Dr Rajkumar Movies: ಬಂಗಾರದ ಮನುಷ್ಯ, ಶಬ್ದವೇಧಿ ನನಗಿಷ್ಟ, ಪುನೀತ್‌ ರಾಜಕುಮಾರ್‌ ಮೂಲಕ ಅಣ್ಣಾವ್ರ ಕಂಡೆ ಎಂದ ಪ್ರಕಾಶ್‌ ಆರ್‌ಕೆ
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar Movies: ಬಂಗಾರದ ಮನುಷ್ಯ, ಶಬ್ದವೇಧಿ ನನಗಿಷ್ಟ, ಪುನೀತ್‌ ರಾಜಕುಮಾರ್‌ ಮೂಲಕ ಅಣ್ಣಾವ್ರ ಕಂಡೆ ಎಂದ ಪ್ರಕಾಶ್‌ ಆರ್‌ಕೆ

Dr Rajkumar Movies: ಬಂಗಾರದ ಮನುಷ್ಯ, ಶಬ್ದವೇಧಿ ನನಗಿಷ್ಟ, ಪುನೀತ್‌ ರಾಜಕುಮಾರ್‌ ಮೂಲಕ ಅಣ್ಣಾವ್ರ ಕಂಡೆ ಎಂದ ಪ್ರಕಾಶ್‌ ಆರ್‌ಕೆ

ಇದು 'ನನ್ನಿಷ್ಟದ ರಾಜ್ ಸಿನಿಮಾ' ವಿಶೇಷ ಸರಣಿ (Dr Rajkumar Movies). ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ ಪ್ರಯುಕ್ತ (Dr Rajkumar Birth Anniversary) 'ಎಚ್‌ಟಿ ಕನ್ನಡ' ಈ ಸರಣಿಯನ್ನು ಪ್ರಸ್ತುತಪಡಿಸುತ್ತಿದೆ. ಇಲ್ಲಿ ಪ್ರಕಾಶ್‌ ಆರ್‌ಕೆ (Prakash RK) ಅವರು ತಮ್ಮ ಇಷ್ಟದ ಸಿನಿಮಾಗಳ ಕುರಿತು ಮಾತನಾಡಿದ್ದಾರೆ.

Dr Rajkumar Movies: ಬಂಗಾರದ ಮನುಷ್ಯ, ಶಬ್ದವೇಧಿ ನನಗಿಷ್ಟ, ಪುನೀತ್‌ ರಾಜಕುಮಾರ್‌ ಮೂಲಕ ಅಣ್ಣಾವ್ರ ಕಂಡೆ ಎಂದ ಪ್ರಕಾಶ್‌ ಆರ್‌ಕೆ
Dr Rajkumar Movies: ಬಂಗಾರದ ಮನುಷ್ಯ, ಶಬ್ದವೇಧಿ ನನಗಿಷ್ಟ, ಪುನೀತ್‌ ರಾಜಕುಮಾರ್‌ ಮೂಲಕ ಅಣ್ಣಾವ್ರ ಕಂಡೆ ಎಂದ ಪ್ರಕಾಶ್‌ ಆರ್‌ಕೆ

ನಟಸಾರ್ವಭೌಮ ಡಾ. ರಾಜ್‌ಕುಮಾರ್‌ (Kannada Film Actor Dr Rajkumar) 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿ ಜನರ ಹೃದಯದಲ್ಲಿದ್ದಾರೆ. ಏ 24ರಂದು ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ (Dr Rajkumar Birth Anniversary). ಕನ್ನಡ ಮನಸ್ಸುಗಳು ಇಷ್ಟಪಡುವ ಹಲವು ಸಹೃದಯರು ‘ನನ್ನ ನೆಚ್ಚಿನ ರಾಜ್‌ ಸಿನಿಮಾ’ ಸರಣಿಯಲ್ಲಿ ಅಣ್ಣಾವ್ರ ಚಿತ್ರಗಳನ್ನು ನೆನಪಿಸಿಕೊಂಡಿದ್ದಾರೆ.

