ಡ್ರಿಂಕ್ಸ್ ಮಾಡದ ವಿಷ್ಣುವರ್ಧನ್ ಆಪ್ತಮಿತ್ರ ಅಂಬರೀಶ್‌ಗಾಗಿ ಮನೆಯಲ್ಲೇ ಬಾರ್ ಕೌಂಟರ್ ಮಾಡಿಸಿದ್ದರ ಇಂಟ್ರೆಸ್ಟಿಂಗ್ ಸ್ಟೋರಿ ಇದು
ಇಬ್ಬರ ಗೆಳೆತನ ಆರಂಭವಾದಾಗಿನಿಂದ ವಿಷ್ಣುವರ್ಧನ್ ಮನೆಗೆ ಅಂಬರೀಶ್, ಹಾಗೂ ಅಂಬಿ ಮನೆಗೆ ವಿಷ್ಣು ಅನೇಕ ಬಾರಿ ಬಂದು ಹೋಗಿದ್ಧಾರೆ. ಆದರೆ ಒಮ್ಮೆ ಅಂಬಿ ವಿಷ್ಣುವರ್ಧನ್ ಮನೆಗೆ ಹೋದಾಗ ಡ್ರಿಂಕ್ಸ್ ವಿಚಾರವಾಗಿ ಮಾತನಾಡಿದ್ದಾರೆ.
Dr Vishnuvardhan 73rd Birthday: ನಾಳೆ (ಸೆಪ್ಟೆಂಬರ್ 18) ಡಾ. ವಿಷ್ಣುವರ್ಧನ್ ಅವರ 73ನೇ ಹುಟ್ಟುಹಬ್ಬ. ವಿಷ್ಣುದಾದಾ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅಭಿಮಾನಿಗಳು ಮಾತ್ರ ಅವರ ಹುಟ್ಟುಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿಕೊಂಡು ಬರುತ್ತಿದ್ದಾರೆ. ಎಂದಿನಂತೆ ಈ ಬಾರಿ ಕೂಡಾ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಕನ್ನಡ ಚಿತ್ರರಂಗದ ಕುಚಿಕುಗಳು
ವಿಷ್ಣುವರ್ಧನ್ ಅವರೊಂದಿಗೆ ಚಿತ್ರರಂಗದ ಬಹುತೇಕ ಎಲ್ಲಾ ಕಲಾವಿದರಿಗೂ ಉತ್ತಮ ಒಡನಾಟವಿದೆ. ಅದರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರ ಸ್ನೇಹದ ಬಗ್ಗೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ತಿಳಿದಿರುವ ವಿಚಾರ. ಇಬ್ಬರ ಸ್ನೇಹಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮರೆಯದ ನೆನಪುಗಳಿವೆ.
ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದವರು. ಚಿತ್ರದಲ್ಲಿ ವಿಷ್ಣು ಹೀರೋ ಆದರೆ ಅಂಬರೀಶ್ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದರು. ಅಂದಿನಿಂದ ಆರಂಭವಾದ ಇವರಿಬ್ಬರ ಸ್ನೇಹ ಇಬ್ಬರ ಕೊನೆಯುಸಿರು ಇರುವವರೆಗೂ, ಅದರ ನಂತರವೂ ಉಳಿದಿದೆ. 'ನಾಗರಹಾವು' ಸಿನಿಮಾ ನಂತರ ಕೂಡಾ ಈ ಕುಚಿಕುಗಳು ಅವಳ ಹೆಜ್ಜೆ, ಮುಯ್ಯಿಗೆ ಮುಯ್ಯಿ, ಒಂದೇ ರೂಪ ಎರಡು ಗುಣ, ಬಂಗಾರದ ಗುಡಿ, ಸ್ನೇಹ ಸೇಡು, ಕರುಳಿನ ಕುಡಿ, ಪ್ರೇಮಲೋಕ, ಹಬ್ಬ, ದಿಗ್ಗಜರು ಸೇರಿ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.
ಗೆಳೆಯ ಅಂಬಿಗಾಗಿ ಮನೆಯಲ್ಲಿ ಬಾರ್ ಕೌಂಟರ್ ಮಾಡಿಸಿದ್ದ ವಿಷ್ಣುವರ್ಧನ್
ವಿಷ್ಣುವರ್ಧನ್ ಬಹಳ ಮೃದು ಸ್ವಭಾವದ ವ್ಯಕ್ತಿ, ಆದರೆ ಅಂಬರೀಶ್ ಮಾತಿನಲ್ಲಿ ಒರಟು, ಇಷ್ಟಾದರೂ ಇವರಿಬ್ಬರ ಸ್ನೇಹದಲ್ಲಿ ಒಮ್ಮೆಯೂ ಸಣ್ಣ ಬಿರುಕು ಕೂಡಾ ಮೂಡಿರಲಿಲ್ಲ. ಇಬ್ಬರಿಗೂ ಆಪ್ತರಾದ ಅನೇಕ ಮಂದಿ ಇವರ ಸ್ನೇಹದ ಬಗ್ಗೆ ಅನೇಕ ಇಂಟರ್‌ವ್ಯೂಗಳಲ್ಲಿ ಮಾತನಾಡಿದ್ದಾರೆ. ಅದರಲ್ಲಿ ಆಪ್ತಮಿತ್ರ ಅಂಬರೀಶ್‌ಗಾಗಿ ವಿಷ್ಣುವರ್ಧನ್ ಅವರು ತಮ್ಮ ಮನೆಯಲ್ಲಿ ಮಿನಿ ಬಾರ್ ಕೌಂಟರನ್ನೇ ಮಾಡಿಸಿದ್ದರವಿಚಾರ ಬಹಳ ಜನರಿಗೆ ತಿಳಿದಿಲ್ಲ.
