ಜಾಗತಿಕ ಫುಟ್ಬಾಲ್ ತಾರೆಯರಿಗೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಸ್ಟೈಲ್‌ನಲ್ಲಿ ಶುಭಾಶಯ ತಿಳಿಸಿದ ಫಿಫಾ
ತೆಲುಗಿನ ಆರ್‌ಆರ್‌ಆರ್ ಸಿನಿಮಾದ ಪೋಸ್ಟರ್‌ವೊಂದು ಪ್ರತಿಷ್ಠಿತ ಫಿಫಾ ವಿಶ್ವಕಪ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಚಿತ್ರದ ನಾಟು ನಾಟು ಹಾಡನ್ನು ಶೇರ್ ಮಾಡಿ, ಫುಟ್ಬಾಲ್ ದಿಗ್ಗಜರಿಗೆ ಫಿಫಾ ಶುಭಾಶಯ ತಿಳಿಸಿದೆ. ಈ ಪೋಸ್ಟ್‌ಗೆ ಜೂ ಎನ್‌ಟಿಆರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಟಾಲಿವುಡ್‌ನಲ್ಲಿ ನಿರ್ಮಾಣವಾದ 'ಆರ್‌ಆರ್‌ಆರ್' ಸಿನಿಮಾ ಕೇವಲ ತೆಲುಗು ಪ್ರೇಕ್ಷಕರಿಗೆ ಮತ್ತು ಭಾರತೀಯರನ್ನಷ್ಟೇ ಸೆಳೆದಿಲ್ಲ. ಜಾಗತಿಕ ಮಟ್ಟದಲ್ಲಿಯೂ ಸದ್ದು ಮಾಡಿತು ರಾಜಮೌಳಿಯ ಈ ಸಿನಿಮಾ. ಗಳಿಕೆಯ ನಾಗಾಲೋಟ ಮುಂದುವರಿಸಿ, ಸಾವಿರಾರು ಕೋಟಿ ಕಮಾಯಿ ಮಾಡಿದ್ದೂ ದಾಖಲೆಯೇ. ಈ ಒಂದು ಸಿನಿಮಾದಿಂದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ಭಾರತದಾಚೆಗೂ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡರು. ಇದರಾಚೆಗೆ ಇದೇ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯೂ ಒಲಿದು ಬಂದಿತು. ಆ ಹಾಡು, ಅದರಲ್ಲಿನ ಕುಣಿತ ವಿದೇಶಿಗರನ್ನೂ ಸೆಳೆದಿತ್ತು. ಈಗ ಇದೇ ನಾಟು ನಾಟು ಹಾಡು ಫುಟ್ಬಾಲ್ ತಾರೆಯರ ವಿಚಾರಕ್ಕೆ ಸುದ್ದಿಯಲ್ಲಿದೆ.
ಎಸ್.ಎಸ್. ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿವೆ. ಹೀಗಿರುವಾಗಲೇ ಇದೇ ಸಿನಿಮಾದ ಪೋಸ್ಟರ್‌ವೊಂದು ಪ್ರತಿಷ್ಠಿತ ಫಿಫಾ ವಿಶ್ವಕಪ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಚಿತ್ರದ ನಾಟು ನಾಟು ಹಾಡನ್ನು ಶೇರ್ ಮಾಡಿ, ಫುಟ್ಬಾಲ್ ದಿಗ್ಗಜರಿಗೆ ಫಿಫಾ ಶುಭಾಶಯ ತಿಳಿಸಿದೆ. ಈ ಪೋಸ್ಟ್‌ಗೆ ಜೂನಿಯರ್ ಎನ್‌ಟಿಆರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಫಿಫಾ ಹಂಚಿಕೊಂಡ ಪೋಸ್ಟ್‌ನಲ್ಲೇನಿದೆ?
ಮೂವರು ಆಟಗಾರರಿಗೆ ಶುಭಾಶಯ
ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ, ನೇಮರ್ ಮತ್ತು ಕಾರ್ಲಿಟೋಸ್ ಟೆವೆಜ್ ಅವರು ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಿರುವ ಚಿತ್ರವನ್ನು ಫಿಫಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದೆ. ಈ ಮೂವರು ಫುಟ್ಬಾಲ್ ಆಟಗಾರರ ಹೆಸರುಗಳ ಮೊದಲಾಕ್ಷರಗಳಾದ NTR ಎಂಬುದನ್ನು ಉಲ್ಲೇಖಿಸಿ ಪೋಸ್ಟ್ ಮಾಡಲಾಗಿದೆ. ಹೀಗೆ ಪೋಸ್ಟ್ ಶೇರ್ ಆಗುತ್ತಿದ್ದಂತೆ, ಸ್ವತಃ ಜೂ ಎನ್‌ಟಿಆರ್ ಕಾಮೆಂಟ್ ಮಾಡಿದ್ದಾರೆ. “ಹ್ಹ ಹ್ಹ... ನೇಮರ್ ಟೆವೆಜ್ ರೊನಾಲ್ಡೊಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದಿದ್ದಾರೆ.
ಆಸ್ಕರ್ ಗೆದ್ದು ತಂದ ನಾಟು ನಾಟು…
ಆಸ್ಕರ್ ಅವಾರ್ಡ್ಸ್‌ನಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಆರ್‌ಆರ್‌ಆರ್ ಸಿನಿಮಾ, ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ನಾಟು ನಾಟು ಹಾಡಿನ ಮೂಲಕ ಮೊದಲ ಆಸ್ಕರ್ ಪ್ರಶಸ್ತಿಯನ್ನು ಭಾರತಕ್ಕೆ ಹೊತ್ತು ತಂದಿತ್ತು. ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಚಂದ್ರಬೋಸ್ ಅವರ ಸಾಹಿತ್ಯದೊಂದಿಗೆ ಎಂಎಂ ಕೀರವಾಣಿ ಸಂಯೋಜಿಸಿದ ಈ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಕಾಲಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿರುವ ಈ ಹಾಡಿಗೆ ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಆಂಡ್ರ್ಯೂ ಗಾರ್ಫೀಲ್ಡ್, ಜೇಮ್ಸ್ ಕ್ಯಾಮರೂನ್ ಮತ್ತು ರುಸ್ಸೊ ಬ್ರದರ್ಸ್ ನಂತಹ ಹಾಲಿವುಡ್ ಎ-ಲಿಸ್ಟರ್ ಕಲಾವಿದರೂ ಚಿತ್ರವನ್ನು ಶ್ಲಾಘಿಸಿದ್ದಾರೆ.
