ʻನಿಮ್ಮ ವಿಡಿಯೋ ಇದೆʼ ಎಂದು ಆನಂದ್ ಗುರೂಜಿಯ ಕಾರು ಅಡ್ಡಗಟ್ಟಿ ಬ್ಲಾಕ್‌ಮೇಲ್; ದಿವ್ಯಾ ವಸಂತ ಸೇರಿ ಇಬ್ಬರ ವಿರುದ್ಧ ದೂರು
ಮಹರ್ಷಿ ವಾಣಿ ಕಾರ್ಯಕ್ರಮದ ಮೂಲಕ ಪ್ರತಿನಿತ್ಯ ನಾಡಿನ ವೀಕ್ಷಕರ ಮುಂದೆ ಎದುರಾಗುವ ಜ್ಯೋತಿಷಿ ಆನಂದ್ ಗುರೂಜಿ ಅವರಿದ್ದ ಕಾರನ್ನು ಅಡ್ಡಗಟ್ಟಿ ಬ್ಲಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆನಂದ್ ಗುರೂಜಿ ದೂರು ನೀಡಿದ್ದು, ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ಬೆಳಗ್ಗೆ ಮಹರ್ಷಿವಾಣಿ ಮೂಲಕ ನಾಡಿನ ವೀಕ್ಷಕರ ಮುಂದೆ ಎದುರಾಗುವ ಜ್ಯೋತಿಷಿ ಆನಂದ್ ಗುರೂಜಿ ಅವರ ಕಾರು ಅಡ್ಡಗಟ್ಟಿ ಬ್ಲಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆನಂದ್ ಗುರೂಜಿ ದೂರು ನೀಡಿದ್ದು, ದೂರಿನನ್ವಯ ಕೃಷ್ಣಮೂರ್ತಿ (ಎ1) ಮತ್ತು ಈ ಹಿಂದೆ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ದಿವ್ಯಾ ವಸಂತ (ಎ2) ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಈಗಾಗಲೇ ವಿಡಿಯೋ ಬಗ್ಗೆ ಕೋರ್ಟ್‌ನಿಂದ ಸ್ಟೇ ತಂದರೂ, ನಿಮ್ಮ ಖಾಸಗಿ ವಿಡಿಯೋ ನಮ್ಮ ಬಳಿ ಇದೆ, ಹಣ ನೀಡಿ ಎಂದು ನಿತ್ಯ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ದೂರಿನಲ್ಲಿ ಆರೋಪ ಮಾಡಿದ್ದಾರೆ. ವಿಡಿಯೋ ಮತ್ತು ಜಮೀನು ಖರೀದಿ ವಿಚಾರಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಕೋರ್ಟ್‌ನಿಂದ ತಡೆಯಾಜ್ಞೆ ತಂದರೂ, ಕಾರು ಅಡ್ಡಗಟ್ಟಿ , ಅಶ್ಲೀಲ ಪದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ದೂರಿನನ್ವಯ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇತ್ತ ಇದಷ್ಟೇ ಅಲ್ಲದೆ ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿಯೂ ತಮ್ಮ ಮಾನಹಾನಿ ಮಾಡಿದ್ದಾರೆ, ಬೇಕು ಅಂತಲೇ ತೇಜೋವಧೆ ಮಾಡುವ ಕೆಲಸಗಳಾಗುತ್ತಿದೆ ಎಂದು ದೂರಿನಲ್ಲಿ ನಮೂದಿಸಿರುವ ಆನಂದ್ ಗುರೂಜಿ, ಅವುಗಳ ವಿರುದ್ಧವೂ ಕ್ರಮಕ್ಕೆ ಮುಂದಾಗಿ ಎಂದಿದ್ದಾರೆ.
ಇನ್ನು ಈ ಹಿಂದೆ ಸ್ಯಾಂಡಲ್‌ವುಡ್ ನಟಿಯೊಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆ ಸುದ್ದಿಯನ್ನೇ "ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ" ಎಂದು ದಿವ್ಯಾ ವಸಂತ ಸುದ್ದಿ ಮಾಡಿ, ದೊಡ್ಡ ಮಟ್ಟದಲ್ಲಿ ಟ್ರೋಲ್‌ಗೆ ಆಹಾರವಾಗಿದ್ದರು.
ಅದಾದ ಮೇಲೆ ಒಂದಷ್ಟು ಪ್ರಕರಣಗಳಲ್ಲಿಯೂ ಅವರ ಹೆಸರು ತಳುಕುಹಾಕಿಕೊಂಡಿತ್ತು. ಬೆಂಗಳೂರಿನ ಇಂದಿರಾನಗರದ ಪಾರ್ಲರ್‌ಗೆ ಏಕಾಏಕಿ ನುಗ್ಗಿ ಸ್ಟಿಂಗ್ ಆಪರೇಷನ್ ನಡೆಸಿ, ಪಾರ್ಲರ್ ಮಾಲೀಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಬಳಿಕ ಪಾರ್ಲರ್ ಮಾಲೀಕರ ದೂರಿನನ್ವಯ ದಿವ್ಯಾ ವಸಂತ ಸೇರಿ ಇನ್ನೋರ್ವನನ್ನು ಕೇರಳದಲ್ಲಿ ಬಂಧಿಸಲಾಗಿತ್ತು.