ನಗುಮೊಗದ ಹಾಸ್ಯಗಾರ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿದ ಅಂತ್ಯಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  ನಗುಮೊಗದ ಹಾಸ್ಯಗಾರ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿದ ಅಂತ್ಯಕ್ರಿಯೆ

ನಗುಮೊಗದ ಹಾಸ್ಯಗಾರ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿದ ಅಂತ್ಯಕ್ರಿಯೆ

ಕರಾವಳಿಯ ಹಿಂದೂ ಸಂಪ್ರದಾಯದ ಪ್ರಕಾರ, ಸಾವಿರಾರು ಜನರ ಸಮ್ಮುಖದಲ್ಲಿ ರಾಕೇಶ್‌ ಪೂಜಾರಿ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ನಗುಮೊಗದ ಹಾಸ್ಯಗಾರ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿದ ಅಂತ್ಯಕ್ರಿಯೆ
ನಗುಮೊಗದ ಹಾಸ್ಯಗಾರ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿದ ಅಂತ್ಯಕ್ರಿಯೆ

ಕನ್ನಡ ಕಿರುತೆರೆಯ ರಿಯಾಲಿಟಿ ಶೋ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕವೇ ಮನೆ ಮಾತಾಗಿದ್ದ ನಟ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ. ಕೇವಲ 33ನೇ ವಯಸ್ಸಿಗೆ ಹೃದಯಾಘಾತ ಅನ್ನೋ ಹೆಮ್ಮಾರಿ, ಒಂದು ಮನೆಯನ್ನೇ ಮುರಿದಿದೆ. ಅಪ್ಪ ತೀರಿಹೋದ ಬಳಿಕ ಅಮ್ಮ ಮತ್ತು ತಂಗಿಗೆ ಆಸರೆಯಾಗಿದ್ದ, ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ರಾಕೇಶ್‌ ಪೂಜಾರಿ, ಇದೀಗ ವಿಧಿಯ ಆಟಕ್ಕೆ ಉಸಿರು ನಿಲ್ಲಿಸಿದ್ದಾರೆ. ಈ ಹಾಸ್ಯ ಕಲಾವಿದನ ಅಂತ್ಯಕ್ರಿಯೆ ಉಡುಪಿಯ ಕಾರ್ಕಳದ ಬಳಿಯ ನಿಟ್ಟೆ ಗ್ರಾಮದಲ್ಲಿ ಸಾವಿರಾರು ಮಂದಿಯ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಅಂತಿಮಯಾತ್ರೆ ಬಳಿಕ, ಪಾರ್ಥೀವ ಶರೀರವನ್ನು ಚಿತಾಗಾರಕ್ಕೆ ತಂದು, ಉರುವಲುಗಳ ಮೇಲೆ ಮಲಗಿಸಿ, ಕೆಂಪು ಮತ್ತು ಬಿಳಿ ಬಟ್ಟೆಯನ್ನು ಹೊದಿಸಿ, ಬಾಯಲ್ಲಿ ನೀರು ಪ್ರೋಕ್ಷಣೆ ಮಾಡಲಾಯಿತು. ಕರಾವಳಿಯ ಹಿಂದೂ ಸಂಪ್ರದಾಯದ ಪ್ರಕಾರ, ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ರಾಕೇಶ್‌ ಪೂಜಾರಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೇ 11ರ ರಾತ್ರಿ ಮದುವೆ ನಿಮಿತ್ತ ಕಾರ್ಕಳದಲ್ಲಿದ್ದ ರಾಕೇಶ್‌, ಆ ಕಾರ್ಯಕ್ರಮದಲ್ಲಿನ ಹಾಡಿಗೆ ಡಾನ್ಸ್‌ ಮಾಡಿದ್ದರು. ಅಚ್ಚರಿಯ ವಿಚಾರ ಏನೆಂದರೆ ಡಾನ್ಸ್‌ಗೂ ಮುನ್ನ ಎದೆ ಹಿಡಿದುಕೊಂಡು ನಿಂತ ಭಂಗಿಯಲ್ಲಿಯೂ ಕಂಡಿದ್ದರು. ಹೀಗಿರುವಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆ ಕ್ಷಣಕ್ಕೆ ಬಿಪಿ ಲೋ ಆಗಿದೆ, ಪಲ್ಸ್‌ ರೇಟ್‌ ಕಡಿಮೆ ಆಗಿದೆ ಎಂದೆಲ್ಲ ಮಾಹಿತಿ ಹೊರಬಿತ್ತಾದರೂ, ಕೊನೆಗೆ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ರಾಕೇಶ್‌ಗೆ ಹೃದಯಾಘಾತವಾದ ವಿಚಾರ ಹೊರಬಿತ್ತು. ಬೆಳಗಿನ ಜಾವ 3.30ರ ಸುಮಾರಿಗೆ ರಾಕೇಶ್‌ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಹಬ್ಬಿತು.