ಡಾ. ರಾಜ್‌ ಚಲನಚಿತ್ರಗಳು (Dr Rajkumar Movies) ಆಗಲೂ, ಈಗಲೂ ಎಂದೆಂದಿಗೂ ಜನರಿಗೆ ಜೀವನಪಾಠ ಸಾರುವಂತದ್ದು ಎಂದಿದ್ದಾರೆ ಸಾವಜಿ ಖಾನಾವಳಿಯಿಂದ.. ಸೋಷಿಯಲ್‌ ಮೀಡಿಯಾ ಸ್ಟಾರ್‌ವರೆಗೆ ಜನಪ್ರಿಯತೆ ಪಡೆದಿರುವ ಪ್ರಕಾಶ್‌ ಆರ್‌ಕೆ (Prakash RK) (ಪೂರ್ಣ ಹೆಸರು: ಪ್ರಕಾಶ್‌ ರಮೇಶ್‌ ಕಲಬುರ್ಗಿ). ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ "ನನ್ನಿಷ್ಟದ ರಾಜ್ ಸಿನಿಮಾ' ವಿಶೇಷ ಸರಣಿಗಾಗಿ (Kannada Rajkumar Movies) ತನ್ನ ಇಷ್ಟದ ಎರಡು ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಎರಡು ವರ್ಷ ಪ್ರದರ್ಶನ ಕಂಡ, 1971ರಲ್ಲಿ ತೆರೆಕಂಡ ಬಂಗಾರದ ಮನುಷ್ಯ (Bangaarada Manushya) ಮತ್ತು 2000ರಲ್ಲಿ ತೆರೆಕಂಡ ಡಾ. ಡಾಜ್‌ ಅವರ ಕೊನೆಯ ಚಿತ್ರ "ಶಬ್ದವೇಧಿ" (Shabdavedhi) ಪ್ರಕಾಶ್‌ ಆರ್‌ಕೆ ಅವರ ಅಚ್ಚುಮೆಚ್ಚಿನ ಸಿನಿಮಾಗಳಂತೆ.

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆ ಪ್ರಕಾಶ್‌ ಆರ್‌ಕೆ ಚಿರಪರಿಚಿತರು. ಜವಾರಿ ಭಾಷೆಯ ಸೊಗಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಮಿಂಚಿರುವ ಪ್ರಕಾಶ್‌ ಆರ್‌ಕೆ ತನ್ನ ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಇವರನ್ನು ಎಚ್‌ಟಿ ಕನ್ನಡ ಈ ಹಿಂದೆ ಸಂದರ್ಶನ ನಡೆಸಿತ್ತು.

ನನಿಷ್ಟದ ರಾಜ್‌ ಸಿನಿಮಾ ಬಂಗಾರದ ಮನುಷ್ಯ

"ಡಾ. ರಾಜ್‌ಕುಮಾರ್‌ ಸಿನಿಮಾಗಳೆಂದರೆ ಮೊದಲಿಗೆ ನೆನಪಿಗೆ ಬರೋದು ಬಂಗಾರದ ಮನುಷ್ಯ. ಅದ್ರಲ್ಲಿ ವ್ಯವಸಾಯದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದರ ಸರ. ಒಂದು ಕೆಲಸವನ್ನು ಶ್ರದ್ಧೆ, ಭಕ್ತಿ ಇಟ್ಟುಕೊಂಡು ಮಾಡಿದರ ಒಳ್ಳೆಯ ರಿಜಲ್ಟ್‌ ಕೊಡುತ್ತೆ ಅಂತ ಹೇಳಿದರ ಸರ. ಯಾವುದೇ ಕೆಲಸ ಆಗಲ್ಲ ಎಂದು ಜಗತ್ತ ಹೇಳಿದರೂ ಆ ಕೆಲಸ ಆಗುತ್ತೆ ಅಂತ ಒಳ್ಳೆಯ ಮನಸ್ಸಿಂದ, ಪ್ರಯತ್ನದಿಂದ ಮುಂದೆ ಹೋದ್ರ ಆ ಕೆಲಸ ಆಗುತ್ತೆ ಸರ್.‌ ವ್ಯವಸಾಯ ಮಾತ್ರವಲ್ಲ, ತುಂಬಾ ವಿಚಾರವನ್ನು ಅದರಲ್ಲಿ ಹೇಳಿದ್ದಾರೆ. ಆಗದು ಎಂದು, ಕೈಲಾಗದು ಎಂದು, ಕೈಕಟ್ಟಿ ಕುಳಿತರೆ ಸಾಗದು... ಎಂಥ ಮಾತು ಸರ. ಈ ಜಗತ್ತಿನಲ್ಲಿ ಕಷ್ಟ ಎಂದು ಹಿಂಜರಿಯಬಾರದು. ಆಗದು ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು, ಪ್ರಯತ್ನ ಮಾಡಿದರೆ ಸಕ್ಸಸ್‌ ಸಿಗುತ್ತೆ" ಎಂದು ಪ್ರಕಾಶ್‌ ಆರ್‌ಕೆ ಅಭಿಪ್ರಾಯಪಟ್ಟಿದ್ದಾರೆ.

