UI The Movie: ಉಪೇಂದ್ರ ಹುಟ್ಟುಹಬ್ಬ ವಿಶೇಷ, ಯುಐ ಸಿನಿಮಾದ ಈ ಟೀಸರ್ ನಿಮ್ಮ ಕಲ್ಪನೆಗಾಗಿ
ಕನ್ನಡ ಸುದ್ದಿ  /  ಮನರಂಜನೆ  /  Ui The Movie: ಉಪೇಂದ್ರ ಹುಟ್ಟುಹಬ್ಬ ವಿಶೇಷ, ಯುಐ ಸಿನಿಮಾದ ಈ ಟೀಸರ್ ನಿಮ್ಮ ಕಲ್ಪನೆಗಾಗಿ

UI The Movie: ಉಪೇಂದ್ರ ಹುಟ್ಟುಹಬ್ಬ ವಿಶೇಷ, ಯುಐ ಸಿನಿಮಾದ ಈ ಟೀಸರ್ ನಿಮ್ಮ ಕಲ್ಪನೆಗಾಗಿ

ಉಪೇಂದ್ರ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಯುಐ ಸಿನಿಮಾದ ಟೀಸರ್ ಇಂದು (ಸೆ.18) ಬಿಡುಗಡೆಯಾಗಿದೆ. ಕತ್ತಲಿನ ಲೋಕಕ್ಕೆ ಕರೆದೊಯ್ಯುವ ಟೀಸರ್‌ ಕುರಿತು ಉಪೇಂದ್ರ, ಶಿವರಾಜ್‌ ಕುಮಾರ್, ದುನಿಯಾ ವಿಜಯ್ ಕೊಟ್ಟ ವಿವರಣೆ ಗಮನಿಸಿ. ಟೀಸರ್ ವಿಡಿಯೋವನ್ನೂ ವೀಕ್ಷಿಸಿ..

ಯುಐ ದ ಸಿನಿಮಾದ ಈ ಟೀಸರ್ ನಿಮ್ಮ ಕಲ್ಪನೆಗಾಗಿ
ಯುಐ ದ ಸಿನಿಮಾದ ಈ ಟೀಸರ್ ನಿಮ್ಮ ಕಲ್ಪನೆಗಾಗಿ

ಕನ್ನಡ ಸಿನಿಮಾ ರಂಗದಲ್ಲಿ “ಬುದ್ಧಿವಂತ” ನಟ, ನಿರ್ದೇಶಕ ಎಂದು ಗುರುತಿಸಿಕೊಂಡವರು ಉಪೇಂದ್ರ (Upendra). ಇಂದು (ಸೆ.18) ಅವರ ಹುಟ್ಟುಹಬ್ಬ. ಬಹಳಷ್ಟು ನಿರೀಕ್ಷೆ ಕುತೂಹಲ ಹುಟ್ಟಿಸಿದ ಬಳಿಕ ಅವರ 'UI' ದ ಮೂವಿ (UI The Movie) ಎಂಬ ಚಿತ್ರದ ಟೀಸರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ಊವರ್ಶಿ ಚಿತ್ರಮಂದಿರದಲ್ಲಿ ಟೀಸರ್‌ನ ಮೊದಲ ಪ್ರದರ್ಶನ ಇತ್ತು. ಯುಐ ಎಂಬ ಸಿನಿಮಾ ಶೀರ್ಷಿಕೆಯೊಂದಿಗೆ ಟೀಸರ್ ಶುರುವಾಗುತ್ತೆ. ಪೂರ್ತಿ ಕತ್ತಲ ಲೋಕ, ಸ್ಕ್ರೀನ್ ಮೇಲೆ ಏನೂ ಕಾಣಿಸದು. ಸದ್ದಷ್ಟೇ ಕೇಳುತ್ತೆ. ಅದರ ಜತೆಗೆ ಒಂದಷ್ಟು ಸಂಭಾಷಣೆ, ನೀರಿನ ಸದ್ದು, ಕುದುರೆ ಓಡುವ ಸದ್ದು, ಗದ್ದಲ. ಕೊನೆಗೆ ಯುಐ ಸಿನಿಮಾ ಶೀರ್ಷಿಕೆ ಪುನಃ ಕಾಣಿಸಿಕೊಳ್ಳುತ್ತದೆ. ಕುದುರೆ ಮುಖ, ಆ ಮುಖದೊಳಗೆ ಒಂದಷ್ಟು ಚಿತ್ರಗಳು, ಅದರ ಕಿವಿಗೆ ಹೆಡ್‌ಫೋನ್‌. ಕುದುರೆ ಮುಖದಲ್ಲೂ ಸಿನಿಮಾ ಶೀರ್ಷಿಕೆ ಇದೆ. ಈ ಟೀಸರ್ ನಿಮ್ಮ ಕಲ್ಪನೆಗಾಗಿ ಎಂಬ ಬರೆಹ ಗಮನಸೆಳೆಯುತ್ತದೆ.

