ಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ; ತಂದೆಯ ಗರಡಿಯಲ್ಲಿ ಬೆಳೆದಾಗಿನಿಂದ ಗೌರವ, ಮನ್ನಣೆ ತನಕ..
Zakir Hussain Passed Away: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 73 ವರ್ಷದ ಜಾಕಿರ್ ಹುಸೇನ್ ಅವರು ಅಮೆರಿಕದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಭಾನುವಾರ (ಡಿಸೆಂಬರ್ 15, 2024) ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಈ ಬಗ್ಗೆ ಅವರ ಸ್ನೇಹಿತ, ಕೊಳಲುವಾದಕ ರಾಕೇಶ್ ಚೌರಾಸಿಯಾ ಅವರು ಖಚಿತಪಡಿಸಿದ್ದರು. ಹುಸೇನ್ ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ಅವರು ಕಳೆದ 2 ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದಿದ್ದರು.
ಮಾರ್ಚ್ 9, 1951 ರಂದು ಭಾರತದ ಮುಂಬೈನಲ್ಲಿ ಜನಿಸಿದ ಉಸ್ತಾದ್ ಜಾಕಿರ್ ಹುಸೇನ್ ಜೀವಂತ ದಂತಕಥೆಯಾಗಿದ್ದಾರೆ. ತಬಲಾ ಪಾಂಡಿತ್ಯದ ಮೂಲಕವೇ ಅವರು ಜಗತ್ತಿಗೆ ಪರಿಚಿತರಾಗಿದ್ದಾರೆ. ಹೆಸರಾಂತ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಮಗ ಹುಸೇನ್ ಚಿಕ್ಕ ವಯಸ್ಸಿನಿಂದಲೂ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ಅವರ ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಹುಸೇನ್ ಅವರು, ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದರು. 7ನೇ ವಯಸ್ಸಿನಲ್ಲಿಯೇ ಸಾರ್ವಜನಿಕವಾಗಿ ಪ್ರದರ್ಶನ ನೀಡುತ್ತಿದ್ದರು. ಹನ್ನೆರಡರ ಹೊತ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದರು. ಅಲ್ಲಿಂದ ಅವರು ಸಂಗೀತ ಪ್ರಪಂಚಕ್ಕೆ ನೀಡಿರುವ ಕೊಡುಗೆ ಅಪ್ರತಿಮವಾಗಿದೆ.
ಹೆಸರಾಂತ ಕಲಾವಿದರೊಂದಿಗೆ ಕೆಲಸ
ಅವರ ವೃತ್ತಿಜೀವನವು ಭಾರತೀಯ ಶಾಸ್ತ್ರೀಯ ಸಂಗೀತದ ಗಡಿಗಳನ್ನು ಮೀರಿದೆ. ವಿಶ್ವದ ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರು ಎಂದು ಅವರನ್ನು ಪರಿಗಣಿಸಲಾಗಿದೆ. ಭಾರತ ಮಾತ್ರವಲ್ಲದೆ ಜಾಗತಿಕ ಸಂಗೀತ ಸಮುದಾಯದ ಕೆಲವು ಪ್ರಸಿದ್ಧ ಸಂಗೀತಗಾರರೊಂದಿಗೆ ಪ್ರಯಾಣ ಬೆಳೆಸಿದ್ದಾರೆ. 1970ರ ದಶಕದಲ್ಲಿ ಪ್ರಸಿದ್ಧ ಗಿಟಾರ್ ವಾದಕ ಜಾನ್ ಮೆಕ್‌ಲಾಫ್ಲಿನ್, ಪಿಟೀಲು ವಾದಕ ಎಲ್. ಶಂಕರ್ ಮತ್ತು ತಾಳವಾದ್ಯ ವಾದಕ ಟಿಎಚ್ 'ವಿಕ್ಕು' ವಿನಾಯಕ್‌ರಂ ಅವರ ಸಹಯೋಗದೊಂದಿಗೆ ಶಕ್ತಿ ಎಂಬ ಸಮ್ಮಿಳನ ಗುಂಪನ್ನು ರಚಿಸಿದ್ದರು. ಈ ಮೇಳವು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಝ್‌ನೊಂದಿಗೆ (ಇದು ಒಂದು ಸಂಗೀತ ಪ್ರಕಾರ) ಬೆಸೆಯಿತು. ಸಮಕಾಲೀನ ಸಂಗೀತದ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಹೊಸ ಸಂಗೀತ ಪ್ರಕಾರವನ್ನು ಸೃಷ್ಟಿಸಿತು.
ಹುಸೇನ್ ಅವರು ಜಾರ್ಜ್ ಹ್ಯಾರಿಸನ್, ರವಿ ಶಂಕರ್ ಮತ್ತು ವ್ಯಾನ್ ಮಾರಿಸನ್ ಅವರಂತಹ ಹೆಸರಾಂತ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಗ್ರೇಟ್‌ಫುಲ್ ಡೆಡ್ ಮತ್ತು ಅರ್ಥ್, ವಿಂಡ್ ಆ್ಯಂಡ್ ಫೈರ್‌ನ ಆಲ್ಬಂಗಳಲ್ಲೂ ಪ್ರದರ್ಶನ ನೀಡಿದ್ದಾರೆ. 1991 ರಲ್ಲಿ ಮಿಕ್ಕಿ ಹಾರ್ಟ್ ಅವರೊಂದಿಗೆ ರಚಿಸಲಾದ ಅವರ ಆಲ್ಬಮ್ ಪ್ಲಾನೆಟ್ ಡ್ರಮ್ , ಅತ್ಯುತ್ತಮ ವಿಶ್ವ ಸಂಗೀತ ಆಲ್ಬಮ್‌ಗಾಗಿ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತೀಯ ಸಂಗೀತದ ಜಾಗತಿಕ ರಾಯಭಾರಿಯಾಗಿದ್ದರು. ಅವರು 2024 ರಲ್ಲಿ 66 ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದರು. ತಮ್ಮ ಕರಿಯರ್ನಲ್ಲಿ ಹಲವಾರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.
ಗೌರವ ಮತ್ತು ಮನ್ನಣೆ
ಹುಸೇನ್ ಅವರ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 1988ರಲ್ಲಿ ಪದ್ಮಶ್ರೀ , 2002ರಲ್ಲಿ ಪದ್ಮಭೂಷಣ, 2023ರಲ್ಲಿ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪುರಸ್ಕಾರಗಳು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲೂ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅವರ ಗಮನಾರ್ಹ ಸಾಧನೆಗಳನ್ನು ಪ್ರತಿಬಿಂಬಿಸುತ್ತವೆ. ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳ ಜೊತೆಗೆ ಹುಸೇನ್ ಅವರಿಗೆ 1990ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1999ರಲ್ಲಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ರಾಷ್ಟ್ರೀಯ ದತ್ತಿ, ಹಲವು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹುಸೇನ್ ಸಿನಿಮಾ ಜಗತ್ತಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. 1999 ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ವಾನಪ್ರಸ್ಥಂ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಭಾರತೀಯ ಸಂಗೀತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.