ಶಬ್ದವೇಧಿ ಸಿನಿಮಾದಲ್ಲಿ ಯುವ ಜನತೆಗೆ ಸಂದೇಶ

"ನನಗ ನೆನಪಿಗೆ ಬರೋ ಇನ್ನೊಂದು ಸಿನಿಮಾ ಶಬ್ದವೇಧಿ. ಅವರು ನಾಯಕನಾಗಿ ನಟಿಸಿದ ಕೊನೆಯ ಸಿನಿಮಾ. ಆ ಸಿನಿಮಾ ಇಷ್ಟ ಯಾಕಂದ್ರ ಅದರಲ್ಲಿ ಯುವಜನತೆಗೆ ಒಳ್ಳೆಯ ಪಾಠ, ನೀತಿ ಹೇಳಿದ್ದಾರೆ. ಈಗಿನ ಯುವ ಜನರು ಕೆಟ್ಟ ಚಟಕ್ಕೆ ಅಡಿಕ್ಷನ್‌ ಆಗೋದು ಇದೆ ಸರ್.‌ ಆ ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇದೆ. ಈಗಿನ ಯುವಕರಿಗೆ ಚಟಕ್ಕೆ ಬೀಳಬಾರದು ಎನ್ನುವ ಒಳ್ಳೊಳ್ಳೆಯ ಅಂಶಗಳನ್ನು ಹೇಳಿದ್ದಾರೆ. ಈ ಥರದ ಸಿನಿಮಾಗಳು ನನಗೆ ಬಾಳ ಇಷ್ಟ" ಎಂದಿದ್ದಾರೆ ಪ್ರಕಾಶ್‌ ರಮೇಶ್‌ ಕಲಬುರ್ಗಿ.

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ನನ್ನಿಷ್ಟದ ಹಾಡು

"ಡಾ. ರಾಜ್‌ಕುಮಾರ್‌ ಅವರ ಹಾಡುಗಳು ತುಂಬಾ ಇಷ್ಟವಾಗುತ್ತದೆ. ಅವರೇ ಹಾಡುತ್ತಿದ್ದರು. ನನ್ನಿಷ್ಟ ಡಾ. ರಾಜ್‌ಕುಮಾರ್‌ ಹಾಡು "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು, ಬದುಕಿದು ಜಟಕ ಬಂಡಿ, ಇದು ವಿಧಿ ಓಡಿಸುವ ಬಂಡಿ..... ಕಾಶ್ಮೀರ ಸುತ್ತಿ ನೋಡು, ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು, ಅಜಂತ ಎಲ್ಲೋರವ ಬಾಳಲಿ ಒಮ್ಮೆ ನೋಡು, ಬಾದಾಮಿ ಐಹೊಳೆಯ ಚೆಂದನ ತೂಕಮಾಡು... " ಇದು ನನ್ನ ಇಷ್ಟದ ಹಾಡು. ಎವರ್‌ಗ್ರೀನ್‌ ಹಾಡು" ಎಂದ ಪ್ರಕಾಶ್‌ ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು ಹಾಡಿನ ಕೆಲವು ಸಾಲುಗಳನ್ನು ಹಾಡಿದರು.

