ಧರ್ಮಬಲದಿಂದ ಬೆಳ್ತಂಗಡಿಯಲ್ಲಿ 346 ನಿಗೂಢ ಸಾವುಗಳಾಗಿವೆ! ಧರ್ಮಸ್ಥಳ ಸೌಜನ್ಯ ಕೇಸ್ ನಡುವೆಯೇ ಚೇತನ್ ಅಹಿಂಸಾ ಅಚ್ಚರಿಯ ಹೇಳಿಕೆ
Chetan Ahimsa on Sowjanya case: ಧರ್ಮಸ್ಥಳದ ಸೌಜನ್ಯ ಕೇಸ್‌ಗೆ ಈ ವರೆಗೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದೀಗ ಇದೇ ಘಟನೆ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿ ಭಾಗದಲ್ಲಿ ನೂರಾರು ಅಸಹಜ ಸಾವುಗಳಾಗಿವೆ ಎಂದಿದ್ದಾರೆ.

Dharmasthala Soujanya Case: ಧರ್ಮಸ್ಥಳದ ಸೌಜನ್ಯ ಇಲ್ಲವಾಗಿ ದಶಕ ಕಳೆದರೂ, ಇಂದಿಗೂ ಆಕೆಯ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು, ದಕ್ಷಿಣ ಕನ್ನಡದಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಸೋಷಿಯಲ್ ಮೀಡಿಯಾ ಅಭಿಯಾನಗಳೂ ನಡೆಯುತ್ತಿವೆ. ಪರ ವಿರೋಧ ಚರ್ಚೆಗಳು ಇಂದಿಗೂ ಚರ್ಚೆಯಾಗುತ್ತಲೇ ಇದೆ. ಇದರ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಈ ಹಿಂದಿನಿಂದಲೂ ಸುದ್ದಿಯಾಗುತ್ತಿದ್ದರೂ, ತಾರ್ಕಿಕ ಅಂತ್ಯ ಕಂಡಿಲ್ಲ. ಇದೀಗ ಇದೇ ಘಟನೆ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿ ಭಾಗದಲ್ಲಿ ನೂರಾರು ಅಸಹಜ ಸಾವುಗಳಾಗಿವೆ ಎಂದಿದ್ದಾರೆ.
ಧರ್ಮಸ್ಥಳ ಸೌಜನ್ಯ ಕೇಸ್ ಬೂದಿ ಮುಚ್ಚಿದ ಕೆಂಡದಂತಿತ್ತು. ಈ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದ್ದು, ದೂತ ಸಮೀರ್ ಎಂಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ "ಧರ್ಮಸ್ಥಳ Horror; ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?" ಎಂಬ ವಿಡಿಯೋ ವೈರಲ್ ಆದ ಬಳಿಕ. ಅಲ್ಲಿಂದ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯ ವಿಷಯವಾಗಿದೆ ಈ ಕೇಸ್. ಈ ಕೇಸ್‌ನ ಆಳ ಅಗಲ ಅರಿತ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ ಸಹ ಸಮೀರ್ ಜತೆಗೆ ಬೆಂಬಲವಾಗಿ ನಿಂತಿದ್ದಾರೆ. ಸೌಜನ್ಯ ಕೇಸ್ ಮಾತ್ರವಲ್ಲದೆ, ಸರಣಿ ಹತ್ಯಾಕಾಂಡಗಳು ಬೆಳ್ತಂಗಡಿ ಭಾಗದಲ್ಲಿ ನಡೆದಿವೆ ಎಂದೂ ಹೇಳಿದ್ದರು. ಇದೀಗ ಚೇತನ್ ಅಹಿಂಸಾ ಅದೇ ಮಾತನ್ನು ಹೇಳಿದ್ದಾರೆ.
ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿರುವ ಚೇತನ್ ಅಹಿಂಸಾ, ಬೆಳ್ತಂಗಡಿ ಭಾಗದಲ್ಲಿ 346 ಅಸಹಜ ನಿಗೂಢ ಸಾವುಗಳು ನಡೆದಿವೆ. ಕೆಲವರು ಈ ಕೇಸ್ ಮೇಲೆ ದೊಡ್ಡ ಪ್ರಮಾಣದ ಹಣಬಲ, ತೋಳ್ಬಲ, ರಾಜಕೀಯ ಬಲ, ಧರ್ಮಬಲ, ಜಾತಿ ಬಲದ ಪ್ರಭಾವ ಬೀರಿದ್ದಾರೆ ಎಂದಿದ್ದಾರೆ. ಹೀಗಿದೆ ಚೇತನ್ ಹೇಳಿದ ಮಾತು.
