ಡಾನ್ಸ್ ಕರ್ನಾಟಕ ಡಾನ್ಸ್ ಫಿನಾಲೆಯಲ್ಲಿ ಅಪ್ಪು ಟ್ರೋಫಿಗೆ ಮುತ್ತಿಟ್ಟ ಕಾವ್ಯಾ - ಶಶಾಂಕ್; ಈ ಜೋಡಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
Dance Karnataka Dance 2024 Finale: ಕಳೆದ ಐದು ತಿಂಗಳಿಂದ ಡಾನ್ಸ್ ಮೂಲಕವೇ ಕರುನಾಡಿನ ಗಮನ ಸೆಳೆದ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಗ್ರ್ಯಾಂಡ್ ತೆರೆಬಿದ್ದಿದೆ. ಶಶಾಂಕ್ ಮತ್ತು ಕಾವ್ಯಾ ಈ ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದು, ಅಪ್ಪು ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.
Dance Karnataka Dance 2024 winners: ಜೀ ಕನ್ನಡದಲ್ಲಿ ಕಳೆದ ಕೆಲ ತಿಂಗಳಿಂದ ವೀಕ್ಷಕರಿಗೆ ಡಾನ್ಸ್ ಮೂಲಕವೇ ಮೋಡಿ ಮಾಡುತ್ತಿದ್ದ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ತೆರೆ ಬಿದ್ದಿದೆ. ಹತ್ತಾರು ವಾರಗಳಿಂದ ಕುಣಿತ ಮಾತ್ರವಲ್ಲದೆ, ಕಾಮಿಡಿಯ ಮೂಲಕ ಮನರಂಜನೆಯ ರಸಗವಳ ನೀಡುತ್ತಿದ್ದ ಡಿಕೆಡಿ ಭಾನುವಾರಕ್ಕೆ ಕೊನೆಗೊಂಡಿದೆ. ನಾನ್ ಡ್ಯಾನ್ಸರ್ ಆಗಿ ಡಿಕೆಡಿ ವೇದಿಕೆಗೆ ಬಂದು, ನಾನು ಡ್ಯಾನ್ಸರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜೋಡಿ ಯಾವುದು ಎಂಬ ಕುತೂಹಲವಿತ್ತು. ಈ ಮೂಲಕ ಫಿನಾಲೆಯಲ್ಲಿದ್ದ ಏಳು ಜೋಡಿಗಳ ಪೈಕಿ ಯಾರು ವಿಜೇತರು? ಅಪ್ಪು ಟ್ರೋಫಿಗೆ ಎತ್ತಿ ಹಿಡಿದವರು ಯಾರು ಎಂಬ ಕುತೂಹಲಕ್ಕೂ ತೆರೆ ಬಿದ್ದಿದೆ.
ಈ ಸಲದ ಫಿನಾಲೆಯಲ್ಲಿ ಗಿಲ್ಲಿ ನಟ - ಹನೀಷಾ, ಜಾಹ್ನವಿ- ಕಂಠಿ, ಶಶಾಂಕ್- ಪ್ರಿಯಾ, ಶಶಾಂಕ್- ಕಾವ್ಯಾ, ಗಗನಾ - ಉಜ್ವಲ್, ನಿತಿನ್- ಶ್ರೀವಲ್ಲಿ, ಯಶಸ್ವಿನಿ- ಚೆರ್ರಿ ಸುತ್ತಿಗೆ ಆಯ್ಕೆಯಾಗಿದ್ದರು. ಅದರಂತೆ, ಬಹಳ ಕುತೂಹಲ ಮೂಡಿಸಿದ್ದ ಈ ಏಳು ಜೋಡಿಗಳ ಡಾನ್ಸಿಂಗ್ ಕಾಳಗದಲ್ಲಿ ಕೊನೇ ಹಂತಕ್ಕೆ ಬಂದಿದ್ದು ಶಶಾಂಕ್- ಕಾವ್ಯಾ ಮತ್ತು ಶ್ರೀವಲ್ಲಿ- ನಿತಿನ್ ಜೋಡಿ. ಈ ಎರಡು ಜೋಡಿಗಳ ಪೈಕಿ ಕಾವ್ಯಾ ಮತ್ತು ಶಶಾಂಕ್ ಜೋಡಿಯ ಕೈ ಎತ್ತುವ ಮೂಲಕ ಶಿವರಾಜ್‌ಕುಮಾರ್ ವಿಜೇತರನ್ನು ಘೋಷಣೆ ಮಾಡಿದರು.
