ಕನ್ನಡ ಸುದ್ದಿ  /  Entertainment  /  Darshan Sudeep To Rishab Shetty Kannada Film Industry Actors Supports Karnataka Cauvery Water Dispute Issue Mnk

ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕನ್ನಡ ಚಿತ್ರೋದ್ಯಮ; ಕಾವೇರಿ ಬಗ್ಗೆ ನಿಲುವು ವ್ಯಕ್ತಪಡಿಸಿದ ಸಿನಿಮಾ ತಾರೆಯರು

ಕಾವೇರಿ ನೀರು ಹಂಚಿಕೆ ವಿಚಾರ ಸದ್ಯ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಸರ್ವಪಕ್ಷ ನಿಯೋಗ ದೆಹಲಿಯಲ್ಲಿ ಬೀಡು ಬಿಟ್ಟರೆ, ಇತ್ತ ಕನ್ನಡ ಚಿತ್ರೋದ್ಯಮ ಕಾವೇರಿಗಾಗಿ ಧ್ವನಿಗೂಡಿಸಿದೆ.

ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕನ್ನಡ ಚಿತ್ರೋದ್ಯಮ; ಕಾವೇರಿ ಬಗ್ಗೆ ನಿಲುವು ವ್ಯಕ್ತಪಡಿಸಿದ ಸಿನಿಮಾ ತಾರೆಯರು
ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕನ್ನಡ ಚಿತ್ರೋದ್ಯಮ; ಕಾವೇರಿ ಬಗ್ಗೆ ನಿಲುವು ವ್ಯಕ್ತಪಡಿಸಿದ ಸಿನಿಮಾ ತಾರೆಯರು

Kannada Film Industry on Cauvery issue: ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ನೀರು ವಿವಾದ ಮತ್ತೆ ಭುಗಿಲೆದ್ದಿದೆ. ರಾಜ್ಯದಲ್ಲಿ ಭರದ ಛಾಯೆ ಇದ್ದರೂ, ತಮಿಳುನಾಡು ಹೆಚ್ಚುವರಿ ನೀರನ್ನು ಬೇಡುತ್ತಿದೆ. ಇತ್ತ ಮಂಡ್ಯ, ಮೈಸೂರು, ಬೆಂಗಳೂರು ಸೇರಿ ಕಾವೇರಿ ನದಿ ನೀರು ಬಳಕೆ ಪ್ರದೇಶಗಳಲ್ಲಿ ನೀರಿಗೆ ತತ್ವಾರ ಶುರುವಾಗಿದೆ. ಹೀಗಿರುವಾಗಲೇ ಕಾವೇರಿಯ ಕಾವು ಹೆಚ್ಚಾಗುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಕನ್ನಡ ಚಿತ್ರರಂಗದವರೆಲ್ಲಿ? ಎಂಬ ಪೋಸ್ಟ್‌ಗಳು ವೈರಲ್‌ ಆಗಿದ್ದವು. ಇನ್ನೂ ಏಕೆ ಸಿನಿಮಾ ಮಂದಿ ಕಾವೇರಿ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂಬಂಥ ಪೋಸ್ಟ್‌ಗಳು ಹರಿದಾಡಿದ್ದವು. ಅದಾದ ಬಳಿಕ ಸಾಕಷ್ಟು ಸಿನಿಮಾ ಮಂದಿ ಕಾವೇರಿ ಪರ ನಿಂತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಅನಿಸಿಕೆ ಹಂಚಿಕೊಂಡಿದ್ದಾರೆ. ಯಾವೆಲ್ಲ ನಟರು, ಏನೆಲ್ಲ ಹೇಳಿಕೊಂಡಿದ್ದಾರೆ. ಇಲ್ಲಿದೆ ವಿವರ.

ಟ್ರೆಂಡಿಂಗ್​ ಸುದ್ದಿ

ನಟ ರಿಷಬ್‌ ಶೆಟ್ಟಿ

ಈ ವರ್ಷ ಮಳೆಯ ಅಭಾವದಿಂದ ನಾಡು ಬರಪೀಡಿತವಾಗಿದೆ. ಈ ಸಂದರ್ಭದಲ್ಲಿ ನಮ್ಮ ರೈತರ ಜೊತೆ ನಿಲ್ಲುವುದು ಎಲ್ಲರ ಜವಾಬ್ದಾರಿ. ಸರ್ಕಾರಗಳು ಕಾವೇರಿ ವಿಚಾರದಲ್ಲಿ ಆದಷ್ಟು ಬೇಗ ನ್ಯಾಯಯುತ ನಿರ್ಣಯಕ್ಕೆ ಬರಲಿ. ರೈತರಿಗೆ ನ್ಯಾಯ ಸಿಗಲಿ.

ಧನಂಜಯ್

ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೃಷ್ಣ ನದಿಗಳ ಹೋರಾಟ ನಮ್ಮ ಎಲ್ಲರ ಕರ್ತವ್ಯ . ನಮ್ಮ ರೈತರಿಗೆ ಸಿಗಬೇಕಾದ ಪಾಲು ಸಿಗಲೇಬೇಕು. ನಮ್ಮ ಹಕ್ಕಿಗಾಗಿ ಸದಾ ಹೋರಾಡೋಣ. ಕಾವೇರಿ ಸಂಘರ್ಷ ಬೇಗ ಅಂತ್ಯವಾಗಲಿ.‌

ದರ್ಶನ್

ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ.‌

ಸುದೀಪ್

ಸ್ನೇಹಿತರೆ ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ.

ದುನಿಯಾ ವಿಜಯ್

ಕಾವೇರಿ ಈ ನಾಡಿಗೆ ಬರೀ ನೀರಲ್ಲ ಈ ಮಣ್ಣಿನ ಆಳಕ್ಕಿಳಿದ ಜಲರೂಪದ ಬೇರು , ಪ್ರತಿಯೊಬ್ಬ ಕನ್ನಡಿಗನೂ ತಲೆಮೇಲೆ ಹೊತ್ತು ತಿರುಗೋ ದೈವರೂಪದ ತೇರು . ಇಷ್ಟು ದಿನ ಆಕಾಶಕ್ಕೆ ಮುಖ ಮಾಡಿ ನಿಂತಿದ್ದ ಅನ್ನದಾತ ಇಂದು ನ್ಯಾಯಾಲಯದ ಕಡೆ ಮುಖ ಮಾಡಿ ನಿಂತಿದ್ದಾನೆ . ಕಣ್ಣ ಮುಂದೆ ನೀರು ಹರಿದಂತೆ ಅವನ ಕಣ್ಣಿನಿಂದ ನೀರು ಹರಿಯುತ್ತದೆ . ನ್ಯಾಯಕ್ಕಾಗಿ ಕೈಚಾಚುತ್ತಿಲ್ಲ ಒಕ್ಕೊರಲಿನಿಂದ ಕೈಮುಗಿಯುತ್ತಿದ್ದೇವೆ ದಯಮಾಡಿ ಅನ್ನದಾತನಿಗೆ ನ್ಯಾಯ ಒದಗಿಸಿ

ಉಪೇಂದ್ರ

ಈಗಾಗಲೇ ಸರಿಯಾಗಿ ಮಳೆಯಾಗದೇ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ

ಶಿವರಾಜ್‌ಕುಮಾರ್

ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ.

ಸಂಬಂಧಿತ ಲೇಖನ

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.