Daaku Maharaaj OTT: ಒಟಿಟಿಗೆ ಬರುತ್ತಿದೆ ಡಾಕು ಮಹಾರಾಜ್ ಸಿನಿಮಾ; ಸ್ಟ್ರೀಮಿಂಗ್ ದಿನಾಂಕ, ಫ್ಲಾಟ್‌ಫಾರ್ಮ್ ವಿವರ ಹೀಗಿದೆ
Daaku Maharaaj OTT: ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಸಿನಿಮಾ ಚಿತ್ರಮಂದಿರಗಳ ಬಳಿಕ, ಇದೀಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಈ ಸಿನಿಮಾ ಇದೇ ಫೆಬ್ರವರಿ 21ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಚಿತ್ರವನ್ನು ಬಾಬಿ ನಿರ್ದೇಶಿಸಿದ್ದಾರೆ.

Daaku Maharaaj OTT: ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಸಿನಿಮಾ, ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಬಿಡುಗಡೆ ಆಗಿದ್ದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. ಇಂತಿಪ್ಪ ಸಿನಿಮಾ ಒಟಿಟಿಗೆ ಅದ್ಯಾವಾಗ ಬರಲಿದೆ ಎಂದು ಒಟಿಟಿ ವೀಕ್ಷಕರು ಕಾದಿದ್ದರು. ಆದರೆ, ಅಧಿಕೃತ ದಿನಾಂಕ ಮಾತ್ರ ಘೋಷಣೆ ಆಗಿರಲಿಲ್ಲ. ಇದೀಗ ಇದೇ ಚಿತ್ರದ ಅಫಿಶಿಯಲ್ ಒಟಿಟಿ ಬಿಡುಗಡೆ ಡೇಟ್ ಘೋಷಣೆ ಆಗಿದೆ.
ಕಮರ್ಶಿಯಲ್ ಆಕ್ಷನ್ ಸಿನಿಮಾ ಫೆಬ್ರವರಿ 21ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ನೆಟ್‌ಫ್ಲಿಕ್ಸ್ ಒಟಿಟಿ ಈ ವಿಚಾರವನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಚಿತ್ರದ ಒಟಿಟಿ ಬಿಡುಗಡೆಗೆ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಡಾಕು ಮಹಾರಾಜ್ ಚಿತ್ರವನ್ನು ಬಾಬಿ ನಿರ್ದೇಶಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಮತ್ತು ಪ್ರಜ್ಞಾ ಜೈಸ್ವಾಲ್ ನಾಯಕಿಯರಾಗಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಯಿತು. ಒಟ್ಟು 115 ಕೋಟಿ ಗಳಿಸಿ ಶತಕೋಟಿ ಕ್ಲಬ್‌ಗೆ ಸೇರಿತು. ತಮನ್ ಸಂಗೀತ ಸಂಯೋಜಿಸಿದ ಈ ಚಿತ್ರವನ್ನು ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ಈ ಆಕ್ಷನ್ ಚಿತ್ರದಲ್ಲಿ ಡಾಕು ಮಹಾರಾಜ್, ಸೀತಾರಾಮ್ ಮತ್ತು ನಾನಾಜಿ ಎಂಬ ಮೂರು ವಿಭಿನ್ನ ಗೆಟಪ್‌ಗಳಲ್ಲಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ.
ಏನಿದು ಡಾಕು ಮಹಾರಾಜ್ ಕಥೆ
1996ರಲ್ಲಿ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಕಥೆ ತೆರೆದುಕೊಳ್ಳುತ್ತದೆ. ಕೃಷ್ಣಮೂರ್ತಿ (ಸಚಿನ್ ಖೇಡ್ಕರ್) ಅವರ ಕಾಫಿ ಎಸ್ಟೇಟ್ ಗುತ್ತಿಗೆಗೆ ಪಡೆದ ಶಾಸಕ ತ್ರಿಮೂರ್ತಿ, (ರವಿ ಕಿಶನ್) ಕಳ್ಳಸಾಗಣಿಕೆಯಲ್ಲಿ ಎತ್ತಿದ ಕೈ. ಈ ಕೃತ್ಯ ತಡೆಯಲು ಎಂಟ್ರಿ ಆಗುವವನೇ ಡಾಕು ಮಹಾರಾಜ್. ಮನೆಯ ಕಾರು ಚಾಲಕನಾಗಿ ನಾನಾಜಿ (ಬಾಲಕೃಷ್ಣ) ಎಂಬ ಹೆಸರಿನೊಂದಿಗೆ ಕೆಲಸಕ್ಕೆ ಸೇರುತ್ತಾನೆ.
ಇದು ಒಂದು ಬದಿಯ ಕಥೆ. ಮತ್ತೊಂದು ಕಡೆ, ಚಂಬಲ್ ಕಣಿವೆಯಲ್ಲಿ, ಸೀತಾರಾಮ್ (ಬಾಲಕೃಷ್ಣ) ಮತ್ತು ಅವರ ಪತ್ನಿ (ಪ್ರಜ್ಞಾ ಜೈಸ್ವಾಲ್) ನೀರಾವರಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇಡೀ ಗಣಿಪ್ರದೇಶ ಬಲ್ವಂತ್ ಠಾಕೂರ್ (ಬಾಬಿ ಡಿಯೋಲ್) ಹಿಡಿತದಲ್ಲಿದೆ. ತನ್ನ ವ್ಯವಹಾರಕ್ಕೆ ಅಡ್ಡಬರುವವರನ್ನು ಮುಲಾಜಿಲ್ಲದೇ ಹತ್ಯೆ ಮಾಡುವಷ್ಟು ಕ್ರೂರಿ. ಈ ಬಲ್ವಂತ್‌ನ ಹುಟ್ಟಡಗಿಸಲು ಬಂದ ಸೀತಾರಾಮ್ ಯಾರು? ಡಾಕು ಮಹಾರಾಜ್, ನಾನಾಜಿ ಯಾರು? ಇಬ್ಬರೂ ಒಬ್ಬರೇನಾ? ಈ ಎಲ್ಲ ಕೌತುಕಕ್ಕೂ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ.
