Dr Rajkumar Movies: ರಾಜ್​​ಕುಮಾರ್ ಪ್ರತಿಭೆಯ ವಿಶ್ವರೂಪ ದರ್ಶನ ನೀಡಿದ ಬಬ್ರುವಾಹನ ಸಿನಿಮಾ ನನಗಿಷ್ಟ; ಕವಿರಾಜ್
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar Movies: ರಾಜ್​​ಕುಮಾರ್ ಪ್ರತಿಭೆಯ ವಿಶ್ವರೂಪ ದರ್ಶನ ನೀಡಿದ ಬಬ್ರುವಾಹನ ಸಿನಿಮಾ ನನಗಿಷ್ಟ; ಕವಿರಾಜ್

Dr Rajkumar Movies: ರಾಜ್​​ಕುಮಾರ್ ಪ್ರತಿಭೆಯ ವಿಶ್ವರೂಪ ದರ್ಶನ ನೀಡಿದ ಬಬ್ರುವಾಹನ ಸಿನಿಮಾ ನನಗಿಷ್ಟ; ಕವಿರಾಜ್

ಇದು 'ನನ್ನಿಷ್ಟದ ರಾಜ್ ಸಿನಿಮಾ' ವಿಶೇಷ ಸರಣಿ (Dr Rajkumar Movies). ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ ಪ್ರಯುಕ್ತ (Dr Rajkumar Birth Anniversary) 'ಎಚ್‌ಟಿ ಕನ್ನಡ' ಈ ಸರಣಿಯನ್ನು ಪ್ರಸ್ತುತಪಡಿಸುತ್ತಿದೆ. ನೀವಿಷ್ಟಪಡುವ ಸಾಕಷ್ಟು ಜನರು ಕನ್ನಡಿಗರ ಪ್ರೀತಿಯ 'ಅಣ್ಣಾವ್ರು' ಅಭಿನಯದ ತಮ್ಮಿಷ್ಟದ ಚಿತ್ರಗಳನ್ನು ನೆನಪಿಸಿಕೊಳ್ಳಲಿದ್ದಾರೆ.

ಬಬ್ರುವಾಹನ ಸಿನಿಮಾದಲ್ಲಿ ಡಾ ರಾಜ್​ಕುಮಾರ್​ (ಎಡಚಿತ್ರ), ಚಿತ್ರಸಾಹಿತಿ ಕವಿರಾಜ್​ (ಬಲಚಿತ್ರ)
ಬಬ್ರುವಾಹನ ಸಿನಿಮಾದಲ್ಲಿ ಡಾ ರಾಜ್​ಕುಮಾರ್​ (ಎಡಚಿತ್ರ), ಚಿತ್ರಸಾಹಿತಿ ಕವಿರಾಜ್​ (ಬಲಚಿತ್ರ)

ನಟಸಾರ್ವಭೌಮ ಡಾ. ರಾಜ್‌ಕುಮಾರ್ (Kannada Film Actor Dr Rajkumar) ಅವರನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಈಗ ಅವರ ನೆನಪು ನೇವರಿಸಲು ಕಾರಣವಿದೆ. ಇದೇ ಏಪ್ರಿಲ್​ 24ರಂದು ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ (Dr Rajkumar Birth Anniversary). ಕನ್ನಡ ಮನಸ್ಸುಗಳು ಇಷ್ಟಪಡುವ ಹಲವು ಸಹೃದಯರು 'ನನ್ನ ನೆಚ್ಚಿನ ರಾಜ್‌ ಸಿನಿಮಾ' ಸರಣಿಯಲ್ಲಿ ಅಣ್ಣಾವ್ರ ಚಿತ್ರಗಳನ್ನು ನೆನಪಿಸಿಕೊಂಡಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಿಟ್​ ಹಾಡುಗಳನ್ನು ಬರೆದ ನಿರ್ದೇಶಕರೂ ಆಗಿರುವ ಜನಪ್ರಿಯ ಚಿತ್ರ ಸಾಹಿತಿ ಕವಿರಾಜ್​ ( Kaviraj) ಅವರು ಡಾ ರಾಜ್‌ಕುಮಾರ್‌ ಅಭಿನಯದ 'ಬಬ್ರುವಾಹನ' (Babruvahana) ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇಲ್ಲಿದೆ ಅವರ ಸಂದರ್ಶನ..

