ʻನೀವು ಮಾಡಿದ್ದು ನ್ಯಾಯವಾ ರಿಷಬ್ ಶೆಟ್ರೆ, ರಾಕೇಶ್ ಪೂಜಾರಿ ಅಂತ್ಯಸಂಸ್ಕಾರಕ್ಕೂ ಬರುವಷ್ಟು ಸಮಯ ನಿಮಗಿರಲಿಲ್ಲವೇ?ʼ
ರಾಕೇಶ್ ಪೂಜಾರಿ ನಿಧನದ ಸುದ್ದಿ ಗೊತ್ತಾದರೂ, ನಿರ್ದೇಶಕ ರಿಷಬ್ ಶೆಟ್ಟಿ ಮಾತ್ರ ಅಂತ್ಯಕ್ರಿಯೆಗೆ ಆಗಮಿಸಲಿಲ್ಲ. ಇದೀಗ ಶೆಟ್ರ ಅನುಪಸ್ಥಿತಿಯೇ ಕೆಲವರ ಬೇಸರಕ್ಕೆ ಕಾರಣವಾಗಿದೆ. ʻನಿಮಗೆ ಅಮಾಯಕ ಜೀವಕ್ಕಿಂತ ಸಿನಿಮಾನೇ ಹೆಚ್ಚಾಯಿತೆನೋʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಹಾಕುತ್ತಿದ್ದಾರೆ.

ರಾಕೇಶ್ ಪೂಜಾರಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರು ಉಡುಪಿ ಬಳಿಯ ನಿಟ್ಟೆ ಗ್ರಾಮಕ್ಕೆ ಜನಸಾಗರವೇ ಹರಿದುಬಂದಿತ್ತು. ದೂರದೂರಿನಿಂದ ಅವರ ಸ್ನೇಹಿತರು ಆಗಮಿಸಿದ್ದರು. ಆದರೆ, ʻಕಾಂತಾರ ಚಾಪ್ಟರ್ 1ʼ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಮರಳುತ್ತಿದ್ದಂತೆ, ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನದ ಸುದ್ದಿ ಗೊತ್ತಾದರೂ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತ್ರ ಅಂತ್ಯಕ್ರಿಯೆಗೆ ಆಗಮಿಸಲಿಲ್ಲ. ಇದೀಗ ಶೆಟ್ರ ಅನುಪಸ್ಥಿತಿಯೇ ಕೆಲವರ ಬೇಸರಕ್ಕೆ ಕಾರಣವಾಗಿದೆ. ʻನಿಮಗೆ ಅಮಾಯಕ ಜೀವಕ್ಕಿಂತ ಸಿನಿಮಾನೇ ಹೆಚ್ಚಾಯಿತೆನೋʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಹಾಕುತ್ತಿದ್ದಾರೆ.
ಕನ್ನಡದ ರಿಯಾಲಿಟಿ ಶೋ ಲೋಕದಲ್ಲಿ ತಮ್ಮ ಕಾಮಿಡಿ ಮೂಲಕವೇ ನೋಡುಗರ ಮೊಗದಲ್ಲಿ ನಗು ಉಕ್ಕಿಸುತ್ತಿದ್ದವರಲ್ಲಿ ರಾಕೇಶ್ ಪೂಜಾರಿ ಸಹ ಒಬ್ಬರು. ತಮ್ಮ ಬಾಡಿ ಲ್ಯಾಂಗ್ವೇಜ್, ಆಡುವ ಮಾತಿನ ಮೂಲಕವೇ ಎದುರಿಗಿದ್ದವರನ್ನು ಬರಸೆಳೆಯುವ ತಾಕತ್ತು ರಾಕೇಶ್ ಪೂಜಾರಿ ಅವರಿಗಿತ್ತು. ಆ ಕಾರಣಕ್ಕೇ ಕಡಿಮೆ ಅವಧಿಯಲ್ಲಿ ಅಪಾರ ಜನರಿಗೆ ಹತ್ತಿರವಾಗಿದ್ದವರು. ಯಾವ ಗಾಡ್‌ಫಾದರ್ ಹಂಗಿಲ್ಲದೆ, ಬಣ್ಣದ ಲೋಕದಲ್ಲಿ ಮಿಂಚಬೇಕು ಅನ್ನೋ ಒಂದು ಕಾರಣಕ್ಕೆ, ಬೆಂಗಳೂರಿನ ಬಸ್ ಹತ್ತಿ ಬಂದಿದ್ದ ರಾಕೇಶ್, ಕಾಮಿಡಿ ಕಿಲಾಡಿಗಳು ಮೂಲಕ ಕರುನಾಡಿನ ಗಮನ ಸೆಳೆದು, ಸೀಸನ್ 3ರ ವಿನ್ನರ್ ಸಹ ಆಗಿ ಹೊರಹೊಮ್ಮಿದರು. ಆದರೆ, ವಿಧಿಯಾಟ, ಅಷ್ಟೇ ಬೇಗ ಅವರನ್ನು ತನ್ನ ತೆಕ್ಕೆಗೆ ಪಡೆದುಕೊಂಡಿತು.
