ಬದುಕಿನಲ್ಲಿ ರಿಸ್ಕ್‌ ಬೇಕು, ಆದರೆ ಅದು ಲೆಕ್ಕಾಚಾರದ ರಿಸ್ಕ್‌ ಆಗಿರಬೇಕು; ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ದೀಪಾ ಹಿರೇಗುತ್ತಿ ಬರಹ
ಕನ್ನಡ ಸುದ್ದಿ  /  ಮನರಂಜನೆ  /  ಬದುಕಿನಲ್ಲಿ ರಿಸ್ಕ್‌ ಬೇಕು, ಆದರೆ ಅದು ಲೆಕ್ಕಾಚಾರದ ರಿಸ್ಕ್‌ ಆಗಿರಬೇಕು; ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ದೀಪಾ ಹಿರೇಗುತ್ತಿ ಬರಹ

ಬದುಕಿನಲ್ಲಿ ರಿಸ್ಕ್‌ ಬೇಕು, ಆದರೆ ಅದು ಲೆಕ್ಕಾಚಾರದ ರಿಸ್ಕ್‌ ಆಗಿರಬೇಕು; ನಿರ್ದೇಶಕ ಗುರುಪ್ರಸಾದ್‌ ಬಗ್ಗೆ ದೀಪಾ ಹಿರೇಗುತ್ತಿ ಬರಹ

ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರ್ಥಿಕ ಸಮಸ್ಯೆಯೇ ಆ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಪೊಲೀಸ್‌ ವರದಿ ಪ್ರಕಾರ ತಿಳಿದಿದೆ. ಈ ನಡುವೆ ಸಿನಿಮಾ ಕ್ಷೇತ್ರದಲ್ಲಿನ ರಿಸ್ಕ್‌ ಬಗ್ಗೆ ಬರಹಗಾರ್ತಿ ದೀಪಾ ಹಿರೇಗುತ್ತಿ ವಿಶೇಷ ಬರಹವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಇಲ್ಲಿದೆ ಆ ಬರಹ.

ಗುರು ಪ್ರಸಾದ್‌ ಸಾವಿನ ಕುರಿತು ದೀಪಾ ಹಿರೇಗುತ್ತಿ ಬರಹ
ಗುರು ಪ್ರಸಾದ್‌ ಸಾವಿನ ಕುರಿತು ದೀಪಾ ಹಿರೇಗುತ್ತಿ ಬರಹ

Deepa Hiregutti Post about Guru Prasad: ಮಠ ನಿರ್ದೇಶಕ ಗುರುಪ್ರಸಾದ್‌ ಇನ್ನಿಲ್ಲ ಎಂಬ ಸುದ್ದಿಯನ್ನು ನಿನ್ನೆ ಮಧ್ಯಾಹ್ನ ಅವರ ಪಾರ್ಥಿವ ಶರೀರದ ಫೋಟೋದೊಂದಿಗೆ ನೋಡಿದಾಗ ಬಹಳ ಸಂಕಟವಾಯಿತು. ಕೈಕಾಲುಗಳೆಲ್ಲ ನಡುಗಿದಂತಾಗಿ ನನ್ನ ಮನಸ್ಸು ಸಮಸ್ಥಿತಿಗೆ ಬರಲು ಹಲವು ನಿಮಿಷಗಳೇ ಹಿಡಿದವು. ವೈಯಕ್ತಿಕವಾಗಿ ನನಗೆ ಅವರು ಗೊತ್ತಿಲ್ಲ. (ನಾವು ಕುಪ್ಪಳಿಯಲ್ಲಿ ಸಾಂಗತ್ಯದಿಂದ ಫಿಲ್ಮ್‌ ಫೆಸ್ಟಿವಲ್‌ ಮಾಡಿದಾಗ ಬಂದಿದ್ದರು. ಆಗ ಭೇಟಿಯಾಗಿದ್ದಷ್ಟೇ.) ಆದರೆ ಪ್ರತಿಭಾವಂತನೊಬ್ಬ ಹೀಗೆ ಅದೂ ತಮ್ಮ ಐವತ್ತೆರಡನೇ ವಯಸ್ಸಿನಲ್ಲಿ ಕರುಣಾಜನಕ ಪರಿಸ್ಥಿತಿಯಲ್ಲಿ ಇಲ್ಲವಾಗುವುದೆಂದರೆ ಅದು ಎಲ್ಲರಿಗೂ ಆಘಾತ ತರುವ ಸುದ್ದಿಯೇ.

