ʻಜಾಸ್ತಿ ನಗೋರು ಜಾಸ್ತಿ ಬದುಕ್ತಾರಂತೆʼ ಅನ್ನೋ ಮಾತು ಅಪ್ಪು ನಿಧನದ ಬಳಿಕ ಮತ್ತೊಮ್ಮೆ ಸುಳ್ಳಾಯ್ತು Rakesh Poojary Death
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಸಾವಿಗೆ ಆಪ್ತ ಬಳಗವಷ್ಟೇ ಅಲ್ಲದೆ, ಇಡೀ ಕರುನಾಡು ಭಾವುಕವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಪೋಸ್ಟ್‌ಗಳ ಮೂಲಕ ನೆಚ್ಚಿನ ಕಲಾವಿದನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿಜೇತನಾಗಿ ಹೊರಹೊಮ್ಮುವ ಮೂಲಕ ಕರುನಾಡಿನ ಜನರ ಪ್ರೀತಿ ಸಂಪಾದಿಸಿದ್ದರು ನಟ ರಾಕೇಶ್ ಪೂಜಾರಿ. ಆದರೆ, ಇದೀಗ ಇದೇ ರಾಕೇಶ್ ಕೇವಲ 34ನೇ ವಯಸ್ಸಿನಲ್ಲಿ ಇಹಲೋಕ ಲೋಕ ತ್ಯಜಿಸಿದ್ದಾರೆ. ಅವರ ಆಪ್ತ ಬಳಗಕ್ಕೆ ದೊಡ್ಡ ನಷ್ಟದ ಹೊರೆಯನ್ನು ಹೊರೆಸಿ ಅಗಲಿದ್ದಾರೆ. ಪಟ ಪಟ ಮಾತು, ಎಲ್ಲೆಂದರಲ್ಲಿ ಹಾಸ್ಯ ಸೃಷ್ಟಿಸುವ, ನಗು ಉಕ್ಕಿಸುವ ಮನಸ್ಥಿತಿ, ತನ್ನವರು ಎಂದ ಕೂಡಲೇ ಒಂದು ಎದೆಗೊರಗುವ ರಾಕೇಶ್ ಅವರ ಪ್ರೀತಿ ಇನ್ನು ನೆನಪು ಮಾತ್ರ. ಇಂಥ ಸ್ನೇಹಿತನನ್ನು, ಕಲಾವಿದನನ್ನು ಕಳೆದುಕೊಂಡ ಅವರ ಆಪ್ತ ಬಳಗ, ರಾಜಕಾರಣಿಗಳು ಸೇರಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ನಟನಿಗೆ ಭಾವುಕ ಬರಹದ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ʻಜಾಸ್ತಿ ನಗೋರು ಜಾಸ್ತಿ ಬದುಕ್ತಾರಂತೆʼ ಅನ್ನೋ ಮಾತು ಅಪ್ಪು ನಿಧನದ ಬಳಿಕ ಮತ್ತೊಮ್ಮೆ ಸುಳ್ಳಾಯ್ತು ಎಂದೂ ಬರೆದುಕೊಂಡಿದ್ದಾರೆ.
ಹೃದಯಾಘಾತವಾಗೋ ವಯಸ್ಸಾ ಇದು..?