ಆಸ್ಪತ್ರೆಯಲ್ಲಿನ ಪ್ರಕ್ರಿಯೆ ಮುಗಿದ ಬಳಿ ಪಾರ್ಥಿವ ಶರೀರವನ್ನು ಹುಟ್ಟೂರು ನಿಟ್ಟೆ ಗ್ರಾಮಕ್ಕೆ ತರಲಾಯಿತು. ಅದಾಗಲೇ ಅಪಾರ ಜನ ಸೇರಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಗೆ ಕರೆತಂದ ಬಳಿಕ, ಶಾಸ್ತ್ರ ಸಂಪ್ರದಾಯದಂತೆ ಪಾದ ತೊಳೆಯುವ ಕಾರ್ಯ ಮುಗಿಸಿ, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ನಿಟ್ಟೆ ಗ್ರಾಮ ಸೇರಿ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿನ ಸಾಕಷ್ಟು ಆಪ್ತರು ಹಾಸ್ಯ ಕಲಾವಿದನ ಅಂತಿಮ ದರ್ಶನ ಪಡೆದರು.

ಕಾಮಿಡಿ ಕಿಲಾಡಿಗಳು ಶೋನ ಸ್ನೇಹಿತರು, ಗ್ರಾಮಸ್ಥರು ಸೇರಿ ಅಪಾರ ಪ್ರಮಾಣದ ಜನಸ್ತೋಮದ ನಡುವೆ ರಾಕೇಶ್‌ ಪೂಜಾರಿ ಅವರ ಅಂತಿಮ ಯಾತ್ರೆಯ ಮೂಲಕ ಅಂತ್ಯಕ್ರಿಯೆ ನೆರವೇರಿತು. ಆಂಕರ್‌ ಅನುಶ್ರೀ, ನಟಿ ರಕ್ಷಿತಾ ಪ್ರೇಮ್‌, ಯೋಗರಾಜ್‌ ಭಟ್‌ ಸೇರಿ ಹಾಸ್ಯ ನಟರಾದ ಸೂರಜ್‌, ಶಿವರಾಜ್‌ ಕೆ.ಆರ್‌ ಪೇಟೆ, ನಯನಾ, ಹಿತೇಶ್‌, ‌ಬಿಗ್‌ ಬಾಸ್‌ ಖ್ಯಾತಿಯ ಧನರಾಜ್‌ ಆಚಾರ್, ತುಕಾಲಿ ಸಂತೋಷ್‌, ಐಶ್ವರ್ಯಾ, ಮಜಾ ಟಾಕೀಸ್‌ ಜಗ್ಗಪ್ಪ, ಸುಶ್ಮಿತಾ, ಕೋರಿಯೋಗ್ರಾಫರ್‌ ರುದ್ರ ಹಲವರು ರಾಕೇಶ್‌ ಪೂಜಾರಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.