ಸ್ಕೂಟರ್‍ನಲ್ಲಿ ಪ್ಯಾರಿಸ್ ಸುತ್ತಿದ ದೀಪಿಕಾ ಪಡುಕೋಣೆ; ಮೋಜಿನ ವಿಡಿಯೋ ಹಂಚಿಕೊಂಡ ನಟಿ
ಸ್ಕೂಟರ್‍ನಲ್ಲಿ ಪ್ಯಾರಿಸ್ ಸುತ್ತಿದ ದೀಪಿಕಾ ಪಡುಕೋಣೆ ಮೋಜಿನ ವಿಡಿಯೋ ಹಂಚಿಕೊಂಡಿದ್ದಾರೆ. ಫ್ರೆಂಚ್ ಭಾಷೆಯಲ್ಲಿ ಮಾತನಾಡುತ್ತೇನೆ ಎನ್ನುತ್ತಾ ಪ್ಯಾರಿಸ್ ಸುತ್ತಿದ ಅನುಭವ ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಗಮನ ಸೆಳೆದಿದ್ದಾರೆ. ನಟಿ ಲೂಯಿ ವಿಟಾನ್ ಪ್ರದರ್ಶನದಲ್ಲಿ ಕಪ್ಪು ಲೆಗ್ಗಿಂನ್ಸ್ ತೊಟ್ಟು ಒಂದು ದೊಡ್ಡ ಜಾಕೆಟ್ ಹಾಕಿ ಮಿಂಚಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಮೊದಲು, ಅವರು ತಮ್ಮ ತಂಡದೊಂದಿಗೆ ಪ್ಯಾರಿಸ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. ತಮ್ಮ ಸಮಯವನ್ನು ಹೆಚ್ಚು ಸದುಪಯೋಗಪಡಿಸಿಕೊಂಡಿದ್ದಾರೆ. ಯಾರಾದರೂ ಹೊರಗಡೆ ಹೋದಾಗ ಯಾವ ರೀತಿ ಅಲ್ಲಿನ ಪ್ರದೇಶಗಳನ್ನು ನೋಡಿ ಖುಷಿ ಪಡುತ್ತಾರೋ ಅದೇ ರೀತಿ ದೀಪಿಕಾ ಕೂಡ ಈ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.
ಮೋಜಿನ ವಿಡಿಯೋ ಹಂಚಿಕೊಂಡ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ಯಾರಿಸ್ ಹೋದಾಗ ತಾವೇನು ಮಾಡಿದ್ದಾರೆ ಎಂಬ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಅವರು ಅಲ್ಲಿ ಫ್ರೆಂಚ್ ಭಾಷೆ ಮಾತನಾಡುತ್ತಾ, ಸಿಟಿ ರೌಂಡ್ ಹಾಕಿದ್ದಾರಂತೆ. ಇತ್ತೀಚೆಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ಅವರ ಸುತ್ತಾಟದ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಾನು ಪ್ಯಾರಿಸ್‌ನಲ್ಲಿ ಏನೆಲ್ಲ ಮಾಡಿದೆ ಎಂದು ಕಿರು ವಿಡಿಯೋದ ಮೂಲಕ ತಿಳಿಸಿಕೊಟ್ಟಿದ್ದಾರೆ. ನಗರದಲ್ಲಿನ ತಮ್ಮ ತಮಾಷೆಯ ಕ್ಷಣಗಳ ಒಂದು ನೋಟವನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ.