- ಬೆಳ್ಳಂಬೆಳಗ್ಗೆ ಇದೆಂಥಾ ಕೆಟ್ಟ ಸುದ್ದಿ... ರಾಕೇಶ್ ಪೂಜಾರಿ ಇನ್ನಿಲ್ಲ... ಸದಾ ಹಸನ್ಮುಖಿ, ಎಲ್ಲರನ್ನೂ ಅಣ್ಣ, ಅಕ್ಕ ಅಂತ ಮಾತಾಡಿಸ್ತಿದ್ದ ಪ್ರೀತಿಯ ಸಹೋದರ... ಇಷ್ಟು ಚಿಕ್ಕ ವಯಸ್ಸಲ್ಲಿ ಅದೆಂಥಾ ಕ್ರೂರ ಈ ವಿಧಿಯಾಟ... ಹೃದಯಾಘಾತವಾಗೋ ವಯಸ್ಸಾ ಇದು..? ಕನಸುಗಳ ನನಸು ಮಾಡೋ ಜಿದ್ದಿಗೆ ಬಿದ್ದಿದ್ದ ನಿನ್ನ ಈ ಸಾವಿನ ಸುದ್ದಿ ನಮ್ಮನ್ನು ಕಂಗೆಡಿಸಿದೆ ತಮ್ಮ.. ಹೋಗಿ ಬಾ... ಚಿರಶಾಂತಿ ಸಿಗಲಿ. - ಕಿರಿಕ್ ಕೀರ್ತಿ
- ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ನಟ, ಯುವ ಕಲಾವಿದರಾಗಿ ಅತೀ ಕಿರಿಯ ವಯಸ್ಸಿನಲ್ಲಿಯೇ ವಿಶಿಷ್ಟ ಸಾಧನೆ ಮಾಡಿದ್ದ ಶ್ರೀ ರಾಕೇಶ್ ಪೂಜಾರಿ ಯವರ ನಿಧನ ತೀವ್ರ ಅಘಾತ ತಂದಿದೆ. ಕಾಮಿಡಿ ಕಿಲಾಡಿ ಸೀಸನ್ 3 ರ ವಿಜೇತರಾಗಿ, ಜನಮನ್ನಣೆ ಗಳಿಸಿದ್ದ ರಾಕೇಶ್ ಪೂಜಾರಿಯವರ ಅಕಾಲಿಕ ನಿಧನದಿಂದ ಕರಾವಳಿ ಜಿಲ್ಲೆ ಓರ್ವ ಶ್ರೇಷ್ಠ ಕಲಾವಿದರನ್ನು ಕಳೆದುಕೊಂಡಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಅಗಲುವಿಕೆಯ ನೋವು ಭರಿಸುವ ಶಕ್ತಿ ನೀಡಲಿ… - ಸುನೀಲ್ ಕುಮಾರ್, ಕಾರ್ಕಳ ಶಾಸಕ
ಇದನ್ನೂ ಓದಿ: ವಿಧಿಯ ಅಟ್ಟಹಾಸ! ರಾಕೇಶ್ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು?
- ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ನಟ, ಯುವ ಕಲಾವಿದರಾಗಿ ಅತೀ ಕಿರಿಯ ವಯಸ್ಸಿನಲ್ಲಿಯೇ ವಿಶಿಷ್ಟ ಸಾಧನೆ ಮಾಡಿದ್ದ ಶ್ರೀ ರಾಕೇಶ್ ಪೂಜಾರಿ ಹೂಡೆ ಯವರ ಹಠಾತ್ ನಿಧನ ತೀವ್ರ ಅಘಾತ ತಂದಿದೆ. ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಸೀಸನ್ 3 ರ ವಿಜೇತರಾಗಿ, ಉಡುಪಿ ಜಿಲ್ಲೆಗೆ ತಮ್ಮ ಅಭಿನಯ ಸಾಮರ್ಥ್ಯದಿಂದ ಗೌರವ ತಂದಿದ್ದ ರಾಕೇಶ್ ಪೂಜಾರಿಯವರ ಅಕಾಲಿಕ ನಿಧನದಿಂದ ಕರಾವಳಿ ಜಿಲ್ಲೆ ಓರ್ವ ಶ್ರೇಷ್ಠ ಕಲಾವಿದರನ್ನು ಕಳೆದುಕೊಂಡಿದೆ. ನಾಟಕ, ಧಾರಾವಾಹಿ, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ರಾಕೇಶ್ ಪೂಜಾರಿ ಯವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಅಗಲುವಿಕೆಯ ನೋವು ಭರಿಸುವ ಶಕ್ತಿ ನೀಡಲಿ… - ಯಶ್‌ಪಾಲ್ ಆನಂದ್ ಸುವರ್ಣ, ಉಡುಪಿ ಶಾಸಕ
- ರಾಕೇಶ್ ಪೂಜಾರಿ ಮೊನ್ನೆಯಷ್ಟೇ ಫೋನ್ ಮಾಡಿ ಮಾತಾಡಿದ್ರು... ಗೃಹ ಪ್ರವೇಶಕ್ಕೆ ಬರೋಕೆ ಆಗಿಲ್ಲ, ಊರಲ್ಲಿದ್ದೀನಿ, ಮುಂದಿನ ವಾರ ನಿಮ್ಮನೆಗೆ ಬಂದು ಹೋಗ್ತೀನಿ ಅಣ್ಣ ಅಂತ ಒಂದೈದು ನಿಮಿಷ ಖುಷಿಯಿಂದ ಮಾತಾಡಿದ್ರು... ಆದರೆ ಇವತ್ತು ಬೆಳಿಗ್ಗೆಯ ನ್ಯೂಸ್ ಕೇಳಿ ಶಾಕ್ ಆಯ್ತು... RIP Rakesh Jiii. ನಾನು ತುಂಬಾ ಇಷ್ಟಪಡುವ ಕಲಾವಿದರ ಪಟ್ಟಿಯಲ್ಲಿ ರಾಜೇಶ್ ಗೆ ಮೊದಲ ಸ್ಥಾನವಿತ್ತು... ಯಾವಾಗಲೂ ಸರಳವಾಗಿ, ಸಜ್ಜನಿಕೆಯಿಂದ ಬದುಕಿದ ರಾಕೇಶ್ ಯಾಕೆ ಇಷ್ಟು ಬೇಗ ಇಹಲೋಕ ತ್ಯಜಿಸಿದ್ರೋ ಗೊತ್ತಾಗ್ತಾ ಇಲ್ಲ!!! -ಸಂದೀಪ್ ಶೆಟ್ಟಿ ಹೆಗ್ಗದ್ದೆ ಸ್ಟುಡಿಯೋ
- ನಮ್ಮ "ಎಲ್ರ ಕಾಲೆಳೆಯತ್ತೆ ಕಾಲ" ಸಿನಿಮಾದಲ್ಲಿ ಈತನ ಎಂಟ್ರಿಯಾದ ಕೂಡಲೇ ಸಿನಿಮಾದ ದಿಕ್ಕೇ ಬದಲಾಗುತ್ತದೆ.. ಇವತ್ತು ಬೆಳಗ್ಗೆ ಎದ್ದು ನೋಡಿದರೆ ವಾಪಾಸು ಬರಲಾಗದ ದಿಕ್ಕಿಗೆ ರಾಕೇಶ್ ಹೊರಟುಬಿಟ್ಟಿದ್ದಾರೆ... ಛೇ.. ಸಿಕ್ಕಿದ್ದು ಮೂರ್ನಾಲ್ಕು ಸಲವಾದರೂ ಸಿಕ್ಕಾಗೆಲ್ಲ ನಗುತ್ತಲೇ ಸ್ವಾಗತಿಸುತ್ತಿದ್ದ ಮನುಷ್ಯ. 'ಜಾಸ್ತಿ ನಗೋರು ಜಾಸ್ತಿ ಬದುಕ್ತಾರಂತೆ' ಅನ್ನೋ ಮಾತು ಅಪ್ಪು ಸರ್ ನಿಧನದ ಬಳಿಕ ಮತ್ತೊಮ್ಮೆ ಸುಳ್ಳಾಯ್ತು.. -ವಿಶ್ವಜಿತ್ ರಾವ್, ಛಾಯಾಗ್ರಾಹಕ