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಪಟ್ಟ ಅಲಂಕರಿಸಿದ ಬಳಿಕ ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು ರಾಕೇಶ್ ಪೂಜಾರಿ. ಇನ್ನೇನು ಚಂದನವನದಲ್ಲಿ ನಟನಾಗಿ ಮಿಂಚಬೇಕು ಎನ್ನುವಾಗಲೇ ರಿಷಬ್ ಶೆಟ್ಟಿ ನಿರ್ದೇಶನದ ʻಕಾಂತಾರ ; ಚಾಪ್ಟರ್ 1ʼ ಸಿನಿಮಾದಲ್ಲಿ ನಟಿಸುವ ಅವಕಾಶ ರಾಕೇಶ್‌ಗೆ ಒಲಿದುಬಂದಿತ್ತು. ಉದ್ದ ಗಡ್ಡದ ಲುಕ್‌ನಲ್ಲಿ ಒಂದೊಳ್ಳೆಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಇನ್ನೇನು ಆ ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಸಿಗಲಿದೆ ಎನ್ನುತ್ತಿರುವಾಗಲೇ, ಅಕಾಲಿಕವಾಗಿ ನಿಧನರಾದರು ರಾಕೇಶ್ ಪೂಜಾರಿ. ಹೃದಯಾಘಾತದಿಂದ ಮೇ 12ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.
ರಾಕೇಶ್ ಪೂಜಾರಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಕಾಮಿಡಿ ಕಿಲಾಡಿಗಳು ಶೋನ ಬಹುತೇಕ ಸ್ನೇಹಿತರು ಉಡುಪಿ ಬಳಿಯ ನಿಟ್ಟೆ ಗ್ರಾಮಕ್ಕೆ ದೌಡಾಯಿಸಿದರು. ಅಗಲಿದ ಸ್ನೇಹಿತನನ್ನು ಕೊನೆ ಬಾರಿ ಕಣ್ತುಂಬಿಕೊಳ್ಳಲು ಕಾಮಿಡಿ ಕಿಲಾಡಿಗಳು ಶೋನ ಯೋಗರಾಜ್ ಭಟ್, ರಕ್ಷಿತಾ ಪ್ರೇಮ್, ಆಂಕರ್ ಅನುಶ್ರೀ ಸೇರಿ ಸೂರಜ್, ಶಿವರಾಜ್ ಕೆ.ಆರ್ ಪೇಟೆ, ನಯನಾ, ಬಿಗ್ ಬಾಸ್ ಖ್ಯಾತಿಯ ಧನರಾಜ್ ಆಚಾರ್, ಹಿತೇಶ್, ತುಕಾಲಿ ಸಂತೋಷ್, ಐಶ್ವರ್ಯಾ, ಮಜಾ ಟಾಕೀಸ್ ಖ್ಯಾತಿಯ ಜಗಪ್ಪ, ಸುಷ್ಮಿತಾ ದಂಪತಿ, ಕೋರಿಯಾಗ್ರಾಫರ್ ರುದ್ರ ಸೇರಿ ಸಾಕಷ್ಟು ಜನ ಆಗಮಿಸಿದ್ದರು. ಆದರೆ, ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿಯೇ ನಟಿಸುತ್ತಿದ್ದ ರಾಕೇಶ್ ಪೂಜಾರಿ ಅಂತ್ಯಕ್ರಿಯೆಗೆ ಅದೇ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಆಗಮಿಸಲಿಲ್ಲ.
