Cyclone Mandous Effect: ಮಾಂಡೂಸ್‌ನಿಂದ ಪಾರಾಗಿ ಸುರಕ್ಷಿತವಾಗಿ ಬೆಂಗಳೂರಿಗೆ ಬಂದೆ: ನಿರ್ದೇಶಕ ಮಂಸೋರೆ
ಮಾಂಡೂಸ್ ಚಂಡಮಾರುತದಿಂದ ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ವೇಳೆ ಚೆನ್ನೈಗೆ ತೆರಳಿದ್ದ ನಿರ್ದೇಶಕ ಮಂಸೋರೆ, ತಾವು ಸುರಕ್ಷಿತವಾಗಿ ವಾಪಸ್ ಬಂದಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದವರು, ಇಂತಹ ರಿಸ್ಕ್ ಏಕೆ, ಅಲ್ಲೇ ಇದ್ದು ಮರುದಿನ ಎದ್ದು ಬರಬಹುದಿತ್ತು, ಮತ್ತೊಮ್ಮೆ ಈ ಸಾಹಸ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಾರೆ.
ಕಳೆದ 3-4 ದಿನಗಳಿಂದ ವಾತಾವರಣ ಬದಲಾಗಿದೆ. ಬಹಳ ಚಳಿ, ಎಲ್ಲಿ ನೋಡಿದರೂ ಜಿಟಿ ಜಿಟಿ ಮಳೆ. ಮನೆಯಲ್ಲಿ ಇರಲಾಗದೆ, ಹೊರಗೆ ಹೋಗಲಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದಕ್ಕಿದ್ದಂತೆ ಬದಲಾದ ಹವಾಮಾನದಿಂದ ಕೆಲವರ ಆರೋಗ್ಯ ಕೂಡಾ ಏರುಪೇರಾಗಿದೆ. ಈ ನಡುವೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ತಾವು ಚೆನ್ನೈ ಸೈಕ್ಲೋನ್‌ಗೆ ಸಿಲುಕಿ ಅಲ್ಲಿಂದ ಸುರಕ್ಷಿತವಾಗಿ ವಾಪಸಾದ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.
ಮಾಂಡೂಸ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದು, ಅಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹೊರಗಿನಿಂದ ಬರುವ ಹಾಗೂ ಇತರ ಕಡೆಗಳಿಗೆ ಹೋಗುವ ಸುಮಾರು 10 ವಿಮಾನಗಳನ್ನು ರದ್ದುಪಡಿಸಲಾಗಿದೆ. ಭಾರೀ ಮಳೆಗೆ ಚೆನ್ನೈ ಹಾಗೂ ಸುತ್ತಮುತ್ತ ಭಾರೀ ಮರಗಳು ಧರೆಗೆ ಉರುಳಿದ್ದು ವಾಹನ ಸಂಚಾರ, ಜನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಕೂಡಾ ಉರುಳಿಬಿದ್ದು ವಿದ್ಯುತ್ ಇಲ್ಲದೆ ಜನರು ಕಷ್ಟ ಪಡುತ್ತಿದ್ದಾರೆ. ಇನ್ನೂ ಕೆಲವೆಡೆ ಭೂಕುಸಿತ ಉಂಟಾಗಿದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದ ನಿರ್ದೇಶಕ ಮಂಸೋರೆ, ಅಲ್ಲಿಂದ ಸುರಕ್ಷಿತವಾಗಿ ವಾಪಸಾಗಿದ್ದು, ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