ಅದಿರಲಿ, ಯಾಕೆ ಈ ರೀತಿಯ ಘಟನೆಗಳು ನಡೆಯುತ್ತವೆ? (ಇದು ನನಗನ್ನಿಸಿದ್ದು. ಯಾರದ್ದೇ ಸಾ*ವಿನ ಪೋಸ್ಟ್‌ ಮಾರ್ಟಮ್‌ ಅಲ್ಲ. ಹಾಗೆ ಮಾಡಲು ಯಾರಿಗೂ ಅಧಿಕಾರವೂ ಇಲ್ಲ. ) ಮೊಟ್ಟ ಮೊದಲಿಗೆ ಸಿನಿಮಾ ಎನ್ನುವುದೊಂದು ಮಾಯಾಲೋಕ. ಜನರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುವ ಅದ್ಭುತ ಮನರಂಜನೆ ನೀಡುವ ಸಿನಿಮಾಲೋಕ ಬಹಳ ರಿಸ್ಕಿ ಕೂಡ. ಆದರೇನು ಒಂದು ವೇಳೆ ಕ್ಲಿಕ್‌ ಆದರೆ ಅದು ಕೊಡುವ ಹಣ, ಜನಪ್ರಿಯತೆ ಅಂತಿಂಥದ್ದಲ್ಲ. ಹಾಗಾಗಿ ಇಟ್ಸ್‌ ವರ್ಥ್‌ ದ ರಿಸ್ಕ್‌ ಎಂದು ಸಿನಿರಂಗದ ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ.

ಆದರೆ ಈ ಸಿನಿಮಾಲೋಕದ ಮಂದಿಯ ನಿರೀಕ್ಷೆಗಳಂತೆ ಜನರ ತೀರ್ಪುಗಳಿರುವುದಿಲ್ಲ. ಏನೇನೋ ಆಗುತ್ತದೆ ಎಂದುಕೊಂಡ ಸಿನಿಮಾವನ್ನು ಏನೂ ಅಲ್ಲ ಎಂದು ಮಣ್ಣು ಮುಕ್ಕಿಸುವ ಜನರು ಸಾಧಾರಣ ಸಿನಿಮಾ ಒಂದನ್ನು ಗೆಲ್ಲಿಸಿಬಿಡುತ್ತಾರೆ! ಕಷ್ಟಕ್ಕಿರಲಿ ಎಂದುಕೊಂಡು ಸುಮ್ಮನೇ ಮಾಡಿದ ಸಿನಿಮಾವನ್ನೂ ಸೂಪರ್‌ ಡ್ಯೂಪರ್‌ ಹಿಟ್‌ ಮಾಡಿಬಿಡುತ್ತಾರೆ! (ಶಾಂತಿಕ್ರಾಂತಿಯ ಸೋಲಿನಿಂದ ಚೇತರಿಸಿಕೊಳ್ಳಲು ರಾಮಾಚಾರಿ ಸಿನಿಮಾ ಮಾಡಿದ ರವಿಚಂದ್ರನ್‌ ಅವರೇ ರಾಮಾಚಾರಿ ಸಿನಿಮಾದ ಆ ಪರಿಯ ಯಶಸ್ಸನ್ನು ನಿರೀಕ್ಷಿಸಿರಲಿಲ್ಲವಂತೆ!) ಮಜವೆಂದರೆ ಯಾವ ಸಿದ್ಧ ಸೂತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡಿದರೆ ಸಿನಿಮಾ ಗೆಲ್ಲುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ! ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಯಾರಿಗೂ ಇಲ್ಲ. ನಿಜ ಹೇಳಬೇಕೆಂದರೆ ಈ ಸಿದ್ಧ ಸೂತ್ರಗಳು ಎಂಬುದೇ ಒಂದು ಮೋಹಕ ಸುಳ್ಳು! (ಗುರುಪ್ರಸಾದ್‌ ಅವರೇ ನಾಯಕಿ, ರೋಮ್ಯಾಂಟಿಕ್‌ ದೃಶ್ಯಗಳಿಲ್ಲದ ಸಿನಿಮಾ ಮಾಡಿ ಖ್ಯಾತರಾಗಿದ್ದಲ್ಲವೇ?) ಕಾರಣ ಪ್ರೇಕ್ಷಕ ಮಹಾಶಯ ಆ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ.

