ಪ್ಯಾನ್ ಇಂಡಿಯಾ ಅಲ್ಲ, ಇನ್ಮುಂದೆ ಏನಿದ್ರೂ ತೆಲುಗು ಇಂಡಿಯಾ; ಬಾಲಿವುಡ್‌ಗೆ ಟಾಂಗ್ ಕೊಟ್ರಾ ರಾಮ್ ಗೋಪಾಲ್ ವರ್ಮಾ?
Pushpa 2: ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಭಾನುವಾರದಷ್ಟೊತ್ತಿಗೆ 750 ಕೋಟಿ ಗುರಿ ಮುಟ್ಟುವ ಸಾಧ್ಯತೆ ಇದೆ. ಶನಿವಾರಕ್ಕೆ 620 ಕೋಟಿ ಗಳಿಸಿರುವ ಇದೇ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ, ನಿರ್ದೇಶಕ ರಾಮ್‌ಗೋಪಾಲ್ ವರ್ಮ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
Ram Gopal Varma on Pan Indian Movies: ಮನಸ್ಸಿನಲ್ಲಿದ್ದಿದ್ದನ್ನು ಇದ್ದ ಹಾಗೆ ಹೇಳುವವರು ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮ. ತೆಲುಗಿನಿಂದ ತಮ್ಮ ಚಿತ್ರಜೀವನ ಪ್ರಾರಂಭಿಸಿ, ಹಿಂದಿಯಲ್ಲಿ ಯಶಸ್ವಿ ನಿರ್ದೇಶಕರೆಂದನಿಸಿಕೊಂಡ ವರ್ಮ, ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಟ್ವೀಟ್‍ಗಳಿಂದಲೇ ಹೆಚ್ಚು ಸುದ್ದಿಯಾದವರು. ಈಗ ರಾಮ್ ಗೋಪಾಲ್ ವರ್ಮ ಮತ್ತೊಮ್ಮೆ ಅಂಥದ್ದೊಂದು ಟ್ವೀಟ್‍ನಿಂದ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ 2’ ಬಿಡುಗಡೆಯಾಗಿ, ಭಾರತದ ಹಿಂದಿನ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರ ಶಾರೂಖ್ ಖಾನ್ ಅಭಿನಯದ ‘ಜವಾನ್’ ಆಗಿತ್ತು. ಆ ದಾಖಲೆಯನ್ನು ‘ಪುಷ್ಪ 2’ ಇದೀಗ ಮುರಿದು ಹಾಕಿದೆ. ‘ಜವಾನ್’ ಚಿತ್ರವು ಮೊದಲ ನಾಲ್ಕು ದಿನಗಳಲ್ಲಿ 180 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ‘ಪುಷ್ಪ 2’ ಚಿತ್ರವು ನಾಲ್ಕು ದಿನಗಳಲ್ಲಿ 200 ಕೋಟಿ ರೂ. ಗಳಿಕೆ ಮಾಡುವ ಮೂಲಕ ಆ ದಾಖಲೆಯನ್ನು ಹಿಂದಿಕ್ಕಿದೆ.
ಬರೀ ಬಾಲಿವುಡ್ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ದೇಶ ಮತ್ತು ವಿದೇಶಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ‘ಪುಷ್ಪ 2’ ಪಾತ್ರವಾಗಿದೆ. ‘ಪುಷ್ಪ 2’ ಚಿತ್ರವು ಡಿಸೆಂಬರ್ 5ರ ಗುರುವಾರದಂದು ಬಿಡುಗಡೆಯಾಗಿದ್ದು, ಮೊದಲ ನಾಲ್ಕು ದಿನಗಳಲ್ಲಿ ಜಗತ್ತಿನಾದ್ಯಂತ 800 ಕೋಟಿ ರೂ. ಸಂಪಾದಿಸಿದೆ. ಭಾರತದಲ್ಲೇ ಚಿತ್ರವು 529 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಗಳಿಕೆ ಇದೇ ವೇಗದಲ್ಲಿ ಮುಂದುವರೆದ ಪಕ್ಷದಲ್ಲಿ ಕೆಲವೇ ದಿನಗಳಲ್ಲಿ 1000 ಕೋಟಿ ರೂ. ಕ್ಲಬ್ ಸೇರಲಿದೆ.
ಇನ್ಮೇಲೆ ತೆಲುಗು ಇಂಡಿಯಾ...
ಈ ಕುರಿತು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮ, ‘ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ಗಳಿಕೆ ಮಾಡಿದ ಸಿನಿಮಾ ಎಂದರೆ ಅದು ತೆಲುಗಿನಿಂದ ಡಬ್ ಆದ ‘ಪುಷ್ಪ 2’. ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹೀರೋ ಎಂದರೆ, ಅದು ಹಿಂದಿ ಮಾತನಾಡಲು ಬರದ ತೆಲುಗು ನಟ ಅಲ್ಲು ಅರ್ಜುನ್. ಹಾಗಾಗಿ, ಇನ್ನು ಮುಂದೆ ಪ್ಯಾನ್ ಇಂಡಿಯಾ ಇಲ್ಲ. ತೆಲುಗು ಇಂಡಿಯಾ’ ಎಂದು ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮ ಅವರ ಟ್ವೀಟ್‍ಗೆ ಟ್ವೀಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಪುಷ್ಪ – ದಿ ರೂಲ್’ ಚಿತ್ರವನ್ನು ತೆಲುಗಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಪುಷ್ಪರಾಜ್ ಎಂಬ ಗ್ಯಾಂಗ್‍ಸ್ಟರ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಜೊತೆಗೆ ರಶ್ಮಿಕಾ ಮಂದಣ್ಣ, ಜಗಪತಿ ಬಾಬು, ರಾವ್ ರಮೇಶ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಸುಕುಮಾರ್.
ಭಾನುವಾರಕ್ಕೆ 750 ಕೋಟಿ ಗಳಿಕೆ?
ಪುಷ್ಪ 2 ಸಿನಿಮಾ ಬಿಡುಗಡೆಯಾದ ದಿನದಂದು 294 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶುಕ್ರವಾರ 421.03 ಕೋಟಿ ರೂ.ಗೆ ಏರಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಮತ್ತು ಚಿತ್ರಮಂದಿರಗಳಲ್ಲಿ ದೊಡ್ಡ ಚಿತ್ರಗಳಿಲ್ಲದ ಕಾರಣ ಪುಷ್ಪ 2 ಚಿತ್ರಕ್ಕೆ ದೊಡ್ಡ ಲಾಭವೇ ಆಗಿದೆ. ಶನಿವಾರದ ವೇಳೆಗೆ 620 ಕೋಟಿ ರೂ.ಗೆ ಏರಿಕೆಯಾಗಿದೆ. ಈಗ ಭಾನುವಾರದ ವೇಳೆಗೆ 750 ಕೋಟಿ ರೂ.ಗಳನ್ನು ಮುಟ್ಟಲಿದೆ ಎಂದು sacnilk ಅಂದಾಜಿಸಿದೆ.