ಯುಐ ಸಿನಿಮಾ ಇಂಥದ್ದೇ ಕಥೆಯದ್ದು ಎಂದು ಗೆಸ್ ಮಾಡಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಟೀಸರ್ ಇದೆ. ಊರ್ವಶಿ ಟಾಕೀಸ್‌ನಲ್ಲಿದ್ದ ಪ್ರೇಕ್ಷಕರಿಗೆ ಎರಡೆರಡು ಸಲ ಟೀಸರ್ ತೋರಿಸಲಾಗಿತ್ತು. ಪೂರ್ತಿ ಕತ್ತಲಾವರಿಸಿದ ಟಾಕೀಸ್‌ನಲ್ಲಿ ಅದು ಏನು ಎಂಬುದು ಅರ್ಥ ಆಗದವರಿಗೆ, ಟೀಸರ್ ಬಿಡುಗಡೆ ಬಳಿಕ ಉಪೇಂದ್ರ ಅವರು ಟೀಸರ್ ಏನು ಎಂಬುದನ್ನು ವಿವರಿಸಿದ್ದಾರೆ.

ಕತ್ತಲ ಲೋಕದ ಚಿತ್ರಣ ಕೊಟ್ಟ ಯುಐ ಸಿನಿಮಾದ ಟೀಸರ್ ಅನ್ನು ಉಪೇಂದ್ರ ಅವರು ವಿವರಿಸಿದ್ದು ಹೀಗೆ

ಒಂದು ಮನೆಯೊಳಗೆ ನಾಲ್ಕೈದು ಜನ ಇದ್ದಾರೆ ಎಂದು ಇಟ್ಟುಕೊಳ್ಳಿ. ನಿಮ್ಮದೇ ಮನೆಗಳನ್ನು ಗಮನಿಸಿ ನೋಡಿ. ಎಲ್ಲರೂ ತಮ್ಮ ಪಾಡಿಗೆ ತಾವು ಮೊಬೈಲ್ ಹಿಡಿದು ತಲೆ ತಗ್ಗಿಸಿ ತಮ್ಮದೇ ಲೋಕದಲ್ಲಿರುತ್ತಾರೆ. ಪರಸ್ಪರ ಮಾತಿಲ್ಲ. ಕಥೆ ಇಲ್ಲ. ನಾವೆಲ್ಲ ಚಂದಮಾಮಾನ ಕಥೆ ಓದಿಕೊಂಡು ಬೆಳೆದವರು. ಊಹಿಸುವುದಕ್ಕೆ, ಕಲ್ಪನೆ ಮಾಡಿಕೊಳ್ಳುವುದಕ್ಕೆ ಏನೂ ಕೊರತೆ ಇಲ್ಲ.

ಈಗ ಈ ಸಿನಿಮಾದ ಟೀಸರ್ ಕೂಡಾ ಅಷ್ಟೇ, ಕಥೆಯ ತುಣುಕನ್ನು ನಿಮ್ಮ ಕಲ್ಪನೆಗೆ ಬಿಟ್ಟುಕೊಟ್ಟಿದ್ದೇವೆ. ಇದರಲ್ಲಿ ನಿಮಗೆ ದೃಶ್ಯಗಳು ಕಾಣಲ್ಲ. ಪೂರ್ತಿ ಕತ್ತಲು. ಒಂದಷ್ಟು ಮಾತು, ಹಿನ್ನೆಲೆಯಲ್ಲಿ ಪರಿಸರದ ಧ್ವನಿ, ವ್ಯಕ್ತಿಯೊಬ್ಬನ ಆಂತರ್ಯ ಹೀಗೆ… ಈ ಟೀಸರ್ ಈಗ ನಿಮ್ಮ ಕಲ್ಪನೆಗಳು ಗರಿಗೆದರುವಂತೆ ಮಾಡಿದೆ ಅಲ್ವೆ, ಹೌದು ನಿಮ್ಮ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದೊಂದು ಕಥೆ ಹುಟ್ಟಿರಬೇಕು. ಅದಕ್ಕಾಗಿಯೇ ಈ ಟೀಸರ್ ಎಂದು ಉಪೇಂದ್ರ ವಿವರಿಸಿದರು.

ನಿಜ ಹೇಳಬೇಕು ಎಂದರೆ ಇದು ಟ್ರೈಲರ್‌ ಅಲ್ಲ. ಅದು ಇನ್ನಷ್ಟೇ ಲಾಂಚ್ ಮಾಡಬೇಕು. ಇದು ಪ್ರೇಕ್ಷಕರ ಕಲ್ಪನೆಗಳನ್ನು ಕೆರಳಿಸುವುದಕ್ಕಾಗಿ ಬಿಡುಗಡೆ ಮಾಡಿರುವ ಕಿರು ಚಿತ್ರಣ. ಯುಐ ಸಿನಿಮಾ ಏನು ಎಂಬ ಕುತೂಹಲ ಎಲ್ಲರಲ್ಲೂ ಇರಬೇಕು. ಆ ಕಥೆ ಏನು ಎಂದು ತಾವೇ ಕಥೆ ಹೆಣೆಯೋದಕ್ಕೆ ಶುರುಮಾಡಬೇಕು. ಈ ಸಿನಿಮಾ ನೋಡಿದ್ರೆ ನೀವು ಒಬ್ಬೊಬ್ಬರೂ ನಿರ್ದೇಶಕರಾಗಿ ಬಿಡುತ್ತೀರಿ ಎಂದು ಉಪೇಂದ್ರ ಹೇಳಿದರು.

