Vadhu Serial: ವಧು ಧಾರಾವಾಹಿ ನಾಯಕ ನಟಿ ದುರ್ಗಶ್ರೀ ಸಂದರ್ಶನ; ಡಿವೋರ್ಸ್ ಲಾಯರ್ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ
Vadhu Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ (ಜನವರಿ 27) ಹೊಸ ಧಾರಾವಾಹಿ ‘ವಧು’ ಆರಂಭವಾಗುತ್ತಿದೆ. ಈ ಧಾರಾವಾಹಿಯ ನಾಯಕ ನಟಿ ದುರ್ಗಶ್ರೀ ‘ಹಿಂದೂಸ್ತಾನ್ ಟೈಮ್ಸ್’ ಕನ್ನಡಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

ಹಳೇ ಬೇರು ಹೊಸ ಚಿಗುರು ಎನ್ನುವ ಮಾತಿನಂತೆ ಕಿರುತೆರೆಯ ಹಿರಿಯರು ಮತ್ತು ಹೊಸ ಪ್ರತಿಭೆಗಳ ಅಭಿನಯದೊಂದಿಗೆ ಈ ಧಾರಾವಾಹಿ ಮೂಡಿಬರುತ್ತಿರುವುದು ವಿಶೇಷ. 'ವಧು' ಧಾರಾವಾಹಿಯ ನಾಯಕ ನಟಿ, ವಧು ಪಾತ್ರಧಾರಿ ದುರ್ಗಶ್ರೀ ಅವರು "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಸುದ್ದಿ ತಾಣದ ಜತೆಗೆ ಮಾತನಾಡಿದ್ದು, ಧಾರಾವಾಹಿ ಮತ್ತು ಅವರ ವೈಯಕ್ತಿಕ ಬದುಕಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ (ಜನವರಿ 27) ಹೊಸ ಧಾರಾವಾಹಿ ‘ವಧು’ ಆರಂಭವಾಗುತ್ತಿದೆ.
ಪ್ರಶ್ನೆ: ಈ ಹಿಂದೆ ಧಾರಾವಾಹಿಯಲ್ಲಿ ಅಭಿನಯಿಸಿದ್ದೀರಾ? ಎಷ್ಟು ಧಾರಾವಾಹಿ, ಹೇಗಿತ್ತು ಅವುಗಳಲ್ಲಿ ನಟಿಸಿದ ಅನುಭವ?
ಉತ್ತರ: ನಾನು ಈ ಹಿಂದೆ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನನಗೆ ಭಾಷೆ ಬರುತ್ತಿರಲಿಲ್ಲ. ಆದರೂ ಅಲ್ಲಿ ಎಲ್ಲರೂ ಸಹಾಯ ಮಾಡುತ್ತಿದ್ದರು. 2 ಧಾರಾವಾಹಿಗಳಲ್ಲಿ ನಾನು ಈ ಹಿಂದೆಯೇ ಅಭಿನಯಿಸಿದ್ದೇನೆ. ಅಲ್ಲಿನ ಅನುಭವ ಉತ್ತಮವಾಗಿದೆ.
ಪ್ರಶ್ನೆ: ನಿಮ್ಮ ಬಾಲ್ಯ ಮತ್ತು ಶಿಕ್ಷಣದ ಬಗ್ಗೆ ತಿಳಿಸಿ
ಉತ್ತರ: ಬೆಂಗಳೂರು ನನ್ನ ಹುಟ್ಟೂರು. ಶಿಕ್ಷಣ ಕೂಡ ಇಲ್ಲೇ ಪೂರೈಸಿದೆ. ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡಿದೆ. ಕ್ಲಾಸಿಕಲ್ ಡ್ಯಾನ್ಸ್ (ಶಾಸ್ತ್ರೀಯ ನೃತ್ಯ) ಕೂಡ ಅಭ್ಯಾಸ ಮಾಡಿದ್ದೇನೆ. ನೃತ್ಯ ನನ್ನಿಷ್ಟದ ಹವ್ಯಾಸ.
ಪ್ರಶ್ನೆ: ಬಿಗ್ ಬಾಸ್ ಮನೆಗೆ ನಿಮ್ಮ ತಂಡ ಹೋಗಿತ್ತು, ವೀಕ್ಷಕರಾಗಿ ನಿಮಗೆ ಈ ಬಾರಿ ಯಾರು ಬಿಗ್ ಬಾಸ್ ಗೆಲ್ಲುತ್ತಾರೆ ಎಂದೆನಿಸುತ್ತದೆ?
ಉತ್ತರ: ಹೌದು, ನಾವು ಬಿಗ್ ಬಾಸ್ ಮನೆಗೆ ಹೋಗಿದ್ದೆವು.. ನನ್ನ ಪ್ರಕಾರ ಈ ಬಾರಿ ಹನುಮಂತ ಗೆಲ್ಲಬಹುದು.