ಹೀಗಿರುವಾಗ ಸೋಲುಗೆಲುವುಗಳ ಹಾವು ಏಣಿಯಾಟದಲ್ಲಿ, ಎಂಥೆಂಥದ್ದೋ ನಿರೀಕ್ಷೆಗಳು ಮಣ್ಣಾಗುತ್ತವೆ. ಹೊನ್ನು ಮಣ್ಣಾಗುತ್ತದೆ. ಸಂಬಂಧಗಳು ಶಿಥಿಲವಾಗುತ್ತವೆ. ಸಾಲದ ಸುಳಿಯಲ್ಲಿ ಸಿಲುಕಿಕೊಂಡಾತ ಎಂತಹದ್ದೇ ಪ್ರತಿಭಾವಂತನಾಗಿರಲಿ ಆತನೇ ಅದರಿಂದ ಪ್ರಯತ್ನಪಟ್ಟು ಎದ್ದುಬರಬೇಕೇ ವಿನಃ ಯಶಸ್ಸಿನಲ್ಲಿ ಪಾರ್ಟಿ ಮಾಡಿದವರು ಯಾರೂ ಬರುವುದಿಲ್ಲ. ಹಾಗೆಲ್ಲ ಬರಲು ಇವೆಲ್ಲ ಸಣ್ಣ ಮೊತ್ತಗಳೂ ಆಗಿರುವುದಿಲ್ಲ ಬಿಡಿ. ಹಾಗಾಗಿ ಆರ್ಥಿಕ ಸದೃಢತೆ ಇಲ್ಲದಿರುವುದು ಎಲ್ಲ ಸಮಸ್ಯೆಗಳ ತಾಯಿಬೇರು. ಸಿನಿಮಾ ಕ್ಷೇತ್ರದ ಪ್ರತಿಯೊಬ್ಬರೂ ಪ್ರಾಜೆಕ್ಟ್‌ ಆಧಾರಿತ ಕೆಲಸಗಳನ್ನು ಮಾಡುವುದರಿಂದ ಆದಾಯ ನಿಶ್ಚಿತವಾಗಿರುವುದಿಲ್ಲ. ಕೆಲವೇ ಕೆಲವು ಯಶಸ್ವೀ ನಾಯಕ, ನಾಯಕಿ, ನಿರ್ದೇಶಕರು ನಿರ್ಮಾಪಕರು, ಬೆರಳೆಣಿಕೆಯಷ್ಟು ಪೋಷಕ ನಟನಟಿಯರನ್ನು ಬಿಟ್ಟರೆ ಬಹುತೇಕರ ವೃತ್ತಿಜೀವನ ಡೋಲಾಯಮಾನವಾಗಿಯೇ ಇರುತ್ತದೆ. ಅನಿಶ್ಚಿತ ಆದಾಯ ಎಂಬುದು ಎಂತಹ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಎಂಬುದನ್ನು ಅದನ್ನು ಅನುಭವಿಸಿದವರೇ ಹೇಳಬೇಕು.