- 34 ವಯಸ್ಸಿಗೆ ಹೃದಯ ಸುಸ್ತಾಗಿ ನಿಂತು ಹೋಗುತ್ತೆ ಅಂದಾಗ ಅದ್ಯಾವ ರೀತಿಯ ಕಲಬೆರಕೆ ಆಹಾರ ನಾವೆಲ್ಲರೂ ಸೇವಿಸುತ್ತಿದ್ದೇವೆ..!? ರಾಕೇಶ್ ಪೂಜಾರಿ ನನ್ನ ನೆಚ್ಚಿನ ಕಾಮಿಡಿ ನಟರುಗಳಲ್ಲಿ ಪ್ರಮುಖರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತನ್ನದೆ ಆದ ವಿಶಿಷ್ಟ ವಿಭಿನ್ನ ನಟನೆಯಿಂದ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದ ಇವರ ಹೃದಯವೇ ಇಂದು ನಿಂತು ನಮ್ಮನ್ನೆಲ್ಲ ಅಗಲಿರೋದು ಅತೀ ದುಃಖಕರ ವಿಚಾರ.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.. -ಚೇತನ್ ಸೂರ್ಯ
ಕುಳ್ ಮಿಂಡ್ರಿ ಇನ್ನಿಲ್ಲ
- ಬೇಜಾರಾದ ಮನಸ್ಸುಗಳಿಗೆ 'ನಗು' ಎಂಬ ಟಾನಿಕ್ ನೀಡೋದು 'ಕಾಮಿಡಿ ಕಿಲಾಡಿ' ಎಂಬ ಅದ್ಭುತ ನಗುವಿನ ಯುನಿವರ್ಸಿಟಿಯಿಂದ ಮಾತ್ರ ಸಾಧ್ಯ. ಇಂಗ್ಲೀಷ್ ಮೆಡಿಸನ್ ನಿಂದ ಸಾಧ್ಯವೇ ? ಎದೆಯಲ್ಲಿ ಎಷ್ಟೇ ನೋವಿದ್ದರೂ ಸಂಸಾರದ ನೊಗ ಹೊರಲು ಹಾಗೂ ಹೊಟ್ಟೆ ಹಸಿವಿನ ತಳಮಳ ನೀಗಿಸಲು ಊರೂರು ಅಲೆದು ಬದುಕು ಕಟ್ಟಿಕೊಳ್ಳಲು ಅಳುವವರನ್ನೆ ನಗಿಸೋದು ಹಾಸ್ಯ ಎಂಬ ಮೆಡಿಸನ್ ಸಾಧ್ಯ. ರಾಕೇಶ್ ಪೂಜಾರಿ (ಹೃದಯಾಘಾತ) ಸಾವಿನ ಸುದ್ದಿ ಕುಟುಂಬಕ್ಕಾದ ಹಾಗೂ ಹಾಸ್ಯ ಪ್ರಪಂಚಕ್ಕಾದ ದೊಡ್ಡ ನಷ್ಟ... ಚಿಕ್ಕ ವಯಸ್ಸಿನಲ್ಲೂ 'ನಾನಿದ್ದೀನಿ' ಎಂದು ಹಗ್ಗ ಎಸೆವ ಯಮರಾಜನ ಕರ್ತವ್ಯ ಪ್ರಜ್ಞೆ ಜವಾಬ್ದಾರಿಯಾದರೂ ಮಸುಕುಲಕ್ಕೆ ಆಘಾತವೇ ಸರಿ. ಬದಲಾಗು ಮನವೇ, ನೀ ಹೋಗುವ ಮುನ್ನ ಅನ್ನರನ್ನು ಅಣಕಿಸದೇ ಎಲ್ಲರ ಜೊತೆ ಬೆರೆತು ನಗುತ್ತಲೇ ಇರು. ಸಾವಿನ ಡಬ್ಬಿಯಲ್ಲಿರುವ ಮರಣದ ದಿನಾಂಕ ತೋರಿಸದ ಮಾಯಾವಿ ಯಾವ ಕ್ಷಣದಲ್ಲಾದರೂ ಲೆಟರ್ ಹೊತ್ತು ಬರಬಹುದು…- ಕುಮಾರ್
ಇದನ್ನೂ ಓದಿ: ಸಾವಿಗೂ ಮುನ್ನ ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದ್ದ ರಾಕೇಶ್ ಪೂಜಾರಿ, ಮರೆಯಾದ ಕಾಮಿಡಿ ಕಿಲಾಡಿ ಕೊನೆಯ ಪೋಸ್ಟ್ ಇದಾಗಿದೆ
ಸಿಕ್ಕಾಗಲೆಲ್ಲ ನಗಿಸುತ್ತಿದ್ದ
