ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನಿಲ್ಲ; ಕಾಮಿಡಿ ಕಿಲಾಡಿಗಳು ವಿಜೇತನಿಗೆ ಏನಾಯಿತು
ರಾಕೇಶ್ ಪೂಜಾರಿ ನಿಧನ: ವಿಶ್ವರೂಪ್ ಎಂದೇ ಜನಪ್ರಿಯರಾಗಿದ್ದ ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ನಿಧನರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ವಿಜೇತನಿಗೆ ಏನಾಯಿತು? ಹಾಸ್ಯ ಕಲಾವಿದ, ನಟ ಶಿವರಾಜ್ ಕೆಆರ್ ಪೇಟೆ ಈ ಸುದ್ದಿ ಬಹಿರಂಗಪಡಿಸಿದ್ದು, ಎಲ್ಲರೂ ಆಘಾತದಲ್ಲಿದ್ದಾರೆ.

ಬೆಂಗಳೂರು: ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನಿಲ್ಲ. ವಿಶ್ವರೂಪ್ ಎಂದೇ ಜನಪ್ರಿಯರಾಗಿದ್ದ ಕಾಮಿಡಿ ಕಿಲಾಡಿಗಳು ವಿಜೇತ, ಉಡುಪಿ ಮೂಲದ ರಾಕೇಶ್ ಪೂಜಾರಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಹಾಸ್ಯ ಕಲಾವಿದ, ನಟ ಶಿವರಾಜ್ ಕೆಆರ್ ಪೇಟೆ ಇಂದು (ಮೇ 12) ಬೆಳ್ಳಂ ಬೆಳಗ್ಗೆಯೇ ಈ ಸುದ್ದಿ ಪ್ರಕಟಿಸಿದ್ದು, “ಎಷ್ಟೋ ಮನಸುಗಳ ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ” ಎಂದು ಫೇಸ್‌ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ. ಅನೇಕರಿಗೆ ಇದು ಆಘಾತ ಉಂಟುಮಾಡಿದ್ದು, ರಾಕೇಶ್ ಪೂಜಾರಿ ಅವರಿಗೆ ಏನಾಯಿತು ಎಂಬ ಪ್ರಶ್ನೆ ಕಾಡಿದೆ.
ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ನಿಧನ; ಕಾಮಿಡಿ ಕಿಲಾಡಿಗಳು ವಿಜೇತನಿಗೆ ಏನಾಯಿತು
ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಮಾತನಾಡಿದ ಶಿವರಾಜ್ ಕೆಆರ್ ಪೇಟೆ, ರಾಕೇಶ್ ಪೂಜಾರಿ ಅವರಿಗೆ ರಾತ್ರಿ ವೇಳೆ ದಿಢೀರ್ ಲೋ ಬಿಪಿ ಸಮಸ್ಯೆ ಕಾಡಿದೆ. ಪಲ್ಸ್ ರೇಟ್ ಕಡಿಮೆಯಾಗಿದೆ. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಸುಕಿನ 3.30ರ ಸುಮಾರಿಗೆ ಮೃತಪಟ್ಟರು. ಕೆಲವು ದಿನಗಳಿಂದ ನಾವು ಸಂಪರ್ಕದಲ್ಲಿ ಇರಲಿಲ್ಲ. ಆದರೆ ಈ ಸುದ್ದಿ ಆಘಾತವನ್ನು ಉಂಟುಮಾಡಿದೆ. ಈಗ ಧಾರವಾಡದಿಂದ ಉಡುಪಿ ಕಡೆಗೆ ಹೊರಟಿದ್ದೇನೆ ಎಂದಷ್ಟೇ ಹೇಳಿದರು.
ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿನ್ನರ್ ಆಗಿದ್ದ ಈ ಪ್ರತಿಭಾವಂತ ಕಲಾವಿದ ರಾಕೇಶ್ ಪೂಜಾರಿ, ನಿನ್ನೆ ಮದುವೆಯೊಂದರಲ್ಲಿ ಕೂಡ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ಅವರು ಕಳೆದ ಕೆಲವು ವರ್ಷಗಳಿಂದ ರಂಗಭೂಮಿ ಮತ್ತು ಟಿವಿ ರಂಗದಲ್ಲಿ ಸಕ್ರಿಯರಾಗಿದ್ದರು. ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್ ಪೂಜಾರಿ, 2022ರಲ್ಲಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಯಾರು
ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿಜೇತರಾಗುವ ಮೂಲಕ ರಾಜ್ಯದ ಗಮನಸೆಳೆದ ರಾಕೇಶ್ ಪೂಜಾರಿ ಮೂಲತಃ ಉಡುಪಿಯವರು. ರಾಕೇಶ್ ಪೂಜಾರಿ ಅವರ ತಂದೆ ದಿನಕರ್ ಪೂಜಾರಿ ಹಾಗೂ ತಾಯಿ ಶಾಂಭವಿ. ಬಾಲ್ಯದಲ್ಲೇ ಮನೆ ಸಮೀಪ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣಗಳಿಂದ ಪ್ರಭಾವಿತರಾಗಿದ್ದ ರಾಕೇಶ್ ಪೂಜಾರಿ ಅವರು, ಶಿವರಾಜ್ ಕುಮಾರ್ ಸೇರಿ ಹಲವು ಸ್ಟಾರ್ ನಟರನ್ನು ನೋಡುತ್ತ ಬೆಳೆದವರು. ಪದವಿ ಓದುತ್ತಿದ್ದಾಗ ಮೊದಲ ಬಾರಿ ವೇದಿಕೆ ಏರಿ ಪ್ರದರ್ಶನ ನೀಡಿದ್ದ ರಾಕೇಶ್ ಅವರನ್ನು ವೇದಿಕೆ ಬಹಳವಾಗಿ ಸೆಳೆದಿತ್ತು.
ರಾಕೇಶ್ ಪೂಜಾರಿ ಅವರು ರಂಗಭೂಮಿಯಿಂದಲೇ ತಮ್ಮ ನಟನೆ ಶುರುಮಾಡಿದರು. ಚೈತನ್ಯ ಕಲಾವಿದರು ಎಂಬ ನಾಟಕ ತಂಡ ಅವರಿಗೆ ವೇದಿಕೆ ಒದಗಿಸಿತು. 2014ರಲ್ಲಿ ಸ್ಥಳೀಯ ಕೇಬಲ್ ಚಾನೆಲ್‌ನಲ್ಲಿ ನಡೆದ 'ಕಡ್ಲೆ ಬಜಿಲ್' ಎಂಬ ತುಳು ರಿಯಾಲಿಟಿ ಶೋ ಮೂಲಕ ರಾಕೇಶ್ ಪೂಜಾರಿ ಜನಮನ ಗೆದ್ದರು. ಅದಾದ ಬಳಿಕ ಅವರು ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದ್ದರು. ಕಿರುತೆರೆಯಲ್ಲಿ ವಿಶೇಷವಾಗಿ ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಶೋಗೂ ಆಡಿಷನ್ ನೀಡಿದ್ದರು. 2018 ರಲ್ಲಿ ಜೀ ಕನ್ನಡ 'ಕಾಮಿಡಿ ಕಿಲಾಡಿಗಳು ಸೀಸನ್ 2' ಶೋಗೆ ಆಗಿದ್ದ ರಾಕೇಶ್ ಪೂಜಾರಿ, ಆ ವರ್ಷ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಆದರೆ, 2020ರಲ್ಲಿ ನಡೆದ ‘ಕಾಮಿಡಿ ಕಿಲಾಡಿಗಳು ಸೀಸನ್ 3’ರಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಈ ಶೋ ಅವರಿಗೆ ಒಂದು ಇಮೇಜ್ ಅನ್ನು ತಂದುಕೊಟ್ಟಿತ್ತು ಎಂಬುದನ್ನು ಅವರು ಭಾವುಕರಾಗಿ ಹೇಳಿದ್ದು ದಾಖಲಾಗಿದೆ.
ವಿಭಾಗ