K Shivaram: ಹಿರಿಯ ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶ
ಹಿರಿಯ ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ಇಂದು (ಫೆ.29) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿ ಅವರು ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. (ವರದಿ- ಮನೋಜ್, ಬೆಂಗಳೂರು)
ಬೆಂಗಳೂರು: ನಟ, ರಾಜಕಾರಣಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ವಿಧಿವಶರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಇಂದು(ಫೆ.29) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಕಳೆದ 20 ದಿನಗಳಿಂದ ಶಿವರಾಮ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನದಿಂದ ದಿನಕ್ಕೆ ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಿವರಾಮ್ ಅವರಿಗೆ ಡಾ.ಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ವಿಧಿವಶರಾದ ಶಿವರಾಮ್ ಅವರ ಮೋದಿ ರಸ್ತೆಯ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೆ ಶಿವರಾಮ್ ಬದುಕಿನ ಹಾದಿ
ಕೆ ಶಿವರಾಮ್ ನಟನಾಗಿ ಅಷ್ಟೇ ಅಲ್ಲದೇ ಉತ್ತಮ ರಾಜಕಾರಣಿಯಾಗಿಯೂ ಜನಪ್ರಿಯತೆ ಪಡೆದಿದ್ದರು. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953ರಲ್ಲಿ ಜನಿಸಿದ್ದ ಶಿವರಾಮು, 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯೂ ಆಗಿದ್ದರು. ಆ ಮೂಲಕ, ಕನ್ನಡದಲ್ಲಿ ಐಎಎಸ್ ಬರೆದು, ಅಧಿಕಾರಿಯಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರು. ಕೆ.ಶಿವರಾಮ್ ಅವರು ರಾಜ್ಯದ ಹಲವು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
1993ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶಿವರಾಮು ಅವರು, ನಾಗತಿಹಳ್ಳಿ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು. ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳಲ್ಲಿ ನಟಿಸಿದ್ದರು.
2013ರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ಸ್ವಯಂ ನಿವೃತ್ತಿ ಪಡೆದ ಅವರು ಕಾಂಗ್ರೆಸ್ ಸೇರಿ, ರಾಜಕೀಯ ಜೀವನ ಪ್ರವೇಶಮಾಡಿದ್ರು. 2014ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಸೋಲುಂಡಿದ್ದರು. ಬಳಿಕ, ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದರು. ಅಲ್ಲದೆ, ಛಲವಾದಿ ಮಹಸಭಾ ಅಧ್ಯಕ್ಷರೂ ಆಗಿದ್ದರು.
(ವರದಿ - ಮನೋಜ್, ಬೆಂಗಳೂರು)
(This copy first appeared in Hindustan Times Kannada website. To read more like this please logon to kannada.hindustantimes.com)