ʻನೀನೆಂಥ ನಿರ್ದೇಶಕನಯ್ಯಾ?ʼ
ʻಟ್ರೋಲ್ ಬೊಳ್ಳಿʼ ಅನ್ನೋ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ರಾಕೇಶ್ ಪೂಜಾರಿ ನಿಧನದ ವಿಚಾರದಲ್ಲಿ ನಟ ರಿಷಬ್ ಶೆಟ್ಟಿ ಅವರ ನಡೆಯನ್ನು ಖಂಡಿಸಿ ʻನೀನೆಂಥ ನಿರ್ದೇಶಕನಯ್ಯʼ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. "ನ್ಯಾಯನ ಶೆಟ್ರೆ ನೀವೇ ಹೇಳಿ. ರಾಕೇಶನನ ಅಂತ್ಯಸಂಸ್ಕಾರಕ್ಕೆ ಬರುವಷ್ಟು ಕಿಂಚಿತ್ತೂ ಸಮಯವೂ ನಿಮಗಿಲ್ಲವ. ಅಮಾಯಕನ ಜೀವಕ್ಕಿಂತ ಸಿನಿಮಾವೇ ಹೆಚ್ಚಾಯಿತೇನೋ..." ಎಂದು ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದು, ರಿಷಬ್ ಶೆಟ್ಟಿ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕಟು ಟೀಕೆ..
- ಇಲ್ಲಿ ದುಡ್ಡಿಗೆ ಮಾತ್ರ ಬೆಲೆ ಜೀವಕ್ಕಿಲ್ಲ..... ಆಗ್ಬಹುದು ಮಾರ್ರೆ ಒಳ್ಳೇ ಸಂದೇಶ ಕೊಟ್ರಿ ಪ್ರಪಂಚಕ್ಕೆ
- ಎಲ್ಲರೂ ಬಿಜಿ ಇರಬಹುದು ಆದರೆ ಬೆಂಗಳೂರಿಂದ ನೋಡಲು ಬಂದಿದ್ದಾರೆ ಇವರು ಮಂಗಳೂರಿನಲ್ಲಿ ಇದ್ದಾರೆ ಇವರಿಗೆ ನೋಡಲು ಬರಲು ಆಗಲಿ ಇಲ್ಲ ಅಲ್ಲ ಪ್ರಮೋದ್ ಶೆಟ್ಟಿ ಹೇಳಿದ್ದು ಕೇಳಲಿಲ್ಲವೇ ಹಾಗಾದ್ರೆ ಇದರಲ್ಲಿ ರಾಖಿ ಕೂಡ ಕೆಲಸ ಮಾಡಿದರೆ ಅಲ್ವಾ ಅದಕೆ ಆದರೂ ಬರಬೇಕಿತ್ತು
- ಇದು ಒಂದು ದೊಡ್ಡ ತಪ್ಪು. ಹಣದ ಮುಂದೆ ಹೆಣ ಕ್ಕೆ ಬೆಲೆ ಇಲ್ಲ
- ರಿಷಬ್ ಶೆಟ್ಟಿಯನ್ನ ಬೈಕಾಟ್ ಮಾಡಿ, ಅವರ ಸಿನಿಮಾವನ್ನೂ
- ಕೆಲಸ ಮುಗಿದ ಮೇಲೆ ಹಾಗೇ
- ಹಣ ಅಂಥ ಹೇಳಿದರೆ ಹೆಣ ಕೂಡಾ ಬಾಯಿ ಬೇಡುತ್ತದೆ ಈಗ ಕರುಣೆ ಇಲ್ಲ ಹಣವೇ ದುನಿಯಾ
- ಅಣ್ಣನಿಗೆ ಫೇಮ್ ಬಂದಮೇಲೆ ನೆಲ ಕಾಣಿಸ್ತಿಲ್ಲ
ಸೋಷಿಯಲ್ ಮೀಡಿಯಾದಲ್ಲಿ ಸಂತಾಪ
ಅಂತ್ಯಸಂಸ್ಕಾರಕ್ಕೆ ಬಾರದ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿಯೇ ಅಗಲಿದ ರಾಕೇಶ್ ಪೂಜಾರಿಗೆ ಸಂತಾಪ ಸೂಚಿಸಿದ್ದಾರೆ. “ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ .. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ” ಎಂದಿದ್ದಾರೆ.