ಪಾಕ್ ಕಲಾವಿದರು ಇನ್ಮುಂದೆ ಭಾರತದ ಸಿನಿಮಾಗಳಲ್ಲಿ ನಟಿಸಬಹುದು; ನಿಷೇಧ ಅರ್ಜಿ ತಿರಸ್ಕರಿಸಿ ಕಲೆಗೆ ಗಡಿಯ ಹಂಗಿಲ್ಲವೆಂದ ಕೋರ್ಟ್
Pak artists in India: ಪಾಕಿಸ್ತಾನ ಕಲಾವಿದರಿಗೆ ಭಾರತದ ಸಿನಿಮಾಗಳಲ್ಲಿ ಅವಕಾಶ ನೀಡಬಾರದು ಎಂಬ ಅರ್ಜಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿದೆ. ಕಲೆ, ಸಂಗೀತ, ಕ್ರೀಡೆ, ಸಂಸ್ಕೃತಿ ಮತ್ತು ನೃತ್ಯ ಸೇರಿದಂತೆ ಶಾಂತಿ, ಸೌಹಾರ್ದತೆ ಮತ್ತು ಶಾಂತಿಯನ್ನು ಉತ್ತೇಜಿಸುವ ಚಟುವಟಿಕೆಗಳು ರಾಷ್ಟ್ರೀಯ ಗಡಿಗಳನ್ನು ಮೀರಿದೆ ಎಂದು ಕೋರ್ಟ್ ಹೇಳಿದೆ.
ಪಾಕಿಸ್ತಾನದ ಕಲಾವಿದರು, ಹಾಡುಗಾರರು, ಸಂಗೀತಗಾರರು, ಸಿನಿಮಾ ಬರಹಗಾರರು ಮತ್ತು ಟೆಕ್ನಿಷಿಯನ್‌ಗಳ ಜತೆ ಭಾರತದ ವ್ಯಕ್ತಿಗಳು, ಕಂಪನಿಗಳು ಸಹಭಾಗಿತ್ವ ಮಾಡಿಕೊಳ್ಳದಂತೆ, ಇವರೆಲ್ಲರಿಗೂ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಂಪೂರ್ಣ ನಿಷೇಧ ಹೇರಬೇಕೆಂದು ಕೋರಿ ಅರ್ಜಿ ಸಲ್ಲಿಸಿದ ಅರ್ಜಿಯನ್ನು ಮುಂಬೈ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. ಈ ಮೂಲಕ ಕಲೆಗೆ ಭಾಷೆ, ಗಡಿಯ ಹಂಗಿಲ್ಲ ಎಂದು ಸೂಚ್ಯವಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸುನಿಲ್ ಬಿ ಶುಕ್ರೆ ಮತ್ತು ಫಿರ್ದೋಶ್ ಪಿ ಪೂನಿವಾಲಾ ಅವರ ನೇತೃತ್ವದ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಈ ಅರ್ಜಿಯು "ಸಾಂಸ್ಕೃತಿಕ ಸೌಹಾರ್ದತೆ, ಏಕತೆ ಮತ್ತು ಶಾಂತಿಯನ್ನು ಬೆಳೆಸುವ ವಿರುದ್ಧದ ಹೆಜ್ಜೆ" ಎಂದು ನ್ಯಾಯಾಲಯ ಬಣ್ಣಿಸಿದೆ.