ಬಬ್ರುವಾಹನ ಸಿನಿಮಾ ಯಾವ ಕಾರಣಕ್ಕೆ ನಿಮಗೆ ಅಚ್ಚುಮೆಚ್ಚು?

ಬಬ್ರುವಾಹನ ನನಗೆ ಯಾಕೆ ಅಚ್ಚುಮೆಚ್ಚು ಅಂದ್ರೆ, ನಾವು ಆ ಸಮಯದಲ್ಲಿ ನೋಡಿದ ದ್ವಿಪಾತ್ರದ ಸಿನಿಮಾ ಇದು. ದ್ವಿಪಾತ್ರವನ್ನ ಅವರು ಒಬ್ಬರೇ ಮಾಡಿದ್ದು, ಆ ಸಮಯದಲ್ಲಿ ಅದೆಲ್ಲಾ ಒಂಥರಾ ಹೊಸತು. ವ್ಹಾ ಅನಿಸುತ್ತಿತ್ತು. ಅಪ್ಪನ ಪಾತ್ರನೂ ಅವರೇ ಮಾಡಿದ್ದು, ಮಗನ ಪಾತ್ರನೂ ಅವರೇ ಮಾಡಿದ್ದು. ಅಪ್ಪ-ಮಗನ ಪಾತ್ರದಲ್ಲಿ ತಂದಿರೋ ಒಂದು ಬದಲಾವಣೆ. ಬಬ್ರುವಾಹನ ಪಾತ್ರ ನೋಡಿದಾಗ ತುಂಬಾ ಯಂಗ್ ಆಗಿ ಕಾಣಿಸ್ತಾ ಇದ್ರು, ತುಂಬಾ ಚಿಕ್ಕ ಹುಡುಗನ ರೀತಿಯ ರಾಜ್​​​ಕುಮಾರ್​​ ಅನ್ನಿಸತ್ತೆ ನಮಗೆ. ಅದೇ ಅರ್ಜುನನ ಪಾತ್ರ ನೋಡಿದಾಗ, ಹೌದು ಅರ್ಜುನನಿಗೆ ವಯಸ್ಸಾಗಿದೆ ಅನ್ನೋತರ ಫೀಲ್​. ನಡವಳಿಕೆಯಲ್ಲಿ ಇರಬಹುದು, ಆಂಗಿಕ ಅಭಿನಯ ಇರಬಹುದು. ತುಂಬಾ ಸಮರ್ಥವಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಅಪ್ಪ ರಾಜ್​ಕುಮಾರ್​ ಅವರ ದೊಡ್ಡ ಅಭಿಮಾನಿ. ಅವರು ನಮ್ಮನೆಲಿ "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ" ಹಾಡು-ಡೈಲಾಗ್​ ಹೇಳ್ತಾ ಇದ್ರು. ಅವರಿಗೆ ಖುಷಿ ಆದಾಗೆಲ್ಲಾ ಈ ಡೈಲಾಗ್​ ಹೇಳ್ತಾ ಇರ್ತಿದ್ರು. ಹೀಗೆ ನಮ್ಮಪ್ಪನ ಬಾಯಲ್ಲಿ ಡೈಲಾಗ್ಸ್, ಹಾಡುಗಳನ್ನ ಕೇಳಿ ಕೇಳಿ ಮೊದಲೇ ಆ ಸಿನಿಮಾ ಬಗ್ಗೆ ಆಸಕ್ತಿ ಹುಟ್ಟಿತ್ತು. ನೋಡಿದಮೇಲೆ ಇನ್ನೂ ಖುಷಿಯಾಯ್ತು. ಮತ್ತೆ ಅವಾಗೆಲ್ಲ ಮೊದಲೇ ಕೇಳಿದ ಸ್ಟೋರಿ ಎಂದ್ರೆ ಮಹಾಭಾರತ, ರಾಮಾಯಣ. ಮಹಾಭಾರತದಲ್ಲಿ ಅರ್ಜುನನ್ನ ಅರ್ಜುನನ ಮಗನೇ ಸೋಲಿಸ್ತಾನಂತೆ ಅನ್ನೋದು ಅದೊಂಥರ ವಿಚಿತ್ರ ಎನ್ನಿಸುತ್ತಿತ್ತು.

