಇನ್ನಷ್ಟು ಕಲಾವಿದರ ದಂಡು ಈ ಬಾರಿ ಮಜಾ ಟಾಕೀಸ್‌ನಲ್ಲಿ ಎಲ್ಲರನ್ನೂ ರಂಜಿಸಲಿದೆ. ಕನ್ನಡ ಕಿರುತೆರೆಯಲ್ಲಿ ಒಂದೊಮ್ಮೆ ಖ್ಯಾತಿಯ ಉತ್ತುಂಗಕ್ಕೇರಿದ್ದ ಕಾಮಿಡಿ ಶೋ ಮಜಾ ಟಾಕೀಸ್. ಇದೀಗ ಇನ್ನೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು ಇನ್ನಷ್ಟು ಮಜ ನೀಡಲಿದೆ.
ಕಲರ್‍ಸ್ ಕನ್ನಡ ವಾಹಿನಿಗೆ ಮರಳಿದ ಕುರಿ ಪ್ರತಾಪ್
ಕಾಮಿಡಿ ಕಿಲಾಡಿಗಳು ಎಂಬ ಜೀ ಕನ್ನಡ ವಾಹಿನಿಯ ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕುರಿ ಪ್ರತಾಪ್ ಈಗ ಮತ್ತೆ ಕಲರ್‍ಸ್ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಮಜ ಟಾಕೀಸ್ ನಡೆಯುವಾಗಲೂ ಸೃಜನ್ ಜತೆ ಕಾಮಿಡಿ ಮಾಡುತ್ತಿದ್ದ ಕುರಿ ಪ್ರತಾಪ್ ಈಗ ಮತ್ತೆ ಜತೆಯಾಗಿದ್ದಾರೆ.
ಮಜವಾಗಿ ಮೂಡಿಬಂದ ಪ್ರೋಮೋ
ಪ್ರೋಮೋ ಮಜವಾಗಿ ಮೂಡಿ ಬಂದಿದೆ. ಮೊದಲು ಸೃಜನ್ ತಯಾರಾಗುತ್ತಾ ಇರುತ್ತಾರೆ. ಆಗ ಪ್ರಿಯಾಂಕಾ ವಿಲನ್ ರೀತಿಯಲ್ಲಿ ಮಾತಾಡುತ್ತಾ ಇರುವಾಗ, ನೀನು ನಾನು ಹೇಳಿದಂತೆ ಕೇಳು ಎನ್ನುತ್ತಾ ತಮ್ಮ ತಂಡಕ್ಕೆ ಅವಳನ್ನು ಸೇರಿಸಿಕೊಳ್ಳುವ ರೀತಿಯಲ್ಲಿ ಮಾತಾಡುತ್ತಾರೆ. ಇನ್ನು ವಾಚ್‌ಮನ್ ಉಡುಪಿನಲ್ಲಿ ತುಕಾಲಿ ಸಂತೋಷ್ ಸೃಜನ್ ಅವರ ಹಿಂದಿರುತ್ತಾರೆ. ನಂತರ ವಾಶಿಂಗ್ ಮಷಿನ್‌ನಲ್ಲಿ ಕುರಿ ಪ್ರತಾಪ್ ಸ್ನಾನ ಮಾಡುತ್ತಿದ್ದರೆ, ಬಾತ್ ಟಬ್‌ನಲ್ಲಿ ವಿಶ್ವಾಸ್ ಕಾಣಿಸಿಕೊಳ್ಳುತ್ತಾರೆ. ಅಲ್ಲೆಲ್ಲ ಕಡೆ ಒಂದಷ್ಟು ಹಾಸ್ಯಮಯವಾದ ಸಂಭಾಷಣೆ ಬರುತ್ತದೆ. ನಂತರ ಪಿಕೆ, ಗೊಬ್ಬರಗಾಲ ಮತ್ತು ಶಿವು ಸೃಜನ್ ಎದುರಾಗಿ ತುಕಾಲಿ ಸಂತೋಷ್ ಅವರನ್ನೇ ಹಾಕಿಕೊಂಡಿದ್ದೀರಾ, ನಾವು ಬೇಡ್ವಾ? ಅಂತಾರೆ.
ನಂತರ ಯೋಗರಾಜ್ ಭಟ್ ಒಂದು ಹಾಳೆಯಲ್ಲಿ ಏನನ್ನೋ ಗೀಚುತ್ತಾ ಇರುತ್ತಾರೆ. ಅವರ ಹಿಂದೆ ನಿಂತ ಸೃಜನ್ “ಯಾರಾದ್ರೂ ತಲೆ ಕೆಟ್ಟವರು ಬೇಕಲ್ವಾ?” ಎಂದು ಪ್ರಶ್ನೆ ಮಾಡುತ್ತಾರೆ. ಆಗ ಅವರ ಜೊತೆ ಇದ್ದವರು “ನಾವೇ ಇದೀವಲ್ಲ” ಎಂದು ಹೇಳುತ್ತಾರೆ. ಆದ್ರೆ ಸೃಜನ್ ಪೂರ್ತಿ ತಲೆ ಕೆಟ್ಟವರೇ ಬೇಕು ಎಂದು ಹೇಳುತ್ತಾರೆ ಯೋಗರಾಜ್ ಭಟ್ ಅವರನ್ನು ತೋರಿಸುತ್ತಾರೆ. ಈ ರೀತಿಯಾದ ಪ್ರೋಮೋ ಬಿಡುಗಡೆಯಾಗಿದೆ.