- ಕುಂದಾಪುರದಲ್ಲಿ ಕಾಂತಾರ ಶೂಟಿಂಗ್ ಮುಗಿಸಿ, ಕಾರ್ಕಳದ ಗೆಳೆಯನ ಮೆಹಂದಿಯಲ್ಲಿ ಡ್ಯಾನ್ಸ್ ಮಾಡಿದ ಬಳಿಕ ಲೋ ಬಿಪಿಯಿಂದ ಹೃದಯಾಘಾತ ಸಂಭವಿಸಿ ರಾಕೇಶ್ ಪೂಜಾರಿ ನಮ್ಮನ್ನು ಅಗಲಿದ್ದಾರೆ. ಡ್ರಾಮಾ ಜೂನಿಯರ್ ಸೀಸನ್ 5, ಜೀ ಕುಟುಂಬ ಮೊದಲಾದ ಕಾರ್ಯಕ್ರಮಗಳಲ್ಲಿ ಮಗಳ ಜೊತೆ ಹೋಗುವಾಗ ತುಳುನಾಡಿನ ಕಾಮಿಡಿ ಕಿಲಾಡಿಗಳನ್ನು ಭೇಟಿಯಾಗುವ ಸಂದರ್ಭ ಒದಗುತಿತ್ತು. ಪ್ರವೀಣ್ ಜೈನ್.. ಉಡುಪಿ ಮಲ್ಪೆಯ ರಾಕೇಶ್ ಪೂಜಾರಿ ಇವರ ಕಾಮಿಡಿ ಶೋ ಇದ್ದೆ ಇರುತ್ತಿತ್ತು. ಆಗ ನನಗೂ ಪುರುಸೊತ್ತು ಇರುತ್ತಿತ್ತು ನೋಡಿ ನಕ್ಕು ಖುಷಿ ಪಡುತ್ತಿದ್ದೆ. ರವಿಚಂದ್ರನ್ ಸರ್ ಇವರ ಕಾಲೆಳೆಯುತ್ತಿದ್ದರು. ತಕ್ಷಣ ಕಾಮಿಡಿಯಾಗಿ ಉತ್ತರಿಸುತ್ತಿದ್ದ ರಾಕೇಶ್, ಸಮಯಪ್ರಜ್ಞೆ ಅದ್ಭುತ. ನಾನಂತೂ ಅವರ ದರೋಡೆಕೋರ ಪಾತ್ರ ನೋಡಿ ಬಿದ್ದು ಬಿದ್ದು ನಕ್ಕಿದ್ದೆ. ಸಿಕ್ಕಿದಾಗ ನಕ್ಕು ಎಂಚ ಉಲ್ಲರ್ ಇತ್ತೆ ಓಲು ಶೋ ಎಂದು ಹೃದಯ ಕುಶಲೊಪರಿ ಮಾಡುತ್ತಿದ್ದೆವು. ಕಾಂತರಾ ಸಿನಿಮಾಗೋಸ್ಕರ (ಹಳೆಯ ಕಾಲದ ) ಗಡ್ಡ ಜಾಸ್ತಿ ಬಿಟ್ಟಿದ್ದರು ಅನ್ಸುತ್ತೆ. ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಪ್ರಸಿದ್ದಿಗೆ ಬಂದ ಪ್ರತಿಭೆ. ರಾಕೇಶ್ ಪೂಜಾರಿ. ಸೀಸನ್ 3ರ ವಿನ್ನರ್. ತುಳು ಕನ್ನಡ ಸಿನಿಮಾ ಗಳಲ್ಲಿ ಅವಕಾಶಗಳು ಬಂದಿದ್ದವು. . ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್ 1 ಚಿತ್ರದಲ್ಲೂ ರಾಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರು.. ಮೇ 11ರಂದು ಕಾಂತಾರ ಚಾಪ್ಟರ್ 1 ಮುಗಿಸಿಕೊಂಡು ರಾತ್ರಿ ಮಿಯ್ಯಾರಿನ ತನ್ನ ಗೆಳೆಯನ ಮೆಹೆಂದಿಯಲ್ಲಿ ಭಾಗಿಯಾಗಿ ಖುಷಿಯಾಗಿ ಡ್ಯಾನ್ಸ್ ಕೂಡಾ ಮಾಡಿ ಸಂಭ್ರಮಿಸಿದ್ದರು. ವಿಧಿ ಆಟ.. - ಜೀತೇಂದ್ರ ಕುಂದೇಶ್ವರ, ಪತ್ರಕರ್ತರು