ಅರ್ಜುನನ ಬಗ್ಗೆ, ಅರ್ಜುನನ ಪರಾಕ್ರಮದ ಬಗ್ಗೆ ಬಬ್ರುವಾಹನ ವ್ಯಂಗ್ಯವಾಗಿ ಮಾತನಾಡುವಾಗ ಏನನಿಸುತ್ತೆ?

ಅರ್ಜುನ ನನಗೆ ದೊಡ್ಡ ಹೀರೋ. ಬಟ್​ ಅರ್ಜುನನ್ನ ಅವನ ಮಗನೇ ಸೋಲಿಸೋದು, ಅರ್ಜುನನ್ನ ಬಗ್ಗೆ ಈ ರೀತಿ ಮಾತಾಡೋದು ಕೇಳಿದಾಗ ಬೇಜಾರು ಅನ್ನಿಸುತ್ತೆ. ಯಾರೋ ಬೇಕಂತಲೇ ಈ ರೀತಿ ಬರ್ದಿದಾರೆ ಅನಿಸುತ್ತೆ. ಆದರೆ ಇವೆಲ್ಲಾ ಉಪಕಥೆಗಳು. ಬರ್ತಾ ಬರ್ತಾ ಈ ಉಪಕಥೆಗಳನ್ನೆಲ್ಲಾ ನಂಬೋದನ್ನ ಬಿಟ್​​ಬಿಟ್ಟೆ. ಕರ್ಣನಿಗೊಂದು ಕಥೆ ಕಟ್ಟುತ್ತಾರೆ, ದುರ್ಯೋದನ ಒಳ್ಳೆಯವನು ಅನ್ನೋದಕ್ಕೆ ಒಂದು ಉಪಕಥೆ ಬರತ್ತೆ. ಈ ಉಪಕಥೆಗಳು ನಮ್ಮ ಮೂಲಕಥೆಯಲ್ಲಿ ಏನಿರತ್ತೆ ಆ ಅಭಿಪ್ರಾಯಗಳನ್ನ ಬದಲಾಯಿಸೋ ತರನೇ ಇರತ್ತೆ. ವಿಶ್ಲೇಷಣೆ ಮಾಡುವ ಮೈಂಡ್​ ನಂದು. ಉಪಕಥೆಗಳೇ ಸುಳ್ಳು ಅನ್ನುವ, ಇದನ್ನ ಬೇಕಂತಲೇ ಮಾಡಿದಾರೆ ಅನ್ನುವ ಫೀಲ್​ ಶುರುವಾಯಿತು ನನಗೆ. ನಾವ್​ ಇಷ್ಟಪಡೋರ ಇಮೇಜ್ ಕಡಿಮೆ ಮಾಡಿಸತ್ತೆ ಇದು. ಬಟ್​ ಈ ಸಿನಿಮಾ ತುಂಬಾ ಎಂಜಾಯ್​ ಮಾಡಿದೆ.

ಈ ಸಿನಿಮಾದಿಂದ ಯಾವ ರೀತಿ ಸ್ಪೂರ್ತಿ ಪಡೆದಿದ್ದೀರಿ?