ಇನ್ನು ಸಿನಿಮಾದವರು ಒಂದು ಸಲ ಪ್ರಸಿದ್ಧರಾಗಿಬಿಟ್ಟರೆ ಅವರ ವೈಯಕ್ತಿಕ ಬದುಕು ಯಾವಾಗಲೂ ಬಯಲಿನಲ್ಲಿಯೇ ಇರುತ್ತದೆ, ಇದು ಒಂದು ರೀತಿಯ ವರವೂ ಹೌದು ಶಾಪವೂ ಹೌದು. ತಮಗೋಸ್ಕರ ಬದುಕುವ ಬದಲು ಜನರಿಗೋಸ್ಕರ ಬದುಕಬೇಕಾಗುತ್ತದೆ. ಜನರ ದೃಷ್ಟಿಯಲ್ಲಿ ತಮ್ಮ ಇಮೇಜ್‌ ಹಾಳಾಗಬಾರದೆಂಬ ಕಾರಣಕ್ಕೆ ಏನೇನೋ ಸರ್ಕಸ್‌ ಮಾಡಬೇಕಾಗುತ್ತದೆ. ಇದರಿಂದ ಸಾಲ, ಮಾನಸಿಕ ಒತ್ತಡ ದಿನೇ ದಿನೇ ಹೆಚ್ಚುತ್ತದೆ. ಇನ್ನು ಪ್ರಸಿದ್ಧರಿಗೆ ಮಾನಸಿಕ ಖಾಯಿಲೆಗಳು ಬರಬಾರದೆಂದೇನಿಲ್ಲ. ಆದರದು ಸಮಾಜಕ್ಕೆ ಗೊತ್ತಾಗಬಾರದೆಂದು ಖಾಯಿಲೆಯನ್ನು ಮುಚ್ಚಿಟ್ಟುಕೊಂಡು ಸೂಕ್ತ ಉಪಚಾರ ಪಡೆಯದೇ ವಿಪರೀತವಾಗಬಹುದು. ಕುಡಿತ, ಜೂಜು, ಡ್ರಗ್ಸ್‌ನಂತಹ ಚಟಗಳು ಅಂಟಿಕೊಳ್ಳಬಹುದು. ಕೊನೆಯದಾಗಿ ಎಂಥವರಿಗೂ ಸಮಸ್ಯೆಯಾದಾಗ ಒರಗಲೊಂದು ಹೆಗಲು ಇಲ್ಲದೇ ಹೋದರೆ ಪರಿಸ್ಥಿತಿ ಮತ್ತಷ್ಟು ಮತ್ತಷ್ಟು ಬಿಗಡಾಯಿಸುತ್ತದೆ. ಕೊನೆಗೆ ಸಾ*ವಲ್ಲದೇ ಬೇರೆ ಯಾವ ದಾರಿಯೂ ಸುಖವಾದದ್ದಲ್ಲ ಎನ್ನಿಸುವ ಹಂತಕ್ಕೆ ಬಂದುಬಿಡುತ್ತದೆ.

ಹಾಗಂತ ನಾವು ಯಾರನ್ನೂ ಜಡ್ಜ್‌ ಮಾಡಲು ಆಗುವುದಿಲ್ಲ. ಏಕೆಂದರೆ ಅವರು ನಡೆದ ದಾರಿಯಲ್ಲಿ ನಾವ್ಯಾರೂ ನಡೆದಿರುವುದಿಲ್ಲ. ಹಾಗಾಗಿ ಅವರ ಬದುಕಿನ ಬಗ್ಗೆ ಮಾತಾಡುವ ಅಧಿಕಾರ ನಮಗಿಲ್ಲ. ಬದುಕಿದ್ದಾಗ ಒಟ್ಟಿಗೆ ಒಡನಾಡಿ, ಅವರಿಂದ ಲಾಭವನ್ನೂ ಪಡೆದು ಅವರು ಇನ್ನಿಲ್ಲವಾದ ಮರುಗಳಿಗೆ ಅತ್ಯಂತ ಕೀಳಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತಾಡಲು ಶುರುಮಾಡುವ ಜನರು ನಿಜಕ್ಕೂ ಪರಮನೀಚರೇ.