ಇಬ್ಬರ ಗೆಳೆತನ ಆರಂಭವಾದಾಗಿನಿಂದ ವಿಷ್ಣುವರ್ಧನ್ ಮನೆಗೆ ಅಂಬರೀಶ್, ಹಾಗೂ ಅಂಬಿ ಮನೆಗೆ ವಿಷ್ಣು ಅನೇಕ ಬಾರಿ ಬಂದು ಹೋಗಿದ್ಧಾರೆ. ಆದರೆ ಒಮ್ಮೆ ಅಂಬಿ ವಿಷ್ಣುವರ್ಧನ್ ಮನೆಗೆ ಹೋದಾಗ ಡ್ರಿಂಕ್ಸ್ ವಿಚಾರವಾಗಿ ಮಾತನಾಡಿದ್ದಾರೆ. ನಿನ್ನಂಥ ಸೂಪರ್ ಸ್ಟಾರ್ ಮನೆಯಲ್ಲಿ ಗುಂಡೂ ಇಲ್ಲ, ತುಂಡೂ ಇಲ್ಲ, ಅದೆಲ್ಲಾ ಸಿಗುತ್ತೋ ಇಲ್ಲವೋ? ಎಂದಿದ್ದಾರೆ. ಆಗ ವಿಷ್ಣುವರ್ಧನ್, ಅಂಬಿ ಮಾತಿಗೆ ನಕ್ಕು ಸುಮ್ಮನಾಗಿದ್ದಾರೆ. ಆದರೆ ಮುಂದಿನ ಬಾರಿ ಅಂಬಿ, ವಿಷ್ಣು ಮನೆಗೆ ಬಂದಾಗ ಅವರಿಗೆ ಆಶ್ಚರ್ಯ ಕಾದಿತ್ತು. ತಮ್ಮ ಪ್ರಾಣ ಸ್ನೇಹಿತನಿಗಾಗಿ ವಿಷ್ಣುವರ್ಧನ್ ತಮ್ಮ ಮನೆಯಲ್ಲಿ ಒಂದು ಬಾರ್ ಕೌಂಟರನ್ನೇ ತೆರೆಸಿದ್ದರು. ಜೊತೆಗೆ ಅವರಿಗಿಷ್ಟವಾದ ಅಡುಗೆ ಮಾಡಿಸಲು ಅಡುಗೆ ಭಟ್ಟರನ್ನು ನೇಮಿಸಿದ್ದರು.
ಇತರ ನಟ, ನಟಿಯರಿಗೂ ಮಾದರಿ ಇವರಿಬ್ಬರ ಗೆಳೆತನ
ವಿಷ್ಣುವರ್ಧನ್ ಎಂದಿಗೂ ಡ್ರಿಂಕ್ಸ್ ಮಾಡುತ್ತಿರಲಿಲ್ಲ. ಅದರೆ ಅಂಬರೀಶ್‌ಗೆ ಡ್ರಿಂಕ್ಸ್ ಬಹಳ ಇಷ್ಟ. ಹಾಗೇ ವಿಷ್ಣು ಮಾಂಸಾಹಾರ ಸೇವಿಸುತ್ತಿರಲಿಲ್ಲ. ಅಂಬರೀಶ್‌ಗೆ ನಾನ್ ವೆಜ್ ಇಲ್ಲವೆಂದರೆ ಆಗುತ್ತಿರಲಿಲ್ಲ. ಇಷ್ಟಾದರೂ ವಿಷ್ಣು ತಮ್ಮ ಗೆಳೆಯನಿಗಾಗಿ ಅಷ್ಟೆಲ್ಲಾ ಮಾಡಿದ್ದರು. ಇದೊಂದು ಘಟನೆ ಸಾಕು ಇಬ್ಬರ ಸ್ನೇಹ ಎಂಥದ್ದು ಎಂದು ತಿಳಿಯಲು.
ಇಬ್ಬರು ಭೇಟಿ ಮಾಡಿದಾಗಲೆಲ್ಲಾ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದರೂ ಒಂದು ದಿನವೂ ಇಬ್ಬರೂ ಮತ್ತೊಬ್ಬರ ಬಗ್ಗೆ ಗಾಸಿಪ್ ಮಾತನಾಡುತ್ತಿರಲಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಹಿರಿಯ ನಟಿ ಲಕ್ಷ್ಮಿ ಹೇಳಿದ್ದರು. ಈ ಕುಚಿಕುಗಳಿಬ್ಬರೂ ಇಂದು ನಮ್ಮೊಂದಿಗೆ ಇಲ್ಲ. ಆದರೆ ಇವರ ಗೆಳೆತನ ಎಲ್ಲಾ ನಟ-ನಟಿಯರಿಗೂ ಮಾದರಿಯಾಗಿದೆ.