ಇನ್ನು ಎಂದಿನಂತೆ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಈ ಕಾರ್ಯಕ್ರಮದ ಮಹಾಗುರು. ಇನ್ನುಳಿದಂತೆ ಕ್ರೇಜಿ ಕ್ವೀನ್ ರಕ್ಷಿತಾ, ಡಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್, ಚಿನ್ನಾರಿ ಮುತ್ತ ವಿಜಜ್ ರಾಘವೆಂದ್ರ ತೀರ್ಪುಗಾರರ ಸ್ಥಾನದಲ್ಲಿದ್ದರು. ಆಂಕರ್ ಅನುಶ್ರೀ ನಿರೂಪಣೆ ಇಡೀ ಶೋವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಅದರಂತೆ ಈ ಬಾರಿ ಮತ್ತೆ ರುದ್ರ ಮಾಸ್ಟರ್ ಮೋಡಿ ಮಾಡಿದ್ದಾರೆ. ಕೆಂಡಸಂಪಿಗೆ ಸೀರಿಯಲ್ ಮೂಲಕ ವೀಕ್ಷಕರ ಗಮನ ಸೆಳೆದ ಕಾವ್ಯಾ ಶೈವ ಮತ್ತು ಶಶಾಂಕ್ ಜೋಡಿ ವಿನ್ನರ್ ಆಗಿದೆ. ಈ ಜೋಡಿಗೆ ನೃತ್ಯ ಸಂಯೋಜನೆ ಮಾಡಿದ್ದ ರುದ್ರ ಮಾಸ್ಟರ್ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ.
ಡಿಸೆಂಬರ್ 7 ಮತ್ತು 8ರ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆದಿದೆ. ಅದರಲ್ಲೂ ಭಾನುವಾರ ಸಂಜೆಯಿಂದಲೇ ಈ ಫಿನಾಲೆ ಆರಂಭವಾಗಿತ್ತು. ಏಳು ಜೋಡಿಗಳು ಡಿಕೆಡಿ ವೇದಿಕೆಯನ್ನು ಮತ್ತುಷ್ಟು ಕಲರ್‌ಫುಲ್ ಮಾಡಿದರು. ಡಾನ್ಸ್ ತಕಧಿಮಿತಾ ನಡುವೆ, ಗಿಲ್ಲಿ ನಟ ಮತ್ತು ಗಗನಾ ಚಿತ್ರದುರ್ಗ ಜೋಡಿಯ ಕಾಮಿಡಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಶ್ರೀವಲ್ಲಿ- ನಿತಿನ್ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಜಾಹ್ನವಿ ಮತ್ತು ಕಂಠಿ ಎರಡನೇ ರನ್ನರ್ ಅಪ್ ಆಗಿದ್ದಾರೆ.
ವಿಜೇತರಿಗೆ ಸಿಕ್ಕ ಬಹುಮಾನವೇನು?
ಡಿಕೆಡಿ ಶೋನಲ್ಲಿ ವಿಜೇತರಾದ ಶಶಾಂಕ್ ಮತ್ತು ಕಾವ್ಯಾಗೆ ಪುನೀತ್ ರಾಜ್‌ಕುಮಾರ್ ಅವರ ಟ್ರೋಫಿ ಜತೆಗೆ 15 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಸಿಕ್ಕಿದೆ. ಎರಡನೇ ರನ್ನರ್ ಅಪ್ ಆದವರಿಗೂ ನಗದು ಬಹುಮಾನದ ಜತೆಗೆ ನೆನಪಿನ ಕಾಣಿಕೆಯನ್ನೂ ನೀಡಲಾಗಿದೆ. ವೈಟ್ ಗೋಲ್ಡ್ ಕಡೆಯಿಂದ ಸಿಹಿ ಮತ್ತು ಸುಮುಖ ಜೋಡಿಗೂ ತಲಾ 50 ಸಾವಿರ ಬಹುಮಾನ ಘೋಷಣೆ ಜತೆಗೆ ಗಿಲ್ಲಿ ನಟ ಅವರಿಗೆ 1 ಲಕ್ಷ ಬಹುಮಾನವನ್ನು ಅನೌನ್ಸ್ ಮಾಡಲಾಯ್ತು. ಶಿವಣ್ಣ ಮತ್ತು ಗೀತಾ ಅವರಿಂದ ಎಲ್ಲ ಕೋರಿಯೋಗ್ರಾಫರ್‌ಗಳಿಗೆ ಒಂದು ಲಕ್ಷ ನೀಡಿದ್ದಾರೆ. ಇನ್ನು ಮುಂದಿನ ವಾರದಿಂದ ಸರಿಗಮಪ ಶೋ ಶುರುವಾಗಲಿದೆ.