ಬಬ್ರುವಾಹನನ ಪಾತ್ರವೇ ಒಂದು ಸ್ಫೂರ್ತಿ. ಅಂದ್ರೆ ಆರಂಭದಲ್ಲಿ ಅರ್ಜುನ ಅಪ್ಪ ಅಂತ ಗೊತ್ತಾದಾಗ ಏನ್​ ಗೌರವ ಕೊಡಬೇಕೋ, ಏನ್ ಮಾಡಬೇಕೋ ಅದೆಲ್ಲಾ ಮಾಡ್ತಾನೆ. ಆದ್ರೆ ಅರ್ಜುನ ಮಾತೃನಿಂದನೆ ಮಾಡಿದ ಮೇಲೆ ಅವನ ಹಠ, ಸಾಹಸ. ಇವೆಲ್ಲಾ ಒಂಥರ ಸ್ಪೂರ್ತಿ. ಇವತ್ತೊಂದು ಸಿನಿಮಾಕ್ಕೆ ಕೆಲಸ ಮಾಡ್ತಾ ಇದ್ದೆ. ಅದರಲ್ಲಿ ಕೂಡ ಬಬ್ರುವಾಹನ ಸಿನಿಮಾದ "ನೆನಪಿಲ್ಲವೇ ನೀವು ಮಣಿಪುರಕ್ಕೆ ಬಂದಿದ್ದು, ನಮ್ಮ ತಾಯಿ ಚಿತ್ರಾಂಗಧೆಯನ್ನ ನೋಡಿದ್ದು" ಡೈಲಾಗ್​ನೆ ಬಳಸಿಕೊಂಡಿದ್ದಾರೆ.. ಸಿನಿಮಾ ಹಾಡಾಗಲಿ, ಡೈಲಾಗ್​ಗಳಾಗಲಿ ಎಲ್ಲೋ ಒಂದ್​ ಕಡೆ ಕೇಳ್ತಾನೆ ಇರ್ತೀವಿ ನಾವು ಅವಾಗವಾಗ ಬೇರೆ ಬೇರೆ ರೂಪದಲ್ಲಿ. ಇವೆಲ್ಲಾ ಸಿನಿಮಾದಿಂದ ಆಚೆಗೆ ಕೂಡ ಜೀವಂತವಾಗಿ ಉಳಿದುಕೊಳ್ಳಬೇಕು.

ಈ ಸಿನಿಮಾದಿಂದ ನಿಮ್ಮ ಜೀವನದಲ್ಲಿ ಆದ ಬದಲಾವಣೆ ಏನು?

ಸಿನಿಮಾದಿಂದ ಬದಲಾವಣೆ ಅಂತ ಹೇಳಲಾರೆ, ಆದರೆ ಹಾಡುಗಳ ಬಗ್ಗೆ ಒಂದು ಆಸಕ್ತಿಯನ್ನ ಹುಟ್ಟಿಸಿದ್ದು ಇದೇ ಸಿನಿಮಾ ಅಂತ ಹೇಳಬಹುದು. ಯಾಕಂದ್ರೆ ಈ ಸಿನಿಮಾದ ಹಾಡುಗಳು, ಅದರಲ್ಲಿಯೂ “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮವ” ಹಾಡನ್ನ ಕೇಳ್ತಾ ಇದ್ವಿ, ಟಿವಿಯಲ್ಲಿ ಬಂದಾಗೆಲ್ಲಾ ಕೂತ್ಕೊಂಡು ನೋಡ್ತಾ ಇದ್ವಿ. ಹಾಡೇ ಒಂದು ಸಿನಿಮಾ ಇದ್ದಹಾಗೆ ಇದೆ. ಇದರಿಂದಲೇ ಹಾಡುಗಳ ಬಗ್ಗೆ ಆಸಕ್ತಿ ಹುಟ್ಟಿತು.