ದೀಪಿಕಾ ಫ್ರೆಂಚ್ ಭಾಷೆ ಮಾತನಾಡುತ್ತಾರೆ
ದೀಪಿಕಾ ತುಂಬಾ ಆತ್ಮವಿಶ್ವಾಸದಿಂದ ಫ್ರೆಂಚ್ ಭಾಷೆ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. “ನಾನು ಫ್ರೆಂಚ್ ಭಾಷೆಯಲ್ಲಿ ತುಂಬಾ ಉತ್ತಮವಾಗಿ ಮಾತನಾಡುತ್ತೇನೆ. ನಾನು 11 ಮತ್ತು 12 ನೇ ತರಗತಿಯಲ್ಲಿ ಫ್ರೆಂಚ್ ಭಾಷೆಯನ್ನು ಕಲಿತಿದ್ದೆ” ಎಂದು ಹೇಳಿಕೊಂಡಿದ್ದಾರೆ. ನಟಿ ತನ್ನನ್ನು ಫ್ರೆಂಚ್ ಭಾಷೆಯಲ್ಲಿ ಪರಿಚಯಿಸಿಕೊಳ್ಳುತ್ತಾ, "ಜೆ ಮ್ಯಾಪೆಲ್ಲೆ ದೀಪಿಕಾ. ಜೆ ಸುಯಿಸ್ ಇಂಡಿಯೆನ್ನೆ. (ನಾನು ದೀಪಿಕಾ, ನಾನು ಭಾರತೀಯ)" ಎಂದು ಹೇಳಿಕೊಂಡಿದ್ದಾರೆ.
ಸಿಟಿ ಸುತ್ತಲು ಹೋದ ದೀಪಿಕಾ ಕೊನೆಯಲ್ಲಿ ಸ್ಕೂಟರ್ ರೈಡ್ ಮಾಡುತ್ತಾರೆ. ತಾವೇ ಸ್ಕೂಟಿಯನ್ನು ಓಡಿಸಿಲ್ಲ. ಬದಲಾಗಿ ತಾವು ಸ್ಕೂಟಿಯಲ್ಲಿ ಕುಳಿತು ಸಾಗಿದ್ದಾರೆ. ಕೊನೆಯಲ್ಲಿ ಹೆಲ್‌ಮೆಟ್ ಧರಿಸಿದ್ದು ಕತ್ತಿಗೆ ಭಾರವಾಗಿತ್ತು ಎಂದೂ ಸಹ ಹೇಳಿದ್ದಾರೆ. ಆದರೆ, ಪ್ಯಾರಿಸ್ ಸುತ್ತಾಟದಲ್ಲಿ ಅವರು ಸ್ಕೂಟಿಯಲ್ಲಿ ಕುಳಿತುಕೊಂಡಿದ್ದು ಅವರಿಗೆ ಖುಷಿ ಕೊಟ್ಟಿದೆ . ಸ್ಕೂಟರ್ ಸವಾರಿ ಮಾಡುತ್ತಾ ಪ್ಯಾರಿಸ್‌ನ ರೋಮಾಂಚಕ ಜೀವನವನ್ನು ಆನಂದಿಸುತ್ತಿರುವುದು ಕಂಡುಬರುತ್ತದೆ.
ಇದಕ್ಕೂ ಮೊದಲು, ದೀಪಿಕಾ ಪಡುಕೋಣೆ ಪ್ಯಾರಿಸ್ ಫ್ಯಾಷನ್ ವೀಕ್‌ನ ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರಗಳಲ್ಲಿ ದೀಪಿಕಾ ಐಫೆಲ್ ಟವರ್ ಹಿನ್ನೆಲೆಯಲ್ಲಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕಪ್ಪು ಲೆಗ್ಗಿಂಗ್ಸ್‌ನೊಂದಿಗೆ ದೊಡ್ಡ ಗಾತ್ರದ ಬಿಳಿ ಬಣ್ಣದ ಜಾಕೆಟ್, ಬಿಳಿ ಹ್ಯಾಟ್ ಹಾಗೂ ಕಪ್ಪು ಕನ್ನಡಕ ಧರಿಸಿದ್ದಾರೆ. ಕಪ್ಪು ಕೈಗವಸುಗಳು ಇನ್ನಷ್ಟು ಆಕರ್ಶಕವಾಗಿ ಕಾಣುತ್ತಿತ್ತು. ಅಂತರರಾಷ್ಟ್ರೀಯ ತಾರೆಯರ ಜತೆ ದೀಪಿಕಾ ಲೂಯಿ ವಿಟಾನ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