ಪ್ರಶ್ನೆ: ವಧು ಪಾತ್ರಕ್ಕೂ ದುರ್ಗಶ್ರೀಗೂ ಸಾಮ್ಯತೆ ಇದೆಯೇ?
ಉತ್ತರ: ಕೆಲವು ಸಾಮ್ಯತೆ ಇದೆ. ಇನ್ನು ಕೆಲವು ಸಾಮ್ಯತೆಗಳಿಲ್ಲ. ವಧು ತುಂಬಾ ಸಮಾಧಾನ ಹಾಗೂ ತಾಳ್ಮೆಯಿಂದ ಇರುತ್ತಾಳೆ. ಆದರೆ ನನಗೆ ಕೋಪ ಬೇಗ ಬರುತ್ತದೆ. ವಧುಗೆ ಯಾರೊಂದಿಗೂ ಮಿಂಗಲ್ ಆಗೋದು, ಔಟಿಂಗ್ ಹೋಗೋದು ಇದೆಲ್ಲ ಇಷ್ಟ ಇಲ್ಲ, ಆದ್ರೆ ನನಗೆ ಅದೆಲ್ಲವೂ ಇಷ್ಟ ಆಗುತ್ತದೆ. ಇನ್ನು ವಧುಗೆ ಕೆಲವು ಆಸೆ ಕನಸುಗಳಿದೆ.. ಅಂತಹ ಆಸೆ, ಕನಸುಗಳು ನನಗೂ ಇದೆ.
ಪ್ರಶ್ನೆ: ಕಲರ್ಸ್ ಕನ್ನಡದ ಬೇರೆ ಧಾರಾವಾಹಿಗಳ ಯಾವ ನಾಯಕ ನಟಿ ನಿಮಗೆ ಆದರ್ಶ ಎಂದೆನಿಸುತ್ತಾರೆ?
ಉತ್ತರ: ನನಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯಾ (ಸುಷ್ಮಾ) ಅವರು ಇಷ್ಟ ಆಗುತ್ತಾರೆ. ಅದನ್ನು ಹೊರತುಪಡಿಸಿ, ರಾಮಾಚಾರಿ ಧಾರಾವಾಹಿಯ ಚಾರು (ಮೌನ ಗುಡ್ಡೇಮನೆ) ಇಷ್ಟ ಆಗ್ತಾರೆ.
ಪ್ರಶ್ನೆ: ಹೀರೋ ಜತೆ ನಿಮ್ಮ ಬಾಂಡಿಂಗ್ ಹೇಗಿದೆ?
ಉತ್ತರ: ಅವರು ತುಂಬಾ ಜಾಲಿಯಾಗಿರ್ತಾರೆ. ಯಾವುದೇ ಧಾರಾವಾಹಿ ಮಾಡಬೇಕು ಅಥವಾ ಯಾವುದೇ ಸಿನಿಮಾ ಶೂಟ್ ಮಾಡಬೇಕು ಎಂದರೂ ನಾಯಕ ಹಾಗೂ ನಾಯಕಿ ನಡುವಿನ ಹೊಂದಾಣಿಕೆ ಚೆನ್ನಾಗಿರಬೇಕು. ನಮ್ಮಿಬ್ಬರಲ್ಲಿ ಆ ಹೊಂದಾಣಿಕೆ ಇದೆ. ನಮ್ಮ ಶೂಟಿಂಗ್ ಸೆಟ್‌ನಲ್ಲೂ ನಾವೆಲ್ಲರೂ ತುಂಬಾ ಜಾಲಿಯಾಗಿರ್ತಿವಿ. ಅಷ್ಟು ನಗಾಡ್ತಾ ಎಂಜಾಯ್ ಮಾಡ್ತೀವಿ. ಎಲ್ಲರೂ ಒಟ್ಟಿಗೆ ಊಟ ಮಾಡ್ತೀವಿ. ಒಂದು ಮನೆ ಹೇಗಿರತ್ತೋ ನಾವು ಹಾಗೇ ಇದೀವಿ.
ಪ್ರಶ್ನೆ: ಹಿರಿಯ ಕಲಾವಿದರ ಜತೆ ನೀವು ಅಭಿನಯಿಸುತ್ತಾ ಇದ್ದೀರಿ, ಒಂದು ಅನುಭವಿ ತಂಡ ನಿಮ್ಮ ಜತೆ ಇದೆ ಈ ಹೊಸ ಅನುಭವ ಹೇಗಿದೆ?