ಬಬ್ರುವಾಹನ ಸಿನಿಮಾ ಒಂದು ಪುಟ ಆದ್ರೆ "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ" ಹಾಡು ಅದೊಂದು ಪುಟ. 100ಕ್ಕೆ 90 ಅಂಕವನ್ನ ಈ ಸಿನಿಮಾಗೆ ಅಲ್ಲೇ ಕೊಡೋದು ನಾನು. ಉಳಿದ 10 ಅಂಕ ಇಡೀ ಸಿನಿಮಾಗೆ. ಈ ಹಾಡು ಬಂದಾಗೆಲ್ಲ ಇವತ್ತಿಗೂ ಕೂತ್​ಕೊಂಡು ನೋಡ್ತೀನಿ. ಇದೊಂಥರ ಎಕ್ಸ್​​ಪ್ರೆಶನ್​ನ ಎನ್​ಸೈಕ್ಲೋಪೀಡಿಯಾ. ಇರೋದು ಐದೇ ನಿಮಿಷ ಆದ್ರೂ, ಇದೊಂಥರ ವಿಶ್ವರೂಪ ದರ್ಶನ. ರಾಜ್​​ಕುಮಾರ್​ ಅವರ ಪ್ರತಿಭೆಯ ವಿಶ್ವರೂಪ ದರ್ಶನದ ಹಾಡಿದು. ವ್ಯಂಗ್ಯ ಶೌರ್ಯ, ನೋವು ಎಲ್ಲಾ ಒಂದೇ ಹಾಡಲ್ಲಿದೆ. ಇಡೀ ಸಿನಿಮಾ ಕಥೆಗಿಂತ ಈ ಹಾಡು ಇಷ್ಟ. ಅದನ್ನ ನೋಡಿದರೆ ಇವತ್ತಿಗೂ ರೋಮಾಂಚನ ಆಗತ್ತೆ. ಮಾತನ್ನ ಹಾಡಾಗಿ ಮಾಡಿರೋದು, ಆ ವಾಕ್ಸಮರ ಇದೆಯಲ್ಲಾ ಅದು ಸಮರಕ್ಕಿಂತಲೂ ಅದ್ಭುತವಾಗಿದೆ.

ಈಗಿನ ಕಾಲ, ಸಂದರ್ಭಕ್ಕೆ ಈ ಸಿನಿಮಾ ಹೇಗೆ ಹೊಂದುತ್ತದೆ, ಏಕೆ ಮುಖ್ಯ ಅನ್ನಿಸುತ್ತದೆ?

ಒಂದು, ಕರ್ತವ್ಯನಿಷ್ಠೆ -ಒಂದು ಸಾರಿ ಮಾತು ಕೊಟ್ರೆ ಅದನ್ನ ತಪ್ಪಬಾರದು ಅನ್ನೋದು. ಇನ್ನೊಂದು, ಛಲ - ಎದುರಾಳಿ ಯಾರೋ ಆಗಿದ್ರು ಅದನ್ನ ಸಾಧಿಸಬೇಕು ಅಂದ್ರೆ ಸಾಧಿಸಬೇಕು. ತಾಯಿಗೆ ಕೊಟ್ಟ ಮಾತು, ತನಗಾದ ಅವಮಾನ, ತನ್ನ ತಾಯಿಗೆ ಆದ ಅವಮಾನ - ಇದನ್ನು ಎದುರಿಸುವಾಗ ಬಬ್ರುವಾಹನನ ಛಲ, ದೃಢತೆ, ವೀರತ್ವ ಅವೆಲ್ಲಾ ಒಂದು ಪಾಠ. ಹೀಗಾಗಿ ಯಾವ ಕಾಲಕ್ಕೂ ಸಮಸ್ಯೆಗಳು ಬಂದಾಗ ಇಷ್ಟು ದೃಢವಾಗಿರಬೇಕು ನಾವು, ಇಷ್ಟು ಛಲ ಇರಬೇಕು ಗೆಲ್ಲೋಕೆ ಅನ್ನೋದನ್ನ ನಾವು ಅನ್ವಯಿಸಿಕೊಳ್ಳಬೇಕು. ಏನೇನೋ ಗೊಂದಲಗಳು ಬರತ್ತೆ, ಏನೋ ಸಮಸ್ಯೆಗಳು ಬರತ್ತೆ, ದ್ವಂದ್ವಗಳಿರತ್ತೆ, ಸಂಕಟಗಳು- ಧರ್ಮಸಂಕಟಗಳು ಇರತ್ತೆ. ಆದ್ರೆ ನಾವು ದೃಢತೆಯಿಂದ ಮುಂದೆ ಹೋಗಬೇಕು ಅನ್ನೋದನ್ನ ಪರೋಕ್ಷವಾಗಿ ಈ ಸಿನಿಮಾ ಹೇಳತ್ತೆ.