ಡಾ. ರಾಜ್‌ಕುಮಾರ್‌ ಕನ್ನಡ ಪ್ರೀತಿ

"ಸಿನಿಮಾ ಹೊರತುಪಡಿಸಿ ಡಾ. ರಾಜ್‌ಕುಮಾರ್‌ ನಮಗ ಯಾಕೆ ಇಷ್ಟ ಆಗ್ತಾರೆ ಅಂದ್ರ ಅವರಿಗೆ ಕನ್ನಡದ ಮೇಲೆ ಇರುವಂತಹ ವಿಶೇಷ ಅಭಿಮಾನ. ಅದು ನಮಗೆ ಭಾಳ ಅಂದ್ರ ಭಾಳ ಖುಷಿ ಕೊಡತದ. ಅವರ ಸ್ಪಷ್ಟ ಉಚ್ಛಾರ, ಕನ್ನಡ ಮಾತನಾಡೋ ರೀತಿ, ಅವರು ಪ್ರತಿಯೊಂದು ಸಿನಿಮಾಗಳಲ್ಲಿ ಹೇಳುವ ವಿಚಾರಗಳು ಇಷ್ಟ" ಎಂದರು.

"ಅಣ್ಣಾವ್ರು ಕನ್ನಡ ಬಿಟ್ಟು ಬೇರೆ ಸಿನಿಮಾ ಮಾಡಿಲ್ಲ. ಕೊನೆಯವರೆಗೂ ಪರಭಾಷೆಯ ಸಿನಿಮಾ ಮಾಡಿಲ್ಲ ಅವರು. ಕೊನೆಯವರೆಗೂ ಕನ್ನಡ ಚಿತ್ರರಂಗದ ಪರವಾಗಿ ಅವರು ನಿಂತುಕೊಂಡರು. ಚಿತ್ರರಂಗಕ್ಕೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಎಲ್ಲಿ ಅನ್ಯಾಯವಾದರೂ ಅವರು ಹೋರಾಟ ಮಾಡುತ್ತಿದ್ದರು. ಕಾವೇರಿ ನೀರಿಗಾಗಿ ಹೋರಾಟ, ಕನ್ನಡಕ್ಕಾಗಿ ಹೋರಾಟ, ಗೋಕಾಕ್‌ ಚಳವಳಿ... ಹೀಗೆ ಅವರು ಕನ್ನಡದ ಬಗ್ಗೆ, ಕರುನಾಡಿನ ಪರವಾಗಿ ನಿಂತ ರೀತಿ ಭಾಳ ಖುಷಿ ಕೊಡುತದೆ ಸರ್"‌.

ಬದುಕಿಗೆ ಡಾ. ರಾಜ್‌ ಸ್ಫೂರ್ತಿ

"ನಾನು ಮೊದಲಿನಿಂದಲು ನಾಟಕಗಳನ್ನ ಮಾಡಿಕೊಂಡು ಬಂದವನು. ರಂಗಭೂಮಿ ಕಲಾವಿದ. ಯಾರೇ ಆಕ್ಟಿಂಗ್‌ ಕಲಿಯಬೇಕಿದ್ದರೂ, ಮೊದಲು ನಾವು ನೆನಪಿಗೆ ಮಾಡಿಕೊಳ್ಳುವುದು ಡಾ. ರಾಜ್‌ ಕುಮಾರ್‌ ಅವರನ್ನು. ನಾವು ಸಣ್ಣವರಿದ್ದಾಗ ಅವರ ಸ್ಟೈಲ್‌ ಎಲ್ಲಾ ಕಾಪಿ ಮಾಡ್ತಾ ಇದ್ದೀವಿ. ಬಾಂಡ್‌ ರೀತಿಯಂತಹ ಅವ್ರ ಸಿನಿಮಾಗಳನ್ನ ನೋಡಿ ನಾವು ಅದೇ ರೀತಿ ಮನೆಗೆ ಬಂದು ಆಕ್ಟಿಂಗ್‌ ಮಾಡ್ತಾ ಇದ್ದೀವಿ. ಅವರ ಆಕ್ಟಿಂಗ್‌ ನೋಡಿಕೊಂಡು ಬೆಳೆದವರು ನಾವು. ಜೀವನದ ಪ್ರತಿಹಂತದಲ್ಲೂ ಅವರನ್ನ ನೆನಪಿಸಿಕೊಳ್ತಿವಿ. ಅವರು ಎಷ್ಟೋ ಸಿನಿಮಾ ಮಾಡಿದರೆ, ಆದರೆ ಕೈಯಲ್ಲಿ ಸಿಗರೇಟು ಹಿಡಿದು, ಕೈಯಲ್ಲಿ ದಾರು ಹಿಡಿದು, ಬಾಟಲಿ ಹಿಡ್ಕೊಂಡು ಅವರು ನಟಿಸಿಲ್ಲ. ಅದೆಲ್ಲ ನಮ್ಮ ಮೇಲೆ ಭಾಳ ಪ್ರಭಾವ ಬೀರಿದೆ.