ಅರ್ಜಿದಾರರು ಪಾಕಿಸ್ತಾನದ ಸಿನಿಮಾ ಕೆಲಸಗಾರರಿಗೆ, ಕಲಾವಿದರಿಗೆ ನಿಷೇಧವನ್ನು ಜಾರಿಗೊಳಿಸುವಂತೆ, ಅವರ ವೀಸಾಗಳನ್ನು ನಿರ್ಬಂಧಿಸುವಂತೆ ಮಾಹಿತಿ ಮತ್ತು ಪ್ರಸಾರ, ವಿದೇಶಾಂಗ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳಿಂದ ನಿರ್ದೇಶನಗಳನ್ನು ಕೋರಿದ್ದರು. ಆದರೆ, ಅವರ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಇಂತಹ ಅರ್ಜಿಗಳು ಭಾರತದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಭಾರತ ಸರಕಾರ ಕೈಗೊಂಡಂತಹ ಸಕಾರಾತ್ಮಕ ಕ್ರಮಗಳನ್ನು ದುರ್ಬಲಗೊಳಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಕಲೆ, ಸಂಗೀತ, ಕ್ರೀಡೆ, ಸಂಸ್ಕೃತಿ ಮತ್ತು ನೃತ್ಯ ಸೇರಿದಂತೆ ಶಾಂತಿ, ಸೌಹಾರ್ದತೆ ಮತ್ತು ಶಾಂತಿಯನ್ನು ಉತ್ತೇಜಿಸುವ ಚಟುವಟಿಕೆಗಳು ರಾಷ್ಟ್ರೀಯ ಗಡಿಗಳನ್ನು ಮೀರಿದೆ. ಇಂತಹ ಚಟುವಟಿಕೆಗಳು ದೇಶದ ಒಳಗೆ ಮತ್ತು ದೇಶದೇಶಗಳ ನಡುವೆ ಏಕತೆ ಮತ್ತು ಸೌಹಾರ್ದತೆಗೆ ಕೊಡುಗೆ ನೀಡುತ್ತವೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಧರ್ಮಾ ಪ್ರೊಡಕ್ಷನ್ಸ್‌ನ 'ಕಪೂರ್ ಅಂಡ್ ಸನ್ಸ್' ಮತ್ತು 'ಏ ದಿಲ್ ಹೈ ಮುಷ್ಕಿಲ್' ಮತ್ತು ಶಾರುಖ್ ಖಾನ್ ಅವರ 'ರಯೀಸ್'ನಲ್ಲಿ ಮಹಿರಾ ಖಾನ್‌ರಂತಹ ಪ್ರಸಿದ್ಧ ಪಾಕಿಸ್ತಾನಿ ಕಲಾವಿದರು ನಟಿಸಿದ್ದಾರೆ. ಅತೀಫ್ ಅಸ್ಲಾಮ್ ಮತ್ತು ರಾಹತ್ ಫತೇಹ್ ಅಲಿ ಖಾನ್ ಮುಂತಾದ ಗಾಯಕರು ಈ ಹಿಂದೆ ಭಾರತೀಯ ಚಲನಚಿತ್ರಗಳಿಗೆ ಮತ್ತು ಸಂಗೀತಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.
ಪಾಕಿಸ್ತಾನಿ ಕಲಾವಿದರಿಗೆ ಯಾವಾಗ ನಿಷೇಧ ಹೇರಲಾಗಿತ್ತು?
2016ರ ಸೆಪ್ಟೆಂಬರ್ ತಿಂಗಳಲ್ಲಿ ಉರಿ ದಾಳಿಯ ನಂತರ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘವು (ಐಎಂಪಿಪಿಎ) ಪಾಕಿಸ್ತಾನಿ ನಟನಟಿಯರನ್ನು ಭಾರತದ ಸಿನಿಮೋದ್ಯಮದಿಂದ ನಿಷೇಧಿಸಲು ನಿರ್ಧರಿಸಿತ್ತು. "ಯಾವುದೇ ಪಾಕಿಸ್ತಾನಿಯರನ್ನು ತಮ್ಮ ನಿರ್ಮಾಪಕ ಸದಸ್ಯರು ಶಾಶ್ವತವಾಗಿ ನೇಮಿಸಿಕೊಳ್ಳುವುದಿಲ್ಲ" ಎಂಬ ನಿರ್ಣಯವನ್ನು ಐಎಂಪಿಪಿಎಯ 87ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಇಂತಹ ನೀತಿ ನಿರ್ದೇಶನಗಳನ್ನು ನೀಡುವಂತೆ ಅರ್ಜಿದಾರರ ಕೋರಿಕೆಯನ್ನು ಮನ್ನಿಸುವುದು ನ್ಯಾಯಾಲಯದ ವಿಷಯವಲ್ಲ. ಇಂತಹ ನೀತಿಗಳನ್ನು ರಚಿಸುವಂತೆ ಸರಕಾರ ಅಥವಾ ಶಾಸಕಾಂಗಕ್ಕೆ ಹೇಳಲು ತನ್ನಿಂದ ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ಮೂಲಕ ಪಾಕಿಸ್ತಾನದ ಕಲಾವಿದರಿಗೆ ನಿಷೇಧ ಹೇರುವಂತೆ ಕೋರಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ವಿಭಾಗ