ಉತ್ತರ: ಹೌದು, ಇದು ತುಂಬಾ ಅನುಭವಿಗಳ ತಂಡ, ಇಲ್ಲಿ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ನಾನು ಭಾವಿಸುತ್ತೇನೆ. ಎಲ್ಲರನ್ನೂ ಗೌರವಿಸುತ್ತೇನೆ. ಸುಧಾ ಬೆಳವಾಡಿ, ವಿನಯಪ್ರಸಾದ್, ಟಿಎನ್ ಸೀತಾರಾಮ್ ಸರ್, ಪರಂ ಸರ್, ವಿದ್ಯಾ ಮೇಡಂ ಎಲ್ಲರೂ ನನಗೆ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ. ಇದರಲ್ಲಿ ಒಂದು ಹೊಸ ಕಲಿಕೆ ಇದೆ. ನಾನು ಟಿಎನ್ ಸೀತಾರಾಮ್ ಅವರ ಜತೆ ಅಭಿನಯಿಸುವಾಗ ತುಂಬಾ ಹೆದರಿದ್ದೆ, ಆದರೆ ಅವರೇ "ನೀನು ಚನಾಗ್ ಮಾಡ್ತಾ ಇದೀಯ ಮುಂದುವರೆಸು ಭಯ ಬೇಡ" ಎನ್ನುತ್ತಾ ಬೆನ್ನುತಟ್ಟಿ ಪ್ರೋತ್ಸಾಹ ನೀಡ್ತಾ ಇದ್ರು.
ಪ್ರಶ್ನೆ: ಇದು ಲಾಯರ್ ಕಥೆ, ನೀವು ಯಾವುದಾದರೂ ಲಾ ಬುಕ್ ಓದಿದ್ದೀರಾ? ಅಥವಾ ಕೋರ್ಟ್‌ಗೆ ಹೋಗಿದ್ದೀರಾ?
ಉತ್ತರ: ಇಲ್ಲ ನಾನು ಶೂಟಿಂಗ್‌ನಲ್ಲೇ ಕೋರ್ಟ್ ನೋಡಿದ್ದು, ವಿಶೇಷ ಪುಸ್ತಕ ಓದಿಲ್ಲ. ಆದ್ರೆ ಲಾಯರ್‍ಗಳ ಬಗ್ಗೆ ತುಂಬಾ ಸರ್ಚ್ ಮಾಡಿದ್ದೀನಿ. ನಮ್ಮ ನಿರ್ದೇಶಕರಾದ ಸುಭಾಷ್ ಸರ್ ನನಗೆ ಈ ಬಗ್ಗೆ ಗೈಡ್ ಮಾಡ್ತಾ ಇರ್ತಾರೆ. ಯಾವುದೇ ಕ್ಷಣ ಯಾವ ಅನುಮಾನ ಬಂದರೂ.. ನಾನು ಆ ಬಗ್ಗೆ ಗೂಗಲ್ ಮಾಡಿ ತಿಳಿದುಕೊಳ್ತೀನಿ. ಅಥವಾ ಗೊತ್ತಿದ್ದವರ ಹತ್ತಿರ ಕೇಳಿ ನನ್ನ ಅನುಮಾನಕ್ಕೆ ಉತ್ತರ ಕಂಡುಕೊಳ್ತೀನಿ.
ಪ್ರಶ್ನೆ: ಈ ಧಾರಾವಾಹಿ ಮೂಲಕ ನೀವು ವೀಕ್ಷಕರಿಗೆ ಏನು ಹೇಳಬಯಸುತ್ತೀರಿ?
ಉತ್ತರ: ಇದು ಡಿವೋರ್ಸ್ ಲಾಯರ್ ಕಥೆ ಹೌದು, ಆದರೆ ವಧು ಎಲ್ಲರಿಗೂ ಡಿವೋರ್ಸ್ ಕೊಡಿಸುವ ಉದ್ದೇಶ ಹೊಂದಿರೋದಿಲ್ಲ. ಅವಳಿಗೆ ಎಲ್ಲರನ್ನೂ ಒಂದು ಮಾಡುವ ಮನಸ್ಥಿತಿ ಕೂಡ ಇದೆ. ಈ ಧಾರಾವಾಹಿಯಲ್ಲಿ ಉತ್ತಮ ಸಂದೇಶ ಇದೆ. ಇದು ಪ್ರತಿಯೊಂದು ಮನೆಯ ಹೆಣ್ಣು ಮಕ್ಕಳ ಕಥೆ. ನಿಮ್ಮದೇ ಅಕ್ಕ, ತಂಗಿ, ಅಮ್ಮನ ರೀತಿ ಕನೆಕ್ಟಿವಿಟಿ ಬೆಳೆಯುವಂತ ಧಾರಾವಾಹಿ. ಟಿಎನ್ ಸೀತಾರಾಮ್ ಅವರನ್ನು ನೋಡಲು ನೀವು ಈ ಧಾರಾವಾಹಿಯನ್ನು ನೋಡಬೇಕು. ಪರಮೇಶ್ವರ್ ಗುಂಡ್ಕಲ್ ಅವರು ಬರೆದ ಅದ್ಭುತ ಕಥೆ ಇದೆ.. ವಧು ಧಾರಾವಾಹಿ ನೋಡಿ ಆಶೀವರ್ದಿಸಿ.
ಸಂದರ್ಶನ: ಸುಮಾ ಕಂಚೀಪಾಲ್