ರಾಜ್​ಕುಮಾರ್​ ಅಂದಾಕ್ಷಣ ನಿಮಗೆ ತಕ್ಷಣ ನೆನಪಿಗೆ ಬರೋದೇನು?

ಇದೇ ಹಾಡು. "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ" - ಇದು ತುಂಬಾ ಪ್ರಭಾವ ಬೀರಿದೆ. ಆದ್ರೆ ಮೊದಲಿಂದಲೂ ರಾಜ್​​ಕುಮಾರ್ ಅಂದಾಕ್ಷಣ ನೆನಪಾದಗೋದು ಈ ಪಾತ್ರ, ಈ ಹಾಡು. ಇದರಲ್ಲಿ ಅವರ ವೇಷಭೂಷಣ​, ಅವರ ಆಂಗಿಕ ಭಾಷೆ​, ಎರಡು ಪಾತ್ರ ಮಾಡಿದ್ದು, ಹಾಡಿದ್ದು ಎಲ್ಲವೂ ಅದ್ಭುತ. ಬಹುಷಃ ಈ ಮಟ್ಟಿಗೆ ಪರಿಣಾಮ ಬೀರಿರೋ ಹಾಡು ಮತ್ತೊಂದಿಲ್ಲ ಅನಿಸುತ್ತೆ ಇಲ್ಲಿ ತನಕ. ಆದರೆ ರಾಜ್​​ಕುಮಾರ್​ ಅಂದಾಗ ಈಗೀಗ ನೆನಪಾಗೋದು ಅವರ ಸರಳತೆ, ಸಜ್ಜನಿಕೆ.

ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ರಾ? ಅವರ ಒಡನಾಟದ ನೆನಪು ಹಂಚಿಕೊಳ್ಳಿ…

ರಾಜ್​ಕುಮಾರ್​ ಅವರನ್ನು ಭೇಟಿಯಾಗುವ ಸದಾವಕಾಶ ದೊರೆತಿತ್ತು. ಪುನೀತ್​ ರಾಜಕುಮಾರ್​ ಅವರ 'ಅಭಿ' ಸಿನಿಮಾ ರಿಲೀಸ್​ ಆಗಿದ್ದ ಸಮಯದಲ್ಲಿ ನಾನು ಮತ್ತು ಗುರುಕಿರಣ್​ ಅವರು ಒಂದು ಕೆಲಸದ ಮೇಲೆ ರಾಜ್​ಕುಮಾರ್​ ಮನೆಗೆ ಹೋಗಿದ್ವಿ. ಕವಿರಾಜ್​ ಅಂದ್ರೆ ಅವರಿಗೆ ಗೊತ್ತಿರತ್ತೋ ಇಲ್ವೋ ಅಂತ ಅನ್​ಕೊಂಡೆ ಹೋಗಿದ್ದೆ. ಆದ್ರೆ ಅವರು ನನ್ನ ನೋಡಿದ ಕೂಡಲೇ "ನಿನ್ನೆ ಅಷ್ಟೇ ನಿನ್​ ಬಗ್ಗೆ ನಾನು ಪಾರ್ವತಿ ಹತ್ರ ಮಾತಾಡ್ದೆ. ನಿಮ್ಮತ್ರ ಒಂದು ಹಾಡು ಬರೆಸಬೇಕು" ಅಂತ ಹೇಳ್​ಬಿಟ್ರು. ನನಗೆ ರೋಮಾಂಚನ ಆಗೋಯ್ತು. ನಾನು ಯಾರ ಕಾಲಿಗೂ ಬೀಳಲ್ಲ, ಅದು ತಪ್ಪು ಅಂತ ನನ್ನ ಭಾವನೆ. ನಮ್ಮ ಆತ್ಮಗೌರವವನ್ನು ಇನ್ನೊಬ್ಬರ ಎದುರಿಗೆ ತಗ್ಗಿಸಬಾರದು ಅಂತ ನನ್ನ ಭಾವನೆ. ಯಾರೇ ಆದ್ರು ಅವರಿಗೆ ನಮಸ್ಕಾರ ಮಾಡ್ತೀನಿ ಅಷ್ಟೇ. ಬಟ್​ ಅವತ್ತಿನ ದಿನ ನನಗೆ ಗೊತ್ತಿಲ್ದೇ ಅವರ ಕಾಲಿಗೆ ಬಿದ್​ಬಿಟ್ಟೆ.