ನ್ಯಾಯಕ್ಕಾಗಿ ಹೋರಾಟ
"11 ದಿನಗಳ ಹಿಂದೆ ಸೌಜನ್ಯ ಕೇಸ್ ಬಗ್ಗೆ ಒಂದು ಉತ್ತಮವಾದ ತನಿಖಾ ಪತ್ರಿದ್ಯೋಮದ ವಿಡಿಯೋ ಬಂದ ನಂತರ, ಕರ್ನಾಟಕದಾದ್ಯಂತ ಚರ್ಚೆಗಳು, ಹೋರಾಟಗಳು , ನ್ಯಾಯ ಪರವಾದ ಕೂಗು ಕೇಳಿಬರ್ತಿವೆ. ಇದು ಒಳ್ಳೆಯ ಬೆಳವಣಿಗೆ. ನಿನ್ನೆ ನಾನೂ ಸಹ ಸೌಜನ್ಯ ಅವರ ತಾಯಿ ಜತೆಗೆ ಮಾತನಾಡುವ ಅವಕಾಶ ಸಿಕ್ಕಿತು. "ಚೇತನ್ ನನಗೆ ನ್ಯಾಯ ಒದಗಿಸಿಕೊಡಪ್ಪ" ಅಂದ್ರು. ಖಂಡಿತ ಅಮ್ಮ, ನಾನು ಪ್ರಾಮಾಣಿಕ ಪ್ರಯತ್ನ ಮಾಡ್ತಿನಿ ಅಂತ ಹೇಳಿದ್ದೀನಿ" ಎಂದಿದ್ದಾರೆ.
ಬೆಳ್ತಂಗಡಿಯಲ್ಲಿ 346 ನಿಗೂಢ ಸಾವುಗಳು..
"ಇವತ್ತು ನಾವು ಅನೇಕರ ಹೋರಾಟದ ಜತೆಗೆ ನಾವೂ ಕೈ ಜೋಡಿಸೋಣ. ಈ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಬೇಡಿಕೆ ಇಡುತ್ತಿದ್ದೇವೆ. ಈ ಕೇಸ್ ಅನ್ನು ರೀ ಓಪನ್ ಮಾಡಿ. ನ್ಯಾಯಾಂಗ ತನಿಖೆಯಾಗಲಿ, ಎಸ್‌ಐಟಿ ತನಿಖೆಯಾಗಲಿ, ನಮಗೆ ನ್ಯಾಯ ಬೇಕು. ಈ ತನಿಖಾ ಪತ್ರಿಕೋದ್ಯಮದ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಸೌಜನ್ಯ ಪ್ರಕರಣದ ಜತೆಗೆ ಅನೇಕ ಪ್ರಕರಣಗಳು ಇಂಟರ್ ಕನೆಕ್ಟ್ ಆಗಿವೆ. ನನಗೆ ಮಾಹಿತಿ ಬಂದಿರುವ ಪ್ರಕಾರ, ಬೆಳ್ತಂಗಡಿಯಲ್ಲಿ 346 ಅಸಹಜ ನಿಗೂಢ ಸಾವುಗಳು ನಡೆದಿವೆ ಎಂಬುದು ಗೊತ್ತಾಗಿದೆ" ಎಂದಿದ್ದಾರೆ.
ಧರ್ಮಬಲ ಪ್ರಭಾವ ಬೀರಿದೆ...
"ನಮಗೆ ಇದೆಲ್ಲದರ ಬಗ್ಗೆ ನ್ಯಾಯ ಬೇಕು. ಮಾಹಿತಿ ಬೇಕು. ಯಾರ ಮೇಲೆ ಆರೋಪ ಬಂದಿದೆ, ತಪ್ಪಿತಸ್ಥರು ಯಾರು ಇರಬಹುದು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಅವ್ರದ್ದು ಈ ಕೇಸ್ ಮೇಲೆ ದೊಡ್ಡ ಪ್ರಮಾಣದ ಪ್ರಭಾವ ಇದೆ. ಹಣಬಲ, ತೋಳ್ಬಲ, ರಾಜಕೀಯ ಬಲ, ಧರ್ಮಬಲ, ಜಾತಿ ಬಲ. ಅದರ ವಿರುದ್ಧ ಫೈಟ್ ಮಾಡುವುದು ಕಷ್ಟ ಇದೆ. ಜನ ಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿಯ ಮುಂದೆ ಯಾವುದೂ ನಡೆಯಲ್ಲ. ಯಾವತ್ತಾದರೂ ಬದಲಾವಣೆ ಆಗಿದೆ, ಪರಿವರ್ತನೆ ಆಗಿದೆ ಎಂದರೆ, ದಾನ ದಯೆ ದಾಕ್ಷಿಣ್ಯದ ಮೇಲಿಂದ ಅಲ್ಲ. ತಳಮಟ್ಟದ ಹೋರಾಟದಿಂದ. ಆ ಹೋರಾಟ ಮುಂದುವರಿಸೋಣ, ಜೈ ಕರ್ನಾಟಕ, ಜೈ ಭೀಮ್" ಎಂದಿದ್ದಾರೆ ಚೇತನ್ ಅಹಿಂಸಾ.
2012ರಲ್ಲಿ ನಡೆದ ಘಟನೆ..
ಅಂದಹಾಗೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಮೇಲೆ 2012ರ ಅಕ್ಟೋಬರ್ 9ರಂದು ಅತ್ಯಾ*ರವೆಸಗಿ ಕೊ* ಮಾಡಲಾಗಿತ್ತು ಎಂದು ವರದಿಯಾಗಿದೆ.