ನನ್ನ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಲು, ಬದಲಾವಣೆಯಾಗಲು ಡಾ. ರಾಜ್‌ಕುಮಾರ್‌ ಅವರದ್ದೂ ಒಂದು ಪಾತ್ರ ಇದೆ ಎಂದು ಹೇಳಬಹುದು. ಕನ್ನಡದ ಮೇಲೆ ಇಷ್ಟೊಂದು ಅಭಿಮಾನ ಬರಬೇಕೆಂದ್ರೆ ಅವರ ಪಾತ್ರ ಇರುತ್ತದೆ. ಕನ್ನಡ ಅಂದ್ರೆ ಏನು ಎತ್ತ ಎಂದು ಇಂತಹ ದಿಗ್ಗಜ ನಟರು ನಮಗೆ ತೋರಿಸಿಕೊಟ್ಟಿದ್ದಾರೆ. ಇದು ನಮ್ಮ ತಂಡದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಿದೆ" ಎಂದರು.

ಎಲ್ಲರಿಗೂ ದಾರಿದೀಪ ಡಾ. ರಾಜ್‌ಕುಮಾರ್‌

ಈಗಿನ ಯುವ ಜನ ಕೆಟ್ಟ ಚಟಕ್ಕೆ ಬೀಳ್ತಾರೆ. ಬೆಟ್ಟಿಂಗ್‌, ಸಿಗರೇಟು, ಧಾರ, ಬಾಟಲಿ ಎಂದು ಹಾಳಾಗಿ ಹೋಗ್ತಾರ. ಏನೋ ಟೆನ್ಷನ್‌ ಎಂದು ಚಟಕ್ಕೆ ಬೀಳ್ತಾರೆ. ಆದರೆ, ಈ ರೀತಿ ಚಟಕ್ಕೆ ಬೀಳಬಾರದು. ಡಾ. ರಾಜ್‌ಕುಮಾರ್‌ರಂತಹ ದಿಗ್ಗಜ ನಟರು ನಮಗೆ ಜೀವನಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಅದರಿಂದ ನಾವು ಕಳ್ತು ನಮ್ಮ ಕುಟುಂಬ, ನಾವು ಮಾಡುವಂತಹ ಕೆಲಸವನ್ನ ಚೆನ್ನಾಗಿ ಇಟ್ಕೋಬೇಕು. ಜನ ಚಟಕ್ಕೆ ಬೀಳಬಾರದು ಎಂದು ಕಳಕಳಿಯಿಂದ ಮನವಿ ಮಾಡ್ತಿನಿ.