ಹಾಂ, ಬೇರೆಯವರ ಬದುಕಿನ ತಪ್ಪುಗಳಿಂದ ಪಾಠ ಕಲಿಯುವುದೋ ಅಥವಾ ನಮ್ಮ ಬದುಕಿನಲ್ಲೇ ಸಮಸ್ಯೆಯಾಗಿ ಅದರಿಂದ ಪಾಠ ಕಲಿಯುವುದೋ ಎಂಬ ವಿಚಾರ ನಮಗೆ ಬಿಟ್ಟದ್ದು. ಹಾಗಾಗಿ ಬಹಳ ನೋವಿನಿಂದಲೇ ನಾಲ್ಕು ಮಾತು ಬರೆಯಬೇಕಾಯಿತು. ನಿಜ, ಬದುಕಿನಲ್ಲಿ ರಿಸ್ಕ್‌ ಬೇಕು. ಆದರೆ ಸ್ವಲ್ಪ ಲೆಕ್ಕಾಚಾರ ಹಾಕಿ ರಿಸ್ಕ್‌ ತೆಗೆದುಕೊಳ್ಳುವುದು ಎಲ್ಲರಿಗೂ ಕ್ಷೇಮ. ಏಕೆಂದರೆ ಬದುಕೊಂದು ಅಮೂಲ್ಯವಾದ ಉಡುಗೊರೆ. ಯಾವ ಕಾರಣವೂ ಅದನ್ನು ನಾವಾಗಿಯೇ ಕೊನೆಗೊಳಿಸುವಷ್ಟು ಸಶಕ್ತವಾದುದಲ್ಲ. ಅರ್ಹವಾದದ್ದಂತೂ ಅಲ್ಲವೇ ಅಲ್ಲ.

ಪೋಸ್ಟ್‌ ಸ್ಕ್ರಿಪ್ಟ್‌: ಗುರುಪ್ರಸಾದ್‌ ಅವರು ಕುಪ್ಪಳಿಗೆ ಬಂದಿದ್ದಾಗ ಸುಧೀರ್‌ ಹತ್ತಿರ ಒಂದು ಒಳ್ಳೆ ಕಾಫಿ ಸಿಗುವ ಜಾಗಕ್ಕೆ ಕರೆದುಕೊಂಡು ಹೋಗಲು ಹೇಳಿದ್ದರು. ಆಗ ಕುಪ್ಪಳಿಯಿಂದ ಅವರನ್ನು ಕೊಪ್ಪಕ್ಕೆ ಕರೆದುಕೊಂಡು ಬರಲು ಹೊರಟಾಗ ಗುರು ತಮ್ಮ ಕಾರನ್ನೇ ಹತ್ತಿದ್ದರು. ಸುಧೀರ್‌ ನಾನು ಡ್ರೈವ್‌ ಮಾಡಲಾ ಎಂದು ಕೇಳಿದಾಗ ಬೇಡ, ಐ ಹ್ಯಾವ್‌ ಎ ಸ್ಕಿನ್‌ ಕಂಡಿಷನ್‌ ಎಂದಿದ್ದರು. ವಾಪಾಸು ಮಾರನೇ ದಿನ ಹೊರಡುವಾಗ ಆ ಹೋಟೇಲಿಗೆ ಹೋಗಿ ಅಲ್ಲೇ ಮತ್ತೊಂದು ಸಲ ಕಾಫಿ ಕುಡಿದು ಹೋಗುತ್ತೇನೆ ಸರ್‌ ಎಂದು ಬೈ ಹೇಳಿ ಹೋಗಿದ್ದರು" ಎಂದು ಬರೆದುಕೊಂಡಿದ್ದಾರೆ ದೀಪಾ ಹಿರೇಗುತ್ತಿ.