ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಜ್‌ಕೋವಾಗೆ ಮಿಸ್ ವರ್ಲ್ಡ್ ಕಿರೀಟ; ಕನ್ನಡದ ಸಿನಿ ಶೆಟ್ಟಿಗೆ ತಪ್ಪಿದ ಅವಕಾಶ -Miss World 2024
ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಜ್‌ಕೋವಾ 2024ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೆಬನಾನ್‌ನ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆಗಿದ್ದಾರೆ.
ಮುಂಬೈ (ಮಹಾರಾಷ್ಟ್ರ): ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಜ್‌ಕೋವಾ 71ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸುಂದರ ಸಮಾರಂಭದಲ್ಲಿ 115 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿದ 24 ವರ್ಷದ ಕ್ರಿಸ್ಟಿನಾ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದರು. 2022ರ ವಿಶ್ವ ಸುಂದರಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಿ ಅವರು ಕ್ರಿಸ್ಟಿನಾ ಅವರಿಗೆ ಕಿರೀಟವನ್ನು ಧರಿಸಿ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಭಾರಿ ನಿರೀಕ್ಷೆ ಮೂಡಿಸಿದ್ದ ಕರ್ನಾಟಕದ ಬೆಡಗಿ ಸಿನಿ ಶೆಟ್ಟಿ ಅಗ್ರ 4 ರಲ್ಲಿ ಕಾಣಿಸಿಕೊಳ್ಳಲು ವಿಫಲರಾಗುವ ಮೂಲಕ ನಿರಾಸೆ ಮೂಡಿಸಿದರು. ಕ್ರಿಸ್ಟಿನಾ ಪಿಜ್‌ಕೋವಾ ಮಿಸ್ಟ್ ವರ್ಲ್ಡ್ ಎನಿಸಿದರೆ, ಲೆಬನಾನ್‌ನ ಯಾಸ್ಮಿನಾ ಜೈಟೌನ್ ಅವರು ಮೊದಲ ರನ್ನರ್ ಅಪ್ ಕಿರೀಟವನ್ನು ಪಡೆದರು.
ಮಿಸ್ ವರ್ಲ್ಡ್ ಗೆದ್ದ ಕ್ರಿಸ್ಟಿನಾ ಪಿಜ್‌ಕೋವಾ ಯಾರು?
ಕ್ರಿಸ್ಟಿನಾ ಪಿಜ್‌ಕೋವಾ ವಿದ್ಯಾರ್ಥಿ, ಸ್ವಯಂಸೇವಕ ಮತ್ತು ಅಂತಾರಾಷ್ಟ್ರೀಯ ರೂಪದರ್ಶಿಯಾಗಿದ್ದಾರೆ. ಮಾಡೆಲ್ ಆಗಿ ಕೆಲಸ ಮಾಡುತ್ತಲೇ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಎರಡು ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕ್ರಿಸ್ಟಿನಾ ಪಿಜ್‌ಕೋವಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. ಮಿಸ್ ವರ್ಲ್ಡ್ ಆಯೋಜಕರ ಪ್ರಕಾರ, ಕ್ರಿಸ್ಟಿನಾ ಅವರ ಹೆಮ್ಮೆಯ ಕ್ಷಣವೆಂದರೆ ತಾಂಜೇನಿಯಾದಲ್ಲಿ ದೀನದಲಿತ ಮಕ್ಕಳಿಗಾಗಿ ಇಂಗ್ಲಿಷ್ ಶಾಲೆಯನ್ನು ತೆರೆದು ಅಲ್ಲಿ ಸ್ವಯಂಪ್ರೇರಿತರಾಗಿ ಕೆಲಸ ಮಾಡಿರುವುದು. ಈಕೆ ಕೊಳಲು ಮತ್ತು ಪಿಟೀಲು ನುಡಿಸುವುದನ್ನು ಆನಂದಿಸುತ್ತಾರೆ. ಕಲಾ ಅಕಾಡೆಮಿಯಲ್ಲಿ ಒಂಬತ್ತು ವರ್ಷಗಳನ್ನು ಕಳೆದ ನಂತರ ಸಂಗೀತ ಮತ್ತು ಕಲೆಯ ಬಗ್ಗೆ ಉತ್ಸಾಹವನ್ನು ಹೊಂದಿದ್ದಾರೆ.
ಕ್ರಿಸ್ಟಿನಾ ಅವರ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪ್ರಾಜೆಕ್ಟ್ ಅನ್ನು ತಾಂಜೇನಿಯಾದಲ್ಲಿ ಅಭಿವೃದ್ಧಿಪಡಿಸಿದ ಕೆಲಸವೂ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಈ ಸ್ಥಾನಕ್ಕೆ ಬರಲು ನೆರವಾಗಿದೆ. ತಾಂಜೇನಿಯಾದಲ್ಲಿ ಶಾಲೆಯನ್ನು ಆರಂಭಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಸ್ವಯಂಸೇವಕರಾಗಿ ಕೆಲಸದ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ. ಶಿಕ್ಷಣವು ಅವರ ಉತ್ಸಾಹವಾಗಿರುವುದರಿಂದ, ಜೆಕ್ ಗಣರಾಜ್ಯದಲ್ಲಿ ಶೈಕ್ಷಣಿಕ ಸಂಸ್ಥೆ ಹುಟ್ಟುಹಾಕಲು ನಿರ್ಧರಿಸಿದ್ದಾರೆ. ಮಕ್ಕಳಿಗೆ ಮಾತ್ರವಲ್ಲದೆ ವೃದ್ಧರು ಮತ್ತು ಮಾನಸಿಕ ಅಂಗವಿಕಲರಿಗೂ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಒದಗಿಸುವತ್ತ ಗಮನ ಹರಿಸಿದ್ದಾರೆ.
2024 ರ 71 ನೇ ಮಿಸ್ ವರ್ಲ್ಡ್ ಕ್ರಿಸ್ಟಿನಾ ಪಿಜ್‌ಕೋವಾ
ಮಿಸ್ ವರ್ಲ್ಡ್ ಸ್ಪರ್ಧೆ 28 ವರ್ಷಗಳ ನಂತರ ಭಾರತದಲ್ಲಿ ನಡೆಯಿತು. ಈ ಕಾರ್ಯಕ್ರಮವು ಭಾರತದ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು. ಕೃತಿ ಸನೋನ್, ಮಾನುಷಿ ಚಿಲ್ಲರ್, ಪೂಜಾ ಹೆಗ್ಡೆ, ಹರ್ಭಜನ್ ಸಿಂಗ್, ರಜತ್ ಶರ್ಮಾ, ಅಮೃತಾ ಫಡ್ನವೀಸ್, ವಿನೀತ್ ಜೈನ್, ಜೂಲಿಯಾ ಮಾರ್ಲೆ ಸಿಬಿಇ ಮತ್ತು ಜಮೀಲ್ ಸೈದಿ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಏತನ್ಮಧ್ಯೆ, ಶಾನ್, ಟೋನಿ ಕಕ್ಕರ್ ಮತ್ತು ನೇಹಾ ಕಕ್ಕರ್ ಈ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನಗಳನ್ನು ನೀಡಿದರು.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