ಜನ ಚಟಕ್ಕೆ ಬೀಳಲು ಈಗಿನ ಸಿನಿಮಾಗಳೂ ಕಾರಣ ಅಂದ್ರೆ ತಪ್ಪಾಗದು. ಕೈಯಲ್ಲಿ ಸಿಗರೇಟು, ಬಾಟಲಿ ಹಿಡಿದುಕೊಂಡು ನಟಿಸ್ತಾರೆ. ಸಮಾಜಕ್ಕೆ ಮೆಸೆಜ್‌ ನೀಡೋದು ಕಡಿಮೆಯಾಗಿದೆ. ಕೈಯಲ್ಲಿ ಕತ್ತಿ, ಬಂದೂಕ ಹಿಡ್ಕೊಂಡು ಬರೋ ಸಿನಿಮಾದಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬಿದ್ದೇ ಬೀಳುತ್ತದ. ಈಗಿನ ಹುಡುಗರು ಬೈಕ್‌ ವೀಲ್ಹೀಂಗ್‌ ಎಲ್ಲಾ ಮಾಡ್ತಾರ. ಅದು ಸಿನಿಮಾದಲ್ಲಿ ನೋಡಿಯೇ ಮಾಡೋದು. ಯಾವುದೇ ಮುನ್ನೆಚ್ಚರಿಕೆ ಇಲ್ಲ. ಹೆಲ್ಮೆಟ್ಟಿಲ್ಲ, ಸಣ್ಣಸಣ್ಣ ಹುಡುಗರ ಕೈಯಲ್ಲಿ ಸಿಗರೇಟು, ಧಾರು ಬಾಟಲ್‌ ಹಿಡ್ಕೊಂಡ್ರ, ಹೊಡೆದಾಟ ಮಾಡಿದ್ರೆ ನಾನು ದೊಡ್ಡವನೆಂಬ ಭ್ರಮೆ ಈಗಿನ ಹುಡುಗರಲ್ಲಿ ಬಂದುಬಿಟ್ಟಿದೆ. ಇದು ಬದಲಾಗಬೇಕು, ಡಾ. ರಾಜ್‌ಕುಮಾರ್‌ ಅವರ ಸಿನಿಮಾಗಳಿಂದ ನಾವೆಲ್ಲ ಜೀವನ ಪಾಠ ಕಲಿಯಬೇಕು" ಎಂದು ಪ್ರಕಾಶ್‌ ಹೇಳಿದರು.

ಪುನೀತ್‌ ರಾಜಕುಮಾರ್‌ ಮೂಲಕ ಅಣ್ಣಾವ್ರ ಕಂಡೆ

ನನಗೆ ಡಾ. ರಾಜ್‌ಕುಮಾರ್‌ ಅವರನ್ನು ನೇರವಾಗಿ ನೋಡಕ್ಕೆ ಅವಕಾಶ ಸಿಕ್ಕಿಲ್ಲ. ಬಟ್‌ ಒಂದೆರಡು ಸಾರಿ ಅಪ್ಪು ಸರ್‌ನ ನೋಡಿದಿವಿ ಸರ್‌. ಅವರ ಮುಖಾಂತರ ಅಣ್ಣಾವ್ರನ್ನು ನೋಡಿದ್ದಾಂಗಾಯ್ತು. ರಾಜ್‌ಕುಮಾರ್‌ ಅವರನ್ನು ನಾವು ತೆರೆಯ ಮೇಲೆಯೇ ನೋಡಿಕೊಂಡು ಬಂದೆವು. ಸಣ್ಣವರಿದ್ದಾಗ ಇಡೀ ಕುಟುಂಬ ಸಮೇತ ಡಾ. ರಾಜ್‌ಕುಮಾರ್‌ ಸಿನಿಮಾ ನೋಡುವಂತದ್ದು ಇತ್ತು. ನಮ್ಮ ಅಪ್ಪಾರಿಗೆ, ಅಜ್ಜಿಯರಿಗೆ ಡಾ. ರಾಜಕುಮಾರ್‌ ಇಷ್ಟ. ಯಾವುದೇ ಥರಹದ ಮುಜುಗರ ಇಲ್ಲದೆ ಇಡೀ ಕುಟುಂಬ ಸಮೇತ ರಾಜಕುಮಾರ್‌ ಸಿನಿಮಾ ನೋಡ್ತಾ ಇದ್ದೇವು. ಅವರ ಫೈಟಿಂಗ್‌ ಸೀನ್‌ಗಳು ಇಷ್ಟ. ನಾವು ಅದೇ ಸ್ಟೈಲ್‌ನಾಗ ಆಟ ಆಡ್ತಾ ಇದ್ದೇವು. ಕುಟುಂಬ ಸಮೇತ ನೋಡಿ ಖುಷಿ ಪಡ್ತಾ ಇದ್ದೇವು. ಇಮೋಷನ್‌ ಸೀನ್‌ ಬಂದಾಗ ಅಳ್ತಾ ಇದ್ದೇವು" ಎಂದು ಪ್ರಕಾಶ್‌ ಆರ್‌ಕೆ ನೆನಪಿಸಿಕೊಂಡಿದ್ದಾರೆ.