ಯುಐ ಸಿನಿಮಾ ಟೀಸರ್ ಬಗ್ಗೆ ಶಿವರಾಜ್ ಕುಮಾರ್ ಏನು ಹೇಳಿದ್ರು..

ತಾಳಿದವನು ಬಾಳಿಯಾನು ಎಂದು ಚುಟುಕಾಗಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ಉಪೇಂದ್ರ ಅವರ ಮುಖದ ಮೇಲಿನ ಪ್ರಶ್ನೆ ನೋಡಿ ವಿವರಿಸಲಾರಂಭಿಸಿದರು.

ನಾವು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡ್ತೇವೆ. ಅದು ಹೀಗಿರಬೇಕಿತ್ತು. ಇದು ಹಾಗಿರಬೇಕಿತ್ತು ಎಂದು. ಇಲ್ಲಿ ಸೌಂಡ್ ನಮ್ಮ ಆಲೋಚನೆಗಳನ್ನು ಕೆರಳಿಸುತ್ತೆ. ನಾವು ಸಿನಿಮಾದ ಆಂತರ್ಯವನ್ನು ಗಮನಿಸಬೇಕು. ಮೇಲ್ನೋಟದ ಚಿತ್ರವನ್ನಷ್ಟೇ, ಸಂಭಾಷಣೆಯನ್ನಷ್ಟೇ ಗಮನಿಸಿದರೆ ಸಾಲದು. ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೆ.

ಇದು ಅಭಿಮಾನಿ ದೇವರುಗಳನ್ನು ಚೀಟ್ ಮಾಡುವ ಪ್ರಯತ್ನ ಅಲ್ಲ. ಇಂದು ಉಪೇಂದ್ರ ಆಗಿರಲಿ, ವಿಜಯ್ ಆಗಿರಲಿ, ನಾನೇ ಆದರೂ ಈ ಸ್ಟಾರ್‌ಗಿರಿ ಅನುಭವಿಸುತ್ತಿದ್ದೇವೆ ಎಂದರೆ ಅದು ನೀವುಕೊಟ್ಟ ಪ್ರಸಾದ. ಅಭಿಮಾನಿ ದೇವರುಗಳನ್ನು, ಪ್ರೇಕ್ಷಕ ದೇವರನ್ನು ಜಾಗೃತಗೊಳಿಸುವ ಪ್ರಯತ್ನ ಇದು ಅಷ್ಟೆ. ಇದು ಟ್ರೈಲರ್ ಅಲ್ಲ. ಟ್ರೈಲರ್ ಶೀಘ್ರದಲ್ಲೇ ಬರುತ್ತೆ ಎಂದು ಶಿವರಾಜ್ ಕುಮಾರ್ ಹೇಳಿದ್ರು.

ಯುಐ ದ ಸಿನಿಮಾದ ಟೀಸರ್ ನೀವೂ ನೋಡಬೇಕು ಅಲ್ವ… ಇಲ್ಲಿದೆ ನೋಡಿ..

ಯುಐ ಸಿನಿಮಾದ ಟೀಸರ್ ವಿಶೇಷವಾಗಿದೆ ಎಂದ ದುನಿಯಾ ವಿಜಯ್‌

ಯುಐ ಸಿನಿಮಾದ ಟೀಸರ್ ಬಹಳ ವಿಶೇಷವಾಗಿದೆ. ಕೊರೊನಾ ನಂತರದ ಈ ಕಾಲಘಟ್ಟದಲ್ಲಿ ತಲೆ ಬಗ್ಗಿಸಿಕೊಂಡು ಮೊಬೈಲ್ ಫೋನ್ ನೋಡುವುದು ಒಂದು ಕಾಯಿಲೆ ಅಂತಾನೇ ಹೇಳಬಹುದು. ಆ ವೈರಸ್‌ಗೆ ಯಾವ ಮದ್ದೂ ಬರುವುದಿಲ್ಲವೇನೋ. ಅದಕ್ಕೆ ನಿಮ್ಮಂತಹ ದೊಡ್ಡ ಮನಸ್ಸಿನವರು ಬಿಡುಗಡೆ ಮಾಡಿರುವ ಟೀಸರ್. ಇದು ನಮ್ಮ ಮನಸ್ಸಿನ ಸೃಜನಶೀಲತೆಯನ್ನು ಹೆಚ್ಚಿಸಲು ನೆರವಾಗುವ ರೀತಿಯಲ್ಲಿದೆ ಎಂದು ದುನಿಯಾ ವಿಜಯ್ ಹೇಳಿದರು.

Whats_app_banner