''ಸುರಕ್ಷಿತವಾಗಿ ತಲುಪಿದ್ದೇನೆ, ತುರ್ತು ಕೆಲಸದ ಮೇಲೆ ಚೆನ್ನೈಗೆ ಬಂದಿದ್ದೆ, ವಾಪಸ್ ಬರಲು ಟಿಕೆಟ್ ಬುಕ್ ಆಗಿದ್ದ ವಿಮಾನ ರದ್ದಾದ ಕಾರಣ ನಾನು ನಮ್ಮ ನಿರ್ಮಾಪಕರು, ರಸ್ತೆಯ ಮೂಲಕ ಬೆಂಗಳೂರು ತಲುಪಲು ನಿರ್ಧರಿಸಿ ಚೆನ್ನೈ ಸಿಟಿಯಿಂದ ಐವತ್ತು ಕಿಮೀ ಬಂದು, ರಸ್ತೆ ಸಾಗಲು ಸಹ ತ್ರಾಸದಾಯಕವಾದ ಸೈಕ್ಲೋನ್ ನೋಡುತ್ತಾ ಕೂತಿರುವ ಕ್ಷಣ. ರಾಡಾರ್ ಚಿತ್ರದಲ್ಲಿ ಸೈಕ್ಲೋನ್ ಸುತ್ತುವ ಮಧ್ಯ ಭಾಗದಲ್ಲಿ ನಾವಿದ್ದೇವೆ ಎಂದು ತೋರಿಸುತ್ತಿದೆ.'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಒಂದೆರಡು ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದವರು, ಇಂತಹ ರಿಸ್ಕ್ ಏಕೆ, ಅಲ್ಲೇ ಇದ್ದು ಮರುದಿನ ಎದ್ದು ಬರಬಹುದಿತ್ತು, ಮತ್ತೊಮ್ಮೆ ಈ ಸಾಹಸ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಾರೆ.
ಮಂಸೋರೆ ಹೊಸ ಸಿನಿಮಾ ಬಿಡುಗಡೆಗೆ ರೆಡಿ
ಹರಿವು, ನಾತಿಚರಾಮಿ, ಆಕ್ಟ್ 1978 ನಂತಹ ವಿಭಿನ್ನ ಸಬ್ಜೆಕ್ಟ್ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ರಾಷ್ಟ್ರಪಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಈಗ '19.20.21' ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ.
'19.20.21' ಟೈಟಲ್ ಮೂಲಕವೇ ಮಂಸೋರೆ, ಸಿನಿಪ್ರಿಯರಲ್ಲಿ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಉಂಟು ಮಾಡಿದ್ದಾರೆ. ಹೊಸ ಪೋಸ್ಟರ್‌ಗಳ ಮೂಲಕ ಗಮನ ಸೆಳೆದಿರುವ '19.20.21' ನೋಡಲು ಸಿನಿಪ್ರಿಯರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ. ಮಂಸೋರೆ ಅವರ ಹಿಂದಿನ ಸಿನಿಮಾಗಳಂತೆ ಈ ಚಿತ್ರ ಕೂಡ ವಿಭಿನ್ನವಾಗಿರುತ್ತೆ ಎನ್ನುವುದಕ್ಕೆ ಚಿತ್ರದ ಪೋಸ್ಟರ್‌ಗಳು ಸಾಕ್ಷಿಯಾಗಿವೆ. ಪ್ರತಿ ಪೋಸ್ಟರ್‌ಗಳು, ಈ ಚಿತ್ರದ ಮೂಲಕ ನಿರ್ದೇಶಕರು ಸಮಾಜಕ್ಕೆ ಹೊಸದೊಂದು ಗಟ್ಟಿತನದ ಸಂದೇಶವನ್ನು ಹೇಳಲು ಹೊರಟಿದ್ದಾರೆ ಎಂಬ ಸುಳಿವನ್ನು ನೀಡಿದೆ.
ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆಯೇ '19.20.21'. ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾ ಬಿಡುಗಡೆಗೂ ತಯಾರಿ ನಡೆಸುತ್ತಿದ್ದು ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರರಾದ ಶೃಂಗ ಬಿ.ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ, ಉಗ್ರಂ ಸಂದೀಪ್ ಹಾಗೂ ಇನ್ನಿತರರು ನಟಿಸಿದ್ದಾರೆ. ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.