ನನಗೆ ಸ್ವತಃ ರಾಜ್​​ಕುಮಾರ್​ ಅವರೇ ಊಟ ಬಡಿಸಿದ್ರು. ನೀವು ಯುವಕರು ತಿನ್​ಬೇಕು ತಿನ್​ಬೇಕು ಅಂತ ಎರಡು-ಮೂರು ಸಲ ಬಡಿಸಿದ್ರು. ಇನ್ನೊಂದ್​ ಏನಂದ್ರೆ, ದೊಡ್ಡವರು ಏನೇ ಮಾಡಿದ್ರು ಅವರ ಬಗ್ಗೆ ಹೊಗಳುತ್ತಾತೆ ಅಂತ ನಾನು ಅಂದುಕೊಂಡಿದ್ದೆ. ಆದ್ರೆ ಅವರ ಸರಳತೆ, ಸಜ್ಜನಿಕೆ ಬಗ್ಗೆ ನನಗೆ ಗೊತ್ತಾಗಿದ್ದು ಅಂದೇ. ನಮ್ಮನ್ನ ಕಳಿಸಲು ಗೇಟ್​ ತನಕ ಬಂದ್ರು, ಅಲ್ಲಿ ನಮ್ಮ ಗುರುಕಿರಣ್​ ಅವರ ಕಾರು ಡ್ರೈವರ್​ ಇದ್ರು. ಅವರನ್ನೂ ಒಳಗಡೆ ಕರೆದುಕೊಂಡು ಹೋಗಿ ಊಟ ಹಾಕ್ಸಿದ್ರು.

ರಾಜಕುಮಾರ್​ ನಿಧನದ ಸುದ್ದಿ ಕೇಳಿದಾಕ್ಷಣ ಏನು ಅನ್ನಿಸಿತು?

ಅದೊಂದು ದೊಡ್ಡ ಆಘಾತ. ನಂಬೋಕೆ ಸಾಧ್ಯವಾಗಿಲ್ಲ. ಸುದ್ದಿ ಕೇಳಿ ಕೂತ ಸ್ಥಳದಿಂದ ಮೇಲೇಳೋಕೆ ಆಗಿಲ್ಲ. ಅಂತಿಮ ದರ್ಶನಕ್ಕೆ ಹೋದ್ವಿ, ಅವರ ಮನೆ ಹತ್ರ ಕಲ್ಲೆಸೆತ ಎಲ್ಲಾ ಆಯಿತು. ಅಭಿಮಾನಿಗಳೇ ಶವಪೆಟ್ಟಿಗೆಯನ್ನ ಎತ್ತುಕೊಂಡು ಹೋಗಿ ಪರಿಸ್ಥಿತಿ ಕೈ ಮೀರಿತ್ತು. ಆಮೇಲೆ ಪೊಲೀಸರು ಅದನ್ನ ನಿಯಂತ್ರಣಕ್ಕೆ ತಂದರು.