ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ; ಪ್ರಮುಖ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸರು
ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಡಿಸಿಪಿ ನವನಾಥ್ ಧವಳೆ ನೇತೃತ್ವದ ಪೊಲೀಸರ ತಂಡ ಮತ್ತು ಕಾಸರ್ವಾಡವಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ವಿಜಯ್ ದಾಸ್‌ನನ್ನು (Vijay Das) ಬಂಧಿಸುವಲ್ಲಿ ಮುಂಬೈ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ವಲಯ 6ರ ಡಿಸಿಪಿ ನವನಾಥ್ ಧವಳೆ ಅವರ ತಂಡ ಮತ್ತು ಕಾಸರ್ವಾಡಾವಳಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ. ನಗರದ ಥಾಣೆ ಪಶ್ಚಿಮ ಪ್ರದೇಶದಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಈ ಹಿಂದೆ ಬಂಧಿಸಲಾದ ಶಂಕಿತರಿಗೂ, ಚೂರಿ ಇರಿತ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಥಾಣೆ ಪಶ್ಚಿಮ ಭಾಗದ ಹಿರಾನಂದಾನಿ ಎಸ್ಟೇಟ್‌ನ ಟಿಸಿಎಸ್ ಕಾಲ್ ಸೆಂಟರ್ ಹಿಂಭಾಗದಲ್ಲಿರುವ ಮೆಟ್ರೋ ನಿರ್ಮಾಣ ಸ್ಥಳದ ಬಳಿಯ ಕಾರ್ಮಿಕ ಶಿಬಿರದಲ್ಲಿ ಪ್ರಮುಖ ಆರೋಪಿ ವಿಜಯ್ ದಾಸ್‌ನನ್ನು ಬಂಧಿಸಲಾಗಿದೆ. “ಈ ಹಿಂದೆ ಮುಂಬೈನ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ದಾಸ್‌ನನ್ನು ಪೊಲೀಸ್ ರಿಮಾಂಡ್‌ಗಾಗಿ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು” ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಬಂಧನದ ಬಗ್ಗೆ ಇಂದು ಬೆಳಗ್ಗೆ 9 ಗಂಟೆಗೆ ಮುಂಬೈ ಪೊಲೀಸರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಿಸಿಟಿವಿ ದೃಶ್ಯ
ಸೈಫ್ ಅಲಿ ಖಾನ್ ಅವರು ತಮ್ಮ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿದ್ದಾಗ ಹಲವು ಬಾರಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದರು. ಘಟನೆ ನಡೆದ ಒಂದು ದಿನದ ನಂತರ, ಹಂತಕ ಸ್ಥಳದಿಂದ ಪರಾರಿಯಾಗಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. ಸೈಫ್ ವಾಸವಿದ್ದ 12ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ, ಆರನೇ ಮಹಡಿಯ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿದ್ದ ದಾಳಿಕೋರನ ದೃಶ್ಯವನ್ನು ಸಿಸಿ ಕ್ಯಾಮೆರಾ ಸೆರೆಹಿಡಿದಿತ್ತು.
ಪ್ರಕರಣ ಸಂಬಂಧ ಛತ್ತೀಸ್‌ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಶನಿವಾರ ಶಂಕಿತನನ್ನು ಬಂಧಿಸಿತ್ತು. ಮುಂಬೈ ಎಲ್‌ಟಿಟಿಯಿಂದ ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ ಕೈಲಾಶ್ ಕನ್ನೋಜಿಯಾ (31) ಬಂಧಿತ ಆರೋಪಿ.
ಏನಿದು ಪ್ರಕರಣ?
ವಾಣಿಜ್ಯ ನಗರಿ ಮುಂಬೈನ ಬಾಂದ್ರಾದಲ್ಲಿರುವ ಲಕ್ಷುರಿ ಅಪಾರ್ಟ್‌ಮೆಂಟ್‌ನಲ್ಲಿ ಸೈಫ್ ಅಲಿ ಖಾನ್ ತಮ್ಮ ಕುಟುಂಬದೊಂದಿಗೆ ವಾಸವಿದ್ದಾರೆ. ಜನವರಿ 16ರಂದು ಮುಂಜಾನೆ 54 ವರ್ಷದ ಖಾನ್ ತಮ್ಮ ಮನೆಯಲ್ಲಿದ್ದಾಗ ಅವರ ಮೇಲೆ ಚಾಕುವಿನಿಂದ ಇರಿತವಾಗಿದೆ. ಇದರಿಂದ ಸೈಫ್ ದೇಹದ 6 ಭಾಗಗಳಲ್ಲಿ ಗಾಯಗಳಾಗಿವೆ. ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಬಾಲಿವುಡ್ ನಟ ಅಪಾಯದಿಂದ ಪಾರಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.
ಸೈಫ್ ಅಲಿ ಖಾನ್ ಅವರ ಪುತ್ರ ಮತ್ತು ಮನೆಕೆಲಸದವರು ಸೇರಿಕೊಂಡು, ಗಂಭೀರ ಗಾಯಗೊಂಡಿದ್ದ ನಟನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಕರೀನಾ ಮತ್ತು ಸೈಫ್ ಅವರಿಗೆ ಇಬ್ಬರು ಮಕ್ಕಳು. ಇಬ್ಬರು ಗಂಡು ಮಕ್ಕಳಾದ ತೈಮೂರ್ (8) ಮತ್ತು ಜೆಹ್ (4) ಅವರೊಂದಿಗೆ ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ವಾಸವಿದ್ದಾರೆ.

ವಿಭಾಗ