ಗಿಚ್ಚಿ ಗಿಲಿಗಿಲಿ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆ ಆರೋಪ; ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆ ಆರೋಪ ಎದುರಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವಾರ್ಡ್ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಅವರು ಆಡಿದ ಒಂದು ಮಾತಿನಿಂದಾಗಿ ಇಷ್ಟೆಲ್ಲ ಆಗಿದೆ. ಹಾಗಾದ್ರೆ ಅವರು ಹೇಳಿದ್ದೇನು ನೋಡಿ.
ಗಿಚ್ಚಿ ಗಿಲಿಗಿಲಿ ಸೀಸನ್ ಮೂರರ ವಿನ್ನರ್ ಹುಲಿ ಕಾರ್ತಿಕ್ ಅವರು ತಮ್ಮ ಮಾತಿನಿಂದ ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಾತಿ ನಿಂದನೆ ಮಾಡಿದ ಆರೋಪದ ಮೇಲೆ FIR ದಾಖಲು ಮಾಡಲಾಗಿದೆ. ಇವರು ತಮ್ಮ ನಟನೆ ಹಾಗೂ ಕಾಮಿಡಿಯ ಮೂಲಕ ಜನರ ಮನ ಗೆದ್ದಿದ್ದರು. ಗಿಚ್ಚಿ ಗಿಲಿಗಿಲಿ ಮಾತ್ರವಲ್ಲದೆ ಸಿನಿಮಾಗಳಲ್ಲೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಅವರು ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತು ಭೋವಿ ಜನಾಂಗಕ್ಕೆ ನೋವುಂಟು ಮಾಡಿದೆ ಎಂದು ಅವರ ಮೇಲೆ ಜಾತಿ ನಿಂದನೆ ಆರೋಪ ಬಂದಿದೆ.
ಅವಾರ್ಡ್ ಕಾರ್ಯಕ್ರಮದಲ್ಲಿ ಅವಾಂತರ
ಅವಾರ್ಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡುವ ಸಂದರ್ಭದಲ್ಲಿ, “ಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ತರ ಇದೀಯಾ” ಎಂಬ ವಾಕ್ಯವನ್ನು ಬಳಕೆ ಮಾಡಿದ್ದಾರೆ. ಅವರು ಆಡಿದ ಈ ಮಾತಿನಿಂದ ಕೆಲ ಜನರಿಗೆ ಬೇಸರ ಉಂಟಾಗಿದೆ. ಏಕೆಂದರೆ ಒಂದು ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅವರು ಈ ಮಾತನಾಡಿದ್ದಾರೆ ಎಂದು ದೂರುದಾರರು ದೂರು ದಾಖಲಿಸಿದ್ದಾರೆ.
ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಕಾರ್ತಿಕ್
ಹುಲಿ ಕಾರ್ತಿಕ್ ಅವರು ತಮಗೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಈ ಮಾತನಾಡಿದ್ದಾರೆ. ಬಹಳ ಜನ ಇರುವ ಮತ್ತು ಹಲವು ಜನ ವೀಕ್ಷಿಸುತ್ತಿರುವ ಒಂದು ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿರುವುದು ತಪ್ಪು ಎಂದು ಹೇಳಲಾಗಿದೆ. ನಿರ್ದಿಷ್ಟ ಸಮುದಾಯದವರನ್ನು ಸಂಬೋಧನೆ ಮಾಡಿ ಈ ಮಾತನ್ನು ಹುಲಿ ಕಾರ್ತಿಕ್ ಆಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಜಾತಿ ನಿಂದನೆ (atrocity case) ಮಾಡಿದ್ದಾರೆ ಎಂಬ ಕಾರಣಕ್ಕಾಗಿ ದೂರು ದಾಖಲು ಮಾಡಲಾಗಿದೆ. ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್ ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕನ ವಿರುದ್ದ ದೂರು ನೀಡಲಾಗಿದೆ. ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್ಗೆ ನೋಟಿಸ್ ನೀಡಲಾಗಿದೆ.
ಗಮನಿಸಿ: ಈ ಬರಹದಲ್ಲಿರುವ ಜಾತಿಗೆ ಸಂಬಂಧಿಸಿದ ಪದವನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಿಬ್ಬಂದಿ ಬಳಸಿಲ್ಲ. ಸುದ್ದಿಗೆ ಸಂಬಂಧಿಸಿದ ವ್ಯಕ್ತಿ ಬಳಸಿದ ಪದವನ್ನು ಓದುಗರ ಗಮನಕ್ಕೆ ತರುವ ಉದ್ದೇಶದಿಂದ ಯಥಾವತ್ತಾಗಿ ಪ್ರಕಟಿಸಲಾಗಿದೆ.
